ಪಳೆಯುಳಿಕೆ ಇಂಧನಗಳಿಂದ ನವೀಕರಿಸಬಹುದಾದ ಇಂಧನಗಳತ್ತ

ಸುದೀಪ್ ದತ್ತ
ಅನು: ಕೆ ಎಂ ನಾಗರಾಜ್

ಭಾರತದಲ್ಲಿ ನವೀಕರಿಸಬಹುದಾದ ಇಂಧನಗಳಿಗೆ ಹೊರಳುವ ಪ್ರಕ್ರಿಯೆಯಲ್ಲಿ ಭಾರತದ ಇಂಧನ ವಲಯವನ್ನು ದೇಶೀ-ವಿದೇಶಿ ಕಾರ್ಪೊರೇಟ್‌ಗಳ ವಶಕ್ಕೊಪ್ಪಿಸಲಾಗುವುದು ಎಂಬುದು ಸ್ಪಷ್ಟವಾಗುತ್ತದೆ ಮತ್ತು ಸಾರ್ವಜನಿಕ ಬೊಕ್ಕಸದಿಂದ ದೊಡ್ಡ ಪ್ರಮಾಣದ ಸಬ್ಸಿಡಿಗಳನ್ನು ಒದಗಿಸುವ ಮೂಲಕ ಈ ಪ್ರಕ್ರಿಯೆಯನ್ನು ಪ್ರೋತ್ಸಾಹಿಸಲಾಗುವುದು. ಪಳೆಯುಳಿಕೆ-ಇಂಧನ ವಲಯದ ಉದ್ಯೋಗ ನಾಶದಿಂದಾಗಿ ಅಂಚಿನಲ್ಲಿರುವ ಕೋಟ್ಯಂತರ ಕಾರ್ಮಿಕರು ಮತ್ತು ಸಂಬಂಧಿತ ಸೇವೆಗಳಲ್ಲಿ ತೊಡಗಿರುವ ಕಾರ್ಮಿಕರು ವಿನಾಶಕಾರಿ ಪರಿಣಾಮಗಳಿಗೆ ಒಳಗಾಗುತ್ತಾರೆ.

ಈ ಸ್ಥಿತ್ಯಂತರದ ಪ್ರಶ್ನೆಯನ್ನು ಅದರ ಎಲ್ಲಾ ಆಯಾಮಗಳಲ್ಲಿ, ಮತ್ತು ಅದರ ಸಂಪೂರ್ಣ ರಾಜಕೀಯ-ಆರ್ಥಿಕ ಆಶಯದೊಂದಿಗೆ ನಿಖರವಾಗಿ ಅರ್ಥಮಾಡಿಕೊಳ್ಳುವ ಅಗತ್ಯವಿದೆ.

ಪ್ರಕೃತಿಯಿಂದಲೇ ಮನುಷ್ಯನ ಬದುಕು, ಅಂದರೆ, ಪ್ರಕೃತಿಯೇ ನಮ್ಮ ಶರೀರ,
ಮತ್ತು ನಾವು ಅಳಿಯಬಾರದು ಎಂದಾದರೆ ಪ್ರಕೃತಿಯೊಂದಿಗೆ ನಮ್ಮ ಮಾತು ಕತೆ
ಮುಂದುವರೆಯುತ್ತಲೇ ಇರಬೇಕಾಗುತ್ತದೆ – ಕಾರ್ಲ್ ಮಾರ್ಕ್ಸ್, 1844

ಪಳೆಯುಳಿಕೆ ಇಂಧನಗಳಿಂದ ನವೀಕರಿಸಬಹುದಾದ ಇಂಧನಗಳಿಗೆ ಹೊರಳುವ ಅಗತ್ಯದ ಅಭಿಯಾನವನ್ನು ವಿಶ್ವದ ಕೆಲವು ದೊಡ್ಡ ಕಾರ್ಪೊರೇಟ್ ಸಂಸ್ಥೆಗಳು ಪ್ರಾರಂಭಿಸಿವೆ. ಪರಿಸರ ಸಂಬಂಧಿತ ವಿಪತ್ತುಗಳಿಂದ ಭೂಮಿಯನ್ನು ರಕ್ಷಿಸುವ ಈ ಪವಿತ್ರ ಕಾರ್ಯದಲ್ಲಿ ಭಾರತದ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳೇನೂ ಹಿಂದೆ ಬಿದ್ದಿಲ್ಲ. ಅದೇ ಸಮಯದಲ್ಲಿ ನಮ್ಮ ಈ ಕುಳಗಳು ಜಾಗತಿಕವಾಗಿ ಅತ್ಯಂತ ಮಾಲಿನ್ಯಕಾರಕ ಪಳೆಯುಳಿಕೆ-ಇಂಧನ ಯೋಜನೆಗಳನ್ನು ನಡೆಸುವಲ್ಲಿ ಈಗಲೂ ತೊಡಗಿದ್ದಾರೆ. ಭಾರತದ ಒಂದು ಅತಿ ದೊಡ್ಡ ಕಾರ್ಪೊರೇಟ್ ಸಮೂಹವು ಆಸ್ಟ್ರೇಲಿಯಾದಲ್ಲಿ ಕೈಗೊಂಡಿರುವ ಕಲ್ಲಿದ್ದಲು-ಯೋಜನೆಯು ವಿಶ್ವದಲ್ಲೇ ಅತಿ ಹೆಚ್ಚು ಇಂಗಾಲಾಮ್ಲವನ್ನು (ಕಾರ್ಬನ್ ಡೈಆಕ್ಸೈಡ್) ಹೊರಸೂಸುತ್ತದೆ. ಭಾರತದ ಅದೇ ಕಾರ್ಪೊರೇಟ್ ಸಮೂಹವು, ಸರ್ಕಾರದ ಕೃಪಾಪೋಷಣೆಯೊಂದಿಗೆ, ಈಗ ಹಸಿರು-ಶಕ್ತಿಯ ಚಾಂಪಿಯನ್ ಎಂದು ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿದೆ.

ಈ ಬಂಟ-ಬಂಡವಾಳಶಾಹಿಗಳ ನೇತೃತ್ವದ ಕಾರ್ಪೊರೇಟ್ ಜಗತ್ತು ಹವಾಮಾನ ಬಿಕ್ಕಟ್ಟಿನ ಬಗ್ಗೆ ಕಣ್ಣೀರು ಸುರಿಸುತ್ತಿರುವಾಗ, ಕಾರ್ಮಿಕ ವರ್ಗವು ಮೂಕ ಪ್ರೇಕ್ಷಕನಾಗಿ ಉಳಿಯಲಾಗದು. ನಿಸ್ಸಂಶಯವಾಗಿಯೂ ಅದು ಮಹತ್ವದ ಈ ವಿಷಯವನ್ನು ಚರ್ಚಿಸಬೇಕು ಮತ್ತು ಇರುವುದೊಂದೇ ಭೂಮಿಯನ್ನು ಉಳಿಸಲು ಹೋರಾಡಬೇಕು. ಆದ್ದರಿಂದ, ಹವಾಮಾನ ಬದಲಾವಣೆ-ಹಸಿರು ಇಂಧನದ ಸಂಕಥನವನ್ನು ವರ್ಗ ದೃಷ್ಟಿಕೋನದಿಂದ ಮತ್ತು ಕಾರ್ಮಿಕ ವರ್ಗದ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ಅರ್ಥಮಾಡಿಕೊಳ್ಳಬೇಕು.

ಪ್ಯಾರಿಸ್ ಒಪ್ಪಂದ, ಹಸಿರು ಯೋಜನೆಗಳು ಮತ್ತು “ಸಲ್ಲುವ ಪರಿವರ್ತನೆ”

2008 ಮತ್ತು 2009ರ ವರ್ಷಗಳು ಜಗತ್ತಿನಲ್ಲಿ ಅತಿಯಾದ ಉತ್ಪಾದನೆ, ಲಾಭಗಳ ದರ ಕುಸಿತ, ನಿರುದ್ಯೋಗ ಸೃಷ್ಟಿಸುವ ಹೂಡಿಕೆಗಳ ಹಿಂತೆಗೆತ, ಆದಾಯಗಳಲ್ಲಿ ಕಾರ್ಮಿಕರ ಪಾಲಿನ ಕುಸಿತ, ಮತ್ತು, ದುಡಿಯುವ ಜನತೆಯ ಸಂಕಷ್ಟಗಳು ಹೆಚ್ಚುತ್ತಿದ್ದ ಪರಿಸ್ಥಿತಿಯನ್ನು ಕಂಡವು. ಈ ಎಲ್ಲವೂ ಆಗತಾನೇ ಕಾಣಿಸಿಕೊಳ್ಳಲಾರಂಭಿಸಿದ್ದ ಆರ್ಥಿಕ ಹಿಂಜರಿತದ ಸ್ಪಷ್ಟ ಸಂಕೇತಗಳಾಗಿದ್ದವು. ಸೆಪ್ಟೆಂಬರ್ 2009ರಲ್ಲಿ, ವಿಶ್ವಸಂಸ್ಥೆಯು ‘ಗ್ಲೋಬಲ್ ಗ್ರೀನ್ ನ್ಯೂ ಡೀಲ್’ (ರೂಸ್‌ವೆಲ್ಟ್ ಅವರ ‘ನ್ಯೂಡೀಲ್’ ಹೊಸ ನೀತಿಗಳ ಹೆಸರನ್ನು ಅನುಕರಿಸುವ ರೀತಿಯಲ್ಲಿ) ಎಂಬ ಶೀರ್ಷಿಕೆಯ ಒಂದು ವರದಿಯನ್ನು ಬಿಡುಗಡೆ ಮಾಡಿತು. ನಂತರ ಹಲವಾರು ಇತರ ಹೊಸ ಹೊಸ ಹಸಿರು-ವ್ಯವಹಾರಗಳು ಘೋಷಣೆಯಾದವು. ಅವುಗಳೊಂದಿಗೆ, ‘ಸಲ್ಲುವ ಪರಿವರ್ತನೆ ‘(ಜಸ್ಟ್ ಟ್ರಾನ್ಸಿಷನ್) ಎಂಬ ವಿಚಾರವೂ ಬಂತು. ಈ ಎಲ್ಲಾ ಪ್ರಸ್ತಾಪಗಳೂ ಹಸಿರು-ಕೀನ್ಸ್ ವಾದ, ಪರಿಸರ ಆಧುನಿಕತಾವಾದ ಮತ್ತು ಕಾರ್ಪೊರೇಟಿಸ್ಟ್ ತಂತ್ರಗಾರಿಕೆಗಳ ಕಲಸುಮೇಲೋಗರಗಳೇ. ಜನವಿರೋಧಿ, ಲಾಭ-ಆಧಾರಿತ ಬಂಡವಾಳಶಾಹಿಯ ಮೂಲ ಸಂರಚನೆಗೆ ಯಾವ ಸವಾಲೂ ಹಾಕದಿರುವ ಇಂತಹ ಕಂತೆ ಕಂತೆ ಭರವಸೆಗಳನ್ನು ನೀಡಲಾಯಿತಾದರೂ ಒಂದೂ ಸಹ ಸಾಕಾರಗೊಳ್ಳಲಿಲ್ಲ.

ಹಿಂದಿನ ಇಡೀ ದಶಕದುದ್ದಕ್ಕೂ ಹವಾಮಾನ ಬದಲಾವಣೆ ಕುರಿತ ಅಂತರ್-ಸರ್ಕಾರ ಸಮಿತಿಯು (ಐಪಿಸಿಸಿ, ಯುಎನ್) ಜಾಗತಿಕ ತಾಪಮಾನ ಏರಿಕೆಗೆ ಸಂಬಂಧಿಸಿದ ಅವಲೋಕನಗಳು ಮತ್ತು ಹವಾಮಾನ ಪರಿಸ್ಥಿತಿಯ ತೀವ್ರತೆಯ ಬಗ್ಗೆ ಹಲವಾರು ವರದಿಗಳನ್ನು ನಿರಂತರವಾಗಿ ಪ್ರಕಟಿಸಿತು. ಹವಾಮಾನ ಬದಲಾವಣೆ ಕುರಿತ 2015ರ ಪ್ಯಾರಿಸ್ ಒಪ್ಪಂದವು ಈ ಶತಮಾನದಲ್ಲಿ ಜಾಗತಿಕ ತಾಪಮಾನ ಏರಿಕೆಯನ್ನು ಕೈಗಾರಿಕಾ-ಪೂರ್ವ ಅವಧಿಯ (1850) ಮೇಲಿನ ಮಟ್ಟಕ್ಕಿಂತ 2 ಡಿಗ್ರಿ ಸೆಲ್ಸಿಯಸ್‌ಗಿಂತ ಕೆಳಗೆ ಇರಿಸುವ ಮೂಲಕ ಹವಾಮಾನ ಬದಲಾವಣೆಯ ಅಪಾಯದ ವಿರುದ್ಧವಾಗಿ ಜಾಗತಿಕ ಪ್ರತಿಕ್ರಿಯೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಒಂದು ಜಾಗತಿಕ ಚೌಕಟ್ಟನ್ನು ರೂಪಿಸಿತು. ತಾಪಮಾನವನ್ನು 1.5ಡಿಗ್ರಿ ಸೆಲ್ಸಿಯಸ್‌ಗಿಂತ ಕೆಳಗೆ ತಗ್ಗಿಸುವುದನ್ನು ಆದ್ಯತೆಯಾಗಿ ಮಾಡಿಕೊಳ್ಳಲಾಯಿತು. ಈ ಉದ್ದೇಶಕ್ಕಾಗಿ ಜಾಗತಿಕ ನಿವ್ವಳ ಇಂಗಾಲಾಮ್ಲ ಹೊರಸೂಸುವಿಕೆಯನ್ನು 2030ರ ವೇಳೆಗೆ 2010ರ ದಶಕದ ಮಟ್ಟದಿಂದ ಶೇ.45ರಷ್ಟನ್ನು ಇಳಿಕೆ ಮಾಡುವ ಮತ್ತು 2050ರ ಸುಮಾರಿಗೆ ‘ನಿವ್ವಳ ಶೂನ್ಯ’ ಹೊರಸೂಸುವಿಕೆ ತಲುಪುವ ಗುರಿಯನ್ನು ಹೊಂದಲಾಯಿತು. 1997ರ ಕ್ಯೋಟೋ(ಜಪಾನ್) ಶಿಷ್ಟಾಚಾರಕ್ಕೆ ಹೋಲಿಸಿದರೆ, ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ನಡುವಿನ ವ್ಯತ್ಯಾಸ ಮತ್ತು ವಿಭಿನ್ನ ವಿಧಾನವು ಪ್ಯಾರಿಸ್ ಒಪ್ಪಂದದಲ್ಲಿ ಮಬ್ಬುಗೊಂಡಿತು. ಆದಾಗ್ಯೂ, ಬಹುಸಂಖ್ಯಾತ ದೇಶಗಳು ಈ ಪ್ರಸ್ತಾಪವನ್ನು ಒಪ್ಪಿಕೊಂಡವು. ಆದರೆ, ಪಾಶ್ಚಾತ್ಯ ಕೈಗಾರಿಕಾ ದೇಶಗಳ ಮತ್ತು ಬಂಡವಾಳಶಾಹಿ ವರ್ಗದ ‘ಕಡ್ಡಾಯ ಉತ್ತರದಾಯಿತ್ವ’ದ ಕೆಲಸ ಇನ್ನೂ ಬಾಕಿ ಇದೆ.

ಜಾಗತಿಕ ಇಂಗಾಲ ಅಸಮಾನತೆ ವರದಿ, 2022ರ ಪ್ರಕಾರ, ಉತ್ತರ ಅಮೆರಿಕ (ಶೇ.27) ಮತ್ತು ಯುರೋಪ್ (ಶೇ.22) ಒಟ್ಟಾಗಿ 1850ರಿಂದ ಬಿಡುಗಡೆ ಮಾಡಿದ ಮಾನವ-ಪ್ರೇರಿತ ಇಂಗಾಲದ ಸುಮಾರು ಶೇ.50 ಭಾಗಕ್ಕೆ ಜವಾಬ್ದಾರಿ ಹೊಂದಿವೆ. 2019 ರಲ್ಲಿ ಸರಾಸರಿ ಜಾಗತಿಕ ತಲಾ ಹೊರಸೂಸುವಿಕೆಯು ಪ್ರತಿ ವ್ಯಕ್ತಿಗೆ ವರ್ಷಕ್ಕೆ 6.6 ಟನ್‌ಗಳಾಗಿದ್ದರೆ, ಉತ್ತರ ಅಮೆರಿಕದಲ್ಲಿ ಇದು 21 ಟನ್ ಆಗಿತ್ತು. ಜಾಗತಿಕವಾಗಿ, ತಳಭಾಗದ ಶೇ.50ರಷ್ಟು ಮಂದಿಯು ಪ್ರತಿ ವ್ಯಕ್ತಿಗೆ ವರ್ಷಕ್ಕೆ 1.6 ಟನ್, ಮಧ್ಯಮ ಭಾಗದ ಶೇ.40ರಷ್ಟು ಮಂದಿಯು ಪ್ರತಿ ವ್ಯಕ್ತಿಗೆ ವರ್ಷಕ್ಕೆ 6.6 ಟನ್, ಮೇಲಿನ ಶೇ.10ರಷ್ಟು ಮಂದಿಯು ಪ್ರತಿ ವ್ಯಕ್ತಿಗೆ ವರ್ಷಕ್ಕೆ 31 ಟನ್ ಮತ್ತು ಮೇಲ್ತುದಿಯ ಶೇ.1ರಷ್ಟು ಮಂದಿಯು ಪ್ರತಿ ವ್ಯಕ್ತಿಗೆ ವರ್ಷಕ್ಕೆ 110 ಟನ್ ಹೊರಸೂಸಿದ್ದಾರೆ. ಬಂಡವಾಳಗಾರ ವರ್ಗದ ಐತಿಹಾಸಿಕ ಜಾಗತಿಕ ಕೇಂದ್ರಗಳು ಪ್ರಕೃತಿಯ ಈ ವಿನಾಶಕಾರಿ ಸ್ಥಿತಿಗೆ ಕಾರಣವಾಗುವ ಪರಿಸರ-ಅಪರಾಧಿಗಳು ಎಂಬುದು ಈ ಅಂಕಿ ಅಂಶಗಳಿಂದ ಸ್ಪಷ್ಟವಾಗುತ್ತದೆ.

ಮೋಸದ ಪರಿಭಾಷೆ

“ಸಲ್ಲುವ ಬದಲಾವಣೆ”ಯ(ಜಸ್ಟ್ ಟ್ರಾನ್ಸಿಶನ್) ಘೋಷಣೆಯನ್ನು ಈಗ ಮೊಳಗಿಸಲಾಗಿದೆ. ಆಗ ತಾನೇ ಜಾಗತೀಕರಣವನ್ನು ವಿಶ್ವದ ಮೂಲೆ ಮೂಲೆಗಳಲ್ಲಿ ವಿರೋಧಿಸುವ ಪ್ರಕ್ರಿಯೆ ಆರಂಭವಾಗಿದ್ದ ಸಂದರ್ಭದಲ್ಲಿ “ನ್ಯಾಯೋಚಿತ ಜಾಗತೀಕರಣ” ಎಂಬ ಘೋಷಣೆಯನ್ನು ಐಎಲ್‌ಒ(ಅಂತರ‍್ರಾಷ್ಟ್ರೀಯ ಶ್ರಮ ಸಂಘಟನೆ) ಸಾರ್ವಜನಿಕ ಚರ್ಚೆಗೆ ತಂದಿತ್ತು. ‘ಸುಸ್ಥಿರ ಅಭಿವೃದ್ಧಿʼಯ ಘೋಷಣೆಯು ಅಭಿವೃದ್ಧಿ ಎಂಬುದು ತನ್ನ ದೌರ್ಬಲ್ಯಗಳನ್ನು ಮತ್ತು ಲಾಭದ ಅನಾಗರಿಕ ಸ್ವಾಹಾ ಪ್ರಕ್ರಿಯೆಯನ್ನು ನಗ್ನವಾಗಿ ಬಹಿರಂಗಪಡಿಸಲು ಪ್ರಾರಂಭಿಸಿದಾಗ ಮೊಳಗಿತು. ಸಮಾಜದ ಪದರ ಪದರಗಳಲ್ಲೂ ತೀವ್ರ ಮತ್ತು ಅಸಹ್ಯಕರ ಅಸಮಾನತೆಗಳು ಎದ್ದು ಕಾಣಲಾರಂಭಿಸಿದಾಗ “ಎಲ್ಲರನ್ನೂ ಒಳಗೊಂಡ ಬೆಳವಣಿಗೆ” ಎಂಬ ಘೋಷಣೆಯನ್ನು ಮೊಳಗಿಸಲಾಯಿತು. “ಘನತೆಯ ಉದ್ಯೋಗ” ಎಂಬ ಭರವಸೆಯನ್ನು ನೀಡಿದಾಗ, ಅದರಲ್ಲಿ ಘನತೆಯೂ ಇರಲಿಲ್ಲ, ಉದ್ಯೋಗವೂ ಇರಲಿಲ್ಲ. ಬದಲಿಗೆ, ಗುಣಮಟ್ಟದ ಉದ್ಯೋಗಗಳೇ ಆತಂಕಕಾರೀ ರೀತಿಯಲ್ಲಿ ಕ್ಷೀಣಿಸಿದವು. ಈ ರೀತಿಯಲ್ಲಿ, ಹೊಸ ಹೊಸ ಪರಿಭಾಷೆಯ ಮೂಲಕ ಬಂಡವಾಳಶಾಹಿ ವರ್ಗವು ಜನರನ್ನು ಮೋಸಗೊಳಿಸಿದೆ. ಈಗ ಈ ‘ಸಲ್ಲುವ’ ೆಎಂಬುದು ಕೂಡ  ಅವಿಶ್ವಸನೀಯ ಮತ್ತು ಜನವಿರೋಧಿ ಯೋಜನೆಗಳನ್ನು ಮಾರಾಟ ಮಾಡುವ ಸಲುವಾಗಿ ಆವಿಷ್ಕರಿಸಿದ ಹೊಸಪದ.

ಅಸ್ತಿತ್ವದಲ್ಲಿರುವ ವ್ಯವಸ್ಥೆಯಿಂದ ಹೈರಾಣಾದ ದುಡಿಯುವ ಜನತೆಯು ವ್ಯವಸ್ಥೆಗೆ ಸವಾಲೆಸೆದು ಬೀದಿಗೆ ಇಳಿದಾಗಲೆಲ್ಲಾ ಜನರ ಗಮನವನ್ನು ಬೇರೆಡೆಗೆ ತಿರುಗಿಸುವ ಉದ್ದೇಶ ಹೊಂದಿದ ಇಂತಹ ಕೊಳಕು ತಂತ್ರಗಳನ್ನು ಬಳಸಲಾಗಿದೆ. 1980ರ ದಶಕದಲ್ಲಿ ಅಮೆರಿಕದಲ್ಲಿ ಹುಟ್ಟಿಕೊಂಡ ಈ “ಸಲ್ಲುವ ಪರಿವರ್ತನೆ” ಯ (ಜಸ್ಟ್ ಟ್ರಾನ್ಸಿಶನ್) ಕಲ್ಪನೆಯನ್ನು ಜಾಗತಿಕ ಬಂಡವಾಳಶಾಹಿಯು 2007-08 ರಿಂದ ಈಚೆಗೆ ಒಂದು ಆಕ್ರಮಣಕಾರಿ ಶೈಲಿಯಲ್ಲಿ, ಯೋಚನೆಗೂ ನಿಲುಕದ ದೈತ್ಯ ಗಾತ್ರದ ಹೂಡಿಕೆಯ ಹೊಸ ಆರ್ಥಿಕ ವಲಯವವೊಂದನ್ನು ರಚಿಸುವ ಉದ್ದೇಶದ ಪ್ರಚಾರವನ್ನು ಆರಂಭಿಸಿತು. ಇದು ಬಿಕ್ಕಟ್ಟಿನಿಂದ ಬಳಲುತ್ತಿರುವ ಬಂಡವಾಳಶಾಹಿಯನ್ನು ತಾತ್ಕಾಲಿಕವಾಗಿ ರಕ್ಷಿಸುವ ಒಂದು ಹತಾಶ ಪ್ರಯತ್ನವಾಗಿದೆ. ಅದನ್ನು ಜಾರಿಗೊಳಿಸುವುದು ಅಷ್ಟು ಸುಲಭವಲ್ಲ ಮತ್ತು ದುಡಿಯುವ ಜನರ ಮೇಲೆ ಇದು ಬೀರುವ ಪರಿಣಾಮವು ಗಂಭೀರವಾಗಿಯೇ ಇರುತ್ತದೆ.

ಸಲ್ಲುವ ಪರಿವರ್ತನೆ“ಯ ಭಾರತಕಾಂಡ

ಅಂತಾರಾಷ್ಟ್ರೀಯ ಇಂಧನ ಸಂಸ್ಥೆಯ 2020ರ ವರದಿಯ ಪ್ರಕಾರ, ಭಾರತದ ಇಂಧನ ಬೇಡಿಕೆಯ ಸುಮಾರು ಶೇ.70 ರಷ್ಟನ್ನು ಕಲ್ಲಿದ್ದಲು (ಶೇ.44) ಮತ್ತು ತೈಲ (ಶೇ.25) ಪೂರೈಸುತ್ತವೆ. ಭಾರತದ ಶೇ.78ರಷ್ಟು ವಿದ್ಯುತ್ ಕಲ್ಲಿದ್ದಲಿನಿಂದ ಬರುತ್ತದೆ. ದೇಶದ ಒಟ್ಟು ವಿದ್ಯುತ್ ಉತ್ಪಾದನೆಯಲ್ಲಿ ಎನ್‌ಟಿಪಿಸಿ ಶೇ.23ರಷ್ಟು ಕೊಡುಗೆ ನೀಡುತ್ತಿದ್ದು, ಇದರಲ್ಲಿ ಶೇ.70ರಷ್ಟು ವಿದ್ಯುತ್ ಉತ್ಪಾದನೆಯು ಕಲ್ಲಿದ್ದಲಿನ ಮೇಲೆ ಅವಲಂಬಿತವಾಗಿದೆ. ಸರ್ಕಾರಿ ಸ್ವಾಮ್ಯದ ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) ಏಕಮೇವವಾಗಿ ದೇಶದ ಒಟ್ಟು ಕಲ್ಲಿದ್ದಲು ಉತ್ಪಾದನೆಯಲ್ಲಿ ಶೇ. 80ರಷ್ಟು ಪಾಲನ್ನು ಹೊಂದಿದೆ.

ಕೋಲ್ ಇಂಡಿಯಾ ಮತ್ತು ಎನ್‌ಟಿಪಿಸಿ ಒಟ್ಟಾಗಿ ಭಾರತದ ಒಟ್ಟು ಆದಾಯ ಸ್ವೀಕೃತಿಗಳಲ್ಲಿ ಸುಮಾರು ಶೇ.3ರಷ್ಟು ಪಾಲನ್ನು ಹೊಂದಿದ್ದರೆ, ಭಾರತೀಯ ರೈಲ್ವೆಯ ಸರಕು ಆದಾಯದ ಶೇ.50ರಷ್ಟು ಕಲ್ಲಿದ್ದಲು ಸಾರಿಗೆ ಒಂದರಿಂದಲೇ ಬರುತ್ತದೆ. ಭಾರತದಲ್ಲಿ ಪಳೆಯುಳಿಕೆ ಇಂಧನ ಮತ್ತು ಅದಕ್ಕೆ ಸಂಬಂಧಿಸಿದ ವಲಯಗಳಲ್ಲಿ ಕಡಿಮೆ ಅಂದರೂ 2.15 ಕೋಟಿ ಮಂದಿ ಉದ್ಯೋಗಿಗಳಿದ್ದಾರೆ. ಜಾಗತಿಕವಾಗಿ ಇಂಧನ ವಲಯದ ಬಗ್ಗೆ ಹೇಳುವುದಾದರೆ, ಪಳೆಯುಳಿಕೆ ಇಂಧನ ಕೈಗಾರಿಕೆಗಳಲ್ಲಿ 12.6 ಮಿಲಿಯನ್, ನವೀಕರಿಸಬಹುದಾದ ಇಂಧನ ವಲಯದಲ್ಲಿ 4.6 ಮಿಲಿಯನ್ ಮತ್ತು ಪರಮಾಣು ಇಂಧನ ವಲಯದಲ್ಲಿ 0.8 ಮಿಲಿಯನ್ ನೇರ ಉದ್ಯೋಗಗಳಿವೆ. 2050ರ ವೇಳೆಗೆ ಇಂಧನ ವಲಯದ ಒಟ್ಟು ಉದ್ಯೋಗಗಳಲ್ಲಿ ಶೇ.84ರಷ್ಟು ಉದ್ಯೋಗಗಳು ನವೀಕರಿಸಬಹುದಾದ ಇಂಧನ ವಲಯದಲ್ಲಿರುತ್ತವೆ (ಈ ಉದ್ಯೋಗಗಳ ಮೂರನೇ ಒಂದು ಭಾಗವು ಉಪಕರಣಗಳ ಉತ್ಪಾದನೆಯಲ್ಲಿ ಮತ್ತು ಅವುಗಳ ಅನುಗೊಳಿಸುವಿಕೆಯಲ್ಲಿರುತ್ತವೆ), ಶೇ.11ರಷ್ಟು ಪಳೆಯುಳಿಕೆ ಇಂಧನ ವಲಯದಲ್ಲಿ ಮತ್ತು ಶೇ.5ರಷ್ಟು ಪರಮಾಣು ವಲಯದಲ್ಲಿರುತ್ತವೆ ಎಂದು ಅಂದಾಜಿಸಲಾಗಿದೆ.

ಅಂದಾಜು ಮಾಡಿದ ಈ ಉದ್ಯೋಗಗಳು ಒಂದು ವೇಳೆ ಸೃಷ್ಟಿಯಾದರೂ ಸಹ, ಸಾಂಪ್ರದಾಯಿಕ ಪಳೆಯುಳಿಕೆ ಇಂಧನ ಕಾರ್ಮಿಕರು, ವಿಶೇಷವಾಗಿ ಕಲ್ಲಿದ್ದಲು ಗಣಿಗಾರರಿಗೆ ಯಾವುದೇ ಪ್ರಯೋಜನ ದೊರಕುವುದಿಲ್ಲ. ಉದ್ಯೋಗಗಳ ಚದುರಿದ ಸ್ವರೂಪವು ಕೆಲಸಗಾರರು ಒಗ್ಗೂಡುವ ಸಾಧ್ಯತೆಯನ್ನೇ ತೊಡೆದುಹಾಕುತ್ತದೆ. ಆದ್ದರಿಂದ ಸಾಮೂಹಿಕ ಚೌಕಾಶಿ, ಉದ್ಯೋಗ ರಕ್ಷಣೆ, ಮುಷ್ಕರದ ಹಕ್ಕು ಮತ್ತು ಇಲ್ಲಿಯವರೆಗೂ ನೂರಕ್ಕೆ ನೂರರಷ್ಟು ಸಂಘಟಿತರಾದ ಪಳೆಯುಳಿಕೆ-ಇಂಧನ ಕಾರ್ಮಿಕರು ಗಳಿಸಿದ ಹಕ್ಕುಗಳು ಇಲ್ಲವಾಗುತ್ತವೆ.

ಜಾಗತಿಕ ಪರಿಸ್ಥಿತಿಗೆ ಹೋಲಿಸಿದರೆ ಭಾರತದ ಇಂಧನ ವಲಯವು ಒಂದು ಅಪವಾದವಾಗಿ ಕಾಣುತ್ತದೆ. ಏಕೆಂದರೆ, ಶೇ.90 ರಷ್ಟು ಕಲ್ಲಿದ್ದಲು, ಶೇ.57ರಷ್ಟು ತೈಲ ಸಂಸ್ಕರಣೆ; ವಿದ್ಯುತ್ ಉತ್ಪಾದನೆಯ ಶೇಕಡಾ 51 ರಷ್ಟು ಮತ್ತು ಅದರ ಚಿಲ್ಲರೆ ವಿತರಣೆಯನ್ನು ಪೂರ್ಣವಾಗಿ ಸರ್ಕಾರದಿಂದ ನಿರ್ಮಿಸಲ್ಪಟ್ಟ ಸಾರ್ವಜನಿಕ ಉದ್ದಿಮೆಗಳು ನಿರ್ವಹಿಸುತ್ತವೆ. ಭಾರತದ ಉಷ್ಣ ಸ್ಥಾವರಗಳ ಸಾಮರ್ಥ್ಯದ ಶೇ.64ರಷ್ಟನ್ನು ಸಾರ್ವಜನಿಕ ಉದ್ದಿಮೆಗಳು ಹೊಂದಿರುವ ಸನ್ನಿವೇಶಕ್ಕೆ ಹೋಲಿಸಿದರೆ, ಬಂಟ-ಬAಡವಾಳಗಾರರಿಗೆ ಕೊಡುಗೆಗಳ ಸುರಿಮಳೆಯನ್ನೇ ಸುರಿಸುವ ಮೋದಿ ಸರ್ಕಾರದ ನೀತಿಯಿಂದಾಗಿ, ನವೀಕರಿಸಬಹುದಾದ ಇಂಧನಗಳ ಸ್ಥಾಪಿತ ಸಾಮರ್ಥ್ಯದ ಶೇ.96ರಷ್ಟು ಭಾಗವು ಖಾಸಗಿ ಕಾರ್ಪೊರೇಟ್‌ಗಳ ಕೈಯಲ್ಲಿದೆ. 2021ರ ಗ್ಲಾಸ್ಗೋದಲ್ಲಿ ನಡೆದ ಸಿಒಪಿ26ರಲ್ಲಿ, ಭಾರತವು 2030ರ ವೇಳೆಗೆ ತನ್ನ ಇಂಧನ ಅಗತ್ಯದ ಅರ್ಧದಷ್ಟನ್ನು ನವೀಕರಿಸಬಹುದಾದ ಇಂಧನಗಳಿಂದ ಪೂರೈಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದೆ.

ಈ ನಡುವೆ, ಮೋದಿ ಸರ್ಕಾರವು ರಾಷ್ಟ್ರೀಯ ನಗದೀಕರಣ (ಎನ್‌ಎಂಪಿ) ಯೋಜನೆಯ ಮೂಲಕ, ಕಲ್ಲಿದ್ದಲು ಗಣಿಗಳು, ಪೆಟ್ರೋಲಿಯಂ ಸಾಗಣೆಯ ಕೊಳವೆ ಜಾಲವನ್ನು, ವಿದ್ಯುಚ್ಛಕ್ತಿ ಸರಬರಾಜು ಜಾಲವನ್ನು, ಆಪ್ಟಿಕಲ್ ಫೈಬರ್ ಜಾಲವನ್ನು ಮತ್ತು ವಿಶೇಷವಾಗಿ ಸಾರ್ವಜನಿಕ ವಲಯವು ನವೀಕರಿಸಬಹುದಾದ ಇಂಧನವನ್ನು ಉತ್ಪಾದಿಸುವಂತಹ ಆಸ್ತಿಗಳನ್ನು ಬಂಟ-ಬAಡವಾಳಗಾರರಿಗೆ ಹಸ್ತಾಂತರಿಸಲಿದೆ. ನವೀಕರಿಸಬಹುದಾದ ಇಂಧನ ವಲಯದಲ್ಲಿ ಸರ್ಕಾರವು ‘ಉಸ್ತುವಾರಿ’ಯ ಪಾತ್ರವನ್ನು ವಹಿಸುತ್ತದೆ ಮತ್ತು ಖಾಸಗಿ ಕಾರ್ಪೊರೇಟ್‌ಗಳ ಏಕಸ್ವಾಮ್ಯವನ್ನು ಖಾತರಿಪಡಿಸುತ್ತದೆ ಎಂಬುದನ್ನು ನೀತಿ ಆಯೋಗವೇ ಸ್ಪಷ್ಟಪಡಿಸಿದೆ.

ಆದ್ದರಿಂದ, ಭಾರತದಲ್ಲಿ ನವೀಕರಿಸಬಹುದಾದ ಇಂಧನಗಳಿಗೆ ಹೊರಳುವ ಈ ಪ್ರಕ್ರಿಯೆಯಲ್ಲಿ ಭಾರತದ ಇಂಧನ ವಲಯವನ್ನು ದೇಶೀಯ-ವಿದೇಶಿ ಕಾರ್ಪೊರೇಟ್‌ಗಳ ವಶಕ್ಕೊಪ್ಪಿಸಲಾಗುವುದು ಎಂಬುದು ಸ್ಪಷ್ಟವಾಗುತ್ತದೆ ಮತ್ತು ಸಾರ್ವಜನಿಕ ಬೊಕ್ಕಸದಿಂದ ದೊಡ್ಡ ಪ್ರಮಾಣದ ಸಬ್ಸಿಡಿಗಳನ್ನು ಒದಗಿಸುವ ಮೂಲಕ ಈ ಪ್ರಕ್ರಿಯೆಯನ್ನು ಪ್ರೋತ್ಸಾಹಿಸಲಾಗುವುದು. ಉದ್ಯೋಗ ನಾಶದಿಂದಾಗಿ ಪಳೆಯುಳಿಕೆ-ಇಂಧನ ವಲಯದ ಅಂಚಿನಲ್ಲಿರುವ ಕೋಟ್ಯಂತರ ಕಾರ್ಮಿಕರು ಮತ್ತು ಸಂಬಂಧಿತ ಸೇವೆಗಳಲ್ಲಿ ತೊಡಗಿರುವ ಕಾರ್ಮಿಕರು ವಿನಾಶಕಾರಿ ಪರಿಣಾಮಗಳಿಗೆ ಒಳಗಾಗುತ್ತಾರೆ.

ಬಂಡವಾಳಶಾಹಿ: ಪ್ರಕೃತಿ ಮತ್ತು ಶ್ರಮಿಕರ ಶತ್ರು

ಶ್ರಮ ಮತ್ತು ಪರಿಸರ ಈ ಎರಡರ ಬಿಕ್ಕಟ್ಟು, ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಅಂತರ್ಗತವಾಗಿರುವ ಬಿಕ್ಕಟ್ಟಿನ ಮತ್ತು ಅದರ ಉತ್ಪಾದನಾ ತರ್ಕದ ಅಭಿವ್ಯಕ್ತಿಯಾಗಿದೆ. ಬಂಡವಾಳಶಾಹಿ ವ್ಯವಸ್ಥೆಯು ದುಡಿಮೆಗಾರರಿಂದ ಹೆಚ್ಚುವರಿಯನ್ನು ಮತ್ತು ಲಾಭವನ್ನು ಅಪರಿಮಿತವಾಗಿ ಹಿಂಡುವ ಉದ್ದೇಶದಿಂದ ಸಾಧ್ಯವಿರುವ ಎಲ್ಲಾ ವಿಧಾನಗಳ ಮೂಲಕವೂ ಪ್ರಕೃತಿ ಮಾತೆಯನ್ನೂ ಶೋಷಿಸುತ್ತದೆ. ಲಾಭ ದರ-ಕುಸಿತಗಳಿಂದ ವೃದ್ಧಿಸುವ ಬಂಡವಾಳವಾದಿ ವ್ಯವಸ್ಥೆಯ ಬಿಕ್ಕಟ್ಟು, ಮಾರುಕಟ್ಟೆಯಲ್ಲಿ ಬಂಡವಾಳ ಹೂಡಿಕೆಯ ಹಿಂತೆಗೆತದ ಮೂಲಕವಾಗಿ ಕಾಣಿಸಿಕೊಳ್ಳುತ್ತದೆ. ಲಾಭದ ಸರಾಸರಿ ದರ ಇನ್ನೂ ಸ್ಥಿರಗೊಳ್ಳದ ಹೊಸ ಆರ್ಥಿಕ ವಲಯದಲ್ಲಿ ದೊರಕುವ ತಾತ್ಕಾಲಿಕ ಹೆಚ್ಚಿನ ಲಾಭ-ದರವು ಬಂಡವಾಳವನ್ನು ಆಕರ್ಷಿಸುತ್ತದೆ ಮತ್ತು ಈ ವಿದ್ಯಮಾನವು ಮಾರುಕಟ್ಟೆಗೆ ಅನುಕರಣೀಯವಾಗುತ್ತದೆ.

ಬಂಡವಾಳಶಾಹಿಯ ಬೌದ್ಧಿಕ ಬಾಡಿಗೆಯಾಳುಗಳು ಶ್ರಮವನ್ನು ಪ್ರಕೃತಿಯಿಂದ ಬೇರ್ಪಡಿಸಲು ಪ್ರಯತ್ನಿಸುತ್ತಾರೆ. ಪ್ರಕೃತಿಯನ್ನು ಒಂದು ಪವಿತ್ರ ಸ್ಥಾನದಲ್ಲಿರಿಸಿ, ಶ್ರಮಿಕರನ್ನು ಅವರ ಸಾಂಪ್ರದಾಯಿಕ ಉತ್ಪಾದನಾ ವಲಯದಿಂದ ಉಚ್ಛಾಟನೆಗೊಳಿಸುವ ಒಂದು ಸಂಘರ್ಷರಹಿತ ಪರಿವರ್ತನೆಯನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಈ ಕ್ರಮವು ಮುಂದಿನ ದಿನಗಳಲ್ಲಿ ಸೂರ್ಯನ ಬೆಳಕಿನ ಮೇಲೂ ಶುಲ್ಕ ವಿಧಿಸುವ ಅನಿವಾರ್ಯ ಸಾಧ್ಯತೆಯ ಸೂಚನೆಯಾಗಿದೆ. ನವ ಉದಾರೀಕರಣದ ಆಳ್ವಿಕೆಯಲ್ಲಿ ಒಂದು ತುತ್ತು ಅನ್ನವೂ ಉಚಿತವಾಗಿ ಲಭಿಸದು. ಪ್ರಕೃತಿಯ ಉಚಿತ ದತ್ತಿಯನ್ನೂ (ಅಂದರೆ, ಗಾಳೀ ನೀರು ಮುಂತಾದವುಗಳನ್ನೂ) ಸಹ ನಗದೀಕರಿಸುವ ಮತ್ತು ಸ್ವಾಧೀನಪಡಿಸಿಕೊಳ್ಳುವ ಪ್ರಯತ್ನಗಳ ಬಗ್ಗೆ ಅಚ್ಚರಿ ಪಡಬೇಕಾದ್ದಿಲ್ಲ.

“ಸಲ್ಲುವ ಪರಿವರ್ತನೆ” (ಜಸ್ಟ್ ಟ್ರಾನ್ಸಿಶನ್) ಘೋಷಣೆಯ ಅಡಿಯಲ್ಲಿ ಮರೆಮಾಚಲ್ಪಟ್ಟ ಪವಿತ್ರ-ಪ್ರಕೃತಿಯ ಮೇಲೆ ನೆಡೆಸಿದ ಶೋಷಣೆಯ ಬಗ್ಗೆ ಬಂಡವಾಳಶಾಹಿಗಳ ಆಣೆ-ಪ್ರಮಾಣ-ಪ್ರತಿಜ್ಞೆಗಳಿಂದ ವಿಚಲಿತರಾಗುವುದು ಅಥವಾ ಒಪ್ಪಿಕೊಳ್ಳುವುದು ಸಾಧ್ಯವಿಲ್ಲ. ‘ನ್ಯಾಯಸಮ್ಮತತೆ’ಯನ್ನು ಅಥವಾ  ‘ಸಲ್ಲುವ ಪರಿವರ್ತನೆ’ಗಳನ್ನು, ಅವು ಎಷ್ಟೇ ಅಪೂರ್ಣವಾಗಿರಲಿ, ಸಂಘಟಿತ ವರ್- ಮಧ್ಯಪ್ರವೇಶಗಳ ಮೂಲಕವೇ ಬಲವಂತವಾಗಿ ಪಡೆದುಕೊಳ್ಳಬೇಕಾಗುತ್ತದೆ. ಆದ್ದರಿಂದ, ಈ ಸ್ಥಿತ್ಯಂತರದ ಪ್ರಶ್ನೆಯನ್ನು ಅದರ ಎಲ್ಲಾ ಆಯಾಮಗಳಲ್ಲಿ, ವರ್ಗ-ತಿಳುವಳಿಕೆಯ ಆಧಾರದ ಮೇಲೆ ಮತ್ತು ಅದರ ಸಂಪೂರ್ಣ ರಾಜಕೀಯ-ಆರ್ಥಿಕ ಆಶಯದೊಂದಿಗೆ ನಿಖರವಾಗಿ ಅರ್ಥಮಾಡಿಕೊಳ್ಳುವ ಅಗತ್ಯವಿದೆ. ಈ ಕಾರ್ಯಭಾರವು ನಮ್ಮ ಮುಂದಿದೆ.

  • ನೈಸರ್ಗಿಕ ಸಂಪನ್ಮೂಲಗಳ ಸರಕೀಕರಣ ನಿಲ್ಲಲಿ; ಭೂಮಿ ಎಲ್ಲರಿಗೂ ಮುಕ್ತವಾಗಿರಲಿ.
  • ಖಾಸಗಿ ಬಂಟರಿಗೆ ಇಂಧನ ವಲಯದ ಸ್ವತ್ತುಗಳ ಹಸ್ತಾಂತರ ನಿಲ್ಲಲಿ; ರಾಷ್ಟ್ರೀಯ ನಗದೀಕರಣ (ಎನ್‌ಎಂಪಿ) ಯೋಜನೆ ಬೇಡವೇ ಬೇಡ.
  • ನವೀಕರಿಸಬಹುದಾದ ಇಂಧನ ವಲಯವನ್ನು ಅಭಿವೃದ್ಧಿಪಡಿಸಲು ಸಾರ್ವಜನಿಕ ಉದ್ದಿಮೆಗಳಿಗೆ ಬೆಂಬಲ ನೀಡಿ; ಸಲ್ಲುವ ಪರಿವರ್ತನೆಯ ಹೆಸರಿನಲ್ಲಿ ಖಾಸಗಿ ಕಾರ್ಪೊರೇಟ್‌ಗಳಿಗೆ ಬೊಕ್ಕಸದ ಬೆಂಬಲ ಸಲ್ಲದು.
  • ಪಳೆಯುಳಿಕೆ ಇಂಧನಗಳೇ ಇರಲಿ, ನವೀಕರಿಸಬಹುದಾದ ಇಂಧನಗಳೇ ಆಗಿರಲಿ, ಖಾಸಗಿ ಕಾರ್ಪೊರೇಟ್‌ಗಳ ಏಕಸ್ವಾಮ್ಯವನ್ನು ತಡೆಯಲು ಇಂಧನ ವಲಯದ ಸಾರ್ವಜನಿಕ ಉದ್ದಿಮೆಗಳನ್ನು ಬಲಗೊಳಿಸಿ.
  • ಪರಿಸರ-ಅಪರಾಧಿಗಳಿಗೆ ತೆರಿಗೆ ವಿಧಿಸಿ; ಎತ್ತಂಗಡಿಯಾದ ಕಾರ್ಮಿಕರಿಗೆ ಮತ್ತು ಸಮುದಾಯಗಳಿಗೆ ಜೀವನಾಧಾರ ಭತ್ಯೆಗಳನ್ನು ಒದಗಿಸಿ.
  • ಸಲ್ಲುವ ಪರಿವರ್ತನೆ’ಯ ಹೆಸರಿನಲ್ಲಿ ಸಂಗ್ರಹಿಸಿದ ನಿಧಿಯನ್ನು ಪೂರ್ಣವಾಗಿ ಉದ್ಯೋಗ ವಂಚಿತ ಕಾರ್ಮಿಕರಿಗಾಗಿ ವಿನಿಯೋಗಿಸಿ.
Donate Janashakthi Media

Leave a Reply

Your email address will not be published. Required fields are marked *