ಮೈಸೂರಿಗೆ ಮೋದಿ ಭೇಟಿ: ರೈತರಿಂದ ನಡುರಸ್ತೆಯಲ್ಲಿ ತರಕಾರಿ ಮಾರಿ ವಿನೂತನ ಪ್ರತಿಭಟನೆ

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ಮಾರ್ಗದುದ್ದಕ್ಕೂ ರೈತ ಮುಖಂಡರು ತರಕಾರಿ ಮಾರಾಟ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ. ಮೈಸೂರು ನ್ಯಾಯಾಲಯದ ಮುಂಭಾಗ ಇರುವ ಗಾಂಧಿ ಪುತ್ಥಳಿ ಮುಂದೆ ಜಮಾಯಿಸಿದ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ರೈತರು ತರಕಾರಿ, ದವಸ ಧಾನ್ಯಗಳನ್ನು ಕನಿಷ್ಠ ಬೆಂಬಲ ಬೆಲೆಗೆ ಮಾರಾಟ ಮಾಡುವುದರ ಮೂಲಕ ಪ್ರತಿಭಟನೆ ನಡೆಸಿದರು.

ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಪ್ರತಿಭಟನಾಕಾರರು,. ನರೇಂದ್ರ ಮೋದಿ ಪ್ರಧಾನಿಯಾಗುವ ಮುನ್ನ ನಾನು ಅಧಿಕಾರಕ್ಕೆ ಬಂದರೆ ಡಾ. ಎಂ.ಎಸ್‌.ಸ್ವಾಮಿನಾಥನ್ ವರದಿ ಜಾರಿಗೆ ತರುತ್ತೇನೆ ಎಂದು ಭರವಸೆ ನೀಡಿದ್ದರು. ಅಲ್ಲದೇ, ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಹೇಳಿದ್ದರು. ಇವೆಲ್ಲ ಯೋಜನೆಗಳು ಜಾರಿಯಾಯಿತೇ? ಎಂದು ಪ್ರಶ್ನಿಸಿ ಅಸಮಾಧಾನ ಹೊರಹಾಕಿದರು.

ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಪ್ರಧಾನಿ ಮೋದಿ ಬಂದು ಹೋಗುವ ಕಾರ್ಯಕ್ರಮಕ್ಕೆ 12 ಕೋಟಿ ರೂಪಾಯಿ ವೆಚ್ಚವಾಗುತ್ತಿದೆ ಎನ್ನಲಾಗುತ್ತದೆ. ಇಷ್ಟೊಂದು ಖರ್ಚು ಮಾಡಿ ಮೈಸೂರಿಗೆ ಬರುವ ಮೋದಿ, ದೇಶದಲ್ಲಿ ರೈತರ ಉಳಿವಿಗಾಗಿ ಬೇಕಾದ ಕಾನೂನು ಮಾಡದಿರುವುದು ಹಾಸ್ಯಾಸ್ಪದ. ಉದ್ಯಮಿಗಳಿಗೆ ನೂರಾರು ಕೋಟಿ ಬ್ಯಾಂಕ್‍ಗಳಿಂದ ಸಾಲ ನೀಡಲಾಗುತ್ತದೆ. ಆದರೆ, ರೈತರು ಸಾಲ ಕೇಳಿದರೆ ಹಣ ನೀಡಲು ಸತಾಯಿಸುತ್ತಾರೆ. ರೈತರನ್ನ ಬ್ಯಾಂಕ್‍ಗಳು ಕೆಟ್ಟ ರೀತಿಯಲ್ಲಿ ನೋಡುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ರೈತರ ಆತ್ಮಹತ್ಯೆ ಜಾಸ್ತಿ ಆಗುತ್ತಿದೆ. ಇದರ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾತನಾಡುತ್ತಿಲ್ಲ. ಫಲಾನುಭವಿಗಳ ಜೊತೆ ಚರ್ಚಿಸುವ ಬಿಜೆಪಿ ಪಕ್ಷದವರು, ನಮ್ಮನ್ನು ಕರೆದಿಲ್ಲ. ನಮ್ಮನ್ನೂ ಕರೆಯಲಿ, ನಾವು ಚರ್ಚೆ ಮಾಡುತ್ತೇವೆ. ಕನಿಷ್ಠ ಬೆಂಬಲ ಬೆಲೆ ಖಾತರಿ ಪಡಿಸದಿದ್ದರೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತೇವೆ ಎಂದಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *