ಮುಂಬೈ: ಮಹಾರಾಷ್ಟ್ರದಲ್ಲಿ ಬಿಜೆಪಿ ಪಕ್ಷದ ತಂತ್ರಗಾರಿಕೆಯಿಂದ ಎದುರಾದ ರಾಜಕೀಯ ಬಿಕ್ಕಟ್ಟಿನಿಂದ ಉದ್ಧವ್ ಠಾಕ್ರೆ ಸರ್ಕಾರ ಪತನದ ಬೆನ್ನಲ್ಲೇ ಬಂಡಾಯ ಶಾಸಕರ ತಂಡದ ನಾಯಕ ಏಕನಾಥ್ ಶಿಂಧೆ ರಾಜ್ಯದ ನೂತನ ಮುಖ್ಯಮಂತ್ರಿ ಆಯ್ಕೆಯಾಗಿದ್ದಾರೆ.
ಇಂದು(ಜೂನ್ 30) ಸಂಜೆ 7.30 ಗಂಟೆಗೆ ನಡೆಯಲಿರುವ ಸರಳ ಸಮಾರಂಭದಲ್ಲಿ ರಾಜ್ಯದ ಮುಖ್ಯಮಂತ್ರಿ ಆಗಿ ಏಕನಾಥ್ ಶಿಂಧೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಬಿಜೆಪಿ ಪಕ್ಷದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಘೋಷಣೆ ಮಾಡಿದರು. ರಾಜ್ಯಪಾಲರಾದ ಭಗತ್ ಸಿಂಗ್ ಕೋಶ್ಯಾರಿ ಭೇಟಿ ಮಾಡಿದ ಬೆನ್ನಲ್ಲೇ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು. ಏಕನಾಥ ಶಿಂಧೆ ಹಾಗೂ ದೇವೇಂದ್ರ ಫಡ್ನವಿಸ್ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರನ್ನು ಭೇಟಿ ಮಾಡಿ ನೂತನ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು.
ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ (ಎಂ.ವಿ.ಎ.) ಸರ್ಕಾರದ ವಿರುದ್ಧ ಬಂಡಾಯದ ಬಾವುಟ ಹಾರಿಸಿದ ಶಿವಸೇನೆಯ ಏಕನಾಥ್ ಶಿಂಧೆ ಈ ವೇಳೆ ರಾಜ್ಯದ ಉಪ ಮುಖ್ಯಮಂತ್ರಿಯಾಗಲಿದ್ದಾರೆ. ಎನ್ನಲಾಗಿತ್ತು. ಆದರೆ, ಆಚ್ಚರಿಯ ಬೆಳವಣಿಕೆಯಲ್ಲಿ ಬಿಜೆಪಿ ಪಕ್ಷ ಮುಖ್ಯಮಂತ್ರಿ ಸ್ಥಾನವನ್ನು ಶಿವಸೇನೆಯ ಬಂಡಾಯ ಶಾಸಕರ ಗುಂಪಿನ ನಾಯಕನಿಗೆ ಬಿಟ್ಟುಕೊಡುವ ಮೂಲಕ ಅಧಿಕಾರ ಹಿಡಿಯಲು ಮುಂದಾಗಿದೆ.
ಇದನ್ನೂ ಓದಿ : ಮುಂಬೈನತ್ತ ಹೊರಟ ಬಂಡಾಯ ಶಾಸಕರು!
ಉದ್ಧವ್ ಠಾಕ್ರೆ ನೆನ್ನೆಯಷ್ಟೇ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಉದ್ಧವ್ ಠಾಕ್ರೆ ರಾಜಿನಾಮೆ ನೀಡಿದ ಹಿನ್ನೆಲೆಯಲ್ಲಿ ಇಂದು ವಿಶ್ವಾಸ ಮತ ಯಾಚನೆಗಾಗಿ ನಿಗದಿ ಪಡಿಸಲಾಗಿದ್ದ ವಿಶೇಷ ಅಧಿವೇಶನ ಮುಂದೂಡಲಾಗಿದೆ. ರಾಜ್ಯಪಾಲರ ಆದೇಶದಂತೆ ಗುರುವಾರ ನಿಗದಿಯಾಗಿದ್ದ ವಿಶೇಷ ಅಧಿವೇಶನವನ್ನು ಈಗ ಕರೆಯಲಾಗುವುದಿಲ್ಲ ಎಂದು ಮಹಾರಾಷ್ಟ್ರ ವಿಧಾನಸಭೆ ಕಾರ್ಯದರ್ಶಿ ರಾಜೇಂದ್ರ ಭಾಗವತ್ ಅವರು ಎಲ್ಲಾ ರಾಜ್ಯದ ಶಾಸಕರಿಗೆ ತಿಳಿಸಿದ್ದರು.
ರಾಜ್ಯ ವಿಧಾನಸಭೆ ಬಲಾಬಲ: (ಜೂನ್ 30ರಂತೆ) ಒಟ್ಟು 288 ಸ್ಥಾನಗಳಿದ್ದು, ಒಬ್ಬ ಶಾಸಕರು ವಿಧಿವಶವಾದ ಹಿನ್ನೆಲೆ ಈ ಸಂಖ್ಯೆಯು 287ಕ್ಕೆ ತಗ್ಗಿದೆ. ಅಧಿಕಾರಕ್ಕೇರಲು: 144 ಬಹುಮತ ಬೇಕಿದೆ. ಶಿವಸೇನಾ: 16, ಎನ್ಸಿಪಿ: 53, ಕಾಂಗ್ರೆಸ್: 44, ಬಿಜೆಪಿ: 106, ಬಂಡಾಯ ಶಾಸಕರು: 49 ಇದ್ದಾರೆ.
ಇದರಿಂದ ಬಹುತೇಕ ಬಿಜೆಪಿ ಮತ್ತು ಬಂಡಾಯ ಶಾಸಕರು ಒಳಗೊಂಡು ಸುಮಾರು 155 ಹೆಚ್ಚಿನ ಬಲ ಇದೆ. ಈ ಹಿಂದೆ ಶಿವಸೇನೆ, ಎನ್ಸಿಪಿ, ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ ಅಘಾಡಿ ಒಕ್ಕೂಟವು 169 ಶಾಸಕರ ಬೆಂಬಲವನ್ನು ಹೊಂದಿತ್ತು.