ಬೆಂಗಳೂರು: ಯಶವಂತಪುರದಲ್ಲಿ ಎಸಿಬಿ ಡಿವೈಎಸ್ಪಿ ಕೆ ರವಿಶಂಕರ್ ಅವರ ತಂಡ ಜುಲೈ 4ರ ಮಧ್ಯಾಹ್ನ ಹಿರಿಯ ಐಎಎಸ್ ಅಧಿಕಾರಿ, ಬೆಂಗಳೂರು ನಗರದ ಈ ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ಜೆ ಮಂಜುನಾಥ್ ಅವರನ್ನು ಲಂಚ ಆರೋಪದಲ್ಲಿ ಬಂಧಿಸಿತ್ತು.
ಬಂಧನಕ್ಕೆ ಒಳಗಾಗಿರುವ ಜೆ ಮಂಜುನಾಥ್ ಅಮಾನತುಗೊಂಡಿದ್ದು, ಅವರ ಜಾಮೀನು ಮನವಿಯನ್ನು ವಿಶೇಷ ನ್ಯಾಯಾಲಯವು ತಿರಸ್ಕರಿಸಲಾಗಿದೆ. ಜುಲೈ 6ರಂದು ಕಾಯ್ದಿರಿಸಿದ್ದ ತೀರ್ಪನ್ನು 23ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ಹಾಗೂ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿ ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಕೆ ಲಕ್ಷ್ಮಿನಾರಾಯಣ್ ಭಟ್ ಅವರು ಪ್ರಕಟಿಸಿದರು.
ಕೆಲ ದಿನಗಳ ಹಿಂದಷ್ಟೇ ಮಂಜುನಾಥ್ ಅವರನ್ನು ಬೆಂಗಳೂರು ಜಿಲ್ಲಾಧಿಕಾರಿ ಹುದ್ದೆಯಿಂದ ಐಸಿಡಿಎಸ್ ನಿರ್ದೇಶಕರ ಹುದ್ದೆಗೆ ರಾಜ್ಯ ಸರ್ಕಾರ ವರ್ಗಾವಣೆ ಮಾಡಿತ್ತು.
ಅರ್ಜಿದಾರರ ಪರ ವಕೀಲರಾದ ಪ್ರತೀಕ್ ಚಂದ್ರಮೌಳಿ ಮತ್ತು ಕೀರ್ತನಾ ನಾಗರಾಜ್ ಪ್ರತಿನಿಧಿಸಿದ್ದು, ಪಿ ನಾರಾಯಣ ಸ್ವಾಮಿ ಅವರನ್ನು ಹಿರಿಯ ವಕೀಲ ಎಚ್ ಎಸ್ ಚಂದ್ರಮೌಳಿ ಪ್ರತಿನಿಧಿಸಿದ್ದರು.
ಪ್ರಕರಣದ ಹಿನ್ನೆಲೆ:
ಆನೇಕಲ್ ತಾಲ್ಲೂಕಿನ ಕೂಡ್ಲು ಗ್ರಾಮದ 38 ಗುಂಟೆ ಜಮೀನು ಒಡೆತನದ ವಿವಾದಕ್ಕೆ ಸಂಬಂಧಿಸಿದಂತೆ, ಅಜಂ ಪಾಷಾ ಎಂಬವರಿಂದ ₹5 ಲಕ್ಷ ರೂಪಾಯಿ ಪಡೆಯುತ್ತಿದ್ದಾಗ ಬೆಂಗಳೂರು ಜಿಲ್ಲಾಧಿಕಾರಿ ಮಂಜುನಾಥ್ ಅವರ ಸಹಾಯಕರಾಗಿದ್ದ ಉಪ ತಹಶೀಲ್ದಾರ್ ಮಹೇಶ್ ಮತ್ತು ಮೇಲ್ಮನವಿ ವಿಭಾಗದ ಸಹಾಯಕ ಚೇತನ್ ಕುಮಾರ್ ಅಲಿಯಾಸ್ ಚಂದ್ರ ಅವರನ್ನು ಮೇ 21ರಂದು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಂಧಿಸಿತ್ತು.
ಲಂಚ ಪ್ರಕರಣದಲ್ಲಿ ಮಂಜುನಾಥ್ ಅವರನ್ನು ಮೂರನೇ ಆರೋಪಿಯನ್ನಾಗಿ ಮಾಡುವಂತೆ ಕೋರಿ ಬೆಂಗಳೂರು ಎಸಿಬಿ ಪೊಲೀಸರು ಭ್ರಷ್ಟಾಚಾರ ಪ್ರಕರಣ ವಿಶೇಷ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಮಂಜುನಾಥ್ ಅವರು ಮೂರನೇ ಆರೋಪಿಯಾಗಿದ್ದಾರೆ.
ಭೂವಿವಾದಕ್ಕೆ ಸಂಬಂಧಿಸಿದಂತೆ ಬೆಂಗಳೂರು ಜಿಲ್ಲಾಧಿಕಾರಿಯಾಗಿದ್ದ ಮಂಜುನಾಥ್ ವಿಚಾರಣೆ ನಡೆಸಿ 2022ರ ಮಾರ್ಚ್ 30ರಂದು ತೀರ್ಪು ಕಾಯ್ದಿರಿಸಿದ್ದರು. ತಮ್ಮ ಪರವಾಗಿ ಆದೇಶ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ಹಾಗೂ ಒಂದೂವರೆ ತಿಂಗಳಿಂದ ಕಾಯ್ದಿರಿಸಿದ್ದ ತೀರ್ಪ ಪ್ರಕಟಿಸಲಾಗಿತ್ತು.
ಜಿಲ್ಲಾಧಿಕಾರಿ ಮಂಜುನಾಥ್ ಅವರನ್ನು ಭೇಟಿ ಮಾಡಿದ್ದ ಅರ್ಜಿದಾರ ಆಜಂಪಾಷಾ ಅವರಿಗೆ ಅಧೀನ ಸಿಬ್ಬಂದಿ ಮಹೇಶ್ ಅವರನ್ನು ಕಾಣಲು ಸೂಚಿಸಿದ್ದರು. ಮಹೇಶ್ ಅವರನ್ನು ಭೇಟಿ ಮಾಡಿದಾಗ “ನಿನ್ನ ಪರ ಅನುಕೂಲಕರ ತೀರ್ಪು ನೀಡಲು 5 ಲಕ್ಷ ರೂ. ಲಂಚ ನೀಡುವಂತೆ ಜಿಲ್ಲಾಧಿಕಾರಿಗಳ ಕಾರ್ಯಾಲಯದ ವ್ಯವಸ್ಥಾಪಕ ಮಹೇಶ್ ಹಾಗೂ ನ್ಯಾಯಾಲಯ ವಿಭಾಗದ ಚೇತನ್ ಕುಮಾರ್ ಬೇಡಿಕೆ ಇಟ್ಟಿದ್ದರು.
ಮಹೇಶ್ ಎಂಬವರು ಮೊದಲು ₹15 ಲಕ್ಷ, ಆನಂತರ ₹8 ಲಕ್ಷ ಅಂತಿಮವಾಗಿ ₹5 ಲಕ್ಷ ಲಂಚ ಪಾವತಿಸಲು ಅಜಂ ಪಾಷಾ ಅವರಿಗೆ ಸೂಚಿಸಿದ್ದರು. ಇದನ್ನು ಆಧರಿಸಿ ಅಜಂ ಪಾಷಾ ಎಸಿಬಿಗೆ ದೂರು ನೀಡಿದ್ದರು. ಇದಾದ ಬಳಿಕ ಮಹೇಶ್ ಅವರನ್ನು ಅಜಂ ಪಾಷಾ ಭೇಟಿ ಮಾಡಿದ್ದು, ಮಹೇಶ್ ಅವರು ಪ್ರಕರಣದ ಎರಡನೇ ಆರೋಪಿ ಚೇತನ್ಗೆ ಲಂಚದ ಹಣ ನೀಡುವಂತೆ ಸೂಚಿಸಿದ್ದರು. ಈ ವೇಳೆ ಎಸಿಬಿ ದಾಳಿ ನಡೆಸಿತ್ತು.