ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಹೆಸರನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯೆಂದು ಮರುನಾಮಕರಣ ಮಾಡಿ ರಾಜ್ಯ ಸರ್ಕಾರ ಆದೇಶವನ್ನು ಹೊರಡಿಸಿದೆ. ಅದರಂತೆ, ಪ್ರಾಥಮಿಕ, ಪಿಯು ಶಿಕ್ಷಣ ಇಲಾಖೆ ಒಟ್ಟುಗೂಡಿಸಿ ಮರುನಾಮಕರಣ ಮಾಡಲಾಗಿದೆ.
ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆ ಎಂದು ಕರೆಯಲ್ಪಡುವ ಇಲಾಖೆಯನ್ನು ಇನ್ನು ಮುಂದೆ ‘ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ”ಯನ್ನಾಗಿ ಮರು ನಾಮಕರಣ ಮಾಡಲಾಗಿದೆ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದಾರೆ.
ಆದೇಶ ಪತ್ರದಲ್ಲಿ ವಿವರಿಸಿದಂತೆ, ದೇಶದ ಬಹುತೇಕ ಎಲ್ಲಾ ರಾಜ್ಯಗಳಲ್ಲಿ, 12ನೇ ತರಗತಿಯವರೆಗಿನ ಶಿಕ್ಷಣವು ಶಾಲಾ ಶಿಕ್ಷಣದ ವ್ಯಾಪ್ತಿಗೊಳಪಡುತ್ತದೆ. ರಾಷ್ಟ್ರೀಯ ಶಿಕ್ಷಣ ನೀಡಿ-2020ರಲ್ಲಿಯೂ ಸದರಿ ಅಂಶವನ್ನು ಪುನರುಚ್ಛರಿಸಲಾಗಿರುತ್ತದೆ. ಈ ಹಿನ್ನಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ (ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆಯನ್ನೊಳಗೊಂಡಂತೆ) ಪದನಾಮವನ್ನು ಶಾಲಾ ಶಿಕ್ಷಣ ಇಲಾಖೆ ಎಂದು ಬದಲಾಯಿಸುವುದು ಸೂಕ್ತ ಎಂದು ವಿವಿಧ ಹಂತದ ಚರ್ಚೆಯಲ್ಲಿ ತಜ್ಞರು ಅಭಿಪ್ರಾಯಿಸಿದ್ದಾರೆ.
ಈಗಾಗಲೇ ಕೇಂದ್ರ ಸರ್ಕಾರ ಹಾಗೂ ಹೆಚ್ಚಿನ ರಾಜ್ಯಗಳಲ್ಲಿ ʻʻಶಾಲಾ ಶಿಕ್ಷಣ ಇಲಾಖೆ” ಎಂಬ ಪದನಾಮ ರೂಢಿಯಲ್ಲಿರುವುದರಿಂದ ಕರ್ನಾಟಕ ರಾಜ್ಯದಲ್ಲಿಯೂ ಸಹ ಇದೇ ಮಾದರಿಯನ್ನು ಅಳವಡಿಸಲು ಮೇಲೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಸೂಚಿಸಿರುತ್ತಾರೆ. ಸದರಿ ಪ್ರಸ್ತಾವನೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದಲೇ ಅಭಿಪ್ರಾಯ ಪಡೆಯಲಾಗಿದೆ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಪ್ರಸ್ತುತ ಕರ್ನಾಟಕ ಸರ್ಕಾರದ ಸಚಿವಾಲಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆ ಎಂದು ಕರೆಯಲ್ಪಡುವ ಇಲಾಖೆಯನ್ನು ‘ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ’ ಎಂದು ತಕ್ಷಣದಿಂದ ಜಾರಿಗೆ ಬರುವಂತೆ ಮರು ನಾಮಕರಣಗೊಳಿಸಿ ಆದೇಶಿಸಲಾಗಿದೆ ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ.