ನನ್ನ ಅವತಾರ

ಶಶಿಕಲಾ ವೀರಯ್ಯಸ್ವಾಮಿ
ಸಂಪುಟ – 06, ಸಂಚಿಕೆ 22, ಮೇ 27, 2012
ಮತ್ತ ಬರ್ತೀನಂತ ಕೈಕೊಟ್ಟ
ಹೋದೆಲ್ಲೋ ಕಿಟ್ಟೂ,
ಬಾರೋ ಈಗ ಅಂಜಬುರಕಾ
ಯಾಕ ಕಲ್ಲಾಗೀದಿ?
ಅಲ್ಲೋ, ಹನಿ ಹಾಲಿಲ್ಲದ ಸತ್ತ
ಮಕ್ಕಳ ಹೆಣದ ಮ್ಯಾಲ್ನಿಂತು
ಕ್ಷೀರಾಭಿಷೇಕಾ ಕೇಳ್ತೀಯಲ್ಲೋ
ನಾಚಿಗ್ಗೇಡಿ!
ಕೊಡೋ ಮಗನ ನಿನ್ನ ಪೀತಾಂಬರದ
ಚೂರು, ಬತ್ತಲೆ ನಡಗವಗ?
ಹಾಕೋ ನೋಡೂನು ಕ್ಷೀರಸಾಗರದ
ಒಂದು ಲೋಟ ಹಾಲು
ಉಪಾಸ ಸಾಯವಗ?
ಕೊಲೀಸುಲಿಗೀಗಿ ಕಣ್ಣ ಮುಚ್ಚಿದ
ಹೇಡಿ ಆಗಿಯಲ್ಲೋ ಖೋಡಿ,
ಹೊಲಸ ತಿನ್ನೋ ಹೀನರ
ಜೋಡಿ ಪಾಲಾ ಕೂಡಿ,
ಬಂಗಾರ ಮೀಸಿ ಹಾಕೋತೇನೋ ಭಡವಾ
ನಿನಗ್ಯಾಕೋ ಮೀಸಿ
ಹುಡಿಗ್ಯಾರ ಸೀರಿ ಕದ್ದ ಹೇಸಿ
ನಿನಗೆ ನಾಕ ನಾಕ ಕೈ
ಇರೂದು ನಿನ್ನ ದೇವೀ…
ಮಕಮಲ್ಲಿನ ಮೈ ಬಳಸಿ
ಹಾಡಾಕಲ್ಲಪಾ ಮಾಮಾ,
ಎತ್ತೋ ಬಿದ್ದವ್ರನ್ನ
ಒತ್ತೋ ತುಳದವ್ರನ್ನ
ಗಂಡಸಾಗಿದ್ರೆ !!
ಕಾಗೀ ಕೈಯಾಗ ಕಛೇರಿ
ಕೊಟ್ಟಂಗಾಗೇತಿ ನಿನಗ
ಒಂದೇ ಒಂದಿನಾ ಛಾರ್ಜ
ಕೊಟ್ಟು ನೋಡೋ ನನಗ,
ನಲ್ಲಿಯೊಳಗೆಲ್ಲಾ ಹಾಲ ಸುರಿಸಿ
ನೆಲಕ್ಕೆಲ್ಲಾ ಪೀತಾಂಬರಾ ಹಾಸ್ತೀನಿ
ಈ ಚಂಡಾಲರ್ನೆಲ್ಲಾ ಚಂಡಾಡಿ
ರುಂಡ ಮಾಲಿ ಹಾಕ್ಕೊಂಡು
ಕುಣೀತೀನಿ,
ಎಣಿಸೆಣಿಸಿ ಹಲ್ಲು ಮುರದು
ನತ್ತ ಮಾಡಿ ಹಾಕೋತೀನೀ
ಹೊಟ್ಟಿ ಹರದು ಕಳ್ಳ ಹಿರದು
ಬಳೀ ಮಾಡಿ ಇಟಗೋತೀನೀ
ಆ ಮ್ಯಾಲೆ, ಆ ಮ್ಯಾಲೆ, ಆ ಮ್ಯಾಲೆ
ನಿನ್ನೂ ಒಂದ ಕೈ
ನೋಡೇ ಬಿಡ್ತಿನಿ
(ಬೆಂಗಳೂರು ವಿಶ್ವ ವಿದ್ಯಾಲಯದ ಪ್ರಥಮ ಬಿ.ಎ. ಪಠ್ಯವಾಗಿರುವ ಈ ಕವನಕ್ಕೆ ಎಬಿವಿಪಿ ಮುಂತಾದ ಕೇಸರಿ ಪಡೆ ಇತ್ತೀಚೆಗೆ ವಿರೋಧ ತೋರಿತ್ತು. ಹಾಲಿಲ್ಲದೇ ಹಸಿದ ಕಂದಮ್ಮಗಳ ಪರ ದನಿ ಎತ್ತುವ ಈ ಕವನದ ಬಗೆಗೆ ಸಂಘ ಪರಿವಾರದ ಜನಕ್ಕೆ ಅದ್ಯಾಕೆ ಅಷ್ಟೊಂದು ಸಿಟ್ಟೋ ? )
 

Donate Janashakthi Media

Leave a Reply

Your email address will not be published. Required fields are marked *