ಬೆಂಗಳೂರು : ಆರ್ ಎಸ್ ಎಸ್ ಬೆಂಬಲಿತ ಚಾಣಕ್ಯ ವಿಶ್ವವಿದ್ಯಾಲಯಕ್ಕೆ ರಾಜ್ಯ ಸರಕಾರ ಅಕ್ರಮವಾಗಿ ಭೂಮಿಯನ್ನು ನೀಡಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ ಕೆಐಎಡಿಬಿ ಮೊದಲನೇ ಹಂತದ ಕೈಗಾರಿಕಾ ಪ್ರದೇಶದಲ್ಲಿ ಕಾನೂನು ಉಲ್ಲಂಘನೆ ಮಾಡಿ ಅಕ್ರಮವಾಗಿ ರಾಜ್ಯ ಸರ್ಕಾರ ಆರ್ ಎಸ್ ಎಸ್ ಬೆಂಬಲಿತ ಚಾಣಕ್ಯ ವಿಶ್ವವಿದ್ಯಾನಿಲಯಕ್ಕೆ ಭೂಮಿಯನ್ನು ನೀಡಲಾಗಿದೆ ಎಂದು ಸಿಪಿಐಎಂ ಆರೋಪಿಸಿದೆ.
ಸುಮಾರು ಎಕರೆಗೆ ಎರಡು ಕೋಟಿ ರೂಪಾಯಿಗಿಂತ ಬೆಲೆ ಇರುವ ಈ ಭೂಮಿಯನ್ನು ಕೇವಲ 50 ಲಕ್ಷಕ್ಕಿಂತ ಕಡಿಮೆ ದರಕ್ಕೆ ಚಾಣಕ್ಯ ವಿವಿಗೆ 116 ಎಕರೆ ಭೂಮಿಯನ್ನು ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಮಂಜೂರು ಮಾಡಿಲಾಗಿದೆ ಎಂದು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಜಿ.ಸಿ ಬಯ್ಯಾರೆಡ್ಡಿ ಆರೋಪಿಸಿದ್ದಾರೆ.
ಕಾನೂನುಗಳನ್ನು ಉಲ್ಲಂಘಿಸಿ ಮಾಡಿರುವ ಈ ಅಕ್ರಮ ಮಂಜೂರಾತಿ ಯಿಂದಾಗಿ ಸುಮಾರು 200 ಕೋಟಿಗಿಂತ ಹೆಚ್ಚಿನ ನಷ್ಟ ರಾಜ್ಯದ ಬೊಕ್ಕಸಕ್ಕೆ ಆಗಿದೆ ಎಂದು ಅವರು ತಿಳಿಸಿದ್ದಾರೆ.
ಚಾಣಕ್ಯ ವಿವಿಗೆ ರಾಜ್ಯ ಸರ್ಕಾರ ಅಕ್ರಮವಾಗಿ ಭೂಮಿ ನೀಡಿರುವುದನ್ನು ರದ್ದು ಮಾಡಬೇಕು, ಆಕ್ರಮಗಳನ್ನು ಮಾಡಿದಂತಹ ಅಧಿಕಾರಿಗಳ ಮತ್ತು ಮಂತ್ರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕಚೇರಿ ಎದುರು ಆಗಸ್ಟ್ 16 ರಂದು ಪ್ರತಿಭಟನೆಯನ್ನು ನಡೆಸಲಾಗುತ್ತಿದೆ ಎಂದು ಬೆಂಗಳೂರು ಗ್ರಾಮಾಂತರ ಸಿಪಿಐಎಂ ಕಾರ್ಯದರ್ಶಿ ಚಂದ್ರತೇಜಸ್ವಿ ತಿಳಿಸಿದ್ದಾರೆ.