ಬಿಜೆಪಿಗೆ ತಾಕತ್ತಿದ್ದರೆ ಮಾಂಸಹಾರ ತಿನ್ನುವವರ ಮತ ಬೇಡವೆನ್ನಲಿ: ವಿ.ಎಸ್.ಉಗ್ರಪ್ಪ ಸವಾಲು

ಬೆಂಗಳೂರು: ಮಾಂಸಹಾರಿಗಳನ್ನು ತುಚ್ಛವಾಗಿ ಕಾಣುವ ಬಿಜೆಪಿ ಪಕ್ಷವು ತಾಕತ್ತಿದ್ದರೆ ನಮಗೆ ಮಾಂಸಾಹಾರಿಗಳ ವೋಟ್ ಬೇಕಿಲ್ಲವೆಂದು ಘೋಷಿಸಲಿ ಎಂದು ಕಾಂಗ್ರೆಸ್ ಮುಖಂಡ ವಿ.ಎಸ್ ಉಗ್ರಪ್ಪನವರು ಸವಾಲು ಹಾಕಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಬಿಜೆಪಿ ಹಾಗೂ ಆರ್‌ಎಸ್ಎಸ್ ನವರಿಗೆ ಧಮ್ಮು ತಾಕತ್ತು ಇದ್ದರೆ, ಮೊಟ್ಟೆ, ಮಾಂಸ, ಮೀನು ತಿನ್ನುವವರ ಮತ ಬೇಕಿಲ್ಲ, ಇವರು ನಮ್ಮ ಶಾಖೆಗೆ ಬರುವುದು ಬೇಡ ಎಂದು ಘೋಷಿಸಲಿ.ನೀವು ನಿಮ್ಮ ಜವಾಬ್ದಾರಿ ನಿರ್ವಹಣೆ ವೈಫಲ್ಯ ಅನುಭವಿಸಿರುವಾಗ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಿದ್ದರಾಮಯ್ಯ ಅವರು ಭೇಟಿ ನೀಡಿದಾಗ ಅವರಿಗೆ ಮಾಹಿತಿ ನೀಡಿ ಇದಕ್ಕೆ ಇಂತಹ ಪರಿಹಾರ ರೂಪಿಸಿದ್ದು, ನಿಮ್ಮ ಸಲಹೆ ಇದ್ದರೆ ನೀಡಿ ಎಂದು ಕೇಳುವ ಬದಲು ಇಂತಹ ವಿಚಾರಗಳನ್ನು ಜನರ ಮುಂದೆ ಇಟ್ಟು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮಾಂಸಹಾರಿಗಳು ಅತ್ಯಂತ ಸ್ವಾಭಿಮಾನಿಗಳು, ದೈವ ಭಕ್ತರು. ಮಾಂಸ ತಿಂದ ಮಾತ್ರಕ್ಕೆ ಭಕ್ತಿ ಕಡಿಮೆ ಆಗುವುದಿಲ್ಲ. ಬೇಡರ ಕಣ್ಣಪ್ಪ ಆಗತಾನೆ ಮೊಲ ಬೇಟೆಯಾಡಿ ಶಿವನಿಗೆ ಅದರ ಮಾಂಸದ ನೇವೇದ್ಯ ಮಾಡುತ್ತಾರೆ. ಮಾಹಿತಿ, ವೈಚಾರಿಕತೆ ತಿಳಿದುಕೊಳ್ಳದೆ ಸಮಾಜವನ್ನು ಒಡೆದು ಆಳುವ ಪ್ರಯತ್ನವನ್ನು ಪ್ರಬುದ್ಧ ಜನರು ಗಮನಿಸಲಿದ್ದಾರೆ. ಇಂತಹ ಅವಕಾಶವಾದಿ ಹೇಳಿಕೆ ನೀಡುವ, ಆಹಾರ, ಬಟ್ಟೆ, ಆಚಾರ ವಿಚಾರವಾಗಿ ಸಮಾಜ ಒಡೆಯುವ ಬಿಜೆಪಿಯವರಿಗೆ ರಾಜ್ಯ ಹಾಗೂ ದೇಶದಲ್ಲಿ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಸರ್ಕಾರಕ್ಕೆ ಬದ್ಧತೆ ಇದ್ದರೆ ನಿಮ್ಮ ಸಾಧನೆ, ಜನರ ಬದುಕು ಹಸನು ಮಾಡುವ ಬಗ್ಗೆ ಮಾತನಾಡಿ. ಅದನ್ನು ಬಿಟ್ಟು ಸಮಾಜ ಒಡೆದು ಆಳುವ ಬಗ್ಗೆ ಮಾತನಾಡಿದರೆ ಮೋದಿ ಅವರಿಗಾಗಲೇ, ಬೊಮ್ಮಾಯಿ ಅವರಿಗಾಗಲಿ ಶೋಭೆ ತರುವುದಿಲ್ಲ. ಇದನ್ನು ಜನ ಅರ್ಥ ಮಾಡಿಕೊಳ್ಳುತ್ತಾರೆ ಎಂದರು.

Donate Janashakthi Media

Leave a Reply

Your email address will not be published. Required fields are marked *