“ಶ್ರೀಮಂತರ ಮೇಲೆ ನೇರವಾಗಿ ತೆರಿಗೆ ವಿಧಿಸಿ, ಬಡವರ ಮೇಲಿನ ಪರೋಕ್ಷ ತೆರಿಗೆಗಳನ್ನು ನಿಲ್ಲಿಸಿ”
2022 ರ ಜುಲೈ 27 ರಂದು ಗ್ರಾಮ/ತಾಲೂಕು ಕೇಂದ್ರಗಳಲ್ಲಿ ಹೈನು ಉತ್ಪನ್ನಗಳು ಮತ್ತು ಡೈರಿ ಯಂತ್ರೋಪಕರಣಗಳ ಮೇಲೆ ಮೇಲೆ ಜಿಎಸ್ಟಿ ಹೇರಿಕೆಯನ್ನು ವಿರೋಧಿಸಿ ದೇಶಾದ್ಯಂತ ಹೈನುಗಾರಿಕೆಯಲ್ಲಿ ತೊಡಗಿರುವ ರೈತರು ಬೃಹತ್ ಪ್ರತಿಭಟನಾ ಮತಪ್ರದರ್ಶನಗಳನ್ನು ನಡೆಸುವಂತೆ ಭಾರತ ಹೈನು ರೈತರ ಒಕ್ಕೂಟದ (ಡಿಎಫ್ಎಫ್ಐ) ಸಂಘಟನಾ ಸಮಿತಿ (ಓಸಿ) ಕರೆ ನೀಡಿದೆ.. ಕೇಂದ್ರ ಸರ್ಕಾರದ ರೈತ ವಿರೋಧಿ ಮುಖವನ್ನು ಬಯಲಿಗೆಳೆಯುವ ಕರಪತ್ರಗಳು ಮತ್ತು ನೋಟಿಸ್ಗಳನ್ನು ಹಂಚುವ ಮೂಲಕ ವ್ಯಾಪಕ ಪ್ರಚಾರವನ್ನು ಆಯೋಜಿಸಲಾಗುವುದು ಎಂದು ಸಂಘಟನಾ ಸಮಿತಿ ಹೇಳಿದೆ.
ಎಲ್ಲಾ ರೈತ ಸಂಘಟನೆಗಳು ಮತ್ತು ಸಂಯುಕ್ತ ಕಿಸಾನ್ ಮೋರ್ಚಾ ಸೇರಿದಂತೆ ಎಲ್ಲ ಜಂಟಿ ವೇದಿಕೆಗಳು ಪ್ರತಿಭಟನಾ ಪ್ರದರ್ಶನಗಳಲ್ಲಿ ಭಾಗವಹಿಸಲು ಮತ್ತು ಅಗತ್ಯವಿದ್ದಲ್ಲಿ ಸುದೀರ್ಘ ಹೋರಾಟಗಳ ಮೂಲಕ ಕೇಂದ್ರ ಸರ್ಕಾರವು ಈ ರೈತ ವಿರೋಧಿ ನಿರ್ಧಾರವನ್ನು ಹಿಂತೆಗೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಮುಂದೆ ಬರಬೇಕು ಎಂದು ಡಿಎಫ್ಎಫ್ಐ ಮನವಿ ಮಾಡಿದೆ. ಕೇಂದ್ರ ಹಣಕಾಸು ಮತ್ತು ಕೃಷಿ ಸಚಿವರಿಂದ ಭೇಟಿಗೆ ಸಮಯ ಪಡೆದು, ಈ ರೈತ-ವಿರೋಧಿ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ಮನವಿ ಪತ್ರವನ್ನು ಸಲ್ಲಿಸುವುದಾಗಿಯೂ ಡಿಎಫ್ಎಫ್ಐ ಹೇಳಿದೆ.
ಜೂನ್ 28 ಮತ್ತು 29 ರಂದು ನಡೆದ ಜಿಎಸ್ಟಿ ಮಂಡಳಿಯ 47 ನೇ ಸಭೆಯಲ್ಲಿ “ಮೊದಲೇ ಪ್ಯಾಕ್ ಮಾಡಿದ, ಮೊದಲೇ ಲೇಬಲ್ ಹಚ್ಚಿದ ಮೊಸರು, ಲಸ್ಸಿ ಮತ್ತು ಮಜ್ಜಿಗೆ” ಮುಂತಾದ ಡೈರಿ ಉತ್ಪನ್ನಗಳಿಗೆ 5% ಜಿಎಸ್ಟಿಯನ್ನು ವಿಧಿಸಲು ಮತ್ತು ಡೈರಿ ಯಂತ್ರೋಪಕರಣಗಳು ಮತ್ತು ಹಾಲುಕರೆಯುವ ಯಂತ್ರಗಳ ಮೇಲಿನ ಜಿಎಸ್ಟಿಯನ್ನು 12% ರಿಂದ 18% ಕ್ಕ ಏರಿಸಲು ಶಿಫಾರಸು ಮಾಡಿದೆ. ಈಗಾಗಲೇ ಅಖಿಲ ಭಾರತ ಕಿಸಾನ್ ಸಭಾ ಹೇಳಿರುವಂತೆ “ಭಾರತವು ವಿಶ್ವದ ಅತಿದೊಡ್ಡ ಹಾಲು ಉತ್ಪಾದಕ ದೇಶವಾಗಿದೆ. ಈ ಕ್ಷೇತ್ರದಲ್ಲಿ ತೊಡಗಿರುವವರು ಹೆಚ್ಚಿನವರು ಸಣ್ಣ ಉತ್ಪಾದಕರು. 75% ಗ್ರಾಮೀಣ ಕುಟುಂಬಗಳು 2-4 ಹಸುಗಳನ್ನು ಹೊಂದಿವೆ. ಅತ್ಯಂತ ಕೆಳಮಟ್ಟದ ಸಾಮಾಜಿಕ ಸ್ತರದ ಮಹಿಳೆಯರು ಮತ್ತು ರೈತರು ಹೈನುಗಾರಿಕೆ ವಲಯದ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ.
ಸಣ್ಣ ಮತ್ತು ಮಧ್ಯಮ ಡೈರಿ ರೈತರು ಇದಕ್ಕೆ ಬೆಲೆ ತೆರಬೇಕಾಗಿತ್ತದೆ, ಅವರು ಈ ಕ್ಷೇತ್ರವನ್ನೇ ಬಿಟ್ಟು ಹೋಗಬೇಕಾಗುತ್ತದೆ. ಇಂತಹ ಕ್ರಮಗಳಿಂದ ದೊಡ್ಡ ಉದ್ದಿಮೆಗಳು ಕ್ರೋಡೀಕರಣಗೊಂಡು, ಸಣ್ಣ ಉತ್ಪಾದಕರು ನಾಶ ಹೊಂದಿರುವ ಅನೇಕ ುಉದಾಹರಣೆಗಳು ನಮ್ಮ ಮುಂದಿವೆ. ಈಗಾಗಲೇ 2014 ರಿಂದ, ವೆಚ್ಚಗಳ ಏರಿಕೆ ಮತ್ತು ಫಲದಾಯಕ ಬೆಲೆಯ ಕೊರತೆಯಿಂದಾಗಿ 55 ಲಕ್ಷ ಸಣ್ಣ ಮತ್ತು ಮಧ್ಯಮ ರೈತರು ಈ ಕ್ಷೇತ್ರದಿಂದ ಹೊರಹೋಗಬೇಕಾಗಿ ಬಂದಿದೆ ಎಂದು ಡಿಎಫ್ಎಫ್ಐ ನ ಸಂಘಟನಾ ಸಮಿತಿ ಹೇಳಿದೆ.
ಮುಕ್ತ ಮಾರುಕಟ್ಟೆಯಲ್ಲಿ ಹಾಲಿನ ಬೆಲೆ ಗಗನಕ್ಕೇರುತ್ತದೆ ಮತ್ತು ಲಕ್ಷಾಂತರ ಗ್ರಾಹಕರು ಹಾಲು ಮತ್ತು ಇತರ ಡೈರಿ ಉತ್ಪನ್ನಗಳಿಗೆ ಹೆಚ್ಚಿನ ಬೆಲೆಗಳನ್ನು ತೆರಬೇಕಾಗಿ ಬರುತ್ತದೆ. ಇದು ಹಣದುಬ್ಬರ ಮತ್ತು ಬೆಲೆ ಏರಿಕೆಯಿಂದ ಆರ್ಥಿಕತೆಗೆ ಹಾನಿ ಮಾಡುವುದಲ್ಲದೆ, ಬೆಲೆ ಏರಿಕೆಗಳು ತುಳಿತಕ್ಕೊಳಗಾದ ವರ್ಗ, ಜಾತಿಗಳು ಮತ್ತು ಲಿಂಗದ ಜನರ ಪೌಷ್ಟಿಕಾಂಶದ ಅವಶ್ಯಕತೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಡೈರಿ ಯಂತ್ರೋಪಕರಣಗಳು ಮತ್ತು ಹಾಲುಕರೆಯುವ ಯಂತ್ರಗಳ ಮೇಲೆ ಜಿಎಸ್ಟಿ ಹೆಚ್ಚಿಸುವ ಶಿಫಾರಸು ಸಹಕಾರಿ ಸಂಸ್ಥೆಗಳು ಮತ್ತು ಉತ್ಪಾದನೆ ಮತ್ತು ಮೌಲ್ಯವರ್ಧನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಣ್ಣ ಡೈರಿ ಉದ್ಯಮಿಗಳ ಮೇಲೆ ಪರಿಣಾಮ ಬೀರುತ್ತದೆ. ಹಣಕಾಸಿನ ನೀತಿಗಳಿಂದಾಗಿ ಸಹಕಾರಿ ಸಂಸ್ಥೆಗಳು ಈಗಾಗಲೇ ಹಲವಾರು ಸವಾಲುಗಳನ್ನು ಎದುರಿಸುತ್ತಿವೆ. ಮಧ್ಯಮ ಮತ್ತು ಸಣ್ಣ ಡೈರಿ ಉದ್ದಿಮೆಗಳು ವ್ಯಾಪಾರದಿಂದ ನಿರ್ಗಮಿಸಬೇಕಾಗುತ್ತದೆ ಅಥವಾ ದೊಡ್ಡ ಉದ್ದಿಮೆಗಳಲ್ಲಿ ವಿಲೀನಗೊಳ್ಳಬೇಕಾಗಿಗುತ್ತದೆ. ಮೋದಿ ಸರ್ಕಾರದ ಇತ್ತೀಚಿನ ನೀತಿ ನಿರೂಪಣೆಗಳು ಸಹಕಾರಿ ಸಂಘಗಳು ಮತ್ತು ಬಡ ರೈತರ ಹಿತಗಳನ್ನು ಬಲಿಗೊಟ್ಟು ಹೈನುಗಾರಿಕೆಯಲ್ಲಿ ದೊಡ್ಡ ಬಂಡವಾಳವನ್ನು ಬೆಂಬಲಿಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ ಎಂದು ಸಂಘಟನಾ ಸಮಿತಿ ಹೇಳಿದೆ.
ಜಾನುವಾರು ವಲಯವು ಕೃಷಿ ಕ್ಷೇತ್ರದ ಉತ್ಪಾದನೆಯಲ್ಲಿ ನಾಲ್ಕನೇ ಒಂದು ಭಾಗದಷ್ಟು ಕೊಡುಗೆ ನೀಡುತ್ತಿರುವುದು ಈ ಕ್ಷೇತ್ರದ ಆರ್ಥಿಕ ಮಹತ್ವವನ್ನು ತೋರಿಸುತ್ತದೆ. ಇದು ಅವರ ಜೀವನೋಪಾಯಕ್ಕಾಗಿ ಡೈರಿ ವಲಯವನ್ನು ಅವಲಂಬಿಸಿರುವ 9 ಕೋಟಿ ಭಾರತೀಯ ಕುಟುಂಬಗಳು ಮತ್ತು ಪೌಷ್ಟಿಕಾಂಶಕ್ಕಾಗಿ ಹಾಲು ಮತ್ತು ಅದರ ಉಪ ಉತ್ಪನ್ನಗಳನ್ನು ಅವಲಂಬಿಸಿರುವ ಲಕ್ಷಾಂತರ ಬಡ ಗ್ರಾಹಕರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.
ನೇರ ತೆರಿಗೆಯ ಮೂಲಕ ಶ್ರೀಮಂತರ ಮೇಲೆ ತೆರಿಗೆ ವಿಧಿಸುವ ಬದಲು, ಮೋದಿ ಸರ್ಕಾರವು ರೈತರು, ಕಾರ್ಮಿಕರು ಮತ್ತು ದುಡಿಯುವ ಜನರ ಮೇಲೆ ಪರೋಕ್ಷ ತೆರಿಗೆಗಳನ್ನು ಹೇರುತ್ತಿದೆ ಮತ್ತು ದೊಡ್ಡ ಕಾರ್ಪೊರೇಟ್ ಗಳು ತಮ್ಮ ಆಸ್ತಿಯನ್ನು ಬಹುಪಾಲು ಹೆಚ್ಚಿಸಲು ಅನುವು ಮಾಡಿಕೊಡುತ್ತದೆ. ಕಡಿವಾಣವಿಲ್ಲದ ಬೆಲೆ ಏರಿಕೆ, ನಿರುದ್ಯೋಗ ಮತ್ತು ವ್ಯಾಪಕವಾದ ಬಡತನದ ಬಹುಪಾಲು ದುಡಿಯುವ ಜನರನ್ನು ಬಾಧಿಸಲು ಈ ಕಾರ್ಪೊರೇಟ್ ಪರವಾದ ನೀತಿಗಳು ಕಾರಣವಾಗಿದೆ. ರೈತರು ಮತ್ತು ಕಾರ್ಮಿಕರು ಮತ್ತು ಎಲ್ಲಾ ಶ್ರಮಜೀವಿಗಳ ಒಗ್ಗಟ್ಟನ್ನು ಕಟ್ಟುವ ಮೂಲಕ ಇದನ್ನು ವಿರೋಧಿಸಬೇಕಾಗಿದೆ ಎಂದಿರುವ ಡಿಎಫ್ಎಫ್ಐನ ಸಂಘಟನಾ ಸಮಿತಿ ಈ ಶಿಫಾರಸುಗಳನ್ನು ತಕ್ಷಣವೇ ಹಿಂಪಡೆಯಬೇಕೆಂದು ಆಗ್ರಹಿಸಿದೆ, ಮತ್ತು ಸಣ್ಣ ಉದ್ದಿಮೆದಾರರು ಮತ್ತು ಸಹಕಾರಿ ವಲಯವನ್ನು ಒಗ್ಗೂಡಿಸಿ ಪ್ರತಿಭಟನೆಯಲ್ಲಿ ಎದ್ದು ನಿಲ್ಲುವಂತೆ ದೇಶಾದ್ಯಂತ ಹೈನುಗಾರರಿಗೆ ಕರೆ ನೀಡಿದೆ.