ಚದುರಂಗ ಆಟದ ಜೂನಿಯರ್ ಚೆಸ್ ಮಾಸ್ಟರ್ ಆರ್ ಪ್ರಗ್ನಾನಂದ ಶುಕ್ರವಾರ (ಜೂನ್ 10) ನಡೆದ ನಾರ್ವೆ ಚೆಸ್ ಗ್ರೂಪ್ ಎ ಓಪನ್ ಚೆಸ್ ಪಂದ್ಯಾವಳಿಯ ಒಂಬತ್ತು ಸುತ್ತುಗಳಲ್ಲಿ 7.5 ಅಂಕಗಳಿಸಿ ಚಾಂಪಿಯನ್ ಪಟ್ಟಕ್ಕೇರಿದ್ದಾರೆ. ತಡರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ಪ್ರಗ್ನಾನಂದ, ಒಂಬತ್ತು ಸುತ್ತುಗಳಲ್ಲಿ ಅಜೇಯರಾಗಿ ಉಳಿಯುವ ಮೂಲಕ ತಮ್ಮ ಸಹವರ್ತಿ ಆಟಗಾರ ಭಾರತದವರಾದ ಮಾಸ್ಟರ್ ವಿ. ಪ್ರಣೀತ್ ವಿರುದ್ಧ ಗೆಲುವು ಸಾಧಿಸಿದ್ದಾರೆ.
ಪ್ರಗ್ನಾನಂದ ಎರಡನೇ ಸ್ಥಾನದಲ್ಲಿರುವ ಐಎಂ ಮಾರ್ಸೆಲ್ ಎಫ್ರೊಯಿಮ್ಸ್ಕಿ ಮತ್ತು ಐಎಂ ಜಂಗ್ ಮಿನ್ ಸಿಯೊ ಅವರಗಿಂತ ಪೂರ್ಣ ಅಂಕವನ್ನು ಗಳಿಸಿದರು. ಆರು ಪಾಯಿಂಟ್ಗಳೊಂದಿಗೆ ಪ್ರಣೀತ್ ಜಂಟಿಯಾಗಿ ಮೂರನೇ ಸ್ಥಾನದಲ್ಲಿದ್ದರು. ಆದರೆ ಕೆಳಮಟ್ಟದ ಟೈ-ಬ್ರೇಕ್ ಸ್ಕೋರ್ನಿಂದ ಆರನೇ ಸ್ಥಾನ ಪಡೆದರು.
ಪ್ರಣೀತ್ ಅವರನ್ನು ಸೋಲಿಸುವುದರ ಹೊರತಾಗಿ, ಪ್ರಗ್ನಾನಂದ ವಿಕ್ಟರ್ ಮಿಖಲೆವ್ಸ್ಕಿ ಅವರನ್ನು 8ನೇ ಸುತ್ತಿನಲ್ಲಿ, ವಿಟಾಲಿ ಕುನಿನ್ ಅವರನ್ನು 6ನೇ ಸುತ್ತಿನಲ್ಲಿ, ಮುಖಮ್ಮದ್ಜೋಖಿದ್ ಸುಯರೋವ್ ಅವರನ್ನು 4ನೇ ಸುತ್ತಿನಲ್ಲಿ, ಸೆಮೆನ್ ಮುಟುಸೊವ್ 2ನೇ ಸುತ್ತಿನಲ್ಲಿ ಮತ್ತು ಮಥಿಯಾಸ್ ಉನ್ನೆಲ್ಯಾಂಡ್ ವಿರುದ್ಧ 1ನೇ ಸುತ್ತಿನಲ್ಲಿ ಗೆಲುವು ಸಾಧಿಸಿದರು. ಪ್ರಗ್ನಾನಂದ ತಮ್ಮ ಇತರ ಮೂರು ಪಂದ್ಯಗಳನ್ನು ಡ್ರಾ ಮಾಡಿಕೊಂಡರು.
16 ವರ್ಷದ ಪ್ರಗ್ನಾನಂದ ಇತ್ತೀಚಿನ ದಿನಗಳಲ್ಲಿ ಚೆಸ್ಸಬಲ್ ಮಾಸ್ಟರ್ ಆನ್ಲೈನ್ ಈವೆಂಟ್ನಲ್ಲಿ ಎರಡನೇ ಬಾರಿಗೆ ವಿಶ್ವದ ನಂಬರ್ ಒನ್ ಮ್ಯಾಗ್ನಸ್ ಕಾರ್ಲ್ಸೆನ್ ಅವರನ್ನು ಸೋಲಿಸಿದರು. ನಂತರ ಚೀನಾದ ಡಿಂಗ್ ಲಿರೆನ್ ವಿರುದ್ಧದ ಫೈನಲ್ ಪಂದ್ಯದಲ್ಲಿ ತೀರ ಹತ್ತಿರಕ್ಕೆ ಬಂದು ಸೋತರು. ಮುಂದಿನ ತಿಂಗಳು ಚೆನ್ನೈನಲ್ಲಿ ನಡೆಯಲಿರುವ 44ನೇ ಚೆಸ್ ಒಲಿಂಪಿಯಾಡ್ನ ಮುಕ್ತ ಸ್ಪರ್ಧೆಯಲ್ಲಿ ಅವರು ಭಾರತ ಬಿ ತಂಡದ ಭಾಗವಾಗಿ ಆಡಲಿದ್ದಾರೆ.
ನಾರ್ವೆ ಚೆಸ್ ಗ್ರೂಪ್ ಎ ಓಪನ್ ಚೆಸ್ ಪಂದ್ಯಾವಳಿ ಗೆಲುವಿನ ನಂತರ ಮಾತನಾಡಿದ ಕೋಚ್ ಆರ್.ಬಿ. ರಮೇಶ್ ಪ್ರಗ್ನಾನಂದ ಅಗ್ರ ಶ್ರೇಯಾಂಕದ ಆಟಗಾರ, ಆದ್ದರಿಂದ ಆತ ಪಂದ್ಯಾವಳಿಯನ್ನು ಗೆದ್ದರೂ ಆಶ್ಚರ್ಯವಿಲ್ಲ. ಪ್ರಗ್ನಾನಂದ ಉತ್ತಮವಾಗಿ ಆಡಿದರು, ಕಪ್ಪು ಕಾಯಿಗಳೊಂದಿಗೆ ಮೂರು ಪಂದ್ಯಗಳನ್ನು ಡ್ರಾ ಮಾಡಿಕೊಂಡು, ಉಳಿದ ಪಂದ್ಯಗಳಲ್ಲಿ ಗೆಲುವು ಸಾಧಿಸಿದರು. ಇದು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಹೇಳಿಕೊಂಡಿದ್ದಾರೆ.