ಜಮ್ಮು-ಕಾಶ್ಮೀರದಲ್ಲಿ ಪೊಲೀಸ್‌ ನೇಮಕಾತಿ ಅಕ್ರಮ: ಸಿಬಿಐ ತನಿಖೆಗೆ ಆದೇಶ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಲೆಫ್ಟಿನೆಂಟ್‌ ಗವರ್ನರ್‌ ನೇತೃತ್ವದ ಸರ್ಕಾರ ನಡೆಸಿದ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌(ಪಿಎಸ್‌ಐ) ನೇಮಕಾತಿ ಪ್ರಕ್ರಿಯೆಯ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದ್ದು, ಈ ಸಂಬಂಧ ನೇಮಕಾತಿಗೆ ತಡೆ ನೀಡಿ, ಸಿಬಿಐ ತನಿಖೆಗೆ ಆದೇಶ ನೀಡಲಾಗಿದೆ.

ಲೆಫ್ಟಿನೆಂಟ್‌ ಗವರ್ನರ್‌ ಕಚೇರಿಯಿಂದ ಅಧಿಕೃತ ಮಾಹಿತಿ ತಿಳಿದುಬಂದಿದ್ದು, ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮ ಕುರಿತು ಸಿಬಿಐ ತನಿಖೆಗೆ ಆದೇಶಿಸಿರುವ ಬಗ್ಗೆ ಟ್ವಿಟ್ಟರ್‌ನಲ್ಲಿ ಪ್ರಕಟಿಸಲಾಗಿದೆ. ಹಗರಣದಲ್ಲಿ ಭಾಗಿಯಾದವರ ಮೇಲೆ ಶೀಘ್ರದಲ್ಲೇ ಕಾನೂನು ಕ್ರಮಜರುಗಿಸಲಾಗುವುದು. ಭವಿಷ್ಯದ ಹಿತದೃಷ್ಟಿಯಲ್ಲಿ ಇದೊಂದು ಪ್ರಮುಖ ಕ್ರಮವಾಗಿದೆ. ನೂತನ ನೇಮಕಾತಿ ಬಗ್ಗೆ ಸರ್ಕಾರವು ಶೀಘ್ರದಲ್ಲೇ ಕ್ರಮಕೈಗೊಳ್ಳಲಿದೆ ಎಂದು ಟ್ವೀಟ್‌ ಮಾಡಿದೆ.

ಈ ಹಿಂದೆ ಪೊಲೀಸ್‌ ಇಲಾಖೆಯೇ ನೇಮಕಾತಿ ಪ್ರಕ್ರಿಯೆಗಳನ್ನು ನಡೆಸುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರ ಸೇವಾ ನೇಮಕಾತಿ ಇಲಾಖೆ (ಜೆಕೆಎಸ್‌ಎಸ್‌ಬಿ) ವತಿಯಿಂದ ಲೆ. ಗವರ್ನರ್‌ ಮನೋಜ್‌ ಸಿನ್ಹಾ ನೇತೃತ್ವದ ರಾಜ್ಯ ಸರ್ಕಾರವು ಪರೀಕ್ಷೆ ನಡೆಸಲು ತೀರ್ಮಾನಿಸಿತು. ನೇಮಕಾತಿಯಲ್ಲಿ ಪಾರದರ್ಶಕತೆಗೆ ಒತ್ತುಕೊಟ್ಟು ಸರ್ಕಾರವೇ ಪರೀಕ್ಷೆಯನ್ನು ನಡೆಸುತ್ತಿರುವುದಾಗಿ ಹೇಳಿತ್ತು.

ಮಾರ್ಜ್‌ 27ರಂದು 1,200 ಪಿಎಸ್‌ಐ ಹುದ್ದೆಗಳಿಗೆ ನೇಮಕಾತಿ ಪರೀಕ್ಷೆ ನಡೆದಿತ್ತು. 1 ಲಕ್ಷಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದರು. ಸುಮಾರು 97 ಸಾವಿರ ಅರ್ಹ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಜೂನ್‌ 4ಕ್ಕೆ ಫಲಿತಾಂಶ ಪ್ರಕಟಗೊಂಡಿತ್ತು.

ಪರೀಕ್ಷೆ ಮುಗಿದ ಬಳಿಕ ಅಕ್ರಮ ನಡೆದಿರುವ ಬಗ್ಗೆ ಸಾಕಷ್ಟು ಮಂದಿ ಗಂಭೀರ ಆರೋಪ ಮಾಡಿರುವುದು ತಿಳಿದು ಬಂದಿದೆ. 24ಕ್ಕೂ ಹೆಚ್ಚಿನ ಪ್ರಕರಣಗಳಲ್ಲಿ ಒಡಹುಟ್ಟಿದವರೇ ಆಯ್ಕೆಗೊಂಡಿರುವುದು ಮತ್ತು  ಕೆಲವು ಪ್ರಕರಣಗಳಲ್ಲಿ ಒಡಹುಟ್ಟಿದ ಮೂವರು ಉತ್ತೀರ್ಣರಾಗಿರುವುದು ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಉದ್ಯೋಗ ಆಕಾಂಕ್ಷಿಗಳಲ್ಲಿ ಒಬ್ಬರಾದ ಲತೀಫ್ ಲೋನ್ ಈ ಬಗ್ಗೆ “ಇದು ಒಂದು ದೊಡ್ಡ ಬೆಳವಣಿಗೆ, ಏಕೆಂದರೆ ಹಿಂದಿನ ಜಮ್ಮು ಮತ್ತು ಕಾಶ್ಮೀರ ಆಡಳಿತದ ಅವಧಿಯಲ್ಲಿ ಇಂತಹ ಹಗರಣ ನಡೆದಿರಲಿಲ್ಲ. ಈ ನಿರ್ಧಾರವು ಎಸ್‌ಐ ಪರೀಕ್ಷೆಯಲ್ಲಿ ಕಾಣಿಸಿಕೊಂಡ ಅಭ್ಯರ್ಥಿಗಳಿಗೆ ಮಾತ್ರವಲ್ಲದೆ ನ್ಯಾಯಯುತ ನೇಮಕಾತಿ ಪ್ರಕ್ರಿಯೆಯ ಮೂಲಕ ಉದ್ಯೋಗಕ್ಕಾಗಿ ಆಕಾಂಕ್ಷಿಯಾಗಿರುವ ಇತರರಿಗೂ ನ್ಯಾಯ ಸಿಗಲಿದೆಯೇ ಎಂಬ ಪ್ರಶ್ನೆಯಾಗಿದೆ ಎಂದು ಹೇಳಿದರು.

ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಪಡಿಸಿದ ಬಳಿಕ ಇದೇ ಮೊದಲ ಬಾರಿಗೆ ನಡೆಸಿದ ಅತಿದೊಡ್ಡ ನೇಮಕಾತಿ ಪರೀಕ್ಷೆ ಇದಾಗಿದೆ.

Donate Janashakthi Media

Leave a Reply

Your email address will not be published. Required fields are marked *