ಹಾವೇರಿ: ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಒಟ್ಟು ಐದು ಕಡೆಯಿಂದ 45 ದಿನಗಳ ಕಾಲ ಶಿಕ್ಷಣ ಉಳಿಸಿ, ಸಂವಿಧಾನ ಉಳಿಸಿ, ದೇಶ ಉಳಿಸಿ ಎಂಬ ಘೋಷಣೆಯಡಿ ದೇಶವ್ಯಾಪಿ ಸಂಚರಿಸುತ್ತಿರುವ ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್ಎಫ್ಐ) ಅಖಿಲ ಭಾರತ ಜಾಥಾ ಇಂದು(ಆಗಸ್ಟ್ 11) ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪುಷ್ಪವೃಷ್ಟಿಗೈದು ಸ್ವಾಗತಿಸಲಾಯಿತು.
ಸ್ವಾತಂತ್ರ್ಯ ಹೋರಾಟಗಾರ, ಹುತಾತ್ಮ ಸಂಗಾತಿ ಮೈಲಾರ ಮಹಾದೇವಪ್ಪ ಪ್ರತಿಮೆಗೆ ಗೌರವ ಮಾಲಾರ್ಪಣೆ ಮಾಡಿದ ಹೊಸಮಠದ ಶ್ರೀ ಬಸವಶಾಂತಲಿಂಗ ಸ್ವಾಮೀಜಿ ಎಸ್ಎಫ್ಐ ಶ್ವೇತ ಪತ್ತಾಕೆಯನ್ನು ರಾಷ್ಟ್ರೀಯ ಅಧ್ಯಕ್ಷ ವಿ.ಪಿ ಸಾನು ಅವರಿಗೆ ನಿಡುವ ಮೂಲಕ ಜಾಥಾಗೆ ಶುಭಾರೈಸಿ ಮಾತಾನಾಡಿದರು. ಎಲ್ಲರಿಗೂ ಶಿಕ್ಷಣದ ಜಾಗೃತಿ ಮೂಡಿಸಲು, ಸೌಹಾರ್ದ ಪರಂಪರೆಯನ್ನು ಹೊತ್ತಯ್ಯೊಲು ಈ ಜಾಥಾ ಸಹಕಾರಿಯಾಗಲಿದೆ ಎಂಬ ಆಶಯದ ನುಡಿಗಳನ್ನು ಆಡಿದರು.
ಮೈಲಾರ ಮಹದೇವಪ್ಪ ವೃತ್ತದಿಂದ ಆರಂಭವಾದ ಜಾಥಾ ಹೊಸಮನಿ ಸಿದ್ದಪ್ಪ ವೃತ್ತ, ಜೆ ಎಚ್ ಪಟೇಲ್ ವೃತ್ತ, ಜಗಜ್ಯೋತಿ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಗೌರವ ನಮನಗಳನಗಳನ್ನು ಸಲ್ಲಿಸಿ ಎಸ್.ಜೆ.ಎಂ. ಪಿಯು ಕಾಲೇಜು ಅವರಣದಲ್ಲಿ ಬಹಿರಂಗ ಸಭೆ ನಡೆಯಿತು. ನೂರಾರು ವಿದ್ಯಾರ್ಥಿಗಳು ಜಾಥಾವನ್ನು ಪುಷ್ಪ ಹಾಕುವುದರ ಮೂಲಕ ಶಿಕ್ಷಣ ಪರ ಘೋಷಣೆ ಮೊಳಗಿಸುತ್ತಾ ಅದ್ದೂರಿಯಾಗಿ ಸ್ವಾಗತ ಮಾಡಿದರು.
ಬಹಿರಂಗ ಸಭೆಯನ್ನು ಉದ್ದೇಶಿಸಿ ಎಸ್ಎಫ್ಐ ಅಖಿಲ ಭಾರತ ಅಧ್ಯಕ್ಷ ವಿ ಪಿ ಸಾನು ಮಾತನಾಡಿ, ಜಾಥಾದ ಮುಖ್ಯ ಉದ್ದೇಶದ ಬಗ್ಗೆ ಹೇಳುತ್ತಾ ದೇಶದ ಶೈಕ್ಷಣಿಕ ಪರಿಸ್ಥಿತಿ ಕುರಿತು ಬೆಳಕು ಚೆಲ್ಲಿದರು. ಹಾವೇರಿಯ ಅಭಿವೃದ್ಧಿಯ ಬಗ್ಗೆ ಹಾಗೂ ಇಲ್ಲಿಯ ಜನರಿಗೆ ಸಿಗಬೇಕಾದ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡಿ, ಸರ್ಕಾರಗಳು ಇತಿಹಾಸದ ಪಾಠಗಳನ್ನು ಬದಲಾಯಿಸುವ ಮೂಲಕ ಶಿಕ್ಷಣ ಕ್ಷೇತ್ರವನ್ನು ಹದಗೆಡಿಸಲು ಪ್ರಯತ್ನಿಸುತ್ತಿದೆ. ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ಭ್ರಷ್ಟಗೊಳಿಸಲಾಗಿದೆ. ಶ್ರೀಮಂತ ಬೆಂಬಲಿತ ಆಡಳಿತವು ವ್ಯವಸ್ಥಿತವಾಗಿ ವಿಶ್ವವಿದ್ಯಾಲಯಗಳನ್ನು ಬಳಸಲು ನೀತಿಗಳನ್ನು ದುರ್ಬಲಗೊಳಿಸುತ್ತಿದೆ. ನಮ್ಮ ಸಂವಿಧಾನವು ನಮಗೆ ಕೊಡಮಾಡಿದ ಕೈಗೆಟುಕುವ ಗುಣಮಟ್ಟದ ಶಿಕ್ಷಣವು ಭ್ರಮೆಯಾಗಿ ಬದಲಾಗುತ್ತಿದೆ. ಆದ್ದರಿಂದ ಶಿಕ್ಷಣ ವ್ಯವಸ್ಥೆಯನ್ನು ಹದಗೆಡಿಸುವ ಮೂಲಕ ಸಾಂವಿಧಾನಿಕ ಹಕ್ಕುಗಳನ್ನು ಶಿಥಿಲಗೊಳಿಸುವ ಈ ಪ್ರಯತ್ನವನ್ನು ನಾವೆಲ್ಲ ಪರಸ್ಪರ ಕೈಜೋಡಿಸಿ ಪ್ರತಿರೋಧಿಸುವುದು ನಮ್ಮ ಕಾಲದ ಅಗತ್ಯವಾಗಿದೆ. ಈ ಸಂದರ್ಭದಲ್ಲಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಶಿಕ್ಷಣವನ್ನು ಉಳಿಸುವ ಹಾಗೂ ಲಕ್ಷಾಂತರ ಯುವಜನರ ಉದ್ಯೋಗ ಭರವಸೆ ಉದ್ದೇಶದಿಂದ ದೇಶವ್ಯಾಪಿ ಚಳವಳಿಯನ್ನು ಸಂಘಟಿಸುತ್ತಿದೆ ಎಂದರು.
ಅಖಿಲ ಭಾರತ ಜಂಟಿ ಕಾರ್ಯದರ್ಶಿ ನಿತೀಶ್ ನಾರಾಯಣ್ ಮಾತನಾಡಿ, ಇಡೀ ಜಾಥಾದ ಉದ್ದೇಶ ಹಾಗೂ ಪ್ರಸಕ್ತ ಸಂದರ್ಭದಲ್ಲಿ ದೇಶದ ಮೇಲೆ ಆಗುತ್ತಿರುವ ಶೈಕ್ಷಣಿಕ ದಾಳಿಯ ಮತ್ತು ಸ್ವಾತಂತ್ರ್ಯದ ಅಮೃತಮಹೋತ್ಸವದ ಹೊತ್ತಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕನಸುಗಳು ಎನಾಗಿತ್ತು, ಅದನ್ನು ನಾವು ಈಡೇರಿಸಲು ಸಾಧ್ಯ ಆಗಿದೆಯೇ? ಯಾಕೆ ಅಗಿಲ್ಲ ಮತ್ತು ಆಳುವ ಸರ್ಕಾರಗಳು ಯಾವ ರೀತಿಯಲ್ಲಿ ನಮ್ಮನ್ನು ಜಾತಿ ಧರ್ಮ ಹೆಸರಿನಲ್ಲಿ ಒಡೆದಾಳುತ್ತಿದ್ದಾರೆ. ಬ್ರಿಟಿಷರು ಕೂಡಾ ಇಂತಹ ನೀತಿಯನ್ನು ಅನುಸರಿಸಿ ನಮ್ಮ ಮೊದಲ ಸ್ವಾತಂತ್ರ್ಯ ಸಂಗ್ರಾಮ (ಸಿಪಾಯಿ ಧಂಗೆ )ಯನ್ನು ಮುರಿದಿದ್ದು ಇತಿಹಾಸ. ಅಂತಹ ಶಕ್ತಿಗಳೆ ಇಂದು ನಮ್ಮನ್ನು ಆಳುತ್ತಿದ್ದಾರೆ. ಹಾಗಾಗಿ ಆ ಕುರಿತು ಜಾಗೃತಿ ಮೂಡಿಸಲು ಈ ಜಾಥಾ ನಡೆಯುತ್ತಿದೆ ಎಂದರು.
ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ವಾಸುದೇವರೆಡ್ಡಿ ಮಾತನಾಡುತ್ತಾ, ನಮ್ಮ ನಾಡಿನ ಸರ್ಕಾರಿ ಶಾಲೆಗಳನ್ನು ಮುಚ್ಚಲು ಸರ್ಕಾರ ಮಾಡುತ್ತಿರುವ ವಂಚನೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು. ಹಾಗೆ ನೀಟ್ ನಂತಹ ಕೋರ್ಸ್ ಗಳು ಹೇಗೆ ವೈದ್ಯಕೀಯ ಶಿಕ್ಷಣ ಪಡೆಯಲು ನಮ್ಮ ನಾಡಿನ ವಿದ್ಯಾರ್ಥಿಗಳಿಗೆ ಮುಳ್ಳಗುತ್ತಿವೆ ಎಂಬುದನ್ನು ಬಿಚ್ಚಿಟ್ಟರು.
ಎಸ್ಎಫ್ಐ ನ ಮಾಜಿ ಮುಖಂಡ ಬಸವರಾಜ ಪೂಜಾರ ಮಾತನಾಡಿ ಶಿಕ್ಷಣ, ಉದ್ಯೋಗ, ಆಹಾರ ಸಿಗದೇ ವಿದ್ಯಾರ್ಥಿ ಯುವಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇನ್ನೊಂದೆಡೆ ರೈತ, ಕಾರ್ಮಿಕರು, ಕೂಲಿಕಾರ್ಮಿಕರು ಕೂಡಾ ಬೆಳೆದ ಬೆಳೆಗೆ ಬೆಲೆ ಸಿಗದೇ, ಕಾರ್ಮಿಕರಿಗೆ ಕನಿಷ್ಠ ಕೂಲಿ ಸಿಗದೇ, ಕೃಷಿ ಬಿಕ್ಕಟ್ಟುಗಳ ಕಾರಣದಿಂದ ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿಕೊಂಡಿದ್ದ ಎಸ್‌ಎಫ್‌ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಭೋವಿ ಮಾತನಾಡಿ, ಜಿಲ್ಲೆಯ ಅಭಿವೃದ್ಧಿಗೆ ವಿದ್ಯಾರ್ಥಿಗಳು ಒಂದಾಗಬೇಕಿದೆ. ಹಾಸ್ಟೆಲ್ ಗಳ ಮೂಲಭೂತ ಸೌಕರ್ಯಗಳು, ಶಾಲಾ ಕಾಲೇಜುಗಳ ಕಟ್ಟಡ, ಮೆಡಿಕಲ್ ಹಾಗೂ ಕಾನೂನು ಕಾಲೇಜುಗಳ ಶೀಘ್ರ ಪ್ರಾರಂಭ, ವಿವಿಗಳ ಬಲವರ್ಧನೆಗೆ ಹೆಚ್ಚಿನ ಅನುದಾನದ ನೀಡಬೇಕೆಂದರು.
ವೇದಿಕೆ ಮೇಲೆ ಎಸ್ಎಫ್ಐ ರಾಜ್ಯ ಜಂಟಿ ಕಾರ್ಯದರ್ಶಿ ಭೀಮನ ಗೌಡ, ಎಐಎಲ್‌ಯು ಮುಖಂಡ ನಾರಾಯಣ ಕಾಳೆ, ಸಿಐಟಿಯು ಮುಖಂಡ ಅಂದಾನೆಪ್ಪ ಹೆಬಸೂರು, ಎಸ್ಎಫ್ಐ ರಾಜ್ಯ ಸಮಿತಿ ಸದಸ್ಯರಾದ ಗಣೇಶ ರಾಥೋಡ, ಅರುಣ್ ಕಡಕೋಳ್, ಗುಡ್ಡಪ್ಪ ಮಡಿವಾಳರ, ತಾಲ್ಲೂಕು ಕಾರ್ಯದರ್ಶಿ ಕಾವ್ಯ, ಎಸ್ಎಫ್ಐ ಮಾಜಿ ಮುಖಂಡ ಡಾ. ಗಂಗಯ್ಯ ಕುಲಕರ್ಣಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.