ವ್ಯಾಪಕ‌ ವಿರೋಧ : ರೋಹಿತ್ ಚಕ್ರತೀರ್ಥ ಸನ್ಮಾನ ಕಾರ್ಯಕ್ರಮ ರದ್ದು

ಮಂಗಳೂರು: ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಉದ್ಭವಿಸಿದ ವಿವಾದದ ಬಳಿಕ ರೋಹಿತ್ ಚಕ್ರತೀರ್ಥ ಅವರಿಗೆ ಇಂದು ಮಂಗಳೂರಿನಲ್ಲಿ ಆಯೋಜಿಸಿದ್ದ ನಾಗರಿಕ ಸನ್ಮಾನ ಕಾರ್ಯಕ್ರಮವನ್ನು ವ್ಯಾಪಕ ವಿರೋಧದ ಹಿನ್ನೆಲೆಯಲ್ಲಿ ರದ್ದು ಪಡಿಸಲಾಗಿದೆ.

ರೋಹಿತ್ ಚಕ್ರತೀರ್ಥ ಅವರಿಗೆ ನಾಗರಿಕರ ಹೆಸರಿನಲ್ಲಿ ಸನ್ಮಾನ ಆಯೋಜಿಸಿರುವುದು ಮತ್ತು ಮಂಗಳೂರು ವಿವಿ ಕುಲಪತಿ ಅಧ್ಯಕ್ಷತೆ ವಹಿಸಿರುವುದು ಪ್ರಗತಿಪರರ ಆಕ್ರೋಶಕ್ಕೆ ಕಾರಣವಾಗಿತ್ತು. ಸಾಮಾಜಿಕ ಜಾಲತಾಣದಲ್ಲಿಯೂ ಈ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ಕಾರ್ಯಕ್ರಮ ವಿರೋಧಿಸಿ ದೇಶಪ್ರೇಮಿ ಸಂಘಟನೆ ಒಕ್ಕೂಟದಿಂದ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿತ್ತು. ಈ ವ್ಯಾಪಕ ವಿರೋಧದ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ಕಾರ್ಯಕ್ರಮ ರದ್ದುಪಡಿಸಲಾಗಿದೆ ಎಂದು ಸಂಘಟಿಕರು ತಿಳಿಸಿದ್ದಾರೆ.

ಇದನ್ನೂ ಓದಿ : ರೋಹಿತ್ ಚಕ್ರತೀರ್ಥ ಸನ್ಮಾನ ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕಲು ದೇಶಪ್ರೇಮಿ ಸಂಘಟನೆಗಳ ನಿರ್ಧಾರ

ಸೇವಾಂಜಲಿ ಚಾರಿಟಬಲ್​​ ಟ್ರಸ್ಟ್ ಸಹಕಾರದಿಂದ ಚಿಂತನಾ ಗಂಗಾದಿಂದ ಮಂಗಳೂರಿನ ಡೊಂಗರಕೇರಿಯ ಕೆನರಾ ಹೈಸ್ಕೂಲಿನ ಸಭಾಂಗಣದಲ್ಲಿ ರೋಹಿತ್ ಚಕ್ರತೀರ್ಥ ಅವರಿಗೆ ಇಂದು ನಾಗರಿಕ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ರೋಹಿತ್ ಚಕ್ರತೀರ್ಥ ಅವರಿಂದ ಭರತ ಖಂಡದ ಗತವೈಭವ ಮತ್ತು ಅಳಿಸಿ ಹೋದ ಇತಿಹಾಸದ ಬಗ್ಗೆ ವಿಚಾರ ಮಂಡನೆ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ವಿವಿ ಕುಲಪತಿ ಸುಬ್ರಹ್ಮಣ್ಯ ಯಡಪಡಿತ್ತಾಯ ವಹಿಸುವರಿದ್ದರು.

ರೋಹಿತ್ ಚಕ್ರತೀರ್ಥ ಅವರನ್ನು ಸನ್ಮಾನಿಸಿದರೆ ಬಿಲ್ಲವ ಸಮಾಜ ತಕ್ಕ ಪಾಠ ಕಲಿಸಲಿದೆ ಎಂಬ ಎಚ್ಚರಿಕೆ ಒಂದೆಡೆಯಾದರೆ ಎಡಪಕ್ಷ ಮತ್ತು ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ವಿವಿಧ ಪಕ್ಷಗಳು ಹಾಗೂ ಸಮಾನ‌ ಮನಸ್ಕ ಸಂಘಟನೆಗಳು ಸಭೆ ನಡೆಸಿ ಸನ್ಮಾನ ಕಾರ್ಯಕ್ರಮಕ್ಕೆ ‌ಮುತ್ತಿಗೆ ಹಾಕಲು ನಿರ್ಧರಿಸಿದ ಹಿನ್ನೆಲೆಯಲ್ಲಿ ಸನ್ಮಾನ ಕಾರ್ಯಕ್ರಮ ರದ್ದುಪಡಿಸಲಾಗಿದೆ ಎಂದು ತಿಳಿದುಬಂದಿದೆ.

Donate Janashakthi Media

Leave a Reply

Your email address will not be published. Required fields are marked *