ಗೆದಗೇರಿ ತಾಂಡಾದಲ್ಲಿ ಸಮಸ್ಯೆ ನೂರೆಂಟು- ಪರಿಹಾರಕ್ಕೆ ಮಾತ್ರ ಹಿಂದೇಟು

ಯಲಬುರ್ಗಾ: ದೇಶಕ್ಕೆ ಸ್ವಾತಂತ್ರ ಸಿಕ್ಕು ಅಮೃತ ಮಹೋತ್ಸವ ಆಚರಿಸಿಕೊಂಡರು, ತಾಂಡಾದ ಅರ್ಧ ಕಾಲೋನಿಯಲ್ಲಿ ವಿದ್ಯುತ್, ಒಳ ಚರಂಡಿ, ಶೌಚಾಲಯ, ಶುದ್ಧ ಕುಡಿಯುವ ನೀರು, ಸಿಸಿ ರಸ್ತೆ ಸೇರಿದಂತೆ ನಾನಾ ಮೂಲ ಸೌಲಭ್ಯಗಳಿಂದ ಗೆದಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಂಡಾ ನಿವಾಸಿಗಳು ವಂಚಿತರಾಗಿದ್ದಾರೆ.

ಗೆದಗೇರಿ ಗ್ರಾಮಕ್ಕೆ ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಇದ್ದರೂ ಸಹ ಯಾವುದೇ ಕ್ರಮಕ್ಕೂ ಮುಂದಾಗಿಲ್ಲ, ಸದ್ಯ ಮೂಲ ಸೌಲಭ್ಯಗಳಿಲ್ಲದೆ ಪರದಾಡುವಂತಾಗಿದೆ. ತಾಂಡಾದಲ್ಲಿ ಅಂದಾಜು ಒಂದು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಇಲ್ಲಿ ಶುದ್ಧ ಕುಡಿಯುವ ನೀರು ಮರೀಚಿಕೆ ಆಗಿದೆ. ಒಳಚರಂಡಿ, ರಸ್ತೆ ಹಾಳಾಗಿದ್ದು ದುರಸ್ತಿಗೆ ಆಡಳಿತ ವರ್ಗ ಕ್ರಮಕೈಗೊಂಡಿಲ್ಲ. ಕ್ಷೇತ್ರದ ಜನಪ್ರತಿನಿಧಿಗಳಂತೂ ಸಮಸ್ಯೆಗಳಿಗೆ ಯಾವ ರೀತಿಯಲ್ಲಿಯೂ ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಸುಮಾರು 500 ಮನೆಗಳಿಗೆ ಸಮರ್ಪಕವಾದ ವಿದ್ಯುತ್ ಸಂಪರ್ಕವಿಲ್ಲ. ತಾಂಡದಲ್ಲಿ ವಿದ್ಯುತ್‌ ಕಂಬವಿಲ್ಲದ ಕಾರಣ ದೂರದ ವಿದ್ಯುತ್ ಕಂಬಗಳಿಂದ ಕಟ್ಟಿಗೆ ಕಂಬ ಜೋಡಣೆ ಮೂಲಕ ವಿದ್ಯುತ್ ಸರಬರಾಜು ಮಾಡಲಾಗಿದೆ. ತಾಂಡದ ಕೆಲವು ಕಡೆಗಳಲ್ಲಿ ಉತ್ತಮ ಗುಣಮಟ್ಟದ ರಸ್ತೆ ವ್ಯವಸ್ಥೆ ಇಲ್ಲಿದಿರುವುದರಿಂದ ಮಳೆ ಬಂದರೆ ರಸ್ತೆಯೆಲ್ಲಾ ಕೆಸರು ಗದ್ದೆಯಾಗಿ ಜನರು ಓಡಾಡಲು ತೀವ್ರ ಕಷ್ಟ ಎದುರಾಗಿದೆ.

ಶುದ್ಧ ಕುಡಿಯುವ ನೀರು ಕಲ್ಪಿಸಿ

ಈ ತಾಂಡಾದಲ್ಲಿ ಅಳವಡಿಸಿದ್ದ ಶುದ್ಧ ಕುಡಿಯುವ ನೀರು ಘಟಕ ಕೆಟ್ಟುನಿಂತು ವರ್ಷ ಕಳೆದರೂ ಗ್ರಾಮ ಪಂಚಾಯತಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ದುರಸ್ತಿ ಕಾರ್ಯ ಮಾಡದೆ ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದ ತಾಂಡಾದ ನಿವಾಸಿಗಳಿಗೆ ಕಲುಷಿತ ನೀರೇ ಗತಿಯಾಗಿದೆ. ಈಗಾಗಲೇ ಹಲವು ಬಾರಿ ಗ್ರಾಮ ಪಂಚಾಯತಿ ಅಧಿಕಾರಿಗಳು ಹಾಗೂ ಸದಸ್ಯ ಜನಪ್ರತಿನಿಧಿಗಳಿಗೆ ಮನವಿ ಮಾಡಿ ದೂರು ಸಲ್ಲಿಸಿದ್ದರೂ ಸಹ ಬೇಜವಾಬ್ದಾರಿತನ ತೋರುತ್ತಿದ್ದಾರೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಗೆದಗೇರಿ ತಾಂಡಾದ ಗ್ರಾಮ ಪಂಚಾಯತಿ ಮಾಜಿ ಸದಸ್ಯ ನೀಲಪ್ಪ ರಾಠೋಡ ಮಾತನಾಡಿ, ತಾಂಡಾದಲ್ಲಿ ಕಳೆದ ಒಂದು ವರ್ಷದಿಂದ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ನಿಂತಿದೆ. ದುರಸ್ತಿ ಮಾಡಿಸಿ ಅಂತ ಗ್ರಾಮ ಪಂಚಾಯಿತಿಗೆ ಮನವಿ ನೀಡಿದರು. ಸರಿಪಡಿಸುವುದಕ್ಕೆ ಮನಸ್ಸು ಮಾಡುತ್ತಿಲ್ಲ. ಸಾರ್ವಜನಿಕರು ಶುದ್ಧ ಕುಡಿವ ನೀರಿಗಾಗಿ ಗೆದಗೇರಿ-ಮುರುಡಿ ಗ್ರಾಮಕ್ಕೆ ತೆರಳಬೇಕಾಗಿದೆ. ಕೂಡಲೇ ಕ್ಷೇತ್ರದ ಜನಪ್ರತಿನಿಧಿಗಳು ಸಮಸ್ಯೆಗೆ ಸ್ಪಂದಿಸಬೇಕು. ತಾಲೂಕು ಆಡಳಿತ ನಮ್ಮ ತಾಂಡಾಕ್ಕೆ ಭೇಟಿ ನೀಡಿ  ಮೂಲಸೌಕರ್ಯಗಳನ್ನು ಕಲ್ಪಿಸುವತ್ತ ಗಮನಹರಿಸಬೇಕೆಂದು ತಿಳಿಸಿದರು.

ವರದಿ: ದೇವರಾಜ ದೊಡ್ಡಮನಿ

Donate Janashakthi Media

Leave a Reply

Your email address will not be published. Required fields are marked *