ಮುಸ್ಲಿಂ ಸಮಾವೇಶ : ಎರಡು ಮಹತ್ವದ ನಿರ್ಣಯ ಅಂಗೀಕಾರ

ಮಂಗಳೂರು : ಸಿಪಿಐಎಂ ಕರ್ನಾಟಕ ರಾಜ್ಯ ಸಮಿತಿ ಮಂಗಳೂರಿನಲ್ಲಿ ಆಯೋಜಿಸಿದ್ದ ಮುಸ್ಲಿಂ ಸಮಾವೇಶದ ಎರಡನೇ ದಿನವಾದ ಇಂದು ಸಮಾವೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ರಕ್ಷಣೆ, ಪರಿಹಾರ, ಪುನರ್ವತಿ, ಸಬಲೀಕರಣ ಉದ್ದೇಶದ ಎರಡು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು‌.

ಎರಡನೇ ದಿನದ ಪ್ರತಿನಿಧಿ ಅಧಿವೇಶನ ನಗರದ ಡಾನ್ ಬಾಸ್ಕೊ ಸಭಾಂಗಣದಲ್ಲಿ ನಡೆಯಿತು. ರಾಜ್ಯದ ವಿವಿಧ ಜಿಲ್ಲೆಗಳ ಆಯ್ದ 400 ಪ್ರತಿನಿಧಿಗಳು ಭಾಗವಹಿಸಿದ್ದರು. ಇಡೀ ದಿನದ ಕಲಾಪದ ಕೊ‌ನೆಯಲ್ಲಿ ನಿರ್ಣಯಗಳನ್ನು ಅಂಗೀಕರಿಸಲಾಯಿತು. ಕಾರ್ಯಯೋಜನೆಯನ್ನು ರೂಪಿಸಲಾಯಿತು. ಧಾರ್ಮಿಕ ಅಲ್ಪಸಂಖ್ಯಾತರು ಅದರಲ್ಲೂ ಪ್ರಧಾನವಾಗಿ ಮುಸ್ಲಿಂ ಸಮುದಾಯ ಕೋಮುಹಿಂಸೆಗಳಿಂದ ಜರ್ಜರಿತಗೊಂಡಿದೆ. ಇತ್ತೀಚಿನ ವರ್ಷಗಳಲ್ಲಿ ಕೋಮು ಹಿಂಸೆಗೆ ಗುರಿಯಾಗುತ್ತಿರುವ ಅಲ್ಪಸಂಖ್ಯಾತ ಸಂತ್ರಸ್ತರಿಗೆ ಯಾವುದೆ ರಕ್ಷಣೆ ದೊರಕುತ್ತಿಲ್ಲ. ಪರಿಹಾರ ನೀಡದೆ ತಾರತಮ್ಯ ಎಸಗಲಾಗುತ್ತಿದೆ. ಈ ಕಳವಳಕಾರಿ ಬೆಳವಣಿಗೆಗಳಿಂದ ಧಾರ್ಮಿಕ ಅಲ್ಪಸಂಖ್ಯಾತ ಗುಂಪುಗಳು ಆತಂಕ, ತಬ್ಬಲಿತನಕ್ಕೆ ಒಳಗಾಗಿವೆ. ಇಂತಹ ಅನಾದಾರ, ಅಸಹಿಷ್ಣುತೆ, ತಾರತಮ್ಯ ಪ್ರಜಾಸತ್ತಾತ್ಮಕ , ಜಾತ್ಯಾತೀತ ಸಂವಿಧಾನ ಹೊಂದಿರುವ ದೇಶದ ಘನತೆಗೆ ತಕ್ಕುದಲ್ಲ. ಧಾರ್ಮಿಕ ಅಲ್ಪಸಂಖ್ಯಾತ ಗುಂಪುಗಳ ಸಂವಿಧಾನ ಬದ್ದ ಹಕ್ಕುಗಳ ರಕ್ಷಣೆಗೆ ಸರಕಾರಗಳು ತಕ್ಷಣ ಮುಂದಾಗಬೇಕು. ಅದಕ್ಕಾಗಿ ಕೋಮುಹಿಂಸೆಗೆ ಬಲಿಯಾಗುವ ಸಂತ್ರಸ್ತರಿಗೆ ರಕ್ಷಣೆ, ಪರಿಹಾರ, ಪುನರ್ವಸತಿ ಖಾತರಿ ಪಡಿಸುವ ಕಾನೂನು ರೂಪಿಸಬೇಕು ಎಂದು ನಿರ್ಣಯದಲ್ಲಿ ಒತ್ತಾಯಿಸಲಾಗಿದೆ.

ಹಾಗೆಯೆ ಜಸ್ಟಿಸ್ ಸಾಚಾರ್, ರಂಗನಾಥ ಮಿಶ್ರ ವರದಿಯ ಪ್ರಕಾರ ಮುಸ್ಲಿಮರು ಅತ್ಯಂತ ಹಿಂದುಳಿದಿರುವ ಸಮುದಾಯವಾಗಿದ್ದಾರೆ. ಪರಿಹಾರವಾಗಿ ಈ ಸಮಿತಿಗಳು ಹಲವು ಶಿಫಾರಸ್ಸುಗಳನ್ನು ಮಾಡಿವೆ. ಆದರೆ ಮತೀಯವಾದಿ ಸಿದ್ದಾಂತಗಳ ಮೇಲುಗೈಯ ಈ ಸಂದರ್ಭದಲ್ಲಿ ಶಿಫಾರಸ್ಸುಗಳ ಜಾರಿಯ ಪ್ರಶ್ನೆ ಮೂಲೆಗೊತ್ತಲ್ಪಟ್ಟಿದೆ. ಆದರೆ ದೇಶದ ಜನಸಂಖ್ಯೆಯ ಶೇಕಡಾ 15 ರಷ್ಟಿರುವ ಸಮುದಾಯವೊಂದನ್ನು ಸಬಲೀಕರಣಗೊಳಿಸುವ ಪ್ರಶ್ನೆ ಒಟ್ಟು ದೇಶದ ಅಭಿವೃದ್ದಿಯ ನಿಟ್ಟಿನಲ್ಲಿಯೂ ಪ್ರಧಾನವಾಗಿದೆ. ಈ ಹಿನ್ನಲೆಯಲ್ಲಿ ಮುಸ್ಲಿಂ ಅಲ್ಪಸಂಖ್ಯಾತರಿಗೆ ಜನಸಂಖ್ಯೆ ಪ್ರಮಾಣಕ್ಕೆ ಅನುಗುಣವಾಗಿ ಶಿಕ್ಷಣ, ವಸತಿ, ಸಾಮಾಜಿಕ ಕಲ್ಯಾಣಗಳಿಗೆ ಸರಕಾರ ಬಜೆಟ್ ನಲ್ಲಿ ಅನುದಾನ ಮೀಸಲಿಡಬೇಕು ಎಂಬ ನಿರ್ಣಯವು ಅಂಗೀಕಾರಗೊಂಡಿದೆ.

Donate Janashakthi Media

Leave a Reply

Your email address will not be published. Required fields are marked *