ಚೆನ್ನೈ: ಅಕ್ಕಿಯ ಮೇಲೆ ವಿಧಿಸಲಾಗಿರುವ ಶೇ. 5ರಷ್ಟು ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್‌ಟಿ) ತಪ್ಪಿಸಲು ತಮಿಳುನಾಡಿನ ಅಕ್ಕಿ ಮಾರಾಟಗಾರರು ಜಿಎಸ್‌ಟಿ ಹೇರಿಕೆ ಪರಿಣಾಮ ಚಿಲ್ಲರೆ ಮಾರಾಟದಲ್ಲಿ ಪ್ರತಿ ಕಿಲೋ ಅಕ್ಕಿಗೆ ಮೊದಲಿಗಿಂತ 2-3 ರೂ. ಹೆಚ್ಚುವರಿ ದರ ಬದಲಾವಣೆಯಾಗಲಿದೆ. ಇದರಿಂದ 25 ಕೆ.ಜಿ ಚೀಲಕ್ಕೀಗ 50-80 ರೂ. ದರ ಏರಿಕೆಯಿಂದಾಗಿ ಎಲ್ಲರಿಗೂ ಹೊರೆ ಬೀಳಲಿದೆ. ಇದನ್ನು ತಪ್ಪಿಸಲು ವರ್ತಕರು ಬೇರೆಯದೇ ದಾರಿ ಕಂಡುಕೊಂಡಿದ್ದಾರೆ.
ಸಾಮಾನ್ಯವಾಗಿ ಅಕ್ಕಿ ಚೀಲದ 5 ಕೆಜಿ, 10 ಕೆಜಿ, 25 ಕೆಜಿಯಲ್ಲಿ ಮಾರುವುದು ಸಾಮಾನ್ಯವಾಗಿದೆ. ಆದರೆ ಇದೀಗ ಜಿಎಸ್‌ಟಿ ದೆಸೆಯಿಂದ ವರ್ತಕರು 26 ಕೆಜಿಯ ಚೀಲಗಳಲ್ಲಿ ಅಕ್ಕಿ ಮಾರಾಟ ಮಾಡಲು ಆರಂಭಿಸಿದ್ದಾರೆ. ಈ ಮೂಲಕ ಜಿಎಸ್‌ಟಿ ತೆರಿಗೆ ಹೊರೆಯನ್ನು ತಪ್ಪಿಸಿಕೊಳ್ಳಲು ಹೊಸ ಹಾದಿ ಕಂಡುಕೊಂಡಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೊಳಿಸಿದ ಜಿಎಸ್‌ಟಿ ತೆರಿಗೆ ನೀತಿಯು 25 ಕೆಜಿಗಿಂತ ಕಡಿಮೆ ತೂಕದ ಅಕ್ಕಿ ಚೀಲಗಳನ್ನು ಚಿಲ್ಲರೆ ಮಾರಾಟ ಎಂದು ಪರಿಗಣಿಸುತ್ತದೆ. ಹೀಗಾಗಿ ಇವುಗಳ ಮೇಲೆ ಜಿಎಸ್‌ಟಿಯಿಂದಾಗಿ ಪ್ರತಿ ಕೆಜಿಗೆ 2-3 ರೂ. ಹೆಚ್ಚುವರಿ ಹಣ ಪಾವತಿಸಬೇಕಾಗುತ್ತದೆ. ಇದೀಗ ವರ್ತಕರು 25 ಕೆಜಿ ಅಕ್ಕಿ ಚೀಲದ ಬದಲು 26 ಕೆಜಿ ಚೀಲವನ್ನು ಮಾರಾಟ ಮಾಡುವ ಮೂಲಕ ತೆರಿಗೆ ಶುಲ್ಕದಿಂದ ತಪ್ಪಿಸಿಕೊಳ್ಳುವ ಮಾರ್ಗವನ್ನು ಅನುಸರಿಸುತ್ತಿದ್ದಾರೆ.
ಇದರೊಂದಿಗೆ ಮತ್ತೊಂದು ಸಂಕಷ್ಟ ಗ್ರಾಹಕರು ಮತ್ತು ವರ್ತಕರಿಗೆ ಎದುರಾಗಲಿದೆ. ಸಣ್ಣ ಪ್ರಮಾಣದಲ್ಲಿ ದಿನ ಬಳಕೆಯ ವಸ್ತುಗಳನ್ನು ಖರೀದಿಸುವವರಿಗೆ ಇದು ಕಷ್ಟಕರ. ಒಂದೇ ಬಾರಿಗೆ ಅಧಿಕ ಪ್ರಮಾಣದ ಅಕ್ಕಿಯನ್ನು ಖರೀದಿಸಲು ಸಾಧ್ಯವಾಗದ ಅನಿವಾರ್ಯವಾಗಿ ಕಡಿಮೆ ಪ್ರಮಾಣದ ಅಕ್ಕಿಗೆ ಹೆಚ್ಚುವರಿ ಹಣ ಪಾವತಿ ಮಾಡಲೇಬೇಕಾಗಿದೆ. ಹೀಗಾಗಿ ವರ್ತಕರು ಜಿಎಸ್‌ಟಿ ದರವನ್ನು ಹಿಂಪಡೆಯುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಜುಲೈ 18 ರಿಂದ, ಗೋಧಿ ಹಿಟ್ಟು, ಪನ್ನೀರ್ ಮತ್ತು ಮೊಸರು ಮುಂತಾದ ಪ್ಯಾಕೇಟುಗಳು ಮತ್ತು ಲೇಬಲ್ ಮಾಡಿ, ಬ್ರ್ಯಾಂಡ್ ಅಲ್ಲದ ಆಹಾರ ಪದಾರ್ಥಗಳ ಮೇಲೆಯೂ ಶೇ. 5ರಷ್ಟು ಜಿಎಸ್‌ಟಿ ತೆರಿಗೆ ಅನ್ವಯವಾಗುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯ 47ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಜಾರಿಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು.