- ಪೋಖರಾ ವಿಮಾನನಿಲ್ದಾಣದಿಂದ ತೆರಳಿ ಮಾಯವಾಗಿದ್ದ ತಾರಾ ಏರ್ ವಿಮಾನ ಪತ್ತೆ
- ಪತನವಾದ ಸ್ಥಳಕ್ಕೆ ಬೇಟಿ ನೀಡಿದ ನೇಪಾಳದ ಸೈನಿಕ ಸೇನೆ
ನೇಪಾಳ: ನಾಲ್ವರು ಭಾರತೀಯರು ಸೇರಿ 22 ಮಂದಿ ಪ್ರಯಾಣಿಸುತ್ತಿದ್ದ ವಿಮಾನ ನಾಪತ್ತೆಯಾಗಿದ್ದು, ತಾರಾ ಏರ್ ಎಂಬ ಖಾಸಗಿ ವಿಮಾನಸಂಸ್ಥೆಗೆ ಸೇರಿದ ‘9ಎನ್–ಎಇಟಿ’ ವಿಮಾನವು ಪೋಖರಾದಿಂದ ಜೋಮ್‌ಸೊಮ್ ಎಂಬಲ್ಲಿಗೆ ಹೊರಟಿತ್ತು. ಇಬ್ಬರು ಜರ್ಮನ್ ಪ್ರಜೆಗಳು, 13 ಮಂದಿ ನೇಪಾಳಿಯರು, ಮೂವರು ಸಿಬ್ಬಂದಿಯೂ ವಿಮಾನದಲ್ಲಿದ್ದರು ಎಂದು ತಾರಾ ಏರ್ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಳಿಗ್ಗೆ 9.55ಕ್ಕೆ ಪೋಖರಾ ವಿಮಾನನಿಲ್ದಾಣದಿಂದ ತೆರಳಿದ್ದ ವಿಮಾನವು ಪಶ್ಚಿಮ ಭಾಗದ ಪರ್ವತಪ್ರದೇಶದಲ್ಲಿರುವ ಜೋಮ್‌ಸೊಮ್ ವಿಮಾನನಿಲ್ದಾಣಕ್ಕೆ 10.15ಕ್ಕೆ ತಲುಪಬೇಕಿತ್ತು.ಆದರೆ ‘ಟೇಕಾಫ್ ಆದ 15 ನಿಮಿಷಗಳ ನಂತರ ವಿಮಾನವು ನಿಯಂತ್ರಣ ಸಂಪರ್ಕ ಕಳೆದುಕೊಂಡಿತು’ ಎಂದು ತಾರಾ ಏರ್‌ನ ವಕ್ತಾರ ತಿಳಿಸಿದ್ದು, ಭಾನುವಾರ ಬೆಳಗ್ಗೆ ಪತನಗೊಂಡ ಪ್ರಯಾಣಿಕ ವಿಮಾನದ ಅವಶೇಷಗಳನ್ನು ವಾಯುವ್ಯ ನೇಪಾಳದ ಮುಸ್ತಾಂಗ್ ಜಿಲ್ಲೆಯ ಸನೋಸ್ವೇರ್, ಥಾಸಾಂಗ್ -2ರಲ್ಲಿ ಪತ್ತೆ ಹಚ್ಚಲಾಗಿದೆ. ವಿಮಾನವು ರಾಡಾರ್ ಸಂಪರ್ಕ ಕಳೆದುಕೊಂಡ ಸುಮಾರು 20 ಗಂಟೆಗಳ ನಂತರ ಪತ್ತೆಯಾಗಿತ್ತು.
ನೇಪಾಳ ಸೇನೆಯ 10 ಸೈನಿಕ ತಂಡವನ್ನು ಹೊತ್ತ ಹೆಲಿಕಾಪ್ಟರ್ ಘಟನಾ ಸ್ಥಳಕ್ಕೆ ತಲುಪಿದ್ದು, ಪ್ರಯಾಣಿಕರ ಪತ್ತೆಮಾಡುವ ಮತ್ತು ರಕ್ಷಣೆ ಮಾಡುವ ಕಾರ್ಯದಲ್ಲಿ ತಂಡ ತೊಡಗಿದೆ. ಹಾಗು ಮೋಡ ಕವಿದ ವಾತಾವರಣವಿದ್ದು, ಮಳೆಯೂ ಬೀಳುತ್ತಿರುವ ಕಾರಣ ರಕ್ಷಣಾ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ನಾಗರಿಕ ವಿಮಾನಯಾನ ಪ್ರಾಧಿಕಾರ ತಿಳಿಸಿದೆ.
‘ವಿಮಾನದ ಕ್ಯಾಪ್ಟನ್ ಪ್ರಭಾಕರ್ ಘಿಮಿರೆ ಅವರ ಮೊಬೈಲ್ ರಿಂಗ್ ಆಗುತ್ತಿದ್ದನ್ನ ನೇಪಾಳ ಟೆಲಿಕಾಂ ಸಂಸ್ಥೆ ಪತ್ತೆ ಹಚ್ಚಿತು. ಅದರ ಆಧಾರದ ಮೇಲೆ ವಿಮಾನವು ಪತನಗೊಂಡಿರುವ ಸ್ಥಳವನ್ನು ಗುರುತಿಸಲಾಯಿತು’ ಎಂದು ತ್ರಿಭುವನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಧಾನ ವ್ಯವಸ್ಥಾಪಕ ಪ್ರೇಮನಾಥ್ ಠಾಕೂರ್ ಹೇಳಿದ್ದಾರೆ.
‘ವಿಮಾನವು ಖೈಬಾಂಗ್ ಬಳಿ ಎರಡು ಬಾರಿ ವೃತ್ತಾಕಾರದಲ್ಲಿ ಹಾರಾಡಿ ನಂತರ ಲೇಟೆ ಪಾಸ್ ಬಳಿ ಬಿತ್ತು ಎಂಬುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ’ ಎಂದು ಜಿಲ್ಲಾಧಿಕಾರಿ ಮ್ಯಾಗ್ಡಿ ಚಿರಂಜೀವಿ ರಾಣಾ ಮಾಹಿತಿ ನೀಡಿದ್ದಾರೆ.
ಮಹಾರಾಷ್ಟ್ರದ ಠಾಣೆ ನಿವಾಸಿಗಳಾದ ಅಶೋಕಕುಮಾರ್ ತ್ರಿಪಾಠಿ, ಪತ್ನಿ ವೈಭವಿ ತ್ರಿಪಾಠಿ, ಮಕ್ಕಳಾದ ಧನುಷ್ ಹಾಗೂ ರಿತಿಕಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದು. ವಿಮಾನ ನಾಪತ್ತೆಯಾದ ಬೆನ್ನಲ್ಲೇ, ನೇಪಾಳದಲ್ಲಿರುವ ಭಾರತದ ರಾಯಭಾರ ಕಚೇರಿ ಅಧಿಕಾರಿಗಳು ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿ, ತ್ರಿಪಾಠಿ ಕುಟುಂಬದ ಬಗ್ಗೆ ವಿವರಗಳನ್ನು ಸಂಗ್ರಹಿಸಿದರು ಎಂದು ಮೂಲಗಳು ತಿಳಿಸಿವೆ.