ಕಸ ಗುಡಿಸುತ್ತಿದ್ದ ಮಹಿಳೆ ಈಗ ಅದೇ ಬ್ಯಾಂಕ್ ಎಜಿಎಂ..! ಪ್ರತೀಕ್ಷಾ ತೊಂಡ್ವಾಲ್ಕರ್ ಪಯಣವೇ ಸ್ಫೂರ್ತಿದಾಯಕ

  • ಜೀವನೋಪಾಯಕ್ಕಾಗಿ ಬ್ಯಾಂಕ್‌ನಲ್ಲಿ ಕಸಗುಡಿಸುತ್ತಿದ್ದ ಮಹಿಳೆ
  • ಅದೇ ಎಸ್‌ಬಿಐ ಬ್ಯಾಂಕ್‌ನ ಎಜಿಎಂ ಹುದ್ದೆಗೇರಿ ಸಾಧನೆ
  • ಪ್ರತೀಕ್ಷಾ ತೊಂಡ್ವಾಲ್ಕರ್ ಅವರ ಸಾಧನೆ, ಪರಿಶ್ರಮಕ್ಕೆ ಶ್ಲಾಘನೆ

ಪುಣೆ: ಸಾಧಿಸುವ ಛಲ ಇದ್ದರೆ ಯಾವ ಅಡೆತಡೆಗಳು ದೊಡ್ಡದು ಎನಿಸುವುದಿಲ್ಲ. ಇಲ್ಲೊಬ್ಬರು ಮಹಿಳೆ ಒಂದು ಕಾಲದಲ್ಲಿ ತಾವು ಕಸ ಗುಡಿಸುವ ಕೆಲಸ ಮಾಡುತ್ತಿದ್ದ ಬ್ಯಾಂಕ್ ನಲ್ಲಿ ಇಂದು ಜನರಲ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕೆಲವು ಯಶೋಗಾಥೆಗಳು ಅಚ್ಚರಿ ಮೂಡಿಸುವುದಲ್ಲದೆ, ತನ್ನಿಂದ ಏನೂ ಸಾಧ್ಯವಿಲ್ಲ ಎಂದು ಕೈಚೆಲ್ಲುವ ಅಸಹಾಯಕರಿಗೆ ಸ್ಫೂರ್ತಿಯ ಚಿಲುಮೆಯೂ ಆಗುತ್ತವೆ. ಅಂತಹದ್ದೊಂದು ನೈಜ ಕಥೆ ಇಲ್ಲಿದೆ. ಇದರ ಪಾತ್ರಧಾರಿ ಒಬ್ಬ ಮಹಿಳೆ. ತಾನು ಕಸಗುಡಿಸುತ್ತಿದ್ದ ಬ್ಯಾಂಕಿನಲ್ಲಿಯೇ ಸಹಾಯಕ ಪ್ರಧಾನ ವ್ಯವಸ್ಥಾಪಕಿ (ಎಜಿಎಂ) ಹುದ್ದೆಗೆ ಏರಿದ ಮಹಿಳೆಯ ಈ ಕಥನ ಎಂತಹವರಿಗೂ ಪ್ರೇರಣೆ ನೀಡಬಲ್ಲದು.

ಪುಣೆ ನಿವಾಸಿ ಪ್ರತೀಕ್ಷಾ ತೊಂಡ್ವಾಲ್ಕರ್ ಅವರು, ಪರಿಶ್ರಮ ಮತ್ತು ಬದ್ಧತೆ ಇದ್ದರೆ ಎಲ್ಲವೂ ಸಾಧ್ಯ ಎಂಬುದಕ್ಕೆ ತಾಜಾ ನಿದರ್ಶನ. ಇದೆಲ್ಲವೂ ಒಂದೆರಡು ದಿನಗಳಲ್ಲಿ ಆಗಿರುವುದಲ್ಲ. ಬಾಲ್ಯದ ನೋವು, ಯೌವನದ ಆಘಾತದ ಬಳಿಕ ಅನುಭವಿಸಿದ ಸಂಕಟಗಳ ಮಧ್ಯೆ ಮೂಡಿದ ಆಲೋಚನೆಯೊಂದು, ವರ್ಷಗಳ ಪ್ರಯತ್ನದ ಬಳಿಕ ಸಾಕಾರಗೊಂಡಿದೆ. ಇವರ ಈ ಪ್ರಯತ್ನ ಪ್ರೀತಿ ಮತ್ತು ಮೆಚ್ಚುಗೆಯನ್ನು ಗಳಿಸಿತು ಮತ್ತು ಇದು ಇತರರಿಗೆ ಉತ್ತಮ ಸ್ಫೂರ್ತಿಯ ಕಥೆಯಾಗಿದೆ.

ಯಾರಿ ಈ ಪ್ರತೀಕ್ಷಾ?
1964ರಲ್ಲಿ ಪುಣೆಯಲ್ಲಿ ಜನಿಸಿದ ಪ್ರತೀಕ್ಷಾ, 17 ವರ್ಷ ವಯಸ್ಸಿನಲ್ಲಿದ್ದಾಗಲೇ ಮದುವೆಯಾದರು. ಬಡಕುಟುಂಬದಲ್ಲಿ ಜನಿಸಿದ ಕಾರಣ ಅವರಿಗೆ ಹೆಚ್ಚು ಓದಲು ಸಾಧ್ಯವಾಗಲಿಲ್ಲ. 10ನೇ ತರಗತಿ ಮುಗಿಯುವ ಮುನ್ನವೇ ವೈವಾಹಿಕ ಬದುಕು ಆರಂಭಿಸಿದರು. ಗಂಡ ಸದಾಶಿವ ಕಡು ಜತೆಗೆ ಮುಂಬಯಿಗೆ ಬಂದು ಅಲ್ಲಿ ನೆಲೆಸಿದರು. ಕಡು ಅವರು ಎಸ್‌ಬಿಐ ಮುಂಬಯಿ ಶಾಖೆಯಲ್ಲಿ ಬುಕ್ ಬೈಂಡರ್ ಆಗಿ ಕೆಲಸ ಮಾಡುತ್ತಿದ್ದರು. ತಮ್ಮ ಮೊದಲ ಮಗ ವಿನಾಯಕ ಜನಿಸಿದ ಬಳಿಕ ದೇವರ ದರ್ಶನ ಪಡೆಯುವುದಕ್ಕಾಗಿ ಅವರು ತಮ್ಮ ಹಳ್ಳಿಗೆ ಪ್ರಯಾಣ ಬೆಳೆಸಿದ್ದರು. ಆದರೆ ಆ ಪ್ರಯಾಣ ಅವರ ಜೀವನಕ್ಕೆ ಬಹುದೊಡ್ಡ ಆಘಾತವಾಗಿತ್ತು. ಹಾಗೆಯೇ ತಿರುವು ನೀಡಿದ ಘಟನೆಯೂ ಹೌದು.

ಪ್ರಯಾಣದ ವೇಳೆ ಸಂಭವಿಸಿದ ಅಪಘಾತದಲ್ಲಿ ಪ್ರತೀಕ್ಷಾ ಅವರ ಗಂಡ ಸದಾಶಿವ ಪ್ರಾಣ ಕಳೆದುಕೊಂಡರು. ಪ್ರತೀಕ್ಷಾ ತಮ್ಮ 20ನೇ ವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡರು. ಜೀವನ ಕುರಿತಾದ ಪ್ರೌಢಿಮೆ ಬೆಳೆಯುವುದಕ್ಕೂ ಮುನ್ನವೇ ಎದುರಾದ ದುರಂತ ಅವರನ್ನು ಕಂಗಾಲಾಗಿಸಿತ್ತು. ಜೀವನೋಪಾಯಕ್ಕೆ ಗಂಡನನ್ನು ಅವಲಂಬಿಸಿದ್ದ ಅವರು, ಈಗ ಪುಟ್ಟ ಮಗುವಿನ ಜತೆಗೆ ತಮ್ಮ ಬದುಕನ್ನು ಕಟ್ಟಿಕೊಳ್ಳುವ ಸವಾಲು ಎದುರಾಗಿತ್ತು. ಕುಟುಂಬವನ್ನು ಪೋಷಿಸಲು, ತೊಂಡ್ವಾಲ್ಕರ್ ಹಲವಾರು ಕೆಲಸಗಳನ್ನು ಮಾಡಬೇಕಾಯಿತು. ಕೊನೆಗೆ ಅವರ ಪತಿ ಕೆಲಸ ಮಾಡುತ್ತಿದ್ದ ಅದೇ ಬ್ಯಾಂಕ್‌ನಲ್ಲಿ ಸ್ವೀಪರ್ ಆಗಿ ಕೆಲಸಕ್ಕೆ ಸೇರಿದರು. ಬೆಳಿಗ್ಗೆ ಎರಡು ಗಂಟೆಗಳ ಕಾಲ ಬ್ಯಾಂಕ್​ ಕ್ಲೀನ್​ ಮಾಡುತ್ತಿದ್ದ ಪ್ರತೀಕ್ಷಾಗೆ ತಿಂಗಳಿಗೆ ಕೇವಲ 65 ರೂಪಾಯಿ ದೊರೆಯುತ್ತಿತ್ತು. ಹೀಗಾಗಿ ಬ್ಯಾಂಕ್​​ನಲ್ಲಿ ಕಸ ಗುಡಿಸುವ ಕೆಲಸ ಮುಗಿದ ಬಳಿಕ ಹೊರಗಡೆ ಬೇರೆ ಬೇರೆ ಸಣ್ಣಪುಟ್ಟ ಕೆಲಸಗಳನ್ನು ಮಾಡುವುದು ಅವರಿಗೆ ಅನಿವಾರ್ಯವಾಗಿತ್ತು.

ಕಚೇರಿ ನೌಕರಿ ಕನಸು : “ನಾನು ಈ ಕೆಲಸ ಮಾಡುವುದಕ್ಕೆ ಇರುವುದಲ್ಲ ಎಂದು ನನಗೆ ಗೊತ್ತಿತ್ತು. ಕಚೇರಿಯಲ್ಲಿ ಕೆಲಸ ಮಾಡುವ ಜನರನ್ನು ನೋಡುತ್ತಿದ್ದೆ. ನಾನೂ ಅವರಲ್ಲಿ ಒಬ್ಬಳಾಗಬೇಕು ಎಂಬ ಬಯಕೆ ಮೂಡಿತ್ತು” ಎಂದು ಪ್ರತೀಕ್ಷಾ ಹೇಳಿದ್ದಾರೆ. ಇದರಿಂದ ಅವರಲ್ಲಿ ಮತ್ತೆ ಓದುವ ಕನಸು ಮೂಡಿತು. ಹೈಸ್ಕೂಲು ಮುಗಿಸುವುದು ಹೇಗೆ ಎಂದು ತಿಳಿದವರನ್ನು ಕೇಳಲು ಆರಂಭಿಸಿದರು.

ಬ್ಯಾಂಕ್‌ನ ಸಿಬ್ಬಂದಿ ಮತ್ತು ಕೆಲವು ಸಂಬಂಧಿಕರ ಸಹಾಯದಿಂದ ಅಗತ್ಯವಾದ ಪುಸ್ತಕಗಳನ್ನು ಪಡೆದುಕೊಂಡರು. ಶೇ 60ರಷ್ಟು ಅಂಕಗಳೊಂದಿಗೆ 10ನೇ ತರಗತಿ ಪೂರೈಸಿದರು. ಬ್ಯಾಂಕ್‌ನಲ್ಲಿ ಏನಾದರೂ ಕೆಲಸ ಸಿಗಬೇಕೆಂದರೆ ಕನಿಷ್ಠ 12ನೇ ತರಗತಿ ವಿದ್ಯಾರ್ಹತೆಯಾಗಿತ್ತು. ಹೀಗಾಗಿ ರಾತ್ರಿ ಕಾಲೇಜು ಸೇರಿಕೊಂಡು 12ನೇ ತರಗತಿ ಪೂರ್ಣಗೊಳಿಸಿದರು. 1995ರಲ್ಲಿ ಸೈಕಾಲಜಿ ವಿಭಾಗದಲ್ಲಿ ಪದವಿ ಕೂಡ ಪಡೆದರು. ಪ್ರತಿಕ್ಷಾ ಅವರ ಸೇವಾದಕ್ಷತೆ ನೋಡಿ ಬ್ಯಾಂಕಿನ ಕೆಲವು ಅಧಿಕಾರಿಗಳು ಪರೀಕ್ಷೆಯ ಫಾರ್ಮ್‌ಗಳನ್ನು ಭರ್ತಿ ಮಾಡುವುದರಿಂದ ಹಿಡಿದು ಅಧ್ಯಯನ ಸಾಮಗ್ರಿ ಪಡೆಯುವವರೆಗೆ ಪ್ರತಿ ಹಂತದಲ್ಲೂ ಅವರಿಗೆ ಸಹಾಯ ಮಾಡಿದರು. ಎಲ್ಲಾ ಹೋರಾಟಗಳು ಮತ್ತು ಕಠಿಣ ಪರಿಶ್ರಮದ ನಂತರ, ಅವರು ಅಂತಿಮವಾಗಿ ಟ್ರೈನಿ ಅಧಿಕಾರಿಯಾದರು ಮತ್ತು ಅಲ್ಲಿಂದ ಅವರಿಗೆ ನಂತರ ಭಡ್ತಿ ದೊರೆಯಿತು. ಈಗ ಅವರು ಬ್ಯಾಂಕಿನ ಎಜಿಎಂ ಆಗಿದ್ದಾರೆ. ಎಸ್‌ಬಿಐನಲ್ಲಿ ಅಸಿಸ್ಟಂಟ್ ಜನರಲ್ ಮ್ಯಾನೇಜರ್‌ (ಎಜಿಎಂ) ಸ್ಥಾನವು 11 ಅಧಿಕಾರ ಹುದ್ದೆಗಳಲ್ಲಿ 5 ನೇ ಶ್ರೇಣಿಯ ಉನ್ನತ ಹುದ್ದೆಯಾಗಿದೆ.

ಎರಡನೇ ವಿವಾಹ ತಮ್ಮ ಹೋರಾಟದಲ್ಲಿ ಮೊದಲ ಯಶಸ್ಸು ಪಡೆದ ಅವರು, ಈ ನಡುವೆ ಅವರು ಮತ್ತೆ ಮದುವೆಯಾಗುವ ನಿರ್ಧಾರ ಮಾಡಿದರು. ಅದೇ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಪ್ರಮೋದ್ ತೊಂಡ್ವಾಲ್ಕರ್ ಜತೆ ಎರಡನೇ ವಿವಾಹವಾದರು. ಪ್ರಮೋದ್ ಬೆಂಬಲದೊಂದಿಗೆ ಪ್ರತೀಕ್ಷಾ ಮತ್ತಷ್ಟು ಮೆಟ್ಟಿಲುಗಳನ್ನೇರುವ ಗುರಿ ಈಡೇರಿಸಿಕೊಂಡರು.

ಇಂದು ಅವರ ಯಶೋಗಾಥೆಯನ್ನು ಇಡೀ ದೇಶವೇ ಕೊಂಡಾಡುತ್ತಿದೆ. ಛಲ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಪ್ರತೀಕ್ಷಾ ಅವರೇ ಅತ್ಯುತ್ತಮ ಉದಾಹರಣೆ

Donate Janashakthi Media

Leave a Reply

Your email address will not be published. Required fields are marked *