ಚಿಕ್ಕಮಗಳೂರು: ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ಮಠಕ್ಕೆ ಮೊಟ್ಟ ಮೊದಲ ಬಾರಿಗೆ ಭೇಟಿ ನೀಡಿ, ತಮ್ಮ ಸರ್ಕಾರದ ಅವಧಿಯಲ್ಲಿ ಪ್ರತ್ಯೇಕ ಲಿಂಗಾಯತ ಚಳವಳಿ ಆರಂಭಿಸಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ ಎಂದು ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ಸ್ವಾಮಿ ಹೇಳಿದ್ದಾರೆ.
ಸಿದ್ದರಾಮಯ್ಯ ಶುಕ್ರವಾರ(ಆಗಸ್ಟ್ 19) ಚಿಕ್ಕಮಗಳೂರು ಜಿಲ್ಲಾ ಪ್ರವಾಸದ ವೇಳೆ ಬಾಳೆಹೊನ್ನೂರಿನ ರಂಭಾಪುರಿ ಮಠಕ್ಕೆ ಭೇಟಿ ನೀಡಿ ಮಠದ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದಿದ್ದಾರೆ.
ಸಿದ್ದರಾಮಯ್ಯ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮೀಜಿ, ‘ಧರ್ಮ ಒಡೆಯುವುದು ನನ್ನ ಉದ್ದೇಶವಾಗಿರಲಿಲ್ಲ. ಕೆಲವರು ನನ್ನನ್ನು ದಾರಿ ತಪ್ಪಿಸಿದರು. ಇನ್ಯಾವತ್ತು ಧರ್ಮದ ವಿಷಯಕ್ಕೆ ಹೋಗುವುದಿಲ್ಲ ಎಂದು ಪಶ್ವಾತ್ತಾಪ ಪಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯ ಹಾಗೂ ಜನರ ಶ್ರೇಯೋಭಿವೃದ್ಧಿಗೆ ಆಧ್ಯತೆ ನೀಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು’ ಎಂದು ತಿಳಸಿದರು.
ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ಶ್ರೀ ಜಗದ್ಗುರು ರಂಬಾಪುರಿ ವೀರಸಿಂಹಾಸನ ಮಹಾ ಸಂಸ್ಥಾನ ಪೀಠಕ್ಕೆ ಭೇಟಿ ನೀಡಿ
ಶ್ರೀ ಪ್ರಸನ್ನ ರೇಣುಕ ವೀರ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿಯವರ ಆಶೀರ್ವಾದ ಪಡೆದೆ. pic.twitter.com/DocS5KsLnh— Siddaramaiah (@siddaramaiah) August 19, 2022
‘ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಕಾಲಾವಧಿಯಲ್ಲಿ ವೀರಶೈವ ಧರ್ಮದಿಂದ ಲಿಂಗಾಯತ ಧರ್ಮವಾಗಿ ಪ್ರತ್ಯೇಕಿಸುವ ಕುಮ್ಮಕ್ಕು ನೀಡಿದ ಆರೋಪವಿತ್ತು. ಈ ಬಗ್ಗೆ ಅವರ ಮನಸ್ಸಿನಲ್ಲಿದ್ದ ದುಗುಡವನ್ನು ಪ್ರಾಂಜಲ ಮನಸ್ಸಿನಿಂದ ಬಿಚ್ಚಿಟ್ಟಿದ್ದಾರೆ. ಧರ್ಮದ ವಿಚಾರದಲ್ಲಿ ಯಾವತ್ತೂ ಆವೇಶ ಮಾಡುವುದಿಲ್ಲ. ರಾಜ್ಯದ ಅಭಿವೃದ್ಧಿ, ಜನರ ಕಲ್ಯಾಣವನ್ನು ಗುರಿಯಾಗಿಟ್ಟುಕೊಂಡು ಮುಂದಿನ ದಿನಗಳಲ್ಲಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ’ ಎಂದರು.
‘ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಅಮಾಯಕರ ಪ್ರಾಣಗಳು ಹರಣವಾಗಬಾರದು. ಸರ್ವಜನಾಂಗದ ಶಾಂತಿಯ ತೋಟ ಎಂಬ ಕುವೆಂಪು ಅವರ ಮಾತಿನಂತೆ ಪರಸ್ಪರ ಪ್ರೀತಿ ವಿಶ್ವಾಸದಿಂದ ಎಲ್ಲಾ ಜನಾಂಗದವರೂ ಕೂಡಿ ಬಾಳಲು ಪೂರಕವಾದ ವಾತಾವರಣ ನಿರ್ಮಾಣ ಮಾಡುವುದು ಎಲ್ಲ ರಾಜಕಾರಣಿಗಳ ಗುರಿಯಾಗಬೇಕು. ಮಾತಿನ ಶೈಲಿಯಲ್ಲಿ ಮೃದು ಧೋರಣೆ ಇರಲಿ ಎಂದು ಸಲಹೆ ನೀಡಿದ್ದೇನೆ’ ಎಂದು ಸ್ವಾಮೀಜಿ ಹೇಳಿದರು.
ಈ ಮಠಕ್ಕೆ ಎಲ್ಲಾ ಪಕ್ಷದ ನಾಯಕರು ಆಗಮಿಸುತ್ತಾರೆ, ಅವರನ್ನು ಸಮಾನವಾಗಿ ಪರಿಗಣಿಸುತ್ತೇವೆ ಎಂದ ಮಠಾಧೀಶರು ಕಾಶಿಯಿಂದ ತಂದಿದ್ದ ಸಣ್ಣ ರುದ್ರಾಕ್ಷಿ ಹಾರವನ್ನು ಸಿದ್ದರಾಮಯ್ಯ ಅವರ ಕೊರಳಿಗೆ ಹಾಕಿ ‘ಇದನ್ನು ಕಾಶಿಯಿಂದ ತಂದಿದ್ದು ಚುನಾವಣೆವರೆಗೂ ಹಾಕಿಕೊಳ್ಳಿ’ ಎಂದು ಸಲಹೆ ನೀಡಿದ್ದಾರೆ.
ವಿವರಣೆ ನೀಡಿರುವೆ ಪಶ್ಚಾತಾಪವಾಗಿಲ್ಲ; ಸಿದ್ದರಾಮಯ್ಯ
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಯಾವ ಪಶ್ಚಾತಾಪವನ್ನು ಪ್ರಸ್ತಾಪ ಮಾಡಿಲ್ಲ. ಸ್ವಾಮೀಜಿಗೆ ವಿವರಣೆ ಕೊಟ್ಟಿದ್ದೇನಷ್ಟೇ. ಧರ್ಮ ಒಡೆಯುವ ಉದ್ದೇಶ ಇರಲಿಲ್ಲ. ಈ ವಿಚಾರವಾಗಿ ಮಾತೆ ಮಹಾದೇವಿ ಒಂದು ಪತ್ರವನ್ನು ನೀಡಿದ್ದರು. ನಿವೃತ್ತ ನ್ಯಾಯಾಧೀಶ ಹೆಚ್ ಎನ್ ನಾಗಮೋಹನದಾಸ್ ಸಮಿತಿ ವರದಿಯನ್ನು ನೀಡಿತ್ತು. ಈ ನಿಟ್ಟಿನಲ್ಲಿ ಧರ್ಮ ಒಡೆಯೋ ಉದ್ದೇಶ ಇಲ್ಲ ಅಂತ ಹೇಳಿದ್ದೀನಿ ಅಷ್ಟೇ ಎಂದರು.
ಪಶ್ಚಾತಾಪವಾಗಿದೆ ಎಂದಿರುವೆ ಎಂಬ ವಿಚಾರ ಇದೀಗ ವಿವಾದ ಆಗಿದೆ ಎನ್ನಲಾಗುತ್ತಿದೆ. ಆದರೆ, ಇದೀಗ ನೀವೇ ವಿವಾದ ಮಾಡುತ್ತಾ ಇರೋದು ಎಂದು ಮಾಧ್ಯಮಗಳ ಮೇಲೆ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.