ಬೆಳಗಾವಿ: ಚಾಲಕನ ನಿಯಂತ್ರಣ ತಪ್ಪಿ ಕ್ರೂಸರ್ ವೊಂದು ಉರುಳಿ ನಾಲೆಗೆ ಬಿದ್ದ ಪರಿಣಾಮವಾಗಿ ಸ್ಥಳದಲ್ಲೇ 7 ಮಂದಿ ಸಾವನ್ನಪ್ಪಿರುವ ಧಾರುಣ ಘಟನೆ ಬೆಳಗಾವಿ ತಾಲ್ಲೂಕಿನಲ್ಲಿ ನಡೆದಿದೆ. ತಾಲೂಕಿನ ಕಲ್ಯಾಳ ಕಟ್ಟೆ ಬಳಿ ಬೆಳ್ಳಂಬೆಳಿಗ್ಗೆ ಭೀಕರ ಈ ದುರ್ಘಟನೆ ನಡೆದಿದೆ.
ಅಪಘಾತದಲ್ಲಿ ಚಿಲಬಾಂವಿ (27), ಬಸವರಾಜ್ ದಳವಿ (30), ಬಸವರಾಜ ಹನಮನ್ನವರ (51), ಆಕಾಶ ಗಸ್ತಿ (22) ಹಾಗೂ ದಾಸನಟ್ಟಿ ಗ್ರಾಮದ ಫಕಿರಪ್ಪ ಹರಿಜನ (55), ಮಲ್ಲಪ್ಪ ದಾಸನಟ್ಟಿ (30) ಮೃತಪಟ್ಟಿದ್ದಾರೆ. ಮೃತರೆಲ್ಲರೂ ಗೋಕಾಕ್ ತಾಲೂಕಿನ ದಾಸನಟ್ಟಿ, ಅಕ್ಕತಂಗೇರಹಾಳ, ಎಂ ಮಲ್ಲಾಪುರ ನಿವಾಸಿಗಳೆಂದು ಗುರುತಿಸಲಾಗಿದೆ.
ಬೆಳಿಗ್ಗೆ 7.30ರ ಸುಮಾರಿಗೆ ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಕ್ರೂಸರ್ ಉರುಳಿ ಬಿದ್ದಿದೆ, ಇದರಿಂದ 7 ಜನ ಸಾವನ್ನಪ್ಪಿದ್ದಾರೆ. ಇವರೆಲ್ಲರೂ ದಿನಗೂಲಿ ಆಧಾರದ ಮೇಲೆ ಕೆಲಸಕ್ಕೆ ಹೊರಟ್ಟಿದ್ದ ಕಾರ್ಮಿಕರು. ಸಾಂಬ್ರಾ-ಸುಳೇಭಾವಿ ರೈಲು ಮಾರ್ಗದಲ್ಲಿ ನಡೆಯುತ್ತಿದ್ದ ದುರಸ್ತಿ ಕಾಮಗಾರಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ಕಾರ್ಮಿಕರು ಇವರು. ಒಂದು ಕ್ರೂಸ್ನಲ್ಲಿ 18 ಜನರು ಪ್ರಯಾಣಿಸುತ್ತಿದ್ದರು. ಗೋಕಾಕ್ ಮಾರ್ಗದಿಂದ ಅತಿವೇಗವಾಗಿ ಹೋಗುವಾಗ ಮುಂದೆ ಹೋಗುತ್ತಿದ್ದ ವಾಹನವನ್ನು ಹಿಂದೆ ಸರಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಕಲ್ಯಾಳ ರಸ್ತೆ ಬದಿ ಡಿಕ್ಕಿ ಹೊಡೆದು ಉರುಳಿ ಬಿದ್ದಿದೆ.
ಮಾರಿಹಾಳ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ಮಾಡುತ್ತಿದ್ದಾರೆ. ರೈಲು ಹಳಿ ಜೋಡಣೆ ಕೆಲಸಕ್ಕೆ ಒಟ್ಟು 18 ಜನರು ಬೆಳಗಾವಿಗೆ ಆಗಮಿಸುತ್ತಿದ್ದರು. ಭೀಮಶಿ ಕುಂದರಗಿ ಎಂಬುವವರು ವಾಹನ ಚಲಾಯಿಸುತ್ತಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ. ಮೂವರನ್ನೂ ಸ್ಥಳೀಯರು, ಪೊಲೀಸರು ಜಿಲ್ಲಾಸ್ಪತ್ರೆಗೆ ರವಾನೆ ಮಾಡಿದ್ದಾರೆ.
ಘಟನಾ ಸ್ಥಳಕ್ಕೆ ಬೆಳಗಾವಿ ಆರ್ಟಿಓ ಶಿವಾನಂದ ಮಗದುಮ್, ಹಿರಿಯ ಇನ್ಸ್ಪೆಕ್ಟರ್ ಆನಂದ ಗಾಮನಗಟ್ಟಿ ಭೇಟಿ ನೀಡಿದರು. ಸ್ಥಳ ಮಹಜರು ಮಾಡಿದ್ದು, 12 ಪ್ರಯಾಣಿಕರು ಕೂರುವ ಸಾಮರ್ಥ್ಯದ ಕ್ರೂಸರ್ ವಾಹನದಲ್ಲಿ, 18 ಪ್ರಯಾಣಿಕರನ್ನು ಕೂರಿಸಲಾಗಿತ್ತು.
ಸ್ಥಳದ ಪರಿಶೀಲನೆಯನ್ನ ನಡೆಸುತ್ತಿದ್ದೇವೆ. ರಸ್ತೆ ಮೇಲೆ ವಾಹನದ ಚಕ್ರದ ಗುರುತುಗಳಿದ್ದು ಅದರ ಅಳತೆ ಮಾಡಿದ್ದೇವೆ. ಕ್ರೂಸರ್ ವಾಹನದಲ್ಲಿ ಹೆಚ್ಚಿನ ಜನರನ್ನು ಪ್ರಯಾಣಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಅವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳುತ್ತೇವೆ. ಮೇಲ್ನೋಟಕ್ಕೆ ಚಾಲಕನ ಅಜಾಗರೂಕತೆ ಕೂಡ ಕಂಡು ಬರುತ್ತಿದೆ. ಪರಿಶೀಲನೆ ನಡೆಸಿ ವರದಿಯನ್ನ ಜಿಲ್ಲಾಧಿಕಾರಿ ಅವರಿಗೆ ಸಲ್ಲಿಸುತ್ತೇವೆ ಎಂದು ಹೇಳಿದರು.
ಸ್ಥಳಕ್ಕೆ ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಭೇಟಿ ನೀಡಿ ಮಾಹಿತಿ ಪಡೆದರು. ಘಟನಾ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ರೂ.7 ಲಕ್ಷ ಪರಿಹಾರ ಘೋಷಣೆ
ಬೆಳಗಾವಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅಪಘಾತದಲ್ಲಿ 7 ಜನ ಮೃತಪಟ್ಟಿದ್ದು, ಅನೇಕರಿಗೆ ಗಾಯ ಆಗಿರುವ ಬಗ್ಗೆ ಮಾಹಿತಿ ಬಂದಿದೆ. ಮೃತರೆಲ್ಲರೂ ಕೂಲಿ ಕಾರ್ಮಿಕರಾಗಿದ್ದಾರೆ. ಮೃತರ ಕುಟುಂಬಸ್ಥರಿಗೆ ತಲಾ ಐದು ಲಕ್ಷ ಪರಿಹಾರ ನೀಡಲಾಗುತ್ತದೆ. ಹಾಗೂ ಬೆಳಗಾವಿ ಜಿಲ್ಲಾಡಳಿತದಿಂದ ಎರಡು ಲಕ್ಷ ಪರಿಹಾರ ನೀಡುವುದರ ಜೊತೆಗೆ ಗಾಯಗಳು ಸಂಪೂರ್ಣ ವೆಚ್ಚ ಭರಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.