ಪಣಜಿ: ಗೋವಾದಲ್ಲಿ ಸದ್ಯದ ರಾಜಕೀಯ ಬೆಳವಣಿಗೆ ಪ್ರಕಾರ ಕಾಂಗ್ರೆಸ್ ಪಕ್ಷದ ಬಹುತೇಕ ಶಾಸಕರು ಬಿಜೆಪಿಗೆ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ. ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಎದುರಾದ ಬೆನ್ನಲ್ಲೇ ನೆರೆ ರಾಜ್ಯ ಗೋವಾದಲ್ಲಿಯೂ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡಿದೆ.
ಬಿಜೆಪಿ ಸೇರಲು ಮುಂದಾಗುತ್ತಿರುವ ಕಾಂಗ್ರೆಸ್ ಪಕ್ಷದ 11 ಶಾಸಕರ ಪೈಕಿ ಇಬ್ಬರು ಶಾಸಕರಾದ ದ ದಿಗಂಬರ್ ಕಾಮತ್ ಮತ್ತು ಮೈಕೆಲ್ ಲೋಬೋ ಅವರನ್ನು ಪಕ್ಷಾಂತರ ವಿರೋಧಿ ಕಾನೂನಿನ ಅಡಿಯಲ್ಲಿ ಅನರ್ಹಗೊಳಿಸಬೇಕು ಎಂದು ವಿಧಾನಸಭೆ ಸಭಾದ್ಯಕ್ಷರಿಗೆ ಮನವಿ ಸಲ್ಲಿಸಿದೆ.
ಕಾಂಗ್ರೆಸ್ ಪಕ್ಷದ ಗೋವಾ ರಾಜ್ಯ ಉಸ್ತುವಾರಿ ದಿನೇಶ್ ಗುಂಡೂರಾವ್ ಮೈಕೆಲ್ ಲೋಬೋ ಮತ್ತು ದಿಗಂಬರ್ ಕಾಮತ್ ಆಡಳಿತಾರೂಢ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಮಾಜಿ ಮುಖ್ಯಮಂತ್ರಿ ದಿಗಂಬರ್ ಕಾಮತ್ ಅವರ ಹೇಳಿಕೆ ಆಘಾತ ಮತ್ತು ದಿಗ್ಭ್ರಮೆ ಮೂಡಿಸಿದೆ ಎಂದಿದ್ದಾರೆ.
ಕಾಂಗ್ರೆಸ್ ಈ ಹಿಂದೆ ಮೈಕೆಲ್ ಲೋಬೋ ಅವರನ್ನು ವಿರೋಧ ಪಕ್ಷದ ನಾಯಕ ಸ್ಥಾನದಿಂದ ತೆಗೆದುಹಾಕಿತ್ತು. ಆಡಳಿತಾರೂಢ ಬಿಜೆಪಿಯು ಭಾರೀ ಮೊತ್ತದ ಹಣ ನೀಡುವ ಮೂಲಕ ಕಾಂಗ್ರೆಸ್ ನಾಯಕರನ್ನು ಸೆಳೆಯಲು ಬಿಜೆಪಿ ʻಅಪರೇಷನ್ ಕಮಲʼಕ್ಕೆ ಕೈ ಹಾಕಿದೆ.
ಈ ಇಬ್ಬರು ನಾಯಕರು ಪಕ್ಷಾಂತರ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಉಸ್ತುವಾರಿ ದಿನೇಶ್ ಗುಂಡೂರಾವ್ ರಾವ್ ಹೇಳಿಕೆ ನೀಡಿದ್ದಾರೆ.
ದಿಗಂಬರ್ ಕಾಮತ್ ವಿರುದ್ಧ ಅನೇಕ ಪ್ರಕರಣಗಳಿದ್ದು ಇವುಗಳಿಂದ ರಕ್ಷಣೆ ಪಡೆಯಲು ಪಕ್ಷಾಂತರಕ್ಕೆ ಮುಂದಾಗಿದ್ದಾರೆ. ಮೈಕೆಲ್ ಲೋಬೋ ಅಧಿಕಾರ ಮತ್ತು ಸ್ಥಾನದ ಆಸೆಗಾಗಿ ಬಿಜೆಪಿ ಸೇರಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ಆಡಳಿತಾರೂಢ ಬಿಜೆಪಿ ಸರ್ಕಾರವನ್ನು ಟೀಕಿಸಿರುವ ಗೋವಾ ಕಾಂಗ್ರೆಸ್ ಅಧ್ಯಕ್ಷ ಅಮಿತ್ ಪಾಟ್ಕರ್, “ಬಿಜೆಪಿ ವದಂತಿಗಳನ್ನು ಸೃಷ್ಟಿಸುವ ಮೂಲಕ ಜನರಲ್ಲಿ ಗೊಂದಲಗಳನ್ನು ಸೃಷ್ಟಿಸುತ್ತಿದೆ. ಕಾಂಗ್ರೆಸ್ನ 11 ಶಾಸಕರಲ್ಲಿ ಎಂಟು ಮಂದಿ ಹೊಸಬರು. ನಮ್ಮ ಹಿರಿಯ ಶಾಸಕರು ಚರ್ಚೆ ನಡೆಸಿದ್ದಾರೆ. ಹೊಸ ಶಾಸಕರು, ಆಡಳಿತರೂಢ ಬಿಜೆಪಿ ಸರ್ಕಾರದ ವಿರುದ್ಧ ದನಿಯೆತ್ತಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಾವಿನ್ನೂ ಪಕ್ಷದಲ್ಲಿದ್ದೇವೆ ಎಂದ ಲೋಬೋ
ನಾವಿನ್ನೂ ಕಾಂಗ್ರೆಸ್ ಪಕ್ಷದಲ್ಲೇ ಇದ್ದೇವೆ ಎಂದು ವಿರೋಧ ಪಕ್ಷದ ನಾಯಕ ಸ್ಥಾನದಿಂದ ತೆಗೆದುಹಾಕಿದ ನಂತರ ಕಾಂಗ್ರೆಸ್ ಶಾಸಕ ಮೈಕೆಲ್ ಲೋಬೋ ಇಂದು ಹೇಳಿಕೆ ನೀಡಿದ್ದಾರೆ. ನನ್ನ ಪತ್ನಿಯ ಕ್ಷೇತ್ರದಲ್ಲಿ ಸುಮಾರು 6000 ಮನೆಗಳಿಗೆ ಹಾನಿಯಾಗಿದೆ ಮತ್ತು ಮರಗಳು ನೆಲಕ್ಕುರುಳಿವೆ. ಹೀಗಾಗಿ ಸಿಎಂ ನಿವಾಸಕ್ಕೆ ತೆರಳಿದ್ದರು. ಆಕೆಯನ್ನು ಬೆಳಗ್ಗೆ ಕರೆಯಲಾಗಿತ್ತು, ಸಿಎಂ ಲಭ್ಯವಿರಲಿಲ್ಲ, ಸಂಜೆ ಆಕೆಗೆ ಕರೆ ಮಾಡಿದರು, ಆದ್ದರಿಂದ ಅವರು ಹೋಗಿದ್ದರು ಎಂದು ಸ್ಪಷ್ಟನೆ ನೀಡಿದ್ದಾರೆ.
ಬಿಜೆಪಿ ಸೇರಲು 40 ಕೋಟಿ ರೂಪಾಯಿ
ಗೋವಾದ ಕಾಂಗ್ರೆಸ್ ಮಾಜಿ ಮುಖ್ಯಸ್ಥ ಗಿರೀಶ್ ಚೋಡಂಕರ್ ಬಿಜೆಪಿ ವಿರುದ್ಧ ಸ್ಫೋಟಕ ಹೇಳಿಕೆ ನೀಡಿದ್ದು, ಬಿಜೆಪಿ ಪಕ್ಷಕ್ಕೆ ಸೇರಲು ಕಾಂಗ್ರೆಸ್ ಶಾಸಕರಿಗೆ 40 ಕೋಟಿ ರೂಪಾಯಿ ನೀಡಲು ಮುಂದಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಚೋಡಂಕರ್ ಮಾತನಾಡಿ, ಕೈಗಾರಿಕೋದ್ಯಮಿಗಳು, ಕಲ್ಲಿದ್ದಲು ಮಾಫಿಯಾಗಳಿಂದ ಕಾಂಗ್ರೆಸ್ ಶಾಸಕರಿಗೆ ಕರೆಗಳು ಬರುತ್ತಿವೆ. ಇವರನ್ನು ಸಂಪರ್ಕಿಸಿದ ಕೆಲವು ಶಾಸಕರು ಕಾಂಗ್ರೆಸ್ನ ಗೋವಾ ಉಸ್ತುವಾರಿ ದಿನೇಶ್ ಗುಂಡೂರಾವ್ ಅವರ ಬಳಿ ಮಾಹಿತಿ ಬಹಿರಂಗಪಡಿಸಿದ್ದಾರೆ ಎಂದು ಹೇಳಿದ್ದಾರೆ.