ಬೆಂಗಳೂರು : ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನಡೆಯುತ್ತಿರುವ ಖರೀದಿಗಳ ಭ್ರಷ್ಟಾಚಾರ ನಿಲ್ಲಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್‌ನಿಂದ ರಾಜ್ಯವ್ಯಾಪಿ ಪ್ರತಿಭಟನೆ ನಡೆದಿದೆ.
ಇಂದು ರಾಜ್ಯದ ಹಲವು ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿರುವ ಕಾರ್ಮಿಕ ಅಧಿಕಾರಿಗಳ ಕಚೇರಿಗಳ ಎದುರು ಕಟ್ಟಡ ನಿರ್ಮಾಣ ಕಾರ್ಮಿಕರು ಪ್ರತಿಭಟನಾ ಪ್ರದರ್ಶನಗಳನ್ನು ನಡೆಸಿ ಮುಖ್ಯಮಂತ್ರಿ ಹಾಗೂ ಕಾರ್ಮಿಕ ಸಚಿವರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ಹಾಗೂ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ
ಮಂಡಳಿಯ ನೇರ ಹಣ ಸೌಲಭ್ಯಗಳ ಜಾರಿ ಮಾಡಬೇಕು, ಖರೀದಿಗಳಲ್ಲಿ ಆಗಿರುವ ಭ್ರಷ್ಟಾಚಾರ ನ್ಯಾಯಾಂಗ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು.ಬಾಕಿ ಇರುವ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಬೇಕು ಎಂದು ಪ್ರತಿಭಟನೆಕಾರರು ಒತ್ತಾಯಿಸಿದರು.
ರಾಜ್ಯದ ಉತ್ತರಕನ್ನಡ, ರಾಯಚೂರು, ಬಳ್ಳಾರಿ,ವಿಜಯನಗರ,ಉಡುಪಿ, ದ.ಕನ್ನಡ, ಕೊಡಗು, ಮಂಡ್ಯ, ಮೈಸೂರು, ಕೋಲಾರ, ತುಮಕೂರು, ಚಿತ್ರದುರ್ಗ ಸೇರಿದಂತೆ ಹಲವಾರು ಜಿಲ್ಲಾಹಾಗೂ ತಾಲೂಕು ಕೇಂದ್ರಗಳಲ್ಲಿ ಇರುವ ಕಾರ್ಮಿಕಾಧಿಕಾರಿ ಹಾಗೂ ಕಾರ್ಮಿಕ ನಿರೀಕ್ಷಕರು ಮತ್ತು ಜಿಲ್ಲಾಧಿಕಾರಿ ಕಚೇರಿಗಳ ಎದುರು ಸುರಿಯುವ ಮಳೆಯನ್ನೂ ಲೆಕ್ಕಿಸದೆ ಸಾವಿರಾರು ಕಟ್ಟಡ ನಿರ್ಮಾಣ ಕಾರ್ಮಿಕರು ಇಂದಿನ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕೆ. ಮಹಾಂತೇಶ್ ಜನಶಕ್ತಿ ಮೀಡಿಯಾ ಜೊತೆ ಮಾತನಾಡಿ, ರಾಜ್ಯ ಸರಕಾರಕ್ಕೆ ನಮ್ಮ ಬೇಡಿಕೆಗಳನ್ನು ಈಡೇರಿಸಲು ಒಂದು ವಾರಗಳ ಕಾಲ ಗಡುವು ನೀಡಲಾಗಿದೆ. ರಾಜ್ಯ ಸರಕಾರ ಸ್ಪಂದಿಸದೆ ಹೋದಲ್ಲಿ ಇದೇ ಬೇಡಿಕೆಗಳಿಗಾಗಿ ಆಗ್ರಹಿಸಿ ಬೆಂಗಳೂರಿನಲ್ಲಿ ಜುಲೈ 14 ರಂದು ಮಂಡಳಿ ಮುಂದೆ ಸಾವಿರಾರು ಕಾರ್ಮಿಕರು ಪ್ರತಿಭಟನೆ ನಡೆಸಲಿದ್ದಾರೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಲು ಮುಂದಾಗಿದೆ ಇವುಗಳು ಜಾರಿಗೊಂಡರೆ ಈಗ ಇರುವ ಕಲ್ಯಾಣ ಮಂಡಳಿ ಹಾಗೂ ನಿಧಿಯ ನಿಯಂತ್ರಣ ಕೇಂದ್ರ ಸರ್ಕಾರ ಕೈಯಲ್ಲಿ ಸೇರಲಿದೆ ಆಗ ರಾಜ್ಯದ ಕಲ್ಯಾಣ ಮಂಡಳಿಗಳು ಅಳಿವು ಉಳಿವಿನ ಪ್ರಶ್ನೆ ಎದುರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಆಗಸ್ಟ್‌ನಲ್ಲಿ ಈ ಸಂಹಿತೆಯಿಂದ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ಹಾಗೂ ಕಾರ್ಮಿಕರ ಸೌಲಭ್ಯಗಳ ಮೇಲೆ ಬೀರಬಹುದಾದ ಪರಿಣಾಮಗಳ ಬಗ್ಗೆ ವಿವಿಧ ಕಾನೂನು ತಜ್ಞರನ್ನು ಒಳಗೊಂಡು ದುಂಡು ಮೇಜಿನ ಸಭೆ ನಡೆಸಲು ನಿರ್ಧಾರಿಸಲಾಗಿದೆ ಮತ್ತು ಕಾರ್ಮಿಕರ ಬೇಡಿಕೆಗಳಿಗಾಗಿ ಮತ್ತು ಕಲ್ಯಾಣ ಮಂಡಳಿ ಹಾಗೂ ನಿಧಿಯ ಉಳಿವಿಗಾಗಿ ಇದೇ ಸೆಪ್ಟೆಂಬರ್ 20 ವಿಧಾನಸೌಧ ಚಲೋ ನಡೆಸಲು ನಿರ್ಧರಿಸಲಾಗಿದೆ ಎಂದು ಮಹಾಂತೇಶ್ ತಿಳಿಸಿದ್ದಾರೆ.