ಪಶ್ಚಿಮ ಬಂಗಾಳದ ಮೊದಲ ಎಡರಂಗ ಸರ್ಕಾರ ಅಧಿಕಾರಕ್ಕೆ ಬಂದ ದಿನ
ಜೂನ್ 21,1977
ಪಶ್ಚಿಮ ಬಂಗಾಳದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನ ಜೂನ್ 21, 1977. ಅಂದು ಜ್ಯೋತಿಬಸು ಅವರ ನೇತೃತ್ವದ ಎಡ ರಂಗ ಸರ್ಕಾರ ಅಧಿಕಾರಕ್ಕೆ ಬಂದ ದಿನ. ಅದಕ್ಕೂ ಮುಂಚೆ ಅಧಿಕಾರದಲ್ಲಿದ್ದ ಸಿದ್ಧಾರ್ಥ ಶಂಕರ್ ರೇ ಅವರ ಅರೆ ಫ್ಯಾಸಿಸ್ಟ್ ಆಡಳಿತದಲ್ಲಿ ಜೀವ ತೆತ್ತ ಹುತಾತ್ಮರನ್ನು, ಆ ಸಂಗಾತಿಗಳನ್ನು ಮತ್ತು ಹಲವಾರು ಕಷ್ಟನಷ್ಟಗಳನ್ನು ಅನುಭವಿಸಿದ ಪಶ್ಚಿಮ ಬಂಗಾಳದ ಜನರನ್ನು ನಾವು ಗೌರವಪೂರ್ಣವಾಗಿ ನೆನೆಯಬೇಕಾಗಿದೆ.
ನಂತರದಲ್ಲಿ 34 ವರ್ಷಗಳ ಎಡರಂಗದ ಅವಧಿಯಲ್ಲಿ ವ್ಯಾಪಕ ಭೂಸುಧಾರಣೆ ಜಾರಿ ಮಾಡುವುದರ ಮೂಲಕ ಲಕ್ಷಾಂತರ ಭೂಹೀನರಿಗೆ ಜಮೀನನ್ನು ಹಂಚಿದ್ದು ಬಹಳ ಮುಖ್ಯವಾದ ಸಂಗತಿ. ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿ ಮಾಡಿ ಪ್ರಜಾಸತ್ತೆಯನ್ನು ಗ್ರಾಮಮಟ್ಟದ ವರೆಗೆ ತೆಗೆದುಕೊಂಡು ಹೋದ ವಿಷಯ ಮತ್ತೊಂದು ಬಹು ಮುಖ್ಯವಾದುದು. ದುಡಿಯುವ ಜನರ ಹಾಗೂ ಜನಸಾಮಾನ್ಯರ ಬದುಕನ್ನು ಹಸನುಗೊಳಿಸಲು ಮತ್ತು ಕೋಮುಸಾಮರಸ್ಯ ಕಾಪಾಡುವಲ್ಲಿ ಅವಿರತ ಮತ್ತು ಯಶಸ್ವಿ ಪ್ರಯತ್ನ ಅದಾಗಿತ್ತು.