ಪರಿಸರ ಮಾಲಿನ್ಯದ ಪರಿಣಾಮ : 5 ವರ್ಷ ಆಯಸ್ಸು ಕಳೆದುಕೊಳ್ಳುವ ಭೀತಿಯಲ್ಲಿ ಭಾರತೀಯರು

ನವದೆಹಲಿ:  ‘ಭಾರತದಲ್ಲಿ ವಾಯು ಮಾಲಿನ್ಯ ಜನರ ಆರೋಗ್ಯಕ್ಕೆ ಭಾರಿ ಅಪಾಯವನ್ನೊಡ್ಡಿದೆ. ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಮಾರ್ಗಸೂಚಿಗಳನ್ನು ಅನುಸರಿಸದೇ ಇದ್ದಲ್ಲಿ ಭಾರತೀಯನ ಆಯಸ್ಸಿನಲ್ಲಿ ವ್ಯತ್ಯಾಸ ವಾಗಲಿದೆ ಎಂದು ಅಧ್ಯಯನ ವರದಿ ಎಚ್ಚರಿಸಿದೆ.

ಬಾಂಗ್ಲಾ ದೇಶದ ನಂತರ ದೆಹಲಿಯು ವಿಶ್ವದ ಎರಡನೇ ಅತ್ಯಂತ ಕಲುಷಿತ ನಗರವಾಗಿರುವುದರಿಂದ ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳನ್ನು ಅನುಸರಿಸದಿದ್ದರೆ ಭಾರತೀಯರು ಸರಾಸರಿ 5 ವರ್ಷಗಳ ಜೀವಿತಾವಧಿಯನ್ನು ಕಳೆದುಕೊಳ್ಳಲಿದ್ದಾರೆ ಎಂದು ಚಿಕಾಗೋ ವಿಶ್ವವಿದ್ಯಾಲಯದ ಇಂಧನ ನೀತಿ ಸಂಸ್ಥೆ ತಿಳಿಸಿದೆ.ಏರ್ ಕ್ವಾಲಿಟಿ ಲೈಫ್ ಇಂಡೆಕ್ಸ್ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಈ ಮಾಹಿತಿಯನ್ನು ನೀಡಲಾಗಿದೆ.

“ವಿಶ್ವದ ಎಲ್ಲಾ ದೇಶಗಳ ಪೈಕಿ ಭಾರತವು ಹೆಚ್ಚಿನ ಕಣಗಳ ಮಾಲಿನ್ಯದ ಸಾಂದ್ರತೆ ಮತ್ತು ಹೆಚ್ಚಿನ ಜನಸಂಖ್ಯೆಯಿಂದಾಗಿ ವಾಯು ಮಾಲಿನ್ಯದ ಮೇಲಿನ ಆರೋಗ್ಯದ ಹೊರೆಯನ್ನು ಎದುರಿಸುತ್ತಿದೆ” ಎಂದು ವರದಿ ಹೇಳಿದೆ. ಭಾರತದಲ್ಲಿ 2013ರಿಂದ ಪ್ರಪಂಚದ ಮಾಲಿನ್ಯದಲ್ಲಿ ಸುಮಾರು ಶೇ. 44ರಷ್ಟು ಹೆಚ್ಚಳ ಉಂಟಾಗಿದೆ. 1998ರಿಂದ ಭಾರತದಲ್ಲಿ ಸರಾಸರಿ ವಾರ್ಷಿಕ ಮಾಲಿನ್ಯವು ಶೇ. 61.4ರಷ್ಟು ಹೆಚ್ಚಾಗಿದೆ. ಇದು ಸರಾಸರಿ ಜೀವಿತಾವಧಿಯಲ್ಲಿ 2.1 ವರ್ಷಗಳ ಇಳಿಕೆಗೆ ಕಾರಣವಾಗುತ್ತದೆ.

ಭಾರತದ ಅತ್ಯಂತ ಕಲುಷಿತ ಪ್ರದೇಶಗಳು

ಕಳೆದ ಎರಡು ದಶಕಗಳಲ್ಲಿ ಕೈಗಾರಿಕೀಕರಣ, ಆರ್ಥಿಕ ಅಭಿವೃದ್ಧಿ ಮತ್ತು ಜನಸಂಖ್ಯೆಯ ಬೆಳವಣಿಗೆಯಿಂದಾಗಿ ಭಾರತದಲ್ಲಿ ವಾಯು ಮಾಲಿನ್ಯ ಹೆಚ್ಚಳವಾಗಿದೆ. 2019ರಲ್ಲಿ ಭಾರತ ಸರ್ಕಾರವು ಮಾಲಿನ್ಯದ ವಿರುದ್ಧ ಹೋರಾಟ ನಡೆಸಿತ್ತು. 2024ರ ವೇಳೆಗೆ 2017ರ ವಾಯುಮಾಲಿನ್ಯದ ಮಟ್ಟವನ್ನು ಶೇ. 20ರಿಂದ 30ರಷ್ಟು ಕಡಿಮೆ ಮಾಡುವ ಗುರಿಯೊಂದಿಗೆ ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮವನ್ನು ಪ್ರಾರಂಭಿಸಿತ್ತು. ಅಂದಿನಿಂದ ಭಾರತವು ಯುರೋಪಿಯನ್ ಯೂನಿಯನ್ ಮಾನದಂಡಗಳಿಗೆ ಸಮನಾದ ಇಂಧನ ಹೊರಸೂಸುವಿಕೆಯ ಮಾನದಂಡಗಳನ್ನು ಅಳವಡಿಸಿಕೊಂಡಿದೆ.

ಉತ್ತರ ಭಾರತದಲ್ಲಿ ಅಂದಾಜು 51 ಕೋಟಿ ಜನರು ವಾಸಿಸುತ್ತಿದ್ದು, ಈ ಪ್ರದೇಶ ಅತಿಹೆಚ್ಚು ಮಾಲಿನ್ಯಗೊಂಡಿದೆ. ಈ ‍ಪ್ರದೇಶದ ಜನರು ತಮ್ಮ ಬದುಕಿನ ಆಯಸ್ಸಿನಲ್ಲಿ 7.6 ವರ್ಷಗಳಷ್ಟು ಕಡಿಮೆಯಾಗುವ ಅಪಾಯವನ್ನು ಎದುರಿಸುತ್ತಿದ್ದಾರೆ.

ಒಂದು ವೇಳೆ, ಡಬ್ಲ್ಯುಎಚ್‌ಒ ಮಾನದಂಡಗಳಂತೆ ಮಾಲಿನ್ಯಕಾರಕಗಳ ಪ್ರಮಾಣವನ್ನು (ಪಿಎಂ2.5) ನಿರ್ವಹಣೆ ಮಾಡಿದಲ್ಲಿ, ಉತ್ತರಪ್ರದೇಶದ ನಿವಾಸಿಗಳ ಆಯಸ್ಸು 8.2 ವರ್ಷ ಹೆಚ್ಚಳವಾಗಬಹುದು. ಬಿಹಾರದಲ್ಲಿ 7.9 ವರ್ಷ, ಪಶ್ಚಿಮ ಬಂಗಾಳ–5.9 ವರ್ಷಗಳು ಹಾಗೂ ರಾಜಸ್ಥಾನ ನಿವಾಸಿಗಳ ಆಯಸ್ಸು 4.8 ವರ್ಷಗಳಷ್ಟು ಹೆಚ್ಚಳವಾಗಬಹುದು ಎಂದೂ ವರದಿಯಲ್ಲಿ ಹೇಳಲಾಗಿದೆ.

ಡಬ್ಲ್ಯುಎಚ್‌ಒ ಮಾರ್ಗಸೂಚಿ ಪ್ರಕಾರ, ಮಾಲಿನ್ಯಕಾರಕ ‘ಪಿಎಂ2.5’ನ ಪ್ರಮಾಣ ಪ್ರತಿ ಘನ ಮೀಟರ್‌ ಗಾಳಿಯಲ್ಲಿ 5 ಮೈಕ್ರೊಗ್ರಾಮ್‌ಗಳಿಗಿಂತ ಹೆಚ್ಚು ಇರಬಾರದು. ಜಾಗತಿಕವಾಗಿ ವಾಯು ಮಾಲಿನ್ಯವು ವ್ಯಕ್ತಿಯ ಆಯಸ್ಸನ್ನು 2.2 ವರ್ಷಗಳಷ್ಟು ಕಡಿಮೆ ಮಾಡುತ್ತದೆ.ಕಳೆದ ಎರಡು ದಶಕಗಳಲ್ಲಿ ಭಾರತದಲ್ಲಿ ಕೈಗಾರಿಕೆಗಳು ಹಾಗೂ ಜನಸಂಖ್ಯೆಯಲ್ಲಿ ಹೆಚ್ಚಳವಾಗಿದ್ದರಿಂದ ಪಳೆಯುಳಿಕೆ ಇಂಧನಗಳ ಬಳಕೆ ಹೆಚ್ಚಿದೆ. ಇದು ವಾಯು ಮಾಲಿನ್ಯ ಹೆಚ್ಚಾಗಲು ಕಾರಣ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

Donate Janashakthi Media

Leave a Reply

Your email address will not be published. Required fields are marked *