ಚಲನಚಿತ್ರ ಗಾಯಕ ಕೃಷ್ಣಕುಮಾರ್‌ ಕುನ್ನತ್ ಅಂತ್ಯಕ್ರಿಯೆ

ಕೋಲ್ಕತ್ತಾ: ಇಲ್ಲಿನ ಲೈವ್‌ ಸಂಗೀತ ಕಾರ್ಯಕ್ರಮದ ನಂತರ ಚಿತ್ರರಂಗದ ಪ್ರಖ್ಯಾತ ಗಾಯಕ ಕೃಷ್ಣಕುಮಾರ್‌ ಕುನ್ನತ್‌ ಅವರ ಕುಟುಂಬದವರು ವರ್ಸೋವಾದ ಸ್ಮಶಾನದಲ್ಲಿ ಸಂಪ್ರದಾಯದಂತೆ ಅಂತಿಮ ವಿಧಿವಿಧಾನಗಳು ನೆರವೇರಿಸಿ ಅಂತ್ಯಕ್ರಿಯೆಯನ್ನು ನೆರವೇರಿಸಿದರು. ಈ ವೇಳೆ ಅವರ ಆಪ್ತರು ಪಾಲ್ಗೊಂಡಿದ್ದರು.

ಇದಕ್ಕೂ ಮೊದಲು ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಗಾಯಕಿ ಶ್ರೇಯಾ ಘೋಷಾಲ್, ಶಂಕರ್ ಮಹದೇವನ್, ಜಾವೇದ್ ಅಖ್ತರ್ ಸೇರಿದಂತೆ ಚಿತ್ರರಂಗದ ಸ್ನೇಹಿತರು-ಗಣ್ಯರು ಆಗಮಿಸಿ ಅಂತಿಮ ದರ್ಶನ ಪಡೆದರು.

ಅಚಾನಕ್ಕಾಗಿ ಮರಣ ಹೊಂದಿದ ಖ್ಯಾತ ಗಾಯಕ ಕೃಷ್ಣಕುಮಾರ್‌ ಕುನ್ನತ್ ದೀರ್ಘಕಾಲದ ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದರು ಎಂದು ವೈದ್ಯಕೀಯ ಪರೀಕ್ಷಾ ವರದಿಗಳಿಂದ ತಿಳಿದುಬಂದಿದೆ.

ʻಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯು ಮಯೋಕಾರ್ಡಿಯಲ್ ಇನ್ಫಾರ್ಕ್ಷನ್‌ನಿಂದಾಗಿ ಗಾಯಕ ಕೆಕೆ ಸಾವನ್ನಪ್ಪಿದ್ದಾರೆ. ಅವರ ಸಾವಿನ ಹಿಂದೆ ಯಾವುದೇ ದುಷ್ಕೃತ್ಯವಿಲ್ಲ. ಗಾಯಕನಿಗೆ ದೀರ್ಘಕಾಲದ ಹೃದಯ ಸಂಬಂಧಿ ಸಮಸ್ಯೆಗಳಿದ್ದವು ಎಂದು ಕ್ಲಿನಿಕಲ್ ಪರೀಕ್ಷೆಯಲ್ಲಿ ಕಂಡುಬಂದಿದೆ. ಪ್ರಸ್ತುತ ತಮಗೆ ಪ್ರಾಥಮಿಕ ಮಾಹಿತಿ ಮಾತ್ರ ಲಭ್ಯವಾಗಿದ್ದು, ಅಂತಿಮ ವರದಿ 72 ಗಂಟೆಗಳ ನಂತರ ಲಭ್ಯವಾಗಲಿದೆʼ ಎಂದು ಅಧಿಕಾರಿ ಹೇಳಿದರು.

ಮರಣದ ಹಿಂದಿ ಘಟನೆ

ಮಂಗಳವಾರ(ಮೇ 31) ರಾತ್ರಿ ಕೋಲ್ಕತ್ತಾದ ದಕ್ಷಿಣ ಭಾಗದಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡುತ್ತಿದ್ದಾಗ ಕೆಕೆ ಅನಾರೋಗ್ಯಕ್ಕೆ ತುತ್ತಾಗಿ ಹೋಟೆಲ್‌ಗೆ ಹಿಂತಿರುಗಿದ್ದರು. ಹೋಟೆಲ್‌ಗೆ ಹಿಂತಿರುಗುವಾಗ ಗಾಯಕ ಕೃಷ್ಣಕುಮಾರ್‌ ಕುನ್ನತ್‌ ‘ಸಾಕಷ್ಟು ನೋವು ಅನುಭವಿಸುತ್ತಿದ್ದರು ಮತ್ತು ಹೋಟೆಲ್ ಕೊಠಡಿಯೊಳಗೆ ಕುರ್ಚಿಯನ್ನು ಎಳೆಯಲು ಪ್ರಯತ್ನಿಸುವಾಗ ಕೆಳಗೆ ಬಿದ್ದು ಹಣೆಯ ಮೇಲೆ ಗಾಯ ಮಾಡಿಕೊಂಡರು ಎಂದು ಹೋಟೆಲ್‌ ಮ್ಯಾನೇಜರ್ ಹೇಳಿರುವುದು ವರದಿಯಾಗಿದೆ.

ಅಲ್ಲಿ ಅವರು ‘ಪ್ರಜ್ಞಾಹೀನರಾಗಿ ಬಿದ್ದ’ ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆಯಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು ‘ಮೃತಪಟ್ಟಿದ್ದಾರೆ’ ಎಂದು ಘೋಷಿಸಿದರು.

ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ತನಿಖೆಯ ಭಾಗವಾಗಿ ಹೋಟೆಲ್ ಅಧಿಕಾರಿಗಳೊಂದಿಗೆ ಮಾತನಾಡಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ʻʻನಾವು ಕೆಕೆ ತಂಗಿದ್ದ ಹೋಟೆಲ್‌ನ ಮ್ಯಾನೇಜರ್ ಮತ್ತು ಇತರ ಸಿಬ್ಬಂದಿಗಳೊಂದಿಗೆ ಮಾತನಾಡಿದ್ದೇವೆ ಮತ್ತು ಅಂದು ರಾತ್ರಿ ಅವರೊಂದಿಗೆ ಪ್ರದರ್ಶನ ನೀಡಿದ ಅವರ ತಂಡದ ಸದಸ್ಯರೊಂದಿಗೂ ಮಾತನಾಡಿದ್ದೇವೆ” ಎಂದು ಪೊಲೀಸ್‌ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗಾಯನ ಲೋಕದ ಸಾಹಸಗಳು

1990ರ ದಶಕದ ಉತ್ತರಾರ್ಧದಲ್ಲಿ ದೊಡ್ಡ ಮಟ್ಟದಲ್ಲಿ ಜನಪ್ರಿಯ ಚಿತ್ರಗಳ ‘ಪಾಲ್’ ಮತ್ತು ‘ಯಾರೋನ್’ ನಂತಹ ಹಾಡುಗಳಿಗೆ ಕೆಕೆ ಧ್ವನಿ ನೀಡಿದ್ದರು. ಅಲ್ಲಿಂದ ಕೆಕೆ ಧ್ವನಿ ಅಜರಾಮರವಾಯಿತು. ಎಲ್ಲಾ ವಯೋಮನದವರಿಗೆ ಕೆಕೆ ಅಚ್ಚುಮೆಚ್ಚಿನ ಗಾಯಕರಾಗಿದ್ದರು. 2000ರ ದಶಕದ ಆರಂಭದಿಂದ ಅವರು ಹಿನ್ನೆಲೆ ಗಾಯನದ ವೃತ್ತಿಜೀವನದಲ್ಲಿ ಮಿಂಚಿದರು. ಹಿಂದಿ, ತಮಿಳು, ತೆಲುಗು, ಕನ್ನಡ, ಮಲಯಾಳಂ, ಮರಾಠಿ ಮತ್ತು ಬೆಂಗಾಲಿ ಸೇರಿದಂತೆ ಇನ್ನೂ ಹಲವು ಭಾಷೆಗಳಲ್ಲಿ ಗಾಯನ ಮಾಡಿದ್ದರು.

Donate Janashakthi Media

Leave a Reply

Your email address will not be published. Required fields are marked *