ತೋರಣಗಲ್ಲು: ಜುಲೈ 20ರಂದು ರಾಜಸ್ಥಾನ ರಾಜ್ಯದ ಜಲೋರ್ ಜಿಲ್ಲೆಯ ಸುರಾನಾ ಗ್ರಾಮದ ಖಾಸಗಿ ಶಾಲೆಯಲ್ಲೊಂದರಲ್ಲಿ ಮಡಿಕೆಯಲ್ಲಿದ್ದ ಕುಡಿಯುವ ನೀರನ್ನು ಕುಡಿದನೆಂದು ಒಂಬತ್ತು ವರ್ಷದ 3ನೇ ತರಗತಿ ದಲಿತ ವಿದ್ಯಾರ್ಥಿ ಇಂದ್ರ ಕುಮಾರ್ ಮೆಘವಾಲ್ ನಿಗೆ ಶಿಕ್ಷಕನೊಬ್ಬ ಅಮಾನವೀಯವಾಗಿ ಹಿಂಸೆ ಕೊಟ್ಟು ಒಡೆದು-ಬಡಿದ ಕಾರಣ ತುಂಬಾ ಗಂಭೀರವಾಗಿ ಗಾಯಗೊಂಡು, ಮೊದಲಿಗೆ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಬಾಲಕ ಆಗಸ್ಟ್ 13ರಂದು ಮೃತಪಟ್ಟಿದ್ದಾನೆ.
ಈ ಘಟನೆಯನ್ನು ಖಂಡಿಸಿ ಭಾರತ ಪ್ರಜಾಸತ್ತಾತ್ಮಕ ಯುಜನ ಫೆಡರೇಷನ್ (ಡಿವೈಎಫ್ಐ) ತೋರಣಗಲ್ಲು ಗ್ರಾಮದ ಘಟಕದ ವತಿಯಿಂದ ದಲಿತ ವಿದ್ಯಾರ್ಥಿ ಇಂದ್ರಕುಮಾರ್ ಸಾವಿಗೆ ನ್ಯಾಯ ಒದಗಿಸಬೇಕು ಹಾಗೂ ಆರೋಪಿ ಜೈಲ್ಸಿಂಗ್ ಗೆ ತೀವ್ರವಾದ ಶಿಕ್ಷೆಗೆ ಗುರಿಪಡಿಸಬೇಕೆಂದು ಆಗ್ರಹಿಸಿದರು.
ಖಾಸಗಿ ಶಾಲೆಯಾದ ಸರಸ್ವತಿ ವಿದ್ಯಾ ಮಂದಿರದಲ್ಲಿ ಕಾರ್ಯನಿರ್ವಹಿಸುವ 40 ವರ್ಷದ ಆರೋಪಿ ಶಿಕ್ಷಕ ಚೈಲ್ ಸಿಂಗ್ ಶಾಲೆಯಲ್ಲಿ ಕುಡಿಯಲು ಇಟ್ಟಿದ್ದ ಮಣ್ಣಿನ ಮಡಿಕೆಯಲ್ಲಿನ ನೀರನ್ನು ದಲಿತ ಬಾಲಕ ಕುಡಿದನೆಂದು ಕೋಪಗೊಂಡು ಬಾಲಕನನ್ನು ಮನಬಂದಂತೆ ಹಲ್ಲೆ ನಡೆಸಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಕೊಲೆ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ತಕ್ಷಣವೇ ಸೂಕ್ತ ಕಾನೂನು ಶಿಸ್ತು ಕ್ರಮ ಜರಗಿಸಿ ಮತ್ತು ದೇಶದಲ್ಲಿ ನಡೆಯುವಂತಹ ದೌರ್ಜನ್ಯ, ಹಲ್ಲುಗಳನ್ನು ತಡೆಗಟ್ಟಲು ನಮ್ಮ ಸರ್ಕಾರಗಳು ಮುಂದಾಗಬೇಕು ಎಂದು ಒತ್ತಾಯಿಸಲಾಗಿದೆ.
ಸೂಕ್ತ ನ್ಯಾಯ ಒದಗಿಸಬೇಕು ಹಾಗೂ ಹಲ್ಲೆ ಖಂಡಿಸಿ ನಾಡ ಕಛೇರಿ ಅಧಿಕಾರಿ ವಿ.ಎ. ರಾಮ್ ರಾವ್ ಅವರ ಮೂಲಕ ಪ್ರಧಾನಿ ಮಂತ್ರಿಗಳಿಗೆ ಮನವಿ ಪತ್ರ ಕಳುಹಿಸಿದರು. ಈ ಸಂದರ್ಭದಲ್ಲಿ ಡಿವೈಎಫ್ಐ ತಾಲ್ಲೂಕು ಸಾಂಸ್ಕೃತಿಕ ಕಾರ್ಯದರ್ಶಿ ನಾಗಭೂಷಣ, ತೋರಣಗಲ್ಲು ಘಟಕದ ಉಪಾಧ್ಯಕ್ಷ ಪಾಲ್ ಪಕ್ಕಿರ್, ದಲಿತ ಮುಖಂಡರುಗಳಾದ ಬಾಬು, ಮಹೇಶ, ಅಕ್ಷಯ್, ಪರಶುರಾಮ, ಶ್ರೀನಿವಾಸ ಇತರರು ಭಾಗವಹಿಸಿದ್ದರು.