ಫಿರೋಜಾಬಾದ್ : ಹೆರಿಗೆಗೋಸ್ಕರ ಗಂಡನ ಮನೆಯಿಂದ ತವರು ಮನೆಗೆ ಹೋಗುತ್ತಿದ್ದಾಗ ಗರ್ಭಿಣಿಗೆ ಟ್ರಕ್ವೊಂದು ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ.
ಉತ್ತರ ಪ್ರದೇಶದ ಫಿರೋಜಾಬಾದ್ನಲ್ಲಿ ಈ ಘಟನೆ ನಡೆದಿದ್ದು, ಪ್ರಾಣ ಬಿಡುವುದಕ್ಕೂ ಮುಂಚೆ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಫಿರೋಜಾಬಾದ್ನ ನರಖಿ ಪೊಲೀಸ್ ಠಾಣಾ ವ್ಯಾಪ್ತಿಯ ಬರ್ತಾರಾ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ.
ಆಗ್ರಾ ಜಿಲ್ಲೆಯ ಧನೌಲಾ ಗ್ರಾಮದ ನಿವಾಸಿ ರಾಮು ತಮ್ಮ ಗರ್ಭಿಣಿ ಪತ್ನಿ ಕಾಮಿನಿ ಜೊತೆ ಅತ್ತೆ ಮನೆಗೆ ಬೈಕ್ ಮೇಲೆ ಹೋಗುತ್ತಿದ್ದರು. ಬರ್ತಾರಾ ಗ್ರಾಮದ ಬಳಿ ಬರುತ್ತಿದ್ದಂತೆ ಟ್ರಕ್ವೊಂದು ಬೈಕ್ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾಮಿನಿ ರಸ್ತೆ ಮಧ್ಯೆ ಬಿದ್ದಿದ್ದಾರೆ. ಇದರ ಬೆನ್ನಲ್ಲೇ ಮತ್ತೊಂದು ಟ್ರಕ್ ಆಕೆಗೆ ಹಿಂದಿನಿಂದ ಗುದ್ದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಪ್ರಸವವಾಗಿದೆ. ಹೆಣ್ಣುಮಗುವಿಗೆ ಜನ್ಮ ನೀಡಿ ಅಲ್ಲಿಯೇ ಮೃತಪಟ್ಟಿದ್ದಾರೆ.ಮಗು ಕ್ಷೇಮವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಘಟನೆ ನಡೆದ ಸ್ಥಳಕ್ಕಾಗಮಿಸಿದ ಪೊಲೀಸರು ಕಾಮಿನಿ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಹೆಂಡತಿ ಸಾವಿನಿಂದ ಗಂಡನ ಆಕ್ರಂದನ ಮುಗಿಲು ಮುಟ್ಟಿದೆ.
ಘಟನೆ ಬಳಿಕ ಟ್ರಕ್ ಚಾಲಕ ಪರಾರಿಯಾಗಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿಗಳನ್ನು ಪರಿಶೀಲಿಸುತ್ತಿದ್ದಾರೆ. ಪತಿಯ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಲಾಗುವುದು ಎಂದು ಎಸ್ಎಚ್ಒ ಬಧೋರಿಯಾ ಹೇಳಿದ್ದಾರೆ.