ಕನಕಗಿರಿ: ಹುಲಿಹೈದರ್‌ ಗ್ರಾಮದಲ್ಲಿ ಎರಡು ಗುಂಪುಗಳ ಮಧ್ಯೆ ಹೊಡೆದಾಟ-2 ಸಾವು, 10 ಮಂದಿಗೆ ಗಾಯ

ಕೊಪ್ಪಳ: ಜಿಲ್ಲೆಯ ಕನಕಗಿರಿ ತಾಲ್ಲೂಕಿನ ಹುಲಿಹೈದರ್ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಹೊಡೆದಾಟ ಸಂಭವಿಸಿ ಇಬ್ಬರು ಮೃತ ಪಟ್ಟಿದ್ದು, 10ಕ್ಕೂ ಹೆಚ್ಚು ಮಂದಿಗೆ ಗಾಯವಾಗಿರುವ ಘಟನೆ ನಡೆದಿದೆ. ಗ್ರಾಮದಲ್ಲಿ ವಾಲ್ಮೀಕಿ ಮೂರ್ತಿ ಪ್ರತಿಷ್ಠಾಪನೆ ಮಾಡುವ ಸಂಬಂಧ ನಾಯಕ ಮತ್ತು ಮುಸ್ಲಿಂ ಸಮಾಜದ ನಡುವೆ ಘರ್ಷಣೆ ನಡೆದಿದ್ದು, ಇದು ಅತಿರೇಕಕ್ಕೆ ತಿರುಗಿದೆ.

ಹೊಡೆದಾಟದಲ್ಲಿ ಯಂಕಪ್ಪ ತಳವಾರ (60), ಪಾಷಾವಲಿ (27) ಎಂಬುವವರು ಮೃತಪಟ್ಟಿದ್ದು 10ಕ್ಕೂ ಹೆಚ್ಚು ಜನರಿಗೆ ಪೆಟ್ಟು ತಗುಲಿದೆ. ಧರ್ಮಣ್ಣ ಹರಿಜನ ಎಂಬ ಯುವಕನಿಗೆ ಗಂಭೀರ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಹುಲಿಹೈದರ್ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ‘ವಾಲ್ಮೀಕಿ ಮೂರ್ತಿ ಪ್ರತಿಷ್ಠಾಪನೆ ಮಾಡುವ ಸಂಬಂಧ ಎರಡೂ ಸಮುದಾಯಗಳ ನಡುವೆ ಮೊದಲಿನಿಂದಲೂ ವೈ ಮನಸ್ಸು ಇತ್ತು. ಮೊಹರಂ ಹಬ್ಬದ ಮೂರನೇ ದಿನದ ಕಾರ್ಯಕ್ರಮದ ವೇಳೆ ಪರಸ್ಪರ ಮಾತಿಗೆ ಮಾತು ಬೆಳೆದು ಈ ಘಟನೆ ನಡೆದಿದೆ. ಮುಸ್ಲಿಮರು ಇಂದು ವಿವಾದದ ಸ್ಥಳದಲ್ಲಿ ಕಾರ್ಯಕ್ರಮ ಆಯೋಜಿಸಿದ್ದರು. ಇದಕ್ಕೆ ನಾಯಕ ಸಮುದಾಯದವರು ಪ್ರಬಲ ವಿರೋಧ ವ್ಯಕ್ತಪಡಿಸಿದ್ದು ಘರ್ಷಣೆಗೆ ಕಾರಣವಾಗಿದೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಸಿಆರ್​ಪಿಸಿ ಸೆಕ್ಷನ್ 144ನೇ ವಿಧಿಯ ಅನ್ವಯ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ಆಗಸ್ಟ್ 20ರವರೆಗೆ ಜಾರಿಯಲ್ಲಿರುತ್ತದೆ ಎಂದು ಕೊಪ್ಪಳ ಉಪವಿಭಾಗಾಧಿಕಾರಿ ಬಸವಣ್ಣಪ್ಪ ಕಲ್ಲಶೆಟ್ಟಿ ಆದೇಶದಲ್ಲಿ ತಿಳಿಸಿದ್ದಾರೆ. ಗ್ರಾಮದ ಸುತ್ತಮುತ್ತ 2 ಕಿಮೀ ವ್ಯಾಪ್ತಿಯಲ್ಲಿ ಜನರು ಗುಂಪು ಸೇರುವುದನ್ನು ನಿಷೇಧಿಸಲಾಗಿದೆ. ಡಿವೈಎಸ್​ಪಿ ರುದ್ರೇಶ್ ಉಜ್ಜನಕೊಪ್ಪ, ತಹಶೀಲ್ದಾರ್ ಧನಂಜಯ ಮಾಲಗತ್ತಿ ಗ್ರಾಮದಲ್ಲಿಯೇ ಬೀಡುಬಿಟ್ಟಿದ್ದು, 100ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.

 

ಘರ್ಷಣೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಧರ್ಮಣ್ಣ ಅವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಹಿಂಸಾಚಾರ ಖಂಡಿಸಿ ಮುಸ್ಲಿಂ ಮಹಿಳೆಯರು ಗ್ರಾಮದಲ್ಲಿ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು. ಹೂ ತರಲು ಹೋಗಿದ್ದಾಗ ನಮ್ಮ ಹುಡುಗನಿಗೆ ಹೊಡೆದರು ಎಂದು ಹೇಳಿದ ಮಹಿಳೆಯರು ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದರು. ಮಾಜಿ ಸಚಿವ ಶಿವರಾಜ್ ತಂಗಡಗಿ ಆಪ್ತ ಹನುಮೇಶ್ ನಾಯಕ ಈ ಘಟನೆಗೆ ಕಾರಣ ಎಂದು ದೂರಿದರು.

ಮುಂಜಾನೆ 9 ಗಂಟೆಯ ವೇಳೆಯಲ್ಲಿ ಗಲಭೆ ನಡೆದಿದ್ದು, ಮನೆಗಳ ಮುಂದೆ ನಿಲ್ಲಿಸಿದ್ದ ಬೈಕ್, ಟಾಟಾ ಏಸ್ ಸೇರಿದಂತೆ ಹಲವು ವಾಹನಗಳನ್ನು ಜಖಂ ಮಾಡಲಾಗಿದೆ. ಬೈಕ್​ಗಳ ಮೇಲೆ ಕಲ್ಲು ಎತ್ತಿಹಾಕಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಗ್ರಾಮದಲ್ಲಿ ಎರಡು ಗುಂಪುಗಳ ಹೊಡೆದಾಟದ ನಂತರ ಬಿಗುವಿನ ವಾತಾವರಣ ನೆಲೆಸಿದ ಹಿನ್ನೆಲೆಯಲ್ಲಿ ಶಿಕ್ಷಕರು ಶಾಲೆಗಳಿಗೆ ರಜೆ ಘೋಷಿಸಿ, ಸ್ವತಃ ಮಕ್ಕಳನ್ನು ಮನೆಗಳಿಗೆ ತಲುಪಿಸಿ ಬಂದರು.

Donate Janashakthi Media

Leave a Reply

Your email address will not be published. Required fields are marked *