– ‘ಸವೇರಾ’
(ಆಧಾರ: ಪೀಪಲ್ಸ್ ಡೆಮಾಕ್ರಸಿ. ಜೂನ್ 5, 2022)
ನರೇಂದ್ರ ಮೋದಿ ನೇತೃತ್ವದ ಸರಕಾರದ ಎಂಟು ವರ್ಷಗಳು ಪೂರ್ಣಗೊಳ್ಳುವ ವೇಳೆಗೆ ಕರ್ನಾಟಕವೂ ಸೇರಿದಂತೆ ದೇಶಾದ್ಯಂತ ‘ಥ್ಯಾಂಕ್ಯು ಮೋದೀಜೀ’ ಜಾಹೀರಾತುಗಳು ರಾರಾಜಿಸುತ್ತಿವೆ. ಬಿಜೆಪಿ ಹೊಸದೊಂದು ಘೋಷಣೆಯೊಂದಿಗೆ ಹದಿನೈದು ದಿನಗಳ ಆಚರಣೆ ಆರಂಭಿಸಿದೆ. ಆದರೆ ಇವೆಲ್ಲವುಗಳ ಮೂಲಕ ಜನಗಳ ಹೆಚ್ಚುತ್ತಿರುವ ಸಂಕಟಗಳ ಕಟು ವಾಸ್ತವವನ್ನು ಮರೆಮಾಚಲು ಸಾಧ್ಯವೇ? ಬಿಜೆಪಿ ‘ಸೇವಾ–ಸುಶಾಸನ್–ಗರೀಬ್ ಕಲ್ಯಾಣ್’ ಆಚರಣೆ ನಡೆಸುವಾಗ, ವಾಸ್ತವವಾಗಿ ಅದು ಜನಗಳನ್ನು ಮರುಳು ಮಾಡುತ್ತಿಲ್ಲವೇ, ಏಕೆಂದರೆ ಅದು ಈ ಎಂಟು ವರ್ಷಗಳಲ್ಲಿ ಆಳ್ವಿಕೆ ನಡೆಸಿರುವುದು ಕಾರ್ಪೊರೇಟ್ ಮತ್ತು ಶ್ರೀಮಂತ ವಿಭಾಗಗಳ ಹಿತಾಸಕ್ತಿಗಳಿಗಾಗಿಯಷ್ಟೇ ತಾನೇ?
ನರೇಂದ್ರ ಮೋದಿಯವರು ಭಾರತದ ಪ್ರಧಾನ ಮಂತ್ರಿಯಾಗಿ ಮೇ 26ರಂದು 8 ವರ್ಷಗಳಾದವು. ಈ ವಾರ್ಷಿಕೋತ್ಸವವನ್ನು ದೊಡ್ಡಪ್ರಮಾಣದಲ್ಲಿ ಆಚರಿಸಲು ಆಳುವ ಪಕ್ಷ ನಿರ್ಧರಿಸಿದೆ ಎಂದು ವರದಿಯಾಗಿದೆ. ಇದರೊಂದಿಗೇ ಅವರ ‘ಮಾದರಿ’ ಗುಜರಾತ್ ಸೇರಿದಂತೆ ಈ ವರ್ಷಾಂತ್ಯದ ವೇಳೆಗೆ ನಡೆಯಬೇಕಾಗಿರುವ ಕೆಲವು ರಾಜ್ಯಗಳ ವಿಧಾನಸಭೆಗಳ ಚುನಾವಣಾ ಪ್ರಚಾರದ ಆರಂಭವೂ ಆಗುತ್ತಿದೆ. ಇತ್ತೀಚೆಗೆ ಜೈಪುರದಲ್ಲಿ ನಡೆದ ಈ ಪಕ್ಷದ ರಾಷ್ಟ್ರೀಯ ಮತ್ತು ರಾಜ್ಯ ಪದಾಧಿಕಾರಿಗಳ ದೀರ್ಘ ಸಭೆಯ ನಂತರ ಮೋದಿ ಸರಕಾರದ ಸಾಧನೆಗಳ ಒಂದು ಉದ್ದ ಹೇಳಿಕೆ ಪ್ರಕಟವಾಯಿತು. ಅದರಲ್ಲಿ ಮೇ 30ರಿಂದ ಜೂನ್ 15 ರ ವರೆಗೆ ನಡೆಯುವ ವಾರ್ಷಿಕೋತ್ಸವಾಚರಣೆಗೆ ಮೂರು ಘೋಷಣೆಗಳನ್ನು ಕೊಡಲಾಯಿತು: ‘ಸೇವಾ-ಸುಶಾಸನ್-ಗರೀಬ್ ಕಲ್ಯಾಣ್, ಅಂದರೆ ಸೇವೆ, ಉತ್ತಮ ಆಳ್ವಿಕೆ ಮತ್ತು ಬಡವರ ಕಲ್ಯಾಣ.
ಆಳುವ ಪಕ್ಷ ಈ ಘೋಷಣೆಗಳನ್ನು ಆರಿಸಿರುವಲ್ಲಿ ಒಂದು ಕ್ರೂರ ಅಪಹಾಸ್ಯ ಇದೆ. ಏಕೆಂದರೆ ನಿಜವಾಗಿ, ಈ ಪಕ್ಷದ ಈ ಎಂಟು ವರ್ಷಗಳ ಸೇವೆ ಮತ್ತು ಆಡಳಿತ ಗರೀಬರ ಕಲ್ಯಾಣಕ್ಕಲ್ಲ, ಕಾರ್ಪೊರೇಟ್ ಕುಳಗಳ ಕಲ್ಯಾಣಕ್ಕೆ ಎಂದು ಈಗ ಬಹಳಷ್ಟು ಮಂದಿಗೆ ಸ್ಪಷ್ಟವಾಗುತ್ತಿದೆ. ಬಂಡವಾಳಶಾಹೀ ವ್ಯವಸ್ಥೆಯಲ್ಲಿ ಸರಕಾರಗಳು ಆಳುವ ವರ್ಗಗಳ ಕಾರ್ಯಕಾರಿ ಸಮಿತಿಗಳು ಎಂದು ಹೇಳಲಾಗುತ್ತದೆ. ಆದರೂ ಭಾರತದಲ್ಲಿ ಹಿಂದೆಂದೂ ಈ ಸರಕಾರದಷ್ಟು ಭಂಡತನದಿಂದ ನಾಚಿಕೆಯಿಲ್ಲದೆ ದೇಶೀ-ವಿದೇಶೀ ಬಂಡವಾಳಗರಿಗಾಗಿಯೇ ಹಗಲು-ರಾತ್ರಿ ಶ್ರಮಿಸಿರುವ ಸರಕಾರ ಬೇರೊಂದಿಲ್ಲ.
ಹೇಗೆ ಈ ‘ಮೋದಿ ಸರ್ಕಾರ್’ ಕಾರ್ಪೊರೇಟ್ ವಲಯದವರು, ಭೂಮಾಲಕರು ಮತ್ತು ಅವರ ಬಂಟರಿಗಾಗಿ ಕೆಲಸ ಮಾಡಿದೆ ಎಂದು ನೋಡೋಣ.
ಮೊದಲು, ‘ಸುಶಾಸನ’ ಅಂದರೆ ಉತ್ತಮ ಆಳ್ವಿಕೆಯ ಬಗ್ಗೆ ನೋಡೋಣ:
ಈ ಎಂಟು ವರ್ಷಗಳಲ್ಲಿ ಈ ಸರಕಾರ ಮಾಡಿರುವ ಒಂದು ಮುಖ್ಯ ಕೆಲಸವೆಂದರೆ, ಶ್ರೀಮಂತರಿಗಾಗಿ, ಅದರಲ್ಲೂ ಕಾರ್ಪೊರೇಟ್ ಮಂದಿಗೆ ಅನುಕೂಲವಾಗುವ ರೀತಿಯಲ್ಲಿ ಕಾನೂನುಗಳನ್ನು ರೂಪಿಸಿದ್ದು.
- ಈಗಿರುವ 29 ಕಾರ್ಮಿಕ ಕಾಯ್ದೆಗಳನ್ನು ರದ್ದು ಮಾಡಿ ನಾಲ್ಕು ‘ಸಂಹಿತೆ’ಗಳಾಗಿ ರೂಪಿಸಿ ಕಾರ್ಮಿಕರಿಗೆ ಇದುವರೆಗೆ ಇದ್ದ ಕಾನೂನು ರಕ್ಷಣೆಗಳೂ ಇಲ್ಲದಂತೆ ಮಾಡಿದ್ದು: ಕಾರ್ಮಿಕರನ್ನು ಮನಬಂದಂತೆ ನೇಮಿಸಲು, ತೆಗೆದುಹಾಕಲು ಅವಕಾಶ, ನಿಗದಿತ ವರ್ಷಗಳ ಕೆಲಸ, ಕನಿಷ್ಟಕೂಲಿ ನಿರ್ಧಾರದ ವಿಧಾನವನ್ನು ಬದಲಿಸುವುದು, ದುಡಿಮೆಯ ಗಂಟೆಗಳಲ್ಲಿ ಹೆಚ್ಚಳ, ಸಂಘ ಕಟ್ಟಿಕೊಳ್ಳುವುದೇ ಅಸಾಧ್ಯವಾಗುವಂತಹ ಕಟ್ಟಳೆಗಳು ಇವೆಲ್ಲ ಮಾಲಕರು ಬಹಳ ವರ್ಷಗಳಿಂದ ಕೇಳುತ್ತಿದ್ದ ‘ಅನುಕೂಲತೆ’ಗಳು. ಅವನ್ನೆಲ್ಲ ನಿರ್ಭಿಡೆಯಿಂದ ಕೊಡಮಾಡಿದ ಸರಕಾರವಿದು. ಇವು ಕಾರ್ಮಿಕ-ಪರ ಕ್ರಮಗಳೆಂದು ಈ ಆಳುವ ಪಕ್ಷವನ್ನು ಬೆಂಬಲಿಸುವವರೂ ಹೇಳಿಕೊಳ್ಳಲಾರದ ಪರಿಸ್ಥಿತಿ ಉಂಟಾಗಿದೆ.
- ಸಾಂಕ್ರಾಮಿಕದಿಂದ ಜನಗಳು ತೊಳಲಾಡುತ್ತಿದ್ದಾಗ ಅದರ ಪರಿವೆಯೇ ಇಲ್ಲದೆ 2020ರಲ್ಲಿ ತಂದ ಕೃಷಿ ಕಾಯ್ದೆಗಳು ಮತ್ತು ವಿದ್ಯುತ್ ಕಾಯ್ದೆಯ ತಿದ್ದುಪಡಿ: ಇವು ಭಾರತದ ಕೃಷಿ ವಲಯವನ್ನು ಕಾರ್ಪೊರೇಟ್‌ಗಳ ದುರಾಸೆಗೆ ತುತ್ತಾಗಿಸುವ ನಗ್ನ ರೈತ-ವಿರೋಧಿ ಕ್ರಮಗಳು ಎಂಬುದನ್ನು ಈಗಾಗಲೇ ರೈತರು ತಮ್ಮ ಒಂದು ವರ್ಷದ ಐಕ್ಯ ಹೋರಾಟದ ಮೂಲಕ ತೋರಿಸಿಕೊಟ್ಟಿದ್ದಾರೆ. ಸರಕಾರೀ ಖರೀದಿ ವ್ಯವಸ್ಥೆಯನ್ನು ಮತ್ತು ಕನಿಷ್ಟ ಬೆಂಬಲ ವ್ಯವಸ್ಥೆಯನ್ನು ಕಳಚಿ ಹಾಕುವುದು, ರೈತರಿಗೆ ಸಬ್ಸಿಡಿ ದರಗಳಲ್ಲಿ ವಿದ್ಯುತ್ ಪೂರೈಕೆಯನ್ನು ನಿಲ್ಲಿಸುವುದು, ಕಾಂಟ್ರಾಕ್ಟ್ ಕೃಷಿಗೆ ಅವಕಾಶ ನೀಡುವುದು, ಸಗಟು ವ್ಯಾಪಾರಸ್ಥರಿಗೆ ದಾಸ್ತಾನು ಮಾಡಿಕೊಂಡು ಆಹಾರ ದಾನ್ಯಗಳ ಬೆಲೆಗಳನ್ನು ನಿರ್ಧರಿಸಲು ಅವಕಾಶ ಮಾಡಿಕೊಡುವುದು ಈ ಮೂರು ಕೃಷಿ ಕಾಯ್ದೆಗಳು ಮತ್ತು ವಿದ್ಯುತ್ ತಿದ್ದುಪಡಿ ಮಸೂದೆಯ ಉದ್ದೇಶವಾಗಿತ್ತು.
- ಸರಕು ಮತ್ತು ಸೇವೆಗಳ ತೆರಿಗೆ ಅಂದರೆ ಜಿಎಸ್‌ಟಿ ಜಾರಿ ಮಾಡಿದ್ದು, ಈ ಮೂಲಕ ರಾಜ್ಯಗಳ ಅಧಿಕಾರ ವ್ಯಾಪ್ತಿಯಲ್ಲಿದ್ದ ತೆರಿಗೆ ವಿಧಿಸುವ ಅಧಿಕಾರಗಳನ್ನು ಕೂಡ ಕೇಂದ್ರ ಸರಕಾರದ ವ್ಯಾಪ್ತಿಗೆ ಸೆಳೆದುಕೊಂಡದ್ದು ಒಂದೆಡೆಯಾದರೆ, ಮತ್ತೊಂದೆಡೆ ಒಂದೇ ಹೊಡೆತದಲ್ಲಿ ಸಾವಿರಾರು ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳನ್ನು ನಾಶಮಾಡಿ, ಅಲ್ಲಿ ದುಡಿಯುತ್ತಿದ್ದವರನ್ನು ನಿರುದ್ಯೋಗಿಗಳಾಗಿ ಮಾಡಿ ದೊಡ್ಡ ಕಾರ್ಪೊರೇಟ್ ಕುಳಗಳಿಗೆ ಲಾಭ ಮಾಡಿಕೊಟ್ಟದ್ದು.
- ದಿವಾಳಿತನದ ಸಂಹಿತೆ(ಐಬಿಸಿ)-ಈ ಕಾಯ್ದೆಯ ಮೂಲಕ ತ್ವರಿತವಾಗಿ ಕಂಪನಿಗಳ ದಿವಾಳಿತನವನ್ನು ಘೋಷಿಸಿ, ದೊಡ್ಡ ಕಾರ್ಪೊರೇಟ್ ಗುಂಪುಗಳಿಗೆ ಕಡಿಮೆ ಖರ್ಚಿನಲ್ಲಿ ಅವನ್ನು ಖರೀದಿಸಲು ಅವಕಾಶ ಮಾಡಿಕೊಟ್ಟದ್ದು, ಮತ್ತೊಂದೆಡೆಯಲ್ಲಿ ಅವರಿಗೆ ಸಾಲ ನೀಡಿದ ಬ್ಯಾಂಕುಗಳು ಮತ್ತು ಇತರರಿಗೆ ಭಾರೀ ನಷ್ಟ ಉಂಟುಮಾಡಿದ್ದು.
- ನೇರ ವಿದೇಶಿ ಹೂಡಿಕೆಗಳಿಗೆ ಕಲ್ಲಿದ್ದಲು ಗಣಿಗಾರಿಕೆಯಿಂದ ಹಿಡಿದು ಬಾಹ್ಯಾಕಾಶ ಸಂಶೋಧನೆಯ ವರೆಗೆ ಎಲ್ಲವನ್ನೂ ಬಲಿಷ್ಟ ಬಹುರಾಷ್ಟ್ರೀಯ ಕಂಪನಿಗಳಿಗೆ ತೆರೆದು ಕೊಟ್ಟದ್ದು. ಇದೂ ಪರೋಕ್ಷವಾಗಿ ತಟ್ಟುತ್ತಿರುವುದು ಗರೀಬರನ್ನೇ.
‘ಸೇವೆಗಳು ಮತ್ತು ಕಲ್ಯಾಣ’– ಇವೂ ಕಾರ್ಪೊರೇಟ್ ಕುಳಗಳಿಗೇ!
‘ಮೋದಿ ಸರ್ಕಾರ್’ ಕಾರ್ಪೊರೇಟ್ ವಲಯಗಳಿಗೆ ಅಪಾರ ಬಕ್ಷೀಸುಗಳನ್ನು ಕೊಡಲು ಈ ಎಂಟು ವರ್ಷಗಳಲ್ಲಿ ತನ್ನ ಹಣಕಾಸು ಅಧಿಕಾರಗಳನ್ನು ಚೆನ್ನಾಗಿಯೇ ಬಳಸಿಕೊಂಡಿದೆ. ಕೆಲವು ಉದಾಹರಣೆಗಳು:
- ಕಾರ್ಪೊರೇಟ್ ತೆರಿಗೆ ಕಡಿತ: 2019ರಲ್ಲಿ 30%ದಿಂದ 22%ಕ್ಕೆ (ಸರ್ಚಾರ್ಜ್‌ಗಳನ್ನೂ ಸೇರಿಸಿದರೆ 35%ದಿಂದ 26%ಕ್ಕೆ) ತೀವ್ರವಾಗಿ ಇಳಿಸಲಾಯಿತು. ಇದರಿಂದ ಜನಸಾಮಾನ್ಯರ ಖರ್ಚಿನಲ್ಲಿ ಕಾರ್ಪೊರೇಟ್ ವಲಯಕ್ಕೆ 1.45 ಲಕ್ಷ ಕೋಟಿ ರೂ.ಗಳ ಬಕ್ಷೀಸು ಕೊಡಮಾಡಲಾಯಿತು.
- ಇತರ ತೆರಿಗೆ ರಿಯಾಯ್ತಿಗಳು: ಸರಕಾರದ ಬಜೆಟ್ ದಸ್ತಾವೇಜುಗಳ ಪ್ರಕಾರವೇ ‘ಮೋದಿ ಸರ್ಕಾರ್’ 2014-15ರಿಂದ 2020-21ರ ಅವಧಿಯಲ್ಲಿ ಒಟ್ಟು 6.15ಲಕ್ಷ ಕೋಟಿ ರೂ.ಗಳನ್ನು ವಿವಿಧ ರಿಯಾಯ್ತಿಗಳು, ವಿನಾಯ್ತಿಗಳು, ಮನ್ನಾಗಳ ಮೂಲಕ ಕಾರ್ಪೊರೇಟ್‌ಗಳಿಗೆ ಒದಗಿಸಲಾಗಿದೆ.
- ಕಾರ್ಪೊರೇಟ್ ಸಾಲ ಮನ್ನಾ: ಕಳೆದ 8 ವರ್ಷಗಳಲ್ಲಿ 10.72 ಲಕ್ಷ ಕೋಟಿ ರೂ. ಮೌಲ್ಯದ ಬ್ಯಾಂಕ್ ಸಾಲಗಳನ್ನು ಮನ್ನಾ ಮಾಡಿದೆ ಎಂದು ಮಾಹಿತಿ ಹಕ್ಕು ಕಾಯ್ದೆ(ಆರ್‌ಟಿಐ) ಅಡಿಯಲ್ಲಿ ನೀಡಿರುವ ಮಾಹಿತಿ ಹೇಳುತ್ತದೆ. ಇವುಗಳಲ್ಲಿ ಬಹಳಷ್ಟು 100 ಕೋಟಿ ರೂ.ಗಿಂತಲೂ ದೊಡ್ಡ ಮೊತ್ತದ ಸಾಲಗಳು, ಅಂದರೆ ಇದೂ ಕೂಡ ಕಾರ್ಪೊರೇಟ್ ವಲಯಕ್ಕೆ ಅಪಾರ ಲಾಭ ದೊರಕಿಸಿ ಕೊಟ್ಟ ಕ್ರಮ
- ದೊಡ್ಡ ಸುಸ್ತಿದಾರರೂ ದೊಡ್ಡ ಕಾರ್ಪೊರೇಟ್‌ಗಳೇ. ಇನ್ನೊಂದು ಆರ್‌ಟಿಐ ಪ್ರಶ್ನೆಗೆ ಉತ್ತರವಾಗಿ ರಿಜರ್ವ್ ಬ್ಯಾಂಕ್ ನೀಡಿದ ಮಾಹಿತಿಯ ಪ್ರಕಾರ ಒಟ್ಟು 1913 ಉದ್ದೇಶಪೂರ್ವಕ ಸುಸ್ತಿದಾರರಾದವರು ಬಾಂಕುಗಳಿಗೆ ಒಟ್ಟು 1.46ಲಕ್ಷ ಕೋಟಿ ರೂ.ಗಳನ್ನು ಮರುಪಾವತಿ ಮಾಡಿಲ್ಲ. ಇವರಲ್ಲಿ 264 ಸುಸ್ತಿದಾರರಲ್ಲಿ ಪ್ರತಿಯೊಬ್ಬರ ಸಾಲ ಬಾಕಿಯ ಮೊತ್ತ 100 ಕೋಟಿ ರೂ. ದಾಟಿದೆ, ಇವುಗಳ ಒಟ್ಟು ಮೌಲ್ಯವೇ 1.09 ಲಕ್ಷ ಕೋಟಿ ರೂ.
ಇದರಿಂದಲೂ ತೃಪ್ತವಾಗದ ‘ಮೋದಿ ಸರ್ಕಾರ್’ ವಿವಿಧ ಖಾಸಗಿ ಮಂದಿಗಳಿಗೆ ವಿವಿಧ ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಅಗ್ಗದಲ್ಲಿ ರೂ.4.86 ಲಕ್ಷ ಕೋಟಿ ರೂ.ಗಳಿಗೆ ಮಾರಿದೆ. ಇದಲ್ಲದೆ, 6ಲಕ್ಷ ಕೋಟಿ ರೂ.ಗಳಷ್ಟು ಬೆಲೆ ಬಾಳುವ ಸೊತ್ತುಗಳನ್ನು ‘ಭೋಗ್ಯ’ಕ್ಕೆ ಕೊಟ್ಟು ಖಾಸಗಿಯವರಿಗೆ ಬಕ್ಷೀಸು ನೀಡುವ ಯೋಚನೆಯನ್ನು ಈ ಸರಕಾರ ಮಾಡುತ್ತಿದೆ.
ಕೊವಿಡ್‌ನಿಂದಾಗಿ ಜಾಗತಿಕ ಅರ್ಥವ್ಯವಸ್ಥೆಯಲ್ಲಿ ಕಾಣುತ್ತಿರುವ ನಿಧಾನಗತಿ ಮತ್ತು ಕಾರ್ಮಿಕರ ಪ್ರತಿರೋಧದಿಂದಾಗಿ ಈ ಮಾರಾಟದ ಧಾವಂತ ತೊಂದರೆಗೆ ಸಿಲುಕಿಕೊಂಡಿದೆ. ಆದರರೀ ಎಚಿಟನೇ ವರ್ಷದ ಕೊನೆಯಲ್ಲಿ ಎಲ್‌ಐಸಿ ಐಪಿಒವನ್ನು ಮಾಡಿ ಕೋಟ್ಯಂತರ ಪಾಲಿಸಿದಾರರಿಗೆ ಹಿತಾಸಕ್ತಿಗಳಿಗೆ ಧಕ್ಕೆ ತಂದು ತನ್ನ ದೇಶಿ-ವಿದೇಶಿ ಕಾರ್ಪೊರೇಟ್ ಮಿತ್ರರ ಪ್ರಶಂಸೆ ಗಳಿಸಿದೆ.
ಜನಸಾಮಾನ್ಯರಿಗೆ ಸಿಕ್ಕಿದ್ದೇನು?
ಕೋಟ್ಯಂತರ ಪಾಲಿಸಿದಾರರ ಹಿತಾಸಕ್ತಿಗಳಿಗೆ ಧಕ್ಕೆ ಮಾತ್ರವಲ್ಲ, ಈ ಎಂಟು ವರ್ಷಗಳ ‘ಸೇವೆ-ಸುಶಾಸನ-ಕಲ್ಯಾಣ’ದಲ್ಲಿ ಒಟ್ಟಾರೆಯಾಗಿ ಜನಸಾಮಾನ್ಯರಿಗೆ ಸಿಕ್ಕಿದ್ದು ಸಗಟು ಮತ್ತು ಚಿಲ್ಲರೆ ಎರಡರಲ್ಲೂ ದಾಖಲೆ ಹಣದುಬ್ಬರ, ಬೆಲೆಯೇರಿಕೆಗಳು, ಮತ್ತು ದಾಖಲೆ ನಿರುದ್ಯೋಗ. 8 ವರ್ಷಗಳ ಹಿಂದೆ ಕೊಟ್ಟ ವರ್ಷಕ್ಕೆ 2ಕೋಟಿ ಉದ್ಯೋಗಾವಕಾಶಗಳ ನಿರ್ಮಾಣದ ಆಶ್ವಾಸನೆ ಎಂದೋ ಜುಮ್ಲಾಗಳ ಕಸದ ಬುಟ್ಟಿ ಸೇರಿದೆ.
ಮೋದಿ ಸರಕಾರ ವಿವಿಧ ಕಲ್ಯಾಣ ಯೋಜನೆಗಳ ಮೂಲಕ ಬಡಜನರಿಗೆ ಸೌಲಭ್ಯಗಳನ್ನು ಕಲ್ಪಿಸಿ ಕೊಟ್ಟಿರುವುದಾಗಿ ಹೇಳಿಕೊಳ್ಳುತ್ತಿದೆ. ಆದರೆ ಇವುಗಳಲ್ಲಿ ಹೆಚ್ಚಿನವು ತಲುಪಿರುವುದು ಇವುಗಳ ಅಗತ್ಯವಿರುವ ಜನಸಂಖ್ಯೆಯಲ್ಲಿ ಕೆಲವರಿಗೆ ಮಾತ್ರ. ಅಲ್ಲದೆ ಇವುಗಳಿಗೆ ಸರಕಾರ ತನ್ನ ಬಜೆಟ್‌ಗಳಲ್ಲಿ ಕೊಡುವ ಹಣವೂ ಸಾಕಷ್ಟು ಪ್ರಮಾಣದಲ್ಲಿಲ್ಲ ಎಂಬುದು ಮತ್ತೆ-ಮತ್ತೆ ಬಯಲಾಗುತ್ತಿರುವ ಸಂಗತಿ.
ಉದಾಹರಣೆಗೆ,
* ಪಡಿತರ ವ್ಯವಸ್ಥೆಯ ಅಗತ್ಯವಿರುವ ಸುಮಾರು 10 ಕೋಟಿ ಜನಗಳು ಅದರ ವ್ಯಾಪ್ತಿಯ ಹೊರಗಿದ್ದಾರೆ ಎಂದು ಅಂದಾಜು ಮಾಡಲಾಗಿದೆ.
* ‘ಮನರೇಗ’ದಡಿ ಕೆಲಸಕ್ಕೆ ಅರ್ಜಿ ಹಾಕಿರುವವರಲ್ಲಿ 14% ಮಂದಿಗೆ ಉದ್ಯೋಗ ನಿರಾಕರಿಸಲಾಗಿದೆ, ಅಲ್ಲದೆ, ಉದ್ಯೋಗ ಸಿಕ್ಕವರಿಗೂ ಕಾನೂನು ಪ್ರಕಾರ ಸಿಗಬೇಕಾದ 100 ದಿನಗಳ ಕೆಲಸದ ಬದಲಿಗೆ ಸಿಗುತ್ತಿರುವುದು ಸರಾಸರಿ 50ದಿನಗಳಿಗಿಂತಲೂ ಕಡಿಮೆ.
* ಉಚಿತ ಅಡುಗೆÀ ಅನಿಲ ಪೂರೈಕೆಯಂತೂ ಒಂದು ದೊಡ್ಡ ಮೋಸವೆಂದೇ ಪರಿಗಣಿಸಲ್ಪಟ್ಟಿದೆ. ಬಹಳಷ್ಟು ಬಡಕುಟುಂಬಗಳು 1000ರೂ. ಕೊಟ್ಟು ಎರಡನೇ ಸಿಲಿಂಡರ್ ಖರೀದಿಸಲಾರದ ಸ್ಥಿತಿಯಲ್ಲಿದ್ದಾರೆ ಎಂದು ವರದಿಯಾಗಿದೆ.
ಒಟ್ಟಿನಲ್ಲಿ, ಬಿಜೆಪಿ ‘ಸೇವಾ-ಸುಶಾಸನ್-ಗರೀಬ್ ಕಲ್ಯಾಣ್’ ಆಚರಣೆ ನಡೆಸುವಾಗ, ವಾಸ್ತವವಾಗಿ ಅದು ಜನಗಳನ್ನು ಮರುಳು ಮಾಡುತ್ತಿದೆ ಎಂದೇ ಹೇಳಬೇಕಾಗುತ್ತದೆ. ಏಕೆಂದರೆ ಅದು ಈ ಎಂಟು ವರ್ಷಗಳಲ್ಲಿ ಕೆಲಸ ಮಾಡಿರುವುದು ಕಾರ್ಪೊರೇಟ್ ಮತ್ತು ಶ್ರೀಮಂತ ವಿಭಾಗಗಳ ಹಿತಾಸಕ್ತಿಗಳಿಗಾಗಿಯಷ್ಟೇ. ಬಡಜನರನ್ನು ಮಂದಿರ, ಮಸೀದಿ, ತಾಜಮಹಲ್, ಕುತುಬ್ ಮೀನಾರ್‌ಗಳ ವಿವಾದಗಳಲ್ಲಿ ಮುಳುಗಿಸಿ, ‘ಕಾಶ್ಮೀರ್ ಫೈಲ್ಸ್’ ಮುಂತಾದವುಗಳಿಂದ ಬೆರಗುಗೊಳಿಸಿ ಅವರ ಗಮನ ಅತ್ತಲೇ ಇರುವಂತೆ ಮಾಡಬಹುದು ಎಂದು ಅದು ಭಾವಿಸಿದಂತಿದೆ. ಆದರೆ ಜನಗಳ ಸಂಕಟಗಳ ಕೊಡ ತುಂಬುತ್ತಿದೆ, ಆಳುವ ಪಕ್ಷದ ಮೋಸದ ಆಟವನ್ನು ಅವರು ಅರಿತುಕೊಳ್ಳಲಾರಂಭಿಸಿದ್ದಾರೆ.