ಡಾ. ರಹಮತ್ ತರಿಕೆರೆ
ಎಂ.ಎಸ್.ಸತ್ಯು ಅವರಿಗೆ 93 ತುಂಬಿರುವ ಹಾಗೂ ಜತೆಗಿರುವನು ಚಂದಿರ ನಾಟಕ ನಡೆಯಗೊಡದಂತೆ ತಡೆದಿರುವ ಈ ಹೊತ್ತಲ್ಲಿ, ಹಳೆಯ ಟಿಪ್ಪಣಿಯನ್ನು ಹಂಚಿಕೊಳ್ಳಬೇಕು ಅನಿಸಿತು.
ಸತ್ಯು ಅವರ ಅನೇಕ ಚಿತ್ರಗಳನ್ನು ನೋಡಿರುವೆ. ಇವುಗಳಲೆಲ್ಲ `ಗರಂಹವಾ’ (1974) ನನ್ನನ್ನು ಅಲುಗಾಡಿಸಿದ ಚಿತ್ರ. ಪ್ರಸಿದ್ಧ ಉರ್ದು ಲೇಖಕಿ ಇಸ್ಮತ್ ಚುಗ್ತಾಯಿಯವರ ಕಥೆಯನ್ನಾಧರಿಸಿ ರಚನೆಯಾದ ಇದರ ಚಿತ್ರಕಥೆ ಬರೆದವರು ಕೈಫಿ ಆಜ್ಮಿ ಮತ್ತು ಶಮಾ ಝೈದಿ-ಸತ್ಯು ಅವರ ಜೀವನಸಂಗಾತಿ. ಸಂಗೀತ- ಕಲ್ಕತ್ತೆಯ ಗಾಯಕರಾದ ಉಸ್ತಾದ್ ಬಹಾದೂರ ಖಾನರದು. ಮುಖ್ಯ ಭೂಮಿಕೆಯಲ್ಲಿ ಬಲರಾಜ್ ಸಹಾನಿ ನಟಿಸಿದ್ದಾರೆ. ಕೈಫಿ ಆಜ್ಮಿಯವರ ಒಂದು ಗೀತೆಗೆ ಪ್ರಸಿದ್ಧ ಖವಾಲಿ ಗಾಯಕರಾದ ವಾರಸಿ ಸೋದರರು ಹಾಡಿದ್ದಾರೆ. ಹಲವಾರು ದೊಡ್ಡ ಪ್ರತಿಭೆಗಳು ಸೇರಿ ನಿರ್ಮಿಸಿದ ಕಲಾಕೃತಿಯಿದು.
ಇದರ ವಸ್ತು, ದೇಶವಿಭಜನೆಯ ಬಳಿಕ ಉತ್ತರ ಭಾರತದಲ್ಲಿರುವ ಮುಸ್ಲಿಂ ವ್ಯಾಪಾರಸ್ಥ ಕುಟುಂಬವೊಂದು ಪಡುವ ಪಾಡಿನಕಥೆ. ನಗರದಲ್ಲಿ ಗೌರವಾನ್ವಿತ ಸ್ಥಾನ ಹೊಂದಿದ್ದ ಈ ಕುಟುಂಬದಲ್ಲಿರುವ ಒಬ್ಬ. ಹಿರಿಯ ವ್ಯಕ್ತಿ, ಪಾಕಿಸ್ತಾನಕ್ಕೆ ವಲಸೆ ಹೋಗುವಲ್ಲಿಂದ ಕುಟುಂಬದ ಕಷ್ಟಗಳು ಶುರುವಾಗುತ್ತವೆ. ಕುಟುಂಬದಲ್ಲಿ ಉಳಿದವರಿಗೆ ‘ಇವರು ಯಾವಾಗ ದೇಶ ಬಿಟ್ಟುಹೋಗುತ್ತಾರೊ’ ಎಂದು ಬ್ಯಾಂಕುಗಳು ಸಾಲ ಕೊಡುವುದಿಲ್ಲ. ಆಗ ಕುಟುಂಬದ ವ್ಯವಹಾರದಲ್ಲಿ ನಷ್ಟವಾಗಿ ಪೂರ್ವಜರ ಹವೇಲಿಯನ್ನು ಮಾರಬೇಕಾಗುತ್ತದೆ. ಬಳಿಕ ಬಾಡಿಗೆಗೆ ಮನೆ ಸಿಗುವುದಿಲ್ಲ. ಕುಟುಂಬದ ಹುಡುಗರಿಗೆ ಯಾರೂ ಉದ್ಯೋಗ ಕೊಡುವುದಿಲ್ಲ. ದೇಶದ ರಹಸ್ಯಗಳನ್ನು ಪಾಕಿಸ್ತಾನಕ್ಕೆ ಕಳಿಸಿದ ಸುಳ್ಳು ಆಪಾದನೆಯನ್ನೂ ಹೊರಬೇಕಾಗುತ್ತದೆ. ದೇಶವಿಭಜನೆಯ ಬಳಿಕ ಭಾರತದಲ್ಲೇ ಉಳಿಯಲು ನಿರ್ಧರಿಸಿದ ಕುಟುಂಬವು, ಊರಲ್ಲಿದ್ದ ತನ್ನ ಹಳೆಯ ಆರ್ಥಿಕ- ಸಾಮಾಜಿಕ ಸಂಬಂಧಗಳೆಲ್ಲ ಭಗ್ನಗೊಂಡ ಬಳಿಕ, ಅಪನಂಬಿಕೆ-ಅವಿಶ್ವಾಸಗಳ ಕಠೋರ ಸನ್ನಿವೇಶದಲ್ಲಿ ಅನುಭವಿಸುವ ಮಾನವೀಯ ಸಂಕಟಗಳನ್ನು ಚಿತ್ರ ಪದರಪದರವಾಗಿ ಹಿಡಿದುಕೊಡುತ್ತ ಹೋಗುತ್ತದೆ. ಉಸಿರುಗಟ್ಟಿಸುವ ಈ ವಾತಾವರಣದಲ್ಲಿ ಬದುಕಲಾಗದೆ ಕುಟುಂಬದ ಒಬ್ಬೊಬ್ಬರೇ ದೇಶಬಿಟ್ಟು ವಲಸೆ ಹೋಗುತ್ತಾರೆ. ಆದರೆ ಕುಟುಂಬದ ಅಜ್ಜಿ, ಅಪ್ಪ ಮತ್ತು ಮಗ ಮಾತ್ರ ತಮ್ಮ ಊರಲ್ಲೇ ಉಳಿಯಲು ಛಲತೊಡುತ್ತಾರೆ.
ಅಪ್ಪ ಮಕ್ಕಳಿಗೆ ಈ ನಿರ್ಧಾರವು ಅವರ ಸಾರ್ವಜನಿಕ ಬದುಕಿನ ಅನುಭವ ಮತ್ತು ರಾಜಕೀಯ ಪ್ರಜ್ಞೆಯ ಫಲ. ಆದರೆ ಈ ಕುಟುಂಬದಲ್ಲಿರುವ ಒಬ್ಬ ಮುದುಕಿ ಮತ್ತು ತರುಣಿ ಕೂಡ ವಲಸೆ ಹೋಗಲು ತಮ್ಮದೇ ಕಾರಣಕ್ಕೆ ನಿರಾಕರಿಸುವವರು. ಮುದುಕಿಗೆ ತಾನು ಮದುವೆಯಾಗಿ ಬಂದಾಗ ಮನೆದುಂಬಿಸಿಕೊಂಡ ಮನೆಯನ್ನು ಬಿಟ್ಟು ತನ್ನದೇಶ-ಪರದೇಶ ಎಂಬ ಕಲ್ಪನೆಯೇ ಗೊತ್ತಿಲ್ಲ. ಖಯಾಮತ್ ದಿನ ತೀರಿಹೋಗಿರುವ ತನ್ನ ಗಂಡ `ನಮ್ಮ ಮನೆಯನ್ನು ಬಿಟ್ಟು ಬೇರೆಮನೆಯಲ್ಲಿ ಸತ್ತೆಯಾ?’ ಎಂದರೆ ನಾನೇನೆಂದು ಉತ್ತರಿಸಲಿ ಎನ್ನುವುದು ಅವಳ ನೈತಿಕ-ಧಾರ್ಮಿಕ ಪ್ರಶ್ನೆ. ಕಡೆಗೂ ಅವಳು ತಾನು ಲಗ್ನವಾದ ಹವೇಲಿಯಲ್ಲಿಯೇ ಸಮಾಧಾನದಿಂದ ಜೀವ ಬಿಡುತ್ತಾಳೆ.
ಇನ್ನು ತರುಣಿ, ತನ್ನನ್ನು ಪ್ರೇಮಿಸಿದ ತರುಣರು ಭಾರತದಲ್ಲಿ ತಮಗೆ ನೌಕರಿ ಸಿಗುತ್ತಿಲ್ಲವೆಂದು ಹೇಳಿ ಪಾಕಿಸ್ತಾನಕ್ಕೆ ವಲಸೆ ಹೋದವರು, ಮರಳಿ ಬರುವುದನ್ನೇ ಕಾಯುತ್ತಾಳೆ. ಆದರೆ ಅವರು ಅಲ್ಲೇ ಮದುವೆಯಾಗಿ ನೆಲೆಸಲು ನಿಶ್ಚಯಿಸಿದ್ದಾರೆಂದು ತಿಳಿದು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ-ತಾಯಿ ತನಗಾಗಿ ಹೆಣೆದ ಮದುಮಗಳ ತಲೆವಸ್ತ್ರವನ್ನು ಧರಿಸಿಕೊಂಡು. ದೇಶವಿಭಜನೆಯಂತಹ ಮಹಾ ರಾಜಕೀಯ ಘಟನೆಗಳಿಗೆ ಯಾವ ಬಗೆಯಲ್ಲೂ ಕಾರಣರಾಗಿರದ ಸಾಮಾನ್ಯಜನ, ಆ ಘಟನೆಗಳ ಫಲವನ್ನು ಮಾತ್ರ ಉಣ್ಣುವ ಈ ವೈರುಧ್ಯಕರ ಸತ್ಯವನ್ನು, ಚಿತ್ರವು ಪಾತ್ರಗಳ ವೈಯಕ್ತಿಕ ದುರಂತಗಳ ಮೂಲಕ ಧ್ವನಿಸುತ್ತದೆ.
ಈ ರಾಜಕೀಯ ಚಿತ್ರದ ವಿಶಿಷ್ಟತೆಯೆಂದರೆ, ತನ್ನೆಲ್ಲ ಕಷ್ಟಗಳಲ್ಲೂ ಕುಟುಂಬದೊಳಗಿನ ಪ್ರೇಮ ವಾತ್ಸಲ್ಯ ಜಗಳದಂತಹ ಮಾನವ `ಸಂಬಂಧದ ಮುಖಗಳನ್ನು ಹಿಡಿದುಕೊಡುವುದು. ಮುನಿಸಿಕೊಂಡ ಅಪ್ಪನಿಗೆ ಮಗಳು ಕದ್ದು ತಂದು ರೊಟ್ಟಿ ತಿನಿಸುವ ದೃಶ್ಯ ಅಥವಾ ತಾನು ಹುಟ್ಟಿಬೆಳೆದ ಮನೆಯನ್ನು ಬಿಟ್ಟುಬರಲು ನಿರಾಕರಿಸಿ ಸೌದೆಗೂಡಿನಲ್ಲಿ ಅಡಗಿಕೊಳ್ಳುವ ಮುದುಕಿಯನ್ನು ಬಲಾತ್ಕಾರವಾಗಿ ಎತ್ತಿಕೊಂಡು ಹೋಗುವ ದೃಶ್ಯ, ಎದೆ ಕಲಕುತ್ತವೆ. ಇಂತಹುದೇ ಕಷ್ಟ-ಸುಖಗಳನ್ನು ಪಾಕಿಸ್ತಾನದಲ್ಲಿ ಉಳಿದ ಮುಸ್ಲಿಮೇತರ ಕುಟುಂಬಗಳೂ ಅನುಭವಿಸುತ್ತಿರಬಹುದು; ಮೋಸಗಾರರು ಆಯಾ ಸಮುದಾಯದಲ್ಲೇ ಇದ್ದು, ರಾಜಕಾರಣ ಧರ್ಮಗಳು ಕಲಕಿದ ಬದುಕಿನಲ್ಲಿ ಲಾಭಮಾಡಿಕೊಳ್ಳುತ್ತವೆ; ರಾಜಕೀಯ ಸಂದರ್ಭದ ಒತ್ತಡದಿಂದ ಕೆಲವರು ಎಷ್ಟೇ ಶಂಕೆ- ಸಮುದಾಯ ದ್ವೇಷ ಮಾಡಲಿ, ಜನರ ನೋವಿಗೆ ಧರ್ಮಾತೀತವಾಗಿ ಮಿಡಿವ ಜೀವಗಳು ಸಮಾಜದಲ್ಲಿ ಇರುತ್ತವೆ (`ಸಂಬಂಜ ಎಂಬುದು ದೊಡ್ಡದು ಕನಾ’) ಎಂಬ ಸತ್ಯಗಳನ್ನು ಚಿತ್ರ ಕಾಣಿಸುತ್ತದೆ.
ಪ್ರಖರವಾದ ರಾಜಕೀಯ ಚಿಂತನೆಯನ್ನೂ ಮಾನವೀಯ ಅಂತಃಕರಣ ಮಿಡಿವ ಸನ್ನಿವೇಶಗಳನ್ನೂ ಒಳಗೊಂಡಿರುವ ಈ ಚಿತ್ರವು ಒಂದು ಅಪೂರ್ವ ಕಲಾಕೃತಿಯೂ ಆಗಿದೆ. ಉತ್ತರ ಪ್ರದೇಶದ ಉಚ್ಚವರ್ಗದ ಮುಸ್ಲಿಮರ ಬದುಕಿನ ಊಟ ಉಡುಪು ಭಾಷೆಯನ್ನು ಒಳಗೊಂಡ ರಿವಾಜುಗಳನ್ನು ಇದು ಅರ್ಥಪೂರ್ಣವಾಗಿ ಹಿಡಿದಿಡುತ್ತದೆ. ಕಥೆ ಜರುಗುವ ಸ್ಥಳೀಯ ವಾಸ್ತುಶಿಲ್ಪದಲ್ಲಿರುವ ಹಲವು ಖೋಲಿಗಳ ಹವೇಲಿ, ಜನರನ್ನು ಕರೆದೊಯ್ಯುವ ರೈಲು, ಅದರ ಸಿಳ್ಳು, ಪ್ರೇಮಿಗಳ ಪ್ರೇಮಾಂಕುರಕ್ಕೆ ಕಾರಣವಾಗುವ ತಾಜ್ ಮಹಲ್, ಪ್ರೇಮತತ್ವ ಸಾರಿದ ಸಲೀಂ ಚಿಸ್ತಿಯವರ ದರ್ಗಾ, ಗಾಳಿಪಟ ಹಾರಿಸುವ ಸ್ಪರ್ಧೆ-ಎಲ್ಲವೂ ವಿಷಾದಕರ ಪ್ರತಿಮೆಗಳಾಗುತ್ತವೆ.
ಸತ್ಯಜಿತ್ರೇ ಅವರ ಉಳಿದ ಚಿತ್ರಗಳಲ್ಲಿ ಸಂಕೇತಗಳು ಬಹಳ ಎಚ್ಚರದಲ್ಲಿ ಅಳವಟ್ಟಿದ್ದರೆ, ಇಲ್ಲಿ ಚಿತ್ರದ ಕಥನದ ಹಾಸಿನಲ್ಲಿ ಸಹಜ ವಿವರಗಳಾಗಿ ಬಂದಿವೆ. ಚಿತ್ರದ ಪ್ರತಿಯೊಂದು ಫ್ರೇಮ್ ಕೂಡ ಅರ್ಥಪೂರ್ಣ ಕಾವ್ಯದ ಒಂದೊಂದು ಸಾಲಿನಂತಿದೆ. ನೆಳಲು ಬೆಳಕಿನ ಸಂಯೋಜನೆಯು ದೇಶವಿಭಜನೆಯ ಒಳಿತುಕೇಡುಗಳ ಸಂಕೇತದಂತೆ ಚಿತ್ರದಲ್ಲಿ ಆವರಿಸಿಕೊಂಡಿದೆ. ಧ್ವನಿಪೂರ್ಣವೂ ಸಂಕ್ಷಿಪ್ತವೂ ಆದ ಆದ ಸಂಭಾಷಣೆಗಳಿರುವ ಚಿತ್ರದಲ್ಲಿ ವಾಚಾಳಿತನವಿಲ್ಲ. ಮುಖಭಾವದಲ್ಲೇ ತಮ್ಮ ಒಳಗನ್ನು ಪ್ರಕಟಿಸುವ ಪ್ರಬುದ್ಧ ನಟನೆಯಿಂದ ಕೂಡಿದೆ. ಬಲರಾಜರ ಅಭಿನಯವಂತೂ ಮನೋಜ್ಞ. ದುರಂತವೆಂದರೆ, ಈ ಚಿತ್ರ ಬಿಡುಗಡೆಯಾಗುವ ಹೊತ್ತಿಗೆ ಬಲರಾಜ್ ತೀರಿಕೊಂಡಿದ್ದರು.
ಕನ್ನಡದ ಮನಸ್ಸೊಂದು ಇದನ್ನು ನಿರ್ಮಿಸಿತು ಎನ್ನುವುದು ಅಭಿಮಾನ ಬರುವಂತೆ ಚಿತ್ರವಿದೆ. ಪಂಡಿತ ತಾರಾನಾಥ್, ಕಮಲಾದೇವಿ ಚಟ್ಟೋಪಾಧ್ಯಾಯ, ಎಂ.ಎಸ್. ಸತ್ಯು, ಬಿ.ವಿ. ಕಾರಂತ, ರಾಜೀವ ತಾರಾನಾಥ, ಗಿರೀಶ ಕಾರ್ನಾಡ, ಅಮೀರಬಾಯಿ ಕರ್ನಾಟಕಿ ಮುಂತಾದ ಕನ್ನಡಿಗರು, ಭಾರತದಾದ್ಯಂತ ಹರಡಿರುವ ಸಂಗೀತ ಸಾಹಿತ್ಯ ರಂಗಭೂಮಿ ಪರಂಪರೆಗಳ ಜತೆ ಗಾಢನಂಟು ಇರಿಸಿಕೊಂಡಿದ್ದ ಕೂಡುಪರಂಪರೆಗೆ ಸೇರಿದ ಮಹಾನ್ ಕೊಂಡಿಗಳು. ಭಾರತದ ಘನತೆಯನ್ನು ಹೆಚ್ಚಿಸಿದ ಇಂತಹ ಕಲಾ ಪರಂಪರೆಯ ಅರಿವಿಲ್ಲದ, ಇದಕ್ಕೆ ಉತ್ತರಾಧಿಕಾರಿಗಳಾಗಲು ಸಾಧ್ಯವಿಲ್ಲದ ಮಂದಿ, ನಾಟಕ ನಿಲ್ಲಿಸುವಂತಹ ಬಿಸಿಗಾಳಿ ಬೀಸುವಿಕೆಗೆ ಮೂಕಪ್ರೇಕ್ಷಕರಾಗುವ ಕಾಲಕ್ಕೆ ನಾವು ಇಳಿದಿದ್ದೇವೆ.