ಟಿ. ಸುರೇಂದ್ರರಾವ್
ಇವತ್ತು ಮೆಡಿಕಲ್ ಶಾಪ್ ಗೆ ಹೋಗಿದ್ದೆ. ಅದಾಗಲೇ ಒಬ್ಬ ಹಿರಿಯ ನಾಗರಿಕರು ಔಷಧಿ ಕೊಳ್ಳುತ್ತಿದ್ದರು. ಅವರ ಖರೀದಿ ಮುಗಿದ ನಂತರ ನಾನು ಕೊಳ್ಳುವುದು ಎಂದು ಕಾದೆ. ಯಾಕೋ ಗೊತ್ತಿಲ್ಲ, ಆ ಹಿರಿಯರಿಗೆ ನನ್ನ ಜತೆ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಬೇಕೆಂಬ ಹಂಬಲ. ಹೊರಡುವ ಮುನ್ನ ತಮ್ಮ ಭಾವನೆಗಳನ್ನು ಬಿಚ್ಚಿಟ್ಟರು.
“ಸಾರ್, ನಾನು ಹುಟ್ಟಿ ಬೆಳೆದಿದ್ದು ಈ ಬೆಂಗಳೂರಿನಲ್ಲೇ. ಮುಂಬಯಿ, ದೆಹಲಿ ನಗರಗಳಲ್ಲಿ ದುಡಿದು ಬದುಕಿನ ಸಂಜೆಯಲ್ಲಿ ಈಗ ಮತ್ತೆ ನನ್ನ ಊರಿಗೆ ಬಂದು ಕಾಲ ಕಳೀತಾ ಇದೇನೆ. ನನಗೆ ಈಗ 80 ವರ್ಷ. ನಮ್ಮ ನಗರದ ರಸ್ತೆಯನ್ನು ರಿಪೇರಿ ಮಾಡಿದ್ದೇವೆ ಅಂತ ಹೇಳ್ತಾ ಇದಾರೆ. ಆದರೆ ಯಾವ ರಸ್ತೆಯಲ್ಲಾದರೂ ನಾವು ಓಡಾಡುವಂತೆ ಇದೆಯಾ ಸರ್? ನಮ್ಮ ಬೆಂಗಳೂರು ಎಷ್ಟು ಹಾಳಾಗಿದೆ ನೋಡಿ ಸಾರ್,” ಎಂದು ತಮ್ಮ ಅಳಲು ತೋಡಿಕೊಂಡರು.
“ಹೌದು ಸಾರ್. ನಮ್ಮನ್ನು ಆಳುತ್ತಿರುವ ಸರ್ಕಾರದಲ್ಲಿರುವ ಸಂಸದರು, ಶಾಸಕರು ಬಹುತೇಕರು ಪಾತಕಿಗಳು, ಅಪರಾಧಿಗಳಾಗಿದ್ದಾರೆ ಸರ್. ಅಂಥವರಿಂದ ಮತ್ತೇನನ್ನು ನಿರೀಕ್ಷೆ ಮಾಡಲು ಸಾಧ್ಯ” ಅಂದೆ.
75ನೇ ಸ್ವಾತಂತ್ರ್ಯೋತ್ಸವ ಆಚರಿಸ್ತಾ ಇದೇವೆ. ಸ್ವಾತಂತ್ರ್ಯವನ್ನು ದಿನದಿಂದ ದಿನಕ್ಕೆ ಕಳೆದುಕೊಳ್ತಾ ಇದೇವೆ. ನಮ್ಮ ಸಂವಿಧಾನವನ್ನು ನಾಶ ಮಾಡುವ ಜನ ನಮ್ಮ ಮಧ್ಯೆ ಕ್ರಿಯಾಶೀಲರಾಗಿದ್ದಾರೆ. ಇದು ಬದಲಾಗದೆ ಜನಸಮುದಾಯದ ಪರಿಸ್ಥಿತಿ ಉತ್ತಮವಾಗುವುದು ಕಷ್ಟ. ಆ ನಿಟ್ಟಿನಲ್ಲಿ ನಮ್ಮ ಕೆಲಸಗಳಾಗಬೇಕು. ಅದು ನಮ್ಮ ಈ ಬಾರಿಯ ಸ್ವಾತಂತ್ರ್ಯೋತ್ಸವದ ಸಂಕಲ್ಪ ಆಗಲಿ.