ಕೇಂದ್ರ ಸರ್ಕಾರದ ಎನ್‌ಎಂಪಿ ಅಡಿಯಲ್ಲಿ ಬಿಎಸ್‌ಎನ್‌ಎಲ್‌ನ 10 ಸಾವಿರ ಟವರ್‌ ಮಾರಾಟ

ನವದೆಹಲಿ: ಕೇಂದ್ರದ ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರವು ಜಾರಿಗೆ ತಂದಿರುವ ರಾಷ್ಟ್ರೀಯ ಆಸ್ತಿ ನಗದೀಕರಣ(ಎನ್‌ಎಂಪಿ) ಅಡಿಯಲ್ಲಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್(ಬಿಎಸ್‌ಎನ್‌ಎಲ್‌)ನ 10 ಸಾವಿರ ಟೆಲಿಕಾಂ ಟವರ್‌ಗಳನ್ನು ಮಾರಾಟ ಮಾಡಲು ಮುಂದಾಗಿದೆ.

ಕೇಂದ್ರದ ರಾಷ್ಟ್ರೀಯ ಆಸ್ತಿ ನಗದೀಕರಣ ಗುರಿಯನ್ನು ಸಾಧಿಸಲು ಟವರ್‌ ಮಾರಾಟ ಮಾಡುವ ಪ್ರಕ್ರಿಯೆಯನ್ನು ಬಿಎಸ್‌ಎನ್‌ಎಲ್‌ ಆರಂಭಿಸಿದೆ ಎಂದು ತಿಳಿದು ಬಂದಿದೆ. ಸರ್ಕಾರಿ ಟೆಲಿಕಾಂ ಟವರ್‌ ಮಾರಾಟದಿಂದ 4 ಸಾವಿರ ಕೋಟಿ ರೂ. ಆದಾಯವನ್ನು ನಿರೀಕ್ಷಿಸಲಾಗಿದೆ. ಮಾರಾಟ ನಿರ್ವಹಣೆಗೆ ಹಣಕಾಸು ಸಲಹೆ ಪಡೆಯಲು ಹಣಕಾಸು, ವ್ಯಾಪಾರ, ತೆರಿಗೆ ಇತ್ಯಾದಿ ಸೇವೆಗಳನ್ನು ನೀಡುತ್ತಿರುವ ಜಾಗತಿಕ ಕೆಪಿಎಂಜಿ(ಕೆಪಿಎಂಜಿ) ಕಂಪನಿ ಜೊತೆ ಬಿಎಸ್‌ಎನ್‌ಎಲ್‌ ಈಗ ಮಾತುಕತೆ ನಡೆಸುತ್ತಿದೆ.

ಮುಂಬೈ ಮತ್ತು ದೆಹಲಿ ಹೊರತುಪಡಿಸಿ ದೇಶದ ಎಲ್ಲಾ ಭಾಗಗಳಲ್ಲಿ ಟೆಲಿಕಾಂ ಸೇವೆಗಳನ್ನು ಒದಗಿಸುತ್ತಿರುವ ಬಿಎಸ್‌ಎನ್‌ಎಲ್‌ 68 ಸಾವಿರ ಟೆಲಿಕಾಂ ಟವರ್‌ಗಳನ್ನು ಹೊಂದಿದೆ. ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್‌ನಂತಹ ಖಾಸಗಿ ಟೆಲಿಕಾಂ ಸೇವಾ ಪೂರೈಕೆದಾರರೊಂದಿಗೆ ಟವರ್‌ ಹೊಂದಾಣಿಕೆ ಮಾಡಿಕೊಂಡಿರುವ ಬಿಎಸ್‌ಎನ್‌ಎಲ್‌ಗೆ ಸೇರಿದ ಟವರ್‌ಗಳನ್ನು ಮಾರಾಟ ಮಾಡಲಾಗುತ್ತಿದೆ.

ದೇಶದಲ್ಲೇ ಅತ್ಯುತ್ತಮವಾದ ಬಿಎಸ್‌ಎನ್‌ಎಲ್‌ನ ಟವರ್ ಪೋರ್ಟ್‌ಫೋಲಿಯೊ ಹೊಂದಿದೆ. ಅಂದರೆ, ಅದರ ಸುಮಾರು ಶೇ. 70 ಟವರ್‌ಗಳು ಫೈಬರ್ ಆಗಿದ್ದು 4ಜಿ ಮತ್ತು 5ಜಿ ಸೇವೆಗಳ ನಿಯೋಜನೆಗೆ ಒಳಪಡಿಸಬಹುದಾದ ಅತ್ಯಾಧುನೀಕ ಉಪಕರಣಗಳನ್ನು ಅಳವಡಿಸಲಾಗಿದೆ.

ಎನ್‌ಎಂಪಿ ಗುರಿಯ ಭಾಗವಾಗಿ ಬಿಎಸ್‌ಎನ್‌ಎಲ್‌ 2025ರ ಹಣಕಾಸು ವರ್ಷದ ಒಳಗಡೆ 13,567 ಟವರ್‌ಗಳನ್ನು ಮಾರಾಟ ಮಾಡಬೇಕಾಗಿದೆ ಮತ್ತು ದೆಹಲಿ ಮತ್ತು ಮುಂಬೈನಲ್ಲಿ ಕಾರ್ಯನಿರ್ವಹಿಸುವ ಎಂಟಿಎನ್‌ಎಲ್‌ 1,350 ಟವರ್‌ಗಳನ್ನು ಮಾರಾಟ ಮಾಡಬೇಕಾಗಿದೆ. ಒಟ್ಟಾರೆಯಾಗಿ ಎರಡು ಸರ್ಕಾರಿ ಸ್ವಾಮ್ಯದ ಟೆಲಿಕಾಂಗಳು 14,917 ಟವರ್‌ಗಳನ್ನು ಹಂತ ಹಂತವಾಗಿ ಮಾರಾಟಕ್ಕೆ ಸಿದ್ದವಾಗಿವೆ.

Donate Janashakthi Media

Leave a Reply

Your email address will not be published. Required fields are marked *