ಹುಲಿಕಟ್ಟಿ ಚನ್ನಬಸಪ್ಪ
ಸಂಪುಟ – 06, ಸಂಚಿಕೆ 19, ಮೇ 06, 2012
ಭೂಮಿ ತಿರುಗುತ್ತಿದೆ
ತಿರುಗುತ್ತಲೇ ಇದೆ.
ನಿತ್ಯವೂ ಉದಯಿಸುತ್ತಿದ್ದಾನೆ ಸೂರ್ಯ.
ಭುವಿಗೆ ಚೆಲ್ಲಿದ ಬೆಳಕಿಗೆ
ಯಾರೋ……..ಮೂರ್ಖರು
ಕತ್ತಲೆಯ ಪರದೆಯ ಹಿಡಿದು
ಅಡ್ಡ ನಿಂತಿದ್ದಾರೆ.
ಯಾವುದೋ ಕರಿನೆರಳು
ಯಾರೋ ಹೆಣೆದ ಬಲೆಯಲ್ಲಿ
ನಲುಗುತ್ತಿರುವ ಜೀವಗಳು
ಎದೆಯ ಹುತ್ತದೊಳಗೆ
ಭುಸುಗುಡುವ ಹಾವುಗಳು
ಮಲ್ಲಿಗೆಯ ಮೊಗದಲ್ಲಿ
ನೆತ್ತರು ಕಲೆಗಳು
ವಸುಂಧರೆಯ ನಗೆಯನ್ನು
ಕದ್ದವರು ಯಾರು?
ಉದಯ ರವಿಯ
ಎದೆ ಬಿರಿಯುವಂತೆ
ಯಾರದೋ ಆಕ್ರಂದನ.
ಮರದ ಕೊಂಬೆಗಳಲ್ಲಿ
ನೇತಾಡುತ್ತಿರುವ
ಭೂಮಿ ತಾಯಿಯ
ಚೊಚ್ಚಲ ಮಗನ
ಹೆಣದ ಸಾಲುಗಳು.
ಹಸಿದೊಡಲ ಬೆಂಕಿಯಲ್ಲಿ
ಬೆಂದು ಹೋದ ಬದುಕು
ಕಣ್ಣ ಗುಡ್ಡೆಗಳಲ್ಲಿ
ಸುಟ್ಟು ಕರಕಲಾದ
ಕನಸುಗಳು.
ನಿಟ್ಟುಸಿರ ಬಿಟ್ಟ ಸೂರ್ಯ
ಪಡುವಣದತ್ತ ಓಡಿ
ಕಣ್ಮರೆಯಾದ.
ಇರುಳಲ್ಲಿ ತೇಲಿ ಬಂದ
ಚಂದ್ರನ ನಗೆಯನ್ನು
ಯಾರೋ ಕದ್ದಿದ್ದರು.
ನೋವನೊದ್ದು ಮಲಗಿದ್ದ ನೆಲ
ರಾತ್ರಿಯೆಲ್ಲಾ ನರಳುತ್ತಲೇ ಇತ್ತು
ಆದರೂ
ಭೂಮಿ ತಿರುಗುತ್ತಲೇ ಇದೆ.
ನಿಟ್ಟುಸಿರು ಬಿಡುತ್ತಿದ್ದಾನೆ ಸೂರ್ಯ
ಚಂದ್ರ ಬಿಕ್ಕುತ್ತಲೇ ಇದ್ದಾನೆ.
ಎಲ್ಲಿಂದಲೋ,
ಧ್ವನಿಯೊಂದು ಮೊಳಗುತ್ತಿದೆ
ಧಿಕ್ಕಾರ! ಧಿಕ್ಕಾರ!
0