ನವದೆಹಲಿ: ಸುಪ್ರೀಂ ಕೋರ್ಟ್ನ 49ನೇ ಮುಖ್ಯ ನ್ಯಾಯಮೂರ್ತಿಯಾಗಿ ಉದಯ್ ಉಮೇಶ್ ಲಲಿತ್ ಅವರನ್ನು ನೇಮಕ ಮಾಡಿ ಅಧಿಸೂಚನೆ ಹೊರಡಿಸಲಾಗಿದೆ. ಹಾಲಿ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನಿವೃತ್ತಿಯಾಗಿಲಿದ್ದು, ಅವರ ಸ್ಥಾನವನ್ನು ಯು.ಯು.ಲಲಿತ್ ಅವರು ಭರ್ತಿ ಮಾಡಲಿದ್ದಾರೆ. ನೂತನ ನ್ಯಾಯಮೂರ್ತಿಗಳನ್ನು ನೇಮಿಸಿ ರಾಷ್ಟ್ರಪತಿ ಭವನ ಅಧಿಸೂಚನೆ ಹೊರಡಿಸಿದೆ.
ಯು ಯು ಲಲಿತ್ ಅವರ ನೇಮಕದ ಬಗ್ಗೆ ಕಳೆದ ಒಂದು ವಾರದ ಹಿಂದೆ ಶಿಫಾರಸು ಮಾಡಿ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಕೇಂದ್ರ ಕಾನೂನು ಸಚಿವಾಲಯಕ್ಕೆ ಶಿಫಾರಸ್ಸು ಮಾಡಿದ್ದರು.
“ಭಾರತದ ಸಂವಿಧಾನದ 124 ನೇ ವಿಧಿಯ ಷರತ್ತು (2) ರ ಮೂಲಕ ನೀಡಲಾದ ಅಧಿಕಾರಗಳನ್ನು ಚಲಾಯಿಸುವ ಮೂಲಕ ಆಗಸ್ಟ್ 27 ರಿಂದ ಜಾರಿಗೆ ಬರುವಂತೆ ಸುಪ್ರೀಂ ಕೋರ್ಟ್ನ ನ್ಯಾಯಾಧೀಶರಾದ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಅವರನ್ನು ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಲು ರಾಷ್ಟ್ರಪತಿಗಳು ಸಂತೋಷಪಟ್ಟಿದ್ದಾರೆ” ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ವಕೀಲ ವೃತ್ತಿಯಿಂದ ನೇರ ಸರ್ವೋಚ್ಚ ನ್ಯಾಯಮೂರ್ತಿಯಾದವರು
ನ್ಯಾಯಮೂರ್ತಿ ಯು ಯು ಲಲಿತ್ ಅವರು, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗುವ ಮುನ್ನ ವಕೀಲರಾಗಿದ್ದರು. ಬಾರ್ ಕೌನ್ಸಿಲ್ನಿಂದ ನೇರವಾಗಿ ಅವರನ್ನು 2014 ಆಗಸ್ಟ್ 13ರಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಗಿತ್ತು. ಸುಪ್ರೀಂ ಕೋರ್ಟ್ ಇತಿಹಾಸದಲ್ಲಿ ಇದೂವರೆಗೂ ಕೇವಲ 8 ಮಂದಿ ಮಾತ್ರ ಈ ರೀತಿ ನೇರವಾಗಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕವಾಗಿದ್ದಾರೆ.
ಯು ಯು ಲಲಿತ್ ಅವರು ಆಗಸ್ಟ್ 27 ರಂದು 49ನೇ ಭಾರತದ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅವರು ಮೂರು ತಿಂಗಳಿಗಿಂತ ಕಡಿಮೆ ಅವಧಿಗೆ ಮಾತ್ರ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ನಿರ್ವಹಿಸಲಿದ್ದಾರೆ. ನವೆಂಬರ್ 8 ರಂದು ಅಧಿಕಾರದಿಂದ ನಿರ್ಗಮಿಸಲಿದ್ದಾರೆ.
2021 ರ ಏಪ್ರಿಲ್ 24 ರಂದು ಎಸ್ ಎ ಬೋಬ್ಡೆ ಅವರ ನಂತರ 48ನೇ ಭಾರತೀಯ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿ ಎನ್ ವಿ ರಮಣ ಅವರು ಅಧಿಕಾರ ವಹಿಸಿಕೊಂಡಿದ್ದರು. ಒಟ್ಟು 16 ತಿಂಗಳ ಅವಧಿಗೆ ಅವರು ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ.
ಆಗಸ್ಟ್ 26ರಂದು ಮುಖ್ಯ ನ್ಯಾಯಮೂರ್ತಿ ರಮಣ ನಿವೃತ್ತಿಯಾಗಲಿದ್ದಾರೆ.