ಕಳೆದ ಒಂದು ವಾರದ ಹಿಂದೆಯಷ್ಟೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಭಾ.ಮಾ.ಹರೀಶ್ ಅವರಿಗೆ ಸಂದ್ಗಿದ ಪರಿಸ್ಥಿತಿ ಎದುರಾಗಿದೆ. ಹರೀಶ್ ಅವರು ಚುನಾವಣೆಗೆ ನಿಂತಾಗ, ಇವರನ್ನು ಬೆಂಬಲಿಸಿದ್ದ ಹೆಸರಾಂತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಪತ್ರವೊಂದನ್ನು ಬರೆದಿದ್ದು, ವಾಣಿಜ್ಯ ಮಂಡಳಿಯಲ್ಲಿ ಕೋಟ್ಯಂತರ ರೂಪಾಯಿಯ ದುರುಪಯೋಗ ಆಗಿದೆ. ಅದನ್ನು ತನಿಖೆ ಮಾಡಿಸಿ ಸೂಕ್ತ ಕ್ರಮ ತಗೆದುಕೊಳ್ಳುವಂತೆ ಮನವಿಯನ್ನು ಸಲ್ಲಿಸಿದ್ದಾರೆ.
ಭಾ.ಮಾ.ಹರೀಶ್ ಅವರನ್ನು ಭೇಟಿ ಮಾಡಿ ಫಿನಾಯಿಲ್ ಮತ್ತು ಪೊರಕೆಯನ್ನು ನೀಡಿದ್ದ ರಾಜೇಂದ್ರ ಸಿಂಗ್ ಬಾಬು, ವಾಣಿಜ್ಯ ಮಂಡಳಿಯಲ್ಲಿ ನಡೆದ ಅವ್ಯವಹಾರಗಳನ್ನು ಸ್ವಚ್ಛ ಮಾಡಿ ಎಂದು ಶುಭ ಹಾರೈಸಿದ್ದರು. ಇದೇ ಸಂದರ್ಭದಲ್ಲಿ ಮನವಿ ಪತ್ರ ಮತ್ತು ಜಿಲ್ಲಾ ನೋಂದಣಿ ಅಧಿಕಾರಿಗಳಿಗೆ ನೀಡಿರುವ ದೂರಿನ ಪತ್ರವನ್ನು ಅಧ್ಯಕ್ಷರಿಗೆ ನೀಡಿದ್ದರು. ಸತ್ಯಾಸತ್ಯತೆ ಪರೀಕ್ಷೆ ನಡೆಸಿ ಎಂದು ನಿವೇದನೆ ಮಾಡಿಕೊಂಡಿದ್ದರು.
ಸಣ್ಣಪುಟ್ಟ ದುರಸ್ಥಿ ಕಾಮಗಾರಿಗೆ ನಾಲ್ಕೈದು ಪಟ್ಟು ಹಣ ಖರ್ಚು ಮಾಡಿರುವುದು. 2 ಶೌಚಾಲಯ ದುರಸ್ಥಿತಿಗೆ ಸುಮಾರು 30 ಲಕ್ಷ ಖುರ್ಚು ಮಾಡಿ ಸಂಘದ ಹಣ ದುರುಪಯೋಗ. ಕಳಸಾ ಬಂಡೂರಿ ಹೋರಾಟದ ಹೆಸರಿನಲ್ಲಿ ಸುಳ್ಳು ಲೆಕ್ಕ ನೀಡಿ ಅನವಶ್ಯಕವಾಗಿ ಸುಮಾರ 40 ಲಕ್ಷ ಖರ್ಚು ಮಾಡಿರುವುದು. ಸಂಸ್ಥೆಯ ವಜ್ರ ಮಹೋತ್ಸವ ಸಂದರ್ಭದಲ್ಲಿ ಎಲ್ಲ ಸದಸ್ಯರಿಗೆ ಬೆಳ್ಳಿ ತಟ್ಟೆ ನೀಡಿರುವುದು ಹೀಗೆ ಹತ್ತಾರು ಲಕ್ಷಗಳ ಅವ್ಯವಹಾರ ಇದೆ ಎಂದು ದೂರಿದ್ದಾರೆ.
ಸಿಸಿಐ ನ್ಯಾಯಾಲಯದಲ್ಲಿ ವಿವಿಧ ಪ್ರಕರಣಗಳಲ್ಲಿ ವೈಯಕ್ತಿಕವಾಗಿ ಸದಸ್ಯರುಗಳಿಗೆ ಪಾವತಿಸಲು ಹಾಕಿದ ದಂಡದ ಹಣ ಎರಡು ಕೋಟಿ, ಐವತ್ತು ಲಕ್ಷ ರೂಪಾಯಿ ಸಂಸ್ಥೆಯಿಂದ ಪಾವತಿಸಿ ಸಂಸ್ಥೆಗೆ ಆರ್ಥಿಕ ನಷ್ಟವುಂಟು ಮಾಡಿರುವುದು. ಹೀಗೆ ಇಪ್ಪತ್ತಕ್ಕೂ ಹೆಚ್ಚು ಅಂಶಗಳನ್ನು ಸಂಘಗಳ ಜಿಲ್ಲಾ ನೋಂದಣಿ ಅಧಿಕಾರಿಗಳಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಕುರಿತು ಇಂದಿನ ಅಧ್ಯಕ್ಷರು ಸ್ಪಷ್ಟನೆ ಕೊಡಬೇಕು ಎಂದು ಮನವಿ ಸಲ್ಲಿಸಿದ್ದಾರೆ.