ಬೆಂಗಳೂರು: ಕರ್ನಾಟಕದಲ್ಲಿ ಭಾರೀ ಆಕ್ರೋಶಕ್ಕೆ ಗುರಿಯಾಗಿರುವ ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ಹಾಗೂ ಪಠ್ಯ ಪರಿಷ್ಕರಣೆ ವಿರೋಧಿಸುತ್ತಿರುವವರು ಪ್ರಸ್ತಾಪಿಸುತ್ತಿರುವ ಅಂಶಗಳಿಗೆ ಸ್ಪಷ್ಟನೆ ನೀಡುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯು ಕಿರುಪುಸ್ತಿಕೆಯನ್ನು ಸಿದ್ಧಪಡಿಸಿದೆ. ಇದರಲ್ಲಿ ಬರಗೂರು ರಾಮಚಂದ್ರಪ್ಪ ಸಮಿತಿಯಿಂದ ಆಗಿರುವ 150ಕ್ಕೂ ಹೆಚ್ಚು ತಪ್ಪುಗಳಿವೆ ಎಂದು ಗುರುತಿಸಲಾಗಿದೆ.
ಕಂದಾಯ ಸಚಿವ ಆರ್.ಅಶೋಕ್ ಕಿರುಪುಸ್ತಿಕೆಗಳನ್ನು ಬಿಡುಗಡೆ ಮಾಡಿದ್ದಾರೆ. ಈ ನಡುವೆ ರಾಜ್ಯಾದ್ಯಂತ ಪಠ್ಯ ಪರಿಷ್ಕರಣೆಗೆ ಭಾರೀ ಪ್ರತಿರೋಧ ವ್ಯಕ್ತವಾಗುತ್ತಿದ್ದು, ರಾಜ್ಯದ ಬಿಜೆಪಿ ಸರ್ಕಾರವು ತನ್ನ ನಿರ್ಧಾರಗಳನ್ನು ಮರುಪರಿಶೀಲಿಸಬಹುದು ಎಂಬ ಮಾತುಗಳನ್ನು ಹೇಳುತ್ತಿವೆ.
ರೋಹಿತ್ ಚಕ್ರತೀರ್ಥ ಸಮಿತಿ ಪರಿಷ್ಕರಿಸಿದ ಪಠ್ಯದಲ್ಲಿ ಎಂಟತ್ತು ತಪ್ಪುಗಳಷ್ಟೇ ಆಗಿದ್ದು, ಬರಗೂರು ಸಮಿತಿಯಲ್ಲಿ 150ಕ್ಕೂ ಹೆಚ್ಚು ತಪ್ಪುಗಳಾಗಿವೆ ಎಂಬುದನ್ನು ಎತ್ತಿ ತೋರಿಸಲು ಪಟ್ಟಿಸಿದ್ದಪಡಿಸಲಾಗಿದೆ. ತಪ್ಪುಗಳು ಅಥವಾ ಸಣ್ಣ ತಿದ್ದುಪಡಿಗಳಿಗೆ ಸೀಮಿತವಾಗದೆ, ಪರಿಷ್ಕೃತ ಪಠ್ಯಗಳನ್ನೇ ಹಿಂಪಡೆಯುವಂತೆ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಸಮರ್ಥನೆಗೆ ಸರಕಾರ ಮುಂದಾಗುತ್ತಿದೆ.
ಆರ್ ಅಶೋಕ ಮಾತನಾಡಿ ʻಅವರಿಗೆ ರಾಮ, ಈಶ್ವರ ಹೆಸರು ಕೇಳಲು ಇಷ್ಟ ಇರಲಿಲ್ಲ. ಅವರಿಗೆ ಬೇಕಾದಂತೆ ಪಠ್ಯ ಸೇರಿಸುತ್ತಿದ್ದರು. ನಮ್ಮ ಸರ್ಕಾರ ಇದ್ದಾಗ ಕುವೆಂಪು ಅವರ 8 ಪದ್ಯ / ಗದ್ಯ ಸೇರಿಸಲಾಗಿತ್ತು. ಹಿಡನ್ ಅಜೆಂಡಾ ಇರುವ ಕೆಲ ಸಾಹಿತಿಗಳು ಹಿಂದೂ ಮಲಗಿದರೆ ದೇಶ ಮಲಗುತ್ತೆ ಎಂಬ ಭ್ರಮೆಯಲ್ಲಿದ್ದಾರೆ. ಸಿದ್ದರಾಮಯ್ಯ ಅವಧಿಯಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆಯಾದಾಗ ಈ ಸಾಹಿತಿಗಳು ಏಕೆ ಧ್ವನಿ ಎತ್ತಲಿಲ್ಲ ಎಂದು ಪ್ರಶ್ನಿಸಿದರು.
ಹಂಸಲೇಖ ಅವರ ಬಣ್ಣದ ಬುಗುರಿ ಪದ್ಯ ಸೇರಿಸಲಾಯಿತು. ಈಗ ಕಾಂಗ್ರೆಸ್ನವರು ಕುವೆಂಪು ಬಗ್ಗೆ ನಮ್ಮ ಸರ್ಕಾರ ತಾರತಮ್ಯ ಮಾಡಿದೆ ಎಂದು ಹೇಳುತ್ತಿದ್ದಾರೆ. ಈಗ ಕುವೆಂಪು ಅವರ 10 ಗದ್ಯ / ಪದ್ಯಗಳನ್ನು ಪಠ್ಯದಲ್ಲಿ ಹೇಳಿದೆ ಎಂದರು.
ಮಹಾತ್ಮ ಗಾಂಧಿ ಅವರು ಭಾರತ-ಪಾಕಿಸ್ತಾನ ವಿಭಜನೆ ಸಂದರ್ಭದಲ್ಲಿ ಮತೀಯ ಗಲಭೆಗಳನ್ನು ನಿಯಂತ್ರಿಸಲು ಕಲ್ಕತ್ತಾದಲ್ಲಿ ಗೀತೆಯನ್ನು ಪಠಿಸುತ್ತಿದ್ದರು ಎಂಬ ಅಂಶಕ್ಕೆ ಕತ್ತರಿ ಹಾಕಲಾಗಿತ್ತು. ಮತೀಯ ಯುದ್ಧಗಳ ಕುರಿತಾದ ಅಂಶಗಳ ವಿವರಗಳಿಗೆ ಕಡಿವಾಣ ಹಾಕಲಾಗಿತ್ತು. ಶಿವಾಜಿ ಮಹಾರಾಜರ ಉಲ್ಲೇಖವನ್ನು ಕಡಿಮೆ ಮಾಡಿ, ಚಂಗೀಸ್ ಖಾನ್ ಮತ್ತು ತೈಮೂರ್ ದಾಳಿಗಳ ಅಂಶವನ್ನು ತೆಗೆಯಲಾಗಿತ್ತು. ರಜಪೂತರ ಗುಣ ಧರ್ಮಗಳನ್ನು ಕೈ ಬಿಟ್ಟು ಮೊಘಲರಿಗೆ ಹೆಚ್ಚಿನ ಆದ್ಯತೆ ನೀಡುವ ಜೊತೆಗೆ ಟಿಪ್ಪುವಿನ ಬಗ್ಗೆ ಅತಿಯಾದ ವೈಭವೀಕರಣ ಇತ್ತು ಎಂದು ತಿಳಿಸಿದರು.
ಹಿಂದಿನ ಸಮಿತಿಯ ಪ್ರೊ.ಬರಗೂರು ಸಮಿತಿಯು ಉದ್ದೇಶಪೂರ್ವಕವಾಗಿ ಧರ್ಮ, ದೇವರು ಹೆಸರು ಕೈಬಿಟ್ಟಿದ್ದ ಹಲವು ನಿದರ್ಶನ ಪಟ್ಟಿ ಮಾಡಲಾಗಿದೆ. ಚಾಮುಂಡಿ ಬೆಟ್ಟ ಮತ್ತು ಚಾಮುಂಡೇಶ್ವರಿ ದೇವಾಲಯದ ಮಾಹಿತಿಯಲ್ಲಿ ತಿದ್ದುಪಡಿ ಮಾಡಲಾಗಿತ್ತು. ‘ಹಿಂದೂ ಮಹಾಸಾಗರ’ ಎಂಬುದನ್ನು ದುರುದ್ದೇಶದಿಂದ ‘ಇಂಡಿಯನ್ ಓಶನ್’ ಎಂದು ತಿದ್ದುಪಡಿ ಮಾಡಿ ಪಠ್ಯದಲ್ಲಿ ಸೇರ್ಪಡೆ ಮಾಡಿದ್ದರು ಎಂಬ ವಿಚಾರ ಪ್ರಸ್ತಾಪಿಸಲು ಶಿಕ್ಷಣ ಇಲಾಖೆ ಅಧಿಕಾರಿಗಳು ಸಚಿವ ಅಶೋಕ್ ಅವರಿಗೆ ಮಾಹಿತಿ ಒದಗಿಸಿದ್ದಾರೆ.
ಈಗಾಗಲೇ ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಆಗಿರುವ ಲೋಪಗಳ ಕುರಿತು ಮುಖ್ಯಮಂತ್ರಿಗೆ ಎಚ್.ಡಿ.ದೇವೇಗೌಡ ಸೇರಿದಂತೆ ಹಲವು ಸ್ವಾಮೀಜಿಗಳು ಪತ್ರ ಬರೆದಿದ್ದಾರೆ. ಹಳೆಯ ಪಠ್ಯ ಪುಸ್ತಕವನ್ನೇ ಮುಂದುವರಿಸಬೇಕೆಂದು ಹಲವು ಗಣ್ಯರು ಆಗ್ರಹಿಸಿದ್ದಾರೆ.
ಮಾಜಿ ಪ್ರಧಾನಿ ದೇವೇಗೌಡರ ಸಲಹೆ ಪಾಲಿಸುವಂತೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ. ಮುಖ್ಯಮಂತ್ರಿಯ ಸೂಚನೆ ಮೇರೆಗೆ ಶಿಕ್ಷಣ ಇಲಾಖೆಯು ಮತ್ತೊಮ್ಮೆ ಪಠ್ಯ ಪರಿಷ್ಕರಣೆಗೆ ಮುಂದಾಗಿದೆ.
ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮತ್ತು ಇಲಾಖೆಯ ಇತರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಮುಖ್ಯಮಂತ್ರಿಗಳ ಸೂಚನೆಯಂತೆ ತಜ್ಞ ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳ ಸಮಿತಿಯೊಂದಿಗೆ ಈ ಬಾರಿ ಶಿಕ್ಷಣ ಇಲಾಖೆಯೇ ತಪ್ಪುಗಳನ್ನು ಸರಿಪಡಿಸಲು ಮುಂದಾಗಿದೆ. ಇನ್ನೇರಡು ವಾರಗಳ ಒಳಗೆ ಎಲ್ಲವನ್ನೂ ಸಿದ್ಧಪಡಿಸಿಕೊಂಡು ಮುಖ್ಯಮಂತ್ರಿ ಅವರಿಂದ ಅನುಮತಿ ಪಡೆದು ಪಠ್ಯ ನೀಡಲು ಶಿಕ್ಷಣ ಇಲಾಖೆ ತಯಾರಿ ಮಾಡಿಕೊಳ್ಳುತ್ತಿದೆ.