ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ತಮಗೆ ಯಾವುದೇ ರೀತಿಯ ಹೊಣೆಗಾರಿಕೆ ಇಲ್ಲವೆಂದು, ಜವಾಬ್ದಾರಿ ಹೀನ ಸಂಕುಚಿತ ಅಧಿಕಾರದಾಹಿ ರಾಜಕಾರಣಕ್ಕೆ ಅಂಟಿಕೊಂಡಿದ್ದಕ್ಕೆ ಮೂರು ಸ್ಥಾನವನ್ನು ಬಿಜೆಪಿ ಗೆಲ್ಲಲು ಕಾರಣವಾಗಿದೆ ಎಂದು ಸಿಪಿಐ(ಎಂ) ರಾಜ್ಯ ಸಮಿತಿ ಆರೋಪಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರತ ಕಮ್ಯೂನಿಸ್ಟ್ ಪಕ್ಷ ಮಾರ್ಕ್ಸ್‌ವಾದಿ)-ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಯು.ಬಸವರಾಜ ಅವರು, ನೆನ್ನೆ (ಜೂನ್ 10) ಮುಕ್ತಾಯಗೊಂಡ ರಾಜ್ಯಸಭಾ ಚುನಾವಣೆಯಲ್ಲಿ ಮತದಾನ ನಡೆದ ನಾಲ್ಕು ಸ್ಥಾನಗಳಲ್ಲಿ 3 ಬಿಜೆಪಿ ಹಾಗೂ 1 ಕಾಂಗ್ರೆಸ್ ಪಕ್ಷದ ಪಾಲಾಗಿದೆ. ಒಟ್ಟು ಆರು ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ರಾಜ್ಯದ ಅಭಿವೃದ್ಧಿ ಹಾಗೂ ಸೌಹಾರ್ಧತೆಯ ಕುರಿತು, ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಹೊಣೆಗೇರಿತನಕ್ಕೆ ಸಾಕ್ಷಿಯಾಗಿದೆ.
ಬಿಜೆಪಿ ಗೆಲುವಿನಿಂದ ಮತ್ತು ಕಾಂಗ್ರೆಸ್ ಹಾಗೂ ಜೆಡಿಎಸ್ ನ ಹೊಣೆಗೇಡಿ ರಾಜಕಾರಣದಿಂದ ರಾಜ್ಯದ ಜನತೆ ಆತಂಕಕ್ಕೀಡಾಗುವಂತಾಗಿದೆ. ರಾಜ್ಯ ಹಾಗೂ ಒಕ್ಕೂಟ ಸರಕಾರಗಳ ಮತ್ತು ಬಿಜೆಪಿ ಹಾಗೂ ಆರ್‌ಎಸ್ಎಸ್ ಗಳ ಸರ್ವಾಧಿಕಾರ, ಜನ ವಿರೋಧಿ ನೀತಿ ಮತ್ತು ಕೋಮುವಾದವು ರಾಜ್ಯದ ಜನತೆಯಲ್ಲಿ ತೀವ್ರ ಅಸಮಾಧಾನ ಉಂಟು ಮಾಡಿರುವಾಗ, ಜಾತ್ಯಾತೀತ ಶಕ್ತಿಗಳು ಜವಾಬ್ದಾರಿಯುತವಾಗಿ, ಜನತೆಯ ಆತಂಕ ನಿವಾರಣೆಗೆ ಪೂರಕವಾಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ ಎಂದು ಸಿಪಿಐ(ಎಂ) ಎಚ್ಚರಿಸಿದೆ.