ಇದ್ದದ್ದನ್ನು ಇದ್ದಂತೆ ಹೇಳಬಲ್ಲ ಕಾರಣಕ್ಕೇ ಚಿಂತಕ ಜಿ. ರಾಜಶೇಖರ ಅವರು ನಾಡಿನ ಸಾಕ್ಷಿಪ್ರಜ್ಞೆ ಎನಿಸಿಕೊಂಡವರು. ಅವರ ’ಬಹುವಚನ ಭಾರತ’ದ ವೈಚಾರಿಕ ಬರಹಗಳು ಬಹುತ್ವದ ಮಹತ್ವವನ್ನು ಬಹುವಾಗಿ ಹೇಳುತ್ತದೆ. ಜೀವಪರತೆ ಅವರ ಬರಹಗಳ ಬಹುಮುಖ್ಯ ಕಾಳಜಿ ಎಂಬುದನ್ನು ಈ ಕೃತಿಯೂ ಸಾರುತ್ತದೆ. ’ಅಧರಕ್ಕೆ ಕಹಿ ಉದರಕ್ಕೆ ಸಿಹಿ’ ಎನ್ನುವಂತಹ ಅವರ ಪ್ರಬುದ್ಧ ವಿಚಾರ ಲಹರಿ ಕೃತಿಯಲ್ಲಿ ಹರಡಿಕೊಂಡಿದೆ. ಈ ಪುಸ್ತಕಕ್ಕೆ ಕೆಫಣಿರಾಜ್ ರವರು ಬರೆದ ಮುನ್ನುಡಿಯ ಆಯ್ದ ಭಾಗವನ್ನು ಇಲ್ಲಿ ಪ್ರಕಟ ಮಾಡುತ್ತಿದ್ದೇವೆ. ಜಿ. ರಾಜಶೇಖರ ಅವರು ಅನಾರೋಗ್ಯದ ಕಾರಣದಿಂದ ಜುಲೈ 20, 2022ರ ಬುಧವಾರದಂದು ನಿಧನರಾದರು.
1960ರ ದಶಕದ ಉದ್ದಕ್ಕೂ ಕಮ್ಯುನಿಸ್ಟ್ ಪಕ್ಷಗಳ ಮುಂದಾಳತ್ವದಲ್ಲಿ ನಡೆದ ಗೇಣಿದಾರರ ಭೂಮಿಯ ಹಕ್ಕಿನ ಚಳುವಳಿಗಳ ಫಲವಾಗಿ, 1962ರ ಭೂಸುಧಾರಣಾ ಕಾಯ್ದೆಗಳಿಗೆ ೧೯೭೨ರಲ್ಲಿ ನಿರ್ಣಾಯಕ ತಿದ್ದುಪಡಿ ತಂದ ಮೇಲೆ, ಗೇಣಿ ಶಾಸನಕ್ಕೆ ಹಲ್ಲು ಉಗುರು ಬಂದು, ಗೇಣಿದಾರರ ಪರವಾದ ಹೋರಾಟಕ್ಕೆ ಕಸುವು ಬಂತು. ಆಗ ಕಮ್ಯುನಿಸ್ಟ್ ಪಕ್ಷಗಳು ಬೆಳ್ತಂಗಡಿ ವ್ಯಾಪ್ತಿಯ ಧರ್ಮಸ್ಥಳದ ಧರ್ಮಾಧಿಕಾರಿಗಳ ಕುಟುಂಬದ ಸುಪರ್ದಿನಲ್ಲಿದ್ದ ಭೂಮಿಯಲ್ಲಿ ಉಳಿಮೆ ಮಾಡುತ್ತಿದ್ದ ಗೇಣಿದಾರರಿಗೆ ಹಕ್ಕುಬದ್ಧವಾಗಿ ದಕ್ಕಬೇಕಾಗಿದ್ದ ಭೂಮಿಸ್ವಾಮ್ಯಕ್ಕಾಗಿ ಹೋರಾಟವನ್ನು ಸಂಘಟಿಸಿ, ಧರ್ಮಾಧಿಕಾರದ ವಿರುದ್ಧ ಲೌಕಿಕ ನ್ಯಾಯಕ್ಕಾಗಿ ಸಂಘರ್ಷಕ್ಕೆ ಇಳಿದ ಲಾಗಾಯ್ತಿನಿಂದ ಬೆಳ್ತಂಗಡಿ ತಾಲೂಕಿನ ಉಜಿರೆ ಮತ್ತು ಧರ್ಮಸ್ಥಳ ಗ್ರಾಮಗಳ ವ್ಯಾಪ್ತಿಯಲ್ಲಿ ಘಟಿಸುತ್ತಿರುವ ‘ಅಸಹಜ’ ಸಾವುಗಳ ಸಂಖ್ಯೆಯೂ ಸಾಧಾರಣ ಗ್ರಾಮಗಳಿಗೆ ಅಸಹಜವಾದುದ್ದೇ ಆಗಿದೆ. 1970ರ ದಶಕದಲ್ಲಿ ಈ ಬಗೆಯ ಅಸಹಜ ಸಾವುಗಳಿಗೆ ಜನ ಬೀದಿಗಿಳಿದು ಪ್ರತಿಭಟಿಸಿ ನ್ಯಾಯಾಗ್ರಹ ಮಾಡುವುದು ಸಾಮಾನ್ಯವಾಗಿತ್ತು. ಆದರೆ, 1980ರ ದಶಕದ ಉತ್ತಾರಾರ್ಧದಲ್ಲಿ ಬೀದಿ ಹೋರಾಟಗಳು ನಿಂತುಹೋದವು, ಅಸಹಜ ಸಾವಿನ ಪ್ರಕರಣಗಳು ನಿಲ್ಲಲಿಲ್ಲ.2012ರ ಅಕ್ಟೋಬರಿನಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದಲ್ಲಿ, ಸೌಜನ್ಯಳೆಂಬ ಹದಿನೇಳು ವರ್ಷದ ಬಾಲೆಯ ಮೇಲೆ ಅತ್ಯಾಚಾರ ನಡೆಸಿ, ಕೊಲೆಗೆಯ್ಯಲಾಯಿತು. ೩೦ ವರ್ಷಗಳ ಕಾಲ ಒತ್ತಿಟ್ಟುಕೊಂಡಿದ್ದ ಜನಾಕೋಶ ಕಟ್ಟೆ ಒಡೆದಂತೆ, ಕರ್ನಾಟಕದ ಕರಾವಳಿಯ ಎರಡು ಜಿಲ್ಲೆಗಳಲ್ಲಿ ಜನ ಸಾವಿರಾರು ಸಂಖ್ಯೆಯಲ್ಲಿ ಬೀದಿಗಿಳಿದು ಸೌಜನ್ಯಳ ಸಾವಿಗೆ ನ್ಯಾಯ ಕೇಳತೊಡಗಿದರು. ಧರ್ಮಸ್ಥಳದ ಧರ್ಮಾಧಿಕಾರವನ್ನು ಮತ್ತೊಮ್ಮೆ ಪ್ರಶ್ನಿಸತೊಡಗಿದರು. ಆ ಸನ್ನಿವೇಶದಲ್ಲಿ ನಾವೂ ಉಡುಪಿಯಲ್ಲಿ ಪ್ರತಿಭಟನೆ ಸಂಘಟಿಸಿದ್ದೆವು. ಪ್ರತಿ ಪ್ರತಿಭಟನಾ ಸಭೆಯ ನಂತರ ಸಂಘಟನೆಯ ಸದಸ್ಯರೆಲ್ಲ ಒಂದು ಹೊಟೇಲಿನಲ್ಲಿ ಒಟ್ಟಾಗಿ ಕೂತು ಚಹಾ ಕುಡಿಯುತ್ತಾ ಅಂದಿನ ಪ್ರತಿಭಟನೆಯ ವಸ್ತು, ಸಫಲತೆ-ವಿಫಲತೆಗಳ ಕುರಿತು ಸಾಕಷ್ಟು ಸ್ವಹಾಸ್ಯ-ಲೇವಡಿಭರಿತ ಲವಲವಿಕೆಯಲ್ಲಿ ವಿಮರ್ಶೆ ಮಾಡುವುದು ವಾಡಿಕೆ. ಅಂತೆಯೇ, ‘ಸೌಜನ್ಯ ಪ್ರಕರಣ’ದ ಪ್ರತಿಭಟನೆಯ ನಂತರ ಸೇರಿದ್ದ ಚಹಾಕೂಟದಲ್ಲಿ, 4೦ ವರ್ಷಗಳಿಂದ ಬೆಳ್ತಂಗಡಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳೂ, ಹೋರಾಟಗಳೂ, ಎಡಪಂಥದ ಚಳುವಳಿಯ ಸಾಫಲ್ಯ-ವೈಫಲ್ಯಗಳೂ, ಚರ್ಚೆಯ ವಿಷಯವಾಗಿದ್ದಾಗ ರಾಜಶೇಖರ್ “ಒಂದು ಊರಿಗೆ ಒಂದು ಕಮ್ಯುನಿಸ್ಟ್ ಪಾರ್ಟಿ, ಒಂದು ಮೆಡಿಕಲ್ ಷಾಪ್ ಬೇಕೇ ಬೇಕು. ಅವುಗಳಿಲ್ಲದ ಊರು ಊರೇನ್ರೀ!’ ಎಂದರು. ಸಾಧಾರಣವಾಗಿ, ಇಂತಹ ಬೆಡಗಿನ ಉಕ್ತಿಗಳನ್ನು ಆಡಿದ ನಂತರ ಯಾರಾದರೂ ಅವನ್ನು ಪ್ರಶ್ನಿಸದ ಹೊರತು ರಾಜಶೇಖರ್ ವಿವರಿಸಲು ಹೋಗುವುದಿಲ್ಲ. ಅವತ್ತೂ ಅದು ಅಷ್ಟಕ್ಕೆ ಉಳಿಯಿತು. ನನಗಂತು ಆ ಮಾತು, ಪ್ರತಿಭಟನೆಯ ರಾಜಕೀಯ ಮತ್ತು ಆಧುನಿಕತೆಯ ಬೆಳವಣಿಗೆಗಳ ಕುರಿತು ರಾಜಶೇಖರ್ ತಮ್ಮ ಬರಹಗಳಲ್ಲಿ ಪ್ರಕಟಿಸುತ್ತಿರುವ ವೈಚಾರಿಕತೆಯ ಸಾರ ರೂಪಿ ವಚನವಾಗಿ ಕಂಡಿತು.
ರಾಜಶೇಖರ್ ತಮ್ಮ ವಿಮರ್ಶಾ ಬರಹಗಳ ತೂಕಕ್ಕೆ ಬರಹಗಾರರು, ಸಾಹಿತ್ಯಾಭ್ಯಾಸಿಗಳ ನಡುವೆ ಖ್ಯಾತಿ ಪಡೆದಿರುವವರು. ನಲವತ್ತು ವರ್ಷಗಳ ಕಾಲ ಸಕ್ರಿಯ ಚಳವಳಿಗಾರರಾಗಿ ಎಡಪಂಥೀಯ ಚಳವಳಿಗಳ ಕಾಲಾಳುಗಳ ನಡುವೆಯೂ ಅವರು ಖ್ಯಾತರು. ತಮ್ಮ ಸಾಹಿತ್ಯಾಭ್ಯಾಸ, ಮೀಮಾಂಸೆಗಳ ಸೂಕ್ಷ್ಮವನ್ನು ಚಳುವಳಿಗಳ ನಿಷ್ಠರ ಪರಾಮರ್ಶೆಗೂ, ಚಳವಳಿಗಾರನಾಗಿ ಪಡೆದ ಸಾಮಾಜಿಕ ಅರಿವನ್ನು ಸಾಹಿತ್ಯ, ಸಂಸ್ಕೃತಿ ಪಠ್ಯಗಳ ಅಷ್ಟೇ ನಿಷ್ಠೂರವಾದ ಟೀಕೆಗೂ ಒಳಪಡಿಸುವ ಅಪರೂಪದ ‘ಚಳವಳಿಗಾರ ಲೇಖಕ’. ಒಂದೊಮ್ಮೆ ಅವರು ಬರಿ ಬರಹಗಾರರೋ, ಇಲ್ಲವೆ ಚಳವಳಿಗಾರರೋ ಆಗಿದ್ದಲ್ಲಿ ಯಾವ ನೇರ, ನಿಷ್ಠೂರ, ಪಾರದರ್ಶಕ ನಿಲುವುಗಳಿಗಾಗಿ ಅವರು ಖ್ಯಾತರಾಗಿರುವರೋ, ಆ ಗುಣ ಅವರ ಬರಹ ಮತ್ತು ಚಳವಳಿ ಬದುಕಿಗೆ ಇರುತ್ತಿತ್ತೆ? ಎನ್ನುವುದು ‘ಊಹಾ ಪ್ರಮೇಯ’ (ಹೈಪೋತಿಸಿಸ್), ತತ್ವಶಾಸ್ತ್ರದಲ್ಲಿ ಯಾವುದನ್ನು ‘ದ್ವಿಮಾನ ಗತಿ-ತರ್ಕ’ (ಯಾನೆ ಡೈಯಲಿಕ್ಟಿಕ್ಸ್) ಅಂತಾರೋ ಅದು ರಾಜಶೇಖರರ ಬರಹ-ಚಳವಳಿಗಳ ನಡುವೆ ಕ್ರಿಯಾಶೀಲವಾಗಿದೆ. ಇದರಿಂದ ಉತ್ಪನ್ನವಾದ ಅವರ ವೈಚಾರಿಕತೆಯನ್ನು ಪೂರ ಒಪ್ಪಿಕೊಳ್ಳದಿರಬಹುದು; ಆದರೆ, ಅವರ ವಿಚಾರಗಳು ಸಂವಾದಕ್ಕೆ ಸದಾ ತೆರೆದುಕೊಂಡು ಬರಹಗಾರನ ಪಜ್ಞೆಯನ್ನೂ, ಚಳವಳಿಗಾರನ ಜವಾಬ್ದಾರಿಯನ್ನೂ ಜಾಗೃತಗೊಳಿಸುತ್ತಿರುತ್ತವೆ ಎನ್ನುವುದು ಸಾಹಿತ್ಯಾಭ್ಯಾಸಿಯಾಗಿಯೂ, ಚಳವಳಿಗಳ ಸಖನಾಗಿಯೂ ನನ್ನ ಅನುಭವಕ್ಕೆ ಬಂದಿದೆ. ಕರ್ನಾಟಕ ಸಾಂಸ್ಕೃತಿಕ ಲೋಕದಲ್ಲಿ ೧೯೭೦-೧೯೮೫ರ ಕಾಲಘಟ್ಟದಲ್ಲಿ ‘ಜನಪರತೆ/ಪ್ರಗತಿಪರತೆ” ಹೇಗೆ ಒಂದು ಚಾಲ್ತಿಯಲ್ಲಿರುವ ವರಸೆಯಾಗಿತ್ತೋ, ೧೯೯೦ರ ನಂತರದಲ್ಲಿ `ನವ್ಯೋತ್ತರವಾದ’ ಅಂತಹುದೇ ಫ್ಯಾಶನ್ ಆಗಿದೆ. ರಾಜಶೇಖರ್ ಚಳವಳಿಗಾರರಾಗಿಯೂ, ಲೇಖಕರಾಗಿಯೂ-ಇವೆರಡನ್ನೂ ಹೊರ ರೂಪದ ವಯ್ಯಾರ ಹರಿದು, ನೈಜ ವಾಸ್ತವದ ನೆಲೆಯಲ್ಲಿ ವಿಮರ್ಶಿಸಿದವರು.
‘ಜನಪರ/ಪ್ರಗತಿಪರ’ ಎಂದರೇನು? ‘ಜನಪರ/ಪ್ರಗತಿಪರ’ ಎಂದು ಕರೆದುಕೊಳ್ಳುವ ಸಂಘಟನೆಗಳ ಜೊತೆ ಗುರುತಿಸಿಕೊಂಡ ಮಾತ್ರಕ್ಕೆ ನಾವು ಪ್ರಗತಿಪರವಾಗುತ್ತೇವೋ? ಅಥವಾ ಆ ಸಂಘಟನೆಗಳು ಪ್ರಗತಿಪರವಾಗುತ್ತವೋ? ಇವು ರಾಜಶೇಖರ್ ಸದಾ ಎತ್ತುವ ಪ್ರಶ್ನೆ. ವ್ಯವಸ್ಥೆ ಅಸಮಾನತೆಯನ್ನು ಪೋಷಿಸುತ್ತಿರುವ ನಮೂನೆಗಳ ಖಚಿತ ಅರಿವಿರದ, ಯಾವುದೇ ಒಂದು ವಿದ್ಯಮಾನ ನಿರೂಪಣೆಯಲ್ಲಿ ಅಸಮಾನತೆ/ಶೋಷಣೆ ಎಲ್ಲಿದೆ, ಹೇಗಿದೆ ಎಂದು ಸ್ಪಷ್ಟವಾಗಿ ಹೇಳದ, ಅಧಿಕಾರಹೀನರಾದ ಜನರ ದೈನಂದಿನ ಬದುಕಿನ ಬವಣೆ ಹಾಗು ಶಕ್ತಿಗಳನ್ನು ಜೀವಂತವಾಗಿ ತಿಳಿಯದ, ಯಾವುದೇ ಚಳುವಳಿ ಮಾತು-ಸಾಹಿತ್ಯ ರಾಜಶೇಖರ ಪ್ರಕಾರ ಜನಪರವೂ ಅಲ್ಲ ಪ್ರಗತಿಪರವೂ ಅಲ್ಲ. ನಮ್ಮ ಕ್ರಿಯೆಗಳು ಹೇಗೆ ಜನರ ಬದುಕುವ, ಆಗುತ್ತಿರುವ ಅನ್ಯಾಯವನ್ನು ಅನಾವರಣಗೊಳಿಸುತ್ತವೆ, ಅದಕ್ಕೆ ಪ್ರತಿಯಾಗಿ ಯಾವ ಬಗೆಯ ನ್ಯಾಯವಂತಿಕೆಯನ್ನು ಬೇಡುತ್ತವೆ, ಮತ್ತೂ ಇವನ್ನು ಆ ಜನರಿಗೆ ತಿಳಿಸಿ ಜಾಗೃತಗೊಳಿಸುತ್ತವೆ ಎನ್ನುವುದನ್ನು ಪ್ರತಿ ಸಂದರ್ಭದಲ್ಲೂ ನಾವು ಪರೀಕ್ಷಿಸಿಕೊಳ್ಳುತ್ತಲೇ ಇರಬೇಕು; ಈ ಅರ್ಥದಲ್ಲಿ ‘ಜನಪರತೆ/ಪ್ರಗತಿಪರತೆ’ ನಿತ್ಯವೂ ‘ಆಗುವ’ ಕ್ರಿಯೆಯೇ ಹೊರತಾಗಿ ಪ್ರಣಾಳಿಕೆ-ಸಿದ್ಧಾಂತಗಳ ದಸ್ತಾವೇಜು ಕಟ್ಟಿಕೊಂಡು ಆಗುವಂಥದಲ್ಲ ಅನ್ನೋದು ಅವರ ಧೃಡ ನಿಲುವು. ಹಾಗೆಯೇ ಯಾರನ್ನಾದರೂ ಯಾವುದೇ ವಿದ್ಯಮಾನವನ್ನಾದರೂ ‘ಪ್ರತಿಗಾಮಿ’ ಎಂದು ಹಣೆಪಟ್ಟಿ ಹಚ್ಚುವಾಗಲೂ ಸಾಕ್ಷಿ ಪುರಾವೆ ಸಹಿತ ನಿರೂಪಿಸಲು ಸಾಧ್ಯವಾಗದಿದ್ದಲ್ಲಿ, ಅದು ಬರಿ ದೂಷಣೆಯಾಗಿರುತ್ತದೆ ಎನ್ನುವುದನ್ನು ರಾಜಶೇಖರ್ ಕಳೆದ ನಾಲ್ಕು ದಶಕಗಳಲ್ಲಿ ನಡೆದಿರುವ ವಾಗ್ವಾದಗಳಲ್ಲಿ ಪಟ್ಟುಹಿಡಿದು ಪಾಲ್ಗೊಂಡು ತೋರಿಸಿದ್ದಾರೆ. ಆ ಕಾರಣಕ್ಕಾಗಿಯೇ ಸೋವಿಯತ್ ಯೂನಿಯನ್ ಪತನಕ್ಕೆ ಕಮ್ಯುನಿಸ್ಟ್ ಪಕ್ಷಗಳು ನೀಡಿದ ಸಮರ್ಥನೆಗಳನ್ನು ರಾಜಶೇಖರ್ ಕಟುವಾಗಿ ಟೀಕಿಸಿದರು. ಮಾರ್ಕ್ಸವಾದ, ಅಂಬೇಡ್ಕರ್ವಾದದ ಹೆಸರಿನಲ್ಲಿ ಗಾಂಧಿಯ ದೂಷಣೆಯನ್ನು ಪ್ರಶ್ನಿಸುತ್ತಾರೆ. ಮತ್ತೂ ‘ಪ್ರಗತಿಪರ/ಬಂಡಾಯ’ದ ಹೆಸರಿನಲ್ಲಿ ‘ನವ್ಯ’ವನ್ನು ಹಳಿಯುವವರ ಜೊತೆ ಸದಾ ವಾಗ್ವಾದಕ್ಕೆ ಇಳಿದಿದ್ದಾರೆ. ನಿನ್ನೆ ಕಮ್ಯುನಿಸ್ಟ್ ಪಕ್ಷದ ಧೋರಣೆಯನ್ನು ಟೀಕಿಸಿ, ಇಂದು ಕಮ್ಯುನಿಸ್ಟ್ ಪಕ್ಷ ನಿರ್ದಿಷ್ಟ ಅನ್ಯಾಯದ ಬಗ್ಗೆ ಮೆರವಣಿಗೆ ನಡೆಸಿದರೆ, ರಾಜಶೇಖರ್ ಆ ಮೆರವಣಿಗೆಯಲ್ಲಿ ಪಾಲ್ಗೊಂಡು ಪಕ್ಷದ ಸಾಥ್ ನೀಡುತ್ತಾರೆ. ಕಮ್ಯುನಿಸ್ಟ್ ಪಕ್ಷದ ‘ಜನಪರತೆ/ಕ್ರಾಂತಿಕಾರಕತೆ’ಯನ್ನು ಅದರ ಪ್ರಣಾಳಿಕೆ, ಸಿದ್ಧಾಂತ ಗರಿಮೆಗಳ ಅಮೂರ್ತತೆಯಲ್ಲಿ ಗುರುತಿಸದೇ, ನಿತ್ಯದ ಪ್ರತಿರೋಧಿ ಆಚರಣೆಯ ಅರ್ಥದಲ್ಲಿ ಗುರುತಿಸುವವರಾಗಿ, ಅನ್ಯಾಯದ ನಿರೂಪಣೆ ಹಾಗು ನ್ಯಾಯಕ್ಕಾಗಿ ಸಂಘಟನೆಯ ಕಾಯಕಕ್ಕೆ ಒಲಿದು ಮಾತ್ರವೇ ಅಧಿಕಾರಹೀನರಾದ ಜನ ಕಮ್ಯುನಿಸ್ಟ್ ಪಕ್ಷಕ್ಕೆ ಬೆಂಬಲಿಸುವಂದದಿ ರಾಜಶೇಖರರ ಬೆಂಬಲ-ಹೆಚ್ಚೂ ಇಲ್ಲ ಕಮ್ಮಿಯೂ ಇಲ್ಲ.
‘ನವೋತ್ತರವಾದಿ’ (ಪೋಸ್ಟ್ ಮಾಡರ್ನಿಸ್ಟ್)ಗಳು ಮಾಡುವ-ರಾಷ್ಟ್ರಪ್ರಭುತ್ವದ ಟೀಕೆ, ಆಧುನಿಕ ಉತ್ಪಾದನಾ ವ್ಯವಸ್ಥೆ, ಯುದ್ಧ, ನರಮೇಧಗಳನ್ನೂ ಉತ್ಪಾದಿಸುವ ಬಗೆಗಳ ನಿರೂಪಣೆ, ಸಾಮಾನ್ಯ ಜನರ ರೂಢಿಗತ ಆಚರಣೆಗಳನ್ನು ‘ಪರಮ ವೈಜ್ಞಾನಿಕ ಪ್ರಮಾಣವಾದಿ’ (ಪಾಸಿಟಿವಿಸಂ) ನೆಲೆಯಲ್ಲಿ ಮೌಢ್ಯವೆಂದು ಸಾಧಾರಣೀಕರಣಗೊಳಿಸುವ ಅಹಂಕಾರದ ಟೀಕೆ-ಇವುಗಳ ಬಗ್ಗೆ ರಾಜಶೇಖರರಿಗೆ ಸಹಮತವಿದೆ; ಈ ಟೀಕೆಗಳನ್ನು ತಮ್ಮ ಬರಹಗಾರನ ಪ್ರಜ್ಞೆಯಲ್ಲಿ ಹೆಣೆದುಕೊಂಡೂ ಇದ್ದಾರೆ. ಆದರೆ ನವೋತ್ತರವಾದ ಆಧುನಿಕ ಸಮಾಜಕ್ಕೆ ಪರ್ಯಾಯವಾಗಿ ನೀಡುವ ಆಧುನಿಕಪೂರ್ವ ಸಮಾಜ ವ್ಯವಸ್ಥೆಯ ಸಮಜಾಯಿಷಿಗಳನ್ನು ರಾಜಶೇಖರ್ ನಿರಾಕರಿಸುತ್ತಾರೆ. ಆಧುನಿಕಪೂರ್ವ ಯುಗದ ಸಮುದಾಯ ಜೀವನದ ನೆಪದಲ್ಲಿ, ಅಸಮಾನತೆಗಳನ್ನು ಮರೆಮಾಚುವ ಯಾವ ವಾದವನ್ನೂ ಅವರು ಒಪ್ಪುವುದಿಲ್ಲ. ದಲಿತರು, ಮಹಿಳೆಯರು, ಬಡವರು ಸ್ವತಃ ತಾವು ಶೋಷಿತರು ಎಂದು ಭಾವಿಸುವುದಿಲ್ಲ; ಅವರ ಪರವಾಗಿದ್ದೇವೆ ಎಂದು ಸಾರಿಕೊಂಡು ಅವಮಾನ, ಶೋಷಣೆಯ ಕಲ್ಪನೆಗಳನ್ನು ಹುಟ್ಟುಹಾಕಿರುವುದು ಆಧುನಿಕರು ಎನ್ನುವುದು ನವೋತ್ತರವಾದದ ಒಂದು ವರಸೆ; ಹಾಗೆಯೇ ಆಧುನಿಕಪೂರ್ವ ಸಮುದಾಯಗಳಲ್ಲಿ ಕೋಮುಹಿಂಸೆ ಇರಲಿಲ್ಲ, ಈ ಹಿಂಸೆ ಆಧುನಿಕ ಸೆಕ್ಯುಲಾರ್ ನಗರವಾಸಿಗಳಿಂದ ಉತ್ಪನ್ನ ಎಂಬುದೂ ಮತ್ತೊಂದು ವಾದ. ಇವೆರಡೂ ಬಗೆಯ ವಾದಗಳನ್ನು ರಾಜಶೇಖರ್ ಒಪ್ಪುವುದಿಲ್ಲ. ಹಸಿವನ್ನು ಉಪವಾಸದ ಸಾತ್ವಿಕತೆಯ ಜೊತೆಗೂ, ಬಡತನವನ್ನು ಸರಳ ಜೀವನದ ಜೊತೆಗೂ ಸಮೀಕರಿಸುವುದನ್ನೂ ಅವರಿಗೆ ಏನಾಕೇನ ಒಪ್ಪಿತವಲ್ಲ. ಆಸ್ಪತ್ರೆ, ನ್ಯಾಯಾಲಯ, ಶಿಕ್ಷಣ ಸಂಸ್ಥೆಗಳು ಆಧುನಿಕ ಅಧಿಕಾರದ ಕೇಂದ್ರಗಳು ಎಂಬ ವಿಚಾರದ ಜೊತೆ ಅವರಿಗೆ ಸಹಮತವಿದ್ದೀತು; ಆದರೆ ನಿರ್ಗತಿಕರಿಗೆ ದೊರಕಬೇಕಾದ ಆರೋಗ್ಯ, ವಿದ್ಯೆ, ನ್ಯಾಯಗಳ ಪ್ರಶ್ನೆ ಎದುರಾಗಿ ಈ ವಾದವನ್ನು ಇಟ್ಟರೆ ರಾಜಶೇಖರ್ ತೀವ್ರ ಭಿನ್ನಮತ ತೋರುತ್ತಾರೆ. ಅಧಿಕಾರದ ವರಸೆಗಳನ್ನು ಅನಾವರಣಗೊಳಿಸುವ ಎಲ್ಲಾ ಬಗೆಯ ಜ್ಞಾನವನ್ನೂ ರಾಜಶೇಖರ್ ಮತಭೇದವಿಲ್ಲದೆ ಅರಸುತ್ತಾರೆ; ‘ಸಮಾನತೆ, ನ್ಯಾಯ, ಸೋದರತ್ವ’ ಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ನಡೆಯುವ ಎಲ್ಲಾ ಬಗೆಯ ಪ್ರತಿರೋಧಗಳ ಜೊತೆ ಕೈಗೂಡಿಸುತ್ತಾರೆ. ಅವರ ಬರಹ ಹಾಗು ಚಳವಳಿಗಳೆರಡನ್ನೂ ಈ ಬಗೆಯ ಪ್ರಜ್ಞೆ ಹಿಡಿದಿಟ್ಟುವುದರಿಂದಲೇ, ಅವರ ಬಾಯಿಂದ ಬಂದ “ಒಂದು ಊರಿಗೆ ಒಂದು ಕಮ್ಯುನಿಸ್ಟ್ ಪಾರ್ಟಿ, ಒಂದು ಮೆಡಿಕಲ್ ಷಾಪ್ ಬೇಕೇ ಬೇಕು. ಅವುಗಳಿಲ್ಲದ ಊರು ಊರೇನ್ರೀ!” ಅನ್ನೋ ಮಾತು ಅರ್ಥವಂತವಾಗಿ ಕೇಳಿಸುತ್ತದೆ.
Yes,each village have one medical store. It is good thought.