ಗುತ್ತಿಗೆದಾರರಿಗೆ ಪಾವತಿಸಬೇಕಾದ ಹಣ ಪ್ರೇಯಸಿ ಖಾತೆಗೆ ವರ್ಗಾಯಿಸಿದ ಬಿಬಿಎಂಪಿ ನೌಕರ

ಬೆಂಗಳೂರು: ಬಿಬಿಎಂಪಿಯ ಬ್ಯಾಟರಾಯನಪುರದಲ್ಲಿ ಎಸ್‌ಡಿಎ ಆಗಿ ಕೆಲಸ ಮಾಡುತ್ತಿದ್ದ ಎಂ.ಕೆ. ಪ್ರಕಾಶ್‌ ಬಿಬಿಎಂಪಿಯ ರೂ.14.7 ಲಕ್ಷ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾನೆ ಎಂದು ಪಾಲಿಕೆ ಕಾರ್ಯಪಾಲಕ ಎಂಜಿನಿಯರ್‌  ರಾಜೇಂದ್ರ ನಾಯಕ್‌ ಅವರು ದೂರು ನೀಡಿದ್ದಾರೆ.

ಬಿಬಿಎಂಪಿ ಬ್ಯಾಟರಾಯನಪುರ ವಾರ್ಡಿನ ಕಾಮಗಾರಿಗೆ ಸಂಬಂಧಸಿದಂತೆ, ಗುತ್ತಿಗೆದಾರರಿಗೆ ನೀಡಬೇಕಾಗಿದ್ದ ಹಣವನ್ನು ತನ್ನ ಪ್ರೇಯಸಿಯ ಬ್ಯಾಂಕ್‌ ಖಾತೆಗೆ ಜಮೆ ಮಾಡಿದ್ದ ಬಿಬಿಎಂಪಿಯ ದ್ವಿತೀಯ ದರ್ಜೆ ಸಹಾಯಕ ಎಂ.ಕೆ. ಪ್ರಕಾಶ್‌(39 ವರ್ಷ) ಹಾಗೂ ಆತನ ಪ್ರೇಯಸಿಯನ್ನು ಅಮೃತಹಳ್ಳಿ ಪೊಲೀಸರು ಪ್ರಕಾಶ್‌ ಮತ್ತು ಕಾಂಚನಾ(30 ವರ್ಷ) ಇಬ್ಬರನ್ನು ಥಣಿಸಂದ್ರದ ಎಸ್‌.ಸಿ. ಕಾಲೋನಿಯಲ್ಲಿ ಬಂಧಿಸಲಾಗಿದೆ.

2021-22ನೇ ಸಾಲಿನ ಬಿಬಿಎಂಪಿ ಲೆಕ್ಕಪತ್ರ ಸಂಶೋಧನೆಯನ್ನು ಜುಲೈನಲ್ಲಿ ಆರಂಭಿಸಲಾಯಿತು. ಲೆಕ್ಕ ಪುಸ್ತಕ ಹಾಜರುಪಡಿಸಲು ಲೆಕ್ಕ ಶಾಖೆಯ ನಿರ್ವಾಹಕ ಪ್ರಕಾಶ್‌ಗೆ ಮೌಖಿಕವಾಗಿ ಸೂಚನೆ ನೀಡಿದ್ದರು. ಆದರೆ ಲೆಕ್ಕ ಪುಸ್ತಕ ಹಾಜರು ಪಡಿಸದೇ ಅನಧಿಕೃತ ರಜೆ ಮೇಲೆ ತೆರಳಿದನು. ಲೆಕ್ಕ ಪರಿಶೋಧನೆ ವೇಳೆ ಕೆಲ ಲೆಕ್ಕಪತ್ರಗಳು ಹೊಂದಾಣಿಕೆಯಾಗದ ಹಿನ್ನೆಲೆಯಲ್ಲಿ ಪಾಲಿಕೆಯ ಬ್ಯಾಂಕ್‌ ಖಾತೆಯ ಸ್ಟೇಟ್‌ಮೆಂಟ್‌ ತೆಗೆದು ನೋಡಿದಾಗ ಅಪರಿಚಿತ ಖಾತೆಗಳಿಗೆ ಹಣ ವರ್ಗಾವಣೆಯಾಗಿರುವುದು ಬೆಳಕಿಗೆ ಬಂದಿದೆ.

ಕಾಮಗಾರಿ ನಡೆಸಿದ ಗುತ್ತಿಗೆದಾರರಿಗೆ ಮೇಲಾಧಿಕಾರಿ ಸಹಿ ಪಡೆದು ಹಣ ವರ್ಗಾವಣೆ ಮಾಡಬೇಕಿತ್ತು. ಆದರೆ, ಆರ್‌ಟಿಜಿಎಸ್‌ ಹಾಗೂ ನೆಫ್ಟ್‌, ಕೆಲವು ಹಣಕಾಸಿನ ಚೆಕ್ಕಗಳ ಮೂಲಕ ಕಾಂಚನಾ ಖಾತೆ ಪಾಲಿಕೆ ಹಣ ವರ್ಗಾವಣೆ ಮಾಡಲಾಗಿದೆ. ಪ್ರಕಾಶ್‌ಗೆ ಬ್ಯೂಟಿಶಿಯನ್‌ ಕಾಂಚನಾ ಪರಿಚಯವಾಗಿ ಕೆಲ ದಿನಗಳ ಬಳಿಕ ಆಪ್ತರಾಗಿದ್ದರು. ಕಾಂಚನಾ ಬ್ಯಾಂಕ್‌ ಖಾತೆಗೆ ಜಮೆ ಮಾಡುತ್ತಿದ್ದ ಪ್ರಕಾಶ್‌ ಪಾಲಿಕೆ ದಾಖಲೆಗಳಲ್ಲಿ ಗುತ್ತಿಗೆದಾರರಿಗೆ ಹಣ ಪಾವತಿಸಲಾಗಿದೆ ಎಂದು ನಮೂದಿಸುತ್ತಿದ್ದ. 2021ರ ನವೆಂಬರ್‌ನಿಂದ ಈ ರೀತಿ ದುರ್ಬಳಕೆ ಮಾಡಿಕೊಳ್ಳಲಾಗಿದೆ.

ಒಂದೂವರೆ ವರ್ಷದಿಂದ ಪ್ರಿಯಕರ ಪ್ರಕಾಶ್‌ ಕಳಿಸಿಕೊಟ್ಟಿದ್ದ ಹಣದಲ್ಲಿ ಕಾಂಚನಾ ಚಿನ್ನಾಭರಣ ಖರೀದಿ ಮಾಡಿದ್ದರು. ಐಷಾರಾಮಿ ಜೀವನ ನಡೆಸುತ್ತಿದ್ದ ವಿಚಾರ ಗೊತ್ತಾಗಿದೆ. ಹೀಗಾಗಿ ಕಾಂಚನಾ ಅಕ್ರಮದ ಹಣದಲ್ಲಿ ಖರೀದಿ ಮಾಡಿರುವ ಆಭರಣ ಮತ್ತಿತರೆ ವಸ್ತುಗಳ ಜಪ್ತಿಗೆ ಕ್ರಮ ವಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ದೂರಿನ ಮೇರೆಗೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ಮಾಡಿದಾಗ ಹಣ ದುರ್ಬಳಕೆ ಮಾಡಿಕೊಂಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವರದಿ: ಸಾಗರ್‌ ಕೂಡಗಿ

Donate Janashakthi Media

Leave a Reply

Your email address will not be published. Required fields are marked *