- ಆಟೋ ಚಾಲಕ ಆಗಿದ್ದ ಶಿಂಧೆ ಈಗ ಮಹಾರಾಷ್ಟ್ರ ಮುಖ್ಯಮಂತ್ರಿ
- ಪದವಿ ಮುಗಿಸುವುದಕ್ಕೂ ಮುನ್ನ ಕಾಲೇಜು ತೊರೆದಿದ್ದ ಶಿಂಧೆ
ಮುಂಬೈ: ಮಹಾರಾಷ್ಟ್ರದಲ್ಲಿ ಕಳೆದ ಎರಡು ವಾರಗಳಿಂದ ಉಂಟಾಗಿದ್ದ ರಾಜಕೀಯ ಬಿಕ್ಕಟ್ಟು ಸದ್ಯಕ್ಕೆ ಅಂತ್ಯಗೊಂಡಿದೆ. ಉದ್ಧವ್ ಠಾಕ್ರೆ ನೇತೃತ್ವದ 31 ತಿಂಗಳ ಮಹಾ ಆಘಾದಿ ಸರ್ಕಾರ ಪತನವಾಗಿ ಶಿವಸೇನಾ ಬಂಡಾಯ ನಾಯಕ ಏಕನಾಥ್ ಶಿಂಧೆ ನೇತೃತ್ವದಲ್ಲಿನ ನೂತನ ಶಿವಸೇನಾ-ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ.
ರಾಜಭವನದಲ್ಲಿ ಇಂದು ಸಂಜೆ ನಡೆದ ಕಾರ್ಯಕ್ರಮದಲ್ಲಿ ಏಕನಾಥ್ ಶಿಂಧೆ ನೂತನ ಮುಖ್ಯಮಂತ್ರಿಯಾಗಿ, ಬಿಜೆಪಿಯ ದೇವೇಂದ್ರ ಫಡ್ನವೀಸ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಪ್ರಮಾಣ ವಚನ ಬೋಧಿಸಿದರು.
ಒಂದು ಕಾಲದಲ್ಲಿ ಆಟೋ ಡ್ರೈವರ್ ಆಗಿದ್ದ ಏಕನಾಥ್ ಶಿಂಧೆ, ಶಿವಸೇನಾ ಮುಖ್ಯಸ್ಥ ಹಾಗೂ ತನ್ನ ಗುರು ಉದ್ಧವ್ ಠಾಕ್ರೆಯನ್ನು ರಾಜಕಾರಣದಲ್ಲಿ ಹಿಂದಿಕ್ಕಿ ಇದೀಗ ಮಹಾರಾಷ್ಟ್ರದ ಸಿಎಂ ಆಗಿ ಹೊರಹೊಮ್ಮಿದ್ದಾರೆ. ನಾಲ್ಕು ಬಾರಿ ಶಾಸಕರು, ಎರಡು ಬಾರಿ ಸಚಿವರಾಗಿದ್ದ ಶಿಂಧೆ, ಜನ ಹಾಗೂ ಕಾರ್ಯಕ್ರಮ ಸಂಘಟಿಸುವ ಕೌಶಲ್ಯದೊಂದಿಗೆ ಹಂತ ಹಂತವಾಗಿ ರಾಜಕೀಯದಲ್ಲಿ ಉನ್ನತ ಹುದ್ದೆಗೇರುವಲ್ಲಿ ಯಶಸ್ವಿಯಾಗಿದ್ದಾರೆ.
ಬಾಲ್ಯ ಹಾಗೂ ಶಿಕ್ಷಣ: 1964ರ ಫೆ. 9ರಂದು ಸತಾರದ ಜಾವಳಿ ತಾಲೂಕಿನಲ್ಲಿ ಮರಾಠಾ ಸಮುದಾಯದಲ್ಲಿ ಏಕನಾಥ್ ಸಂಭಾಜಿ ಶಿಂದೆ ಜನಿಸಿದ್ದರು. ಪದವಿ ಮುಗಿಸುವುದಕ್ಕೂ ಮುನ್ನವೇ ಕಾಲೇಜು ತೊರೆದಿದ್ದ ಶಿಂಧೆ, ಮುಂಬಯಿ ಸಮೀಪದ ಥಾಣೆಯಲ್ಲಿ ಆಟೋ ಡ್ರೈವರ್ ಆಗಿ ಕೆಲಸ ಮಾಡಿದ್ದರು. ಮೂಲತಃ ಪಶ್ಚಿಮ ಮಹಾರಾಷ್ಟ್ರದ ಸತಾರದವರಾಗಿರುವ ಶಿಂಧೆ, 1966 ರಲ್ಲಿ ಬಾಳಾ ಸಾಹೇಬ್ ಠಾಕ್ರೆ ಅವರಿಂದ ಪ್ರಭಾವಿತರಾಗಿ ಶಿವಸೇನೆಗೆ ಸೇರಿದ್ದರು. ಬಾಳಾ ಠಾಕ್ರೆವರ ಮರಾಠಿ ಅಸ್ಮಿತೆ ಹಾಗೂ ಹಿಂದುತ್ವದ ಪ್ರಚಾರದಕ್ಕೆ ಮಾರು ಹೋಗಿದ್ದ ಶಿಂಧೆ, ಬಳಿಕ ಥಾಣೆಯಲ್ಲಿ ಶಿವಸೇನೆಯನ್ನು ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಬಾಳಾ ಸಾಹೇಬ್ ಠಾಕ್ರೆ ಅವರ ಗರಡಿಯಲ್ಲಿ ಪಳಗಿದ್ದ ಶಿಂಧೆ, ಅವರಂತೆ ಪ್ರಬಲ ಹಿಂದುತ್ವದ ಪ್ರತಿಪಾದರಕೂ ಹೌದು. ಮರಾಠಿ, ಹಿಂದುತ್ವದ ವಿಚಾರ ಬಂದಾಗ ಅಕ್ರಮಣಕಾರಿಯಾಗಿ ಬೀದಿಗೆ ಇಳಿದು ಪ್ರತಿಭಟಿಸುತ್ತಿದ್ದರು. ತಮ್ಮ ಅಕ್ರಮಣಕಾರಿ ವರ್ತನೆಗಳಿಂದಲೇ ಜನರ ಮನಸ್ಸಲ್ಲಿ ಸ್ಥಾನ ಪಡೆದ ಶಿಂಧೆ, ಬಾಳಾ ಠಾಕ್ರೆಯ ಅವರ ನೀಲಿಗಣ್ಣಿನ ಹುಡುಗನಾಗಿ ಗುರುತಿಸಿಕೊಂಡಿದ್ದರು.
ರಾಜಕೀಯ ಪ್ರಗತಿ: 1997 ರಲ್ಲಿ ಮೊದಲ ಬಾರಿ ಚುನಾವಣಾ ರಾಜಕೀಯಕ್ಕಿಳಿದ ಏಕನಾಥ್ ಶಿಂಧೆ ತಮ್ಮ ಮೊದಲ ಚುನಾವಣೆಯಲ್ಲಿಯೇ ಗೆದ್ದು ಭರ್ಜರಿ ಪಾದಾರ್ಪಣೆ ಮಾಡಿದ್ದರು. ಥಾಣೆ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿ ಮೊದಲ ಪ್ರಯತ್ನದಲ್ಲೇ ಕಾರ್ಪೊರೇಟರ್ ಆಗಿ ಆಯ್ಕೆಯಾದರು. 2004 ಕೊಪ್ರಿ- ಪಚ್ಪಾಖಾಡಿ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧೆ ಮಾಡಿ ವಿಧಾನಭೆಗೆ ಪ್ರವೇಶ ಮಾಡಿದ ಶಿಂಧೆ ಸತತ ನಾಲ್ಕನೇ ಬಾರಿ ಗೆದ್ದು, ಇದೀಗ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ನಿಯುಕ್ತಿಯಾಗಿದ್ದಾರೆ.