ಬೆಂಗಳೂರು: ರಾಜಧಾನಿಯಲ್ಲಿ ಸುದ್ದಿಗೋಷ್ಠಿ ನಡೆಸುವ ವೇಳೆ ಕಿಡಿಗೇಡಿಗಳು ಭಾರತೀಯ ಕಿಸಾನ್ ಯೂನಿಯನ್ ಸಂಘಟನೆಯ ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್ ಮುಖಕ್ಕೆ ಮಸಿ ಬಳಿದಿದ್ದಾರೆ. ರಾಜ್ಯದ ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ ಅವರ ಮೇಲಿನ ಭ್ರಷ್ಟಾಚಾರ ಆರೋಪದ ಬಗ್ಗೆ ಚರ್ಚಿಸಲು ಕರೆಯಲಾಗಿದ್ದ ಸಭೆಯಲ್ಲಿ ಮಾರಾಮಾರಿ ನಡೆದಿದೆ. ಏಕಾಏಕಿ ಸುದ್ದಿಗೋಷ್ಠಿಗೆ ನುಗ್ಗಿದವರು ರಾಕೇಶ್ ಟಿಕಾಯತ್ ಮೇಲೆ ಮೈಕ್ನಿಂದ ಹೊಡೆದು ಹಲ್ಲೆ ಮಾಡಿ, ನಂತರ ಮುಖಕ್ಕೆ ಮಸಿ ಬಳೆದಿದ್ದಾರೆ.
ದೆಹಲಿಯಲ್ಲಿ ನಡೆದ ಪ್ರತಿಭಟನೆಗೆ ರಾಜ್ಯದಿಂದ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಕರೆದಿರಲಿಲ್ಲ. ಅಲ್ಲದೆ ವೈರಲ್ ಆದ ಆಡಿಯೋ ಸಂಭಾಷಣೆಯಲ್ಲಿ ನನ್ನ ಹೆಸರು ತಳಕು ಹಾಕಿಕೊಂಡಿದೆ. ಹಣದ ವಿಚಾರವಾಗಿ ಯಾವೊಬ್ಬ ರೈತ ಮುಖಂಡನ ಜೊತೆಯಲ್ಲಿಯೂ ನಾನು ಮಾತನಾಡಿಲ್ಲ ಎಂದು ಹೇಳುತ್ತಿದ್ದಂತೆ ಪತ್ರಕರ್ತರ ಸೋಗಿನಲ್ಲಿದ್ದ ಪತ್ರಕರ್ತರ ಸೋಗಿನಲ್ಲಿದ್ದ ಮೂವರು ಕಿಡಿಗೇಡಿಗಳು ಏಕಾಏಕಿ ವೇದಿಕೆ ಹತ್ತಿ ರಾಕೇಶ್ ಟಿಕಾಯಿತ್ ಹಾಗೂ ಯದುವಿರ್ ಸಿಂಗ್ ಮೇಲೆ ಕಪ್ಪು ಮಸಿ ಎರಚಿದ್ದಾರೆ.
ಕೋಡಿಹಳ್ಳಿ ಚಂದ್ರಶೇಖರ್ ಮೇಲೆ ಬಂದಿರುವ ಆರೋಪದ ಸಂಬಂಧ ರಾಕೇಶ್ ಟಿಕಾಯತ್ ಮಾತಾನಾಡುತ್ತಿರುವಾಗ ,ರೈತ ಸಂಘದ ಮೂಲ ಹೋರಾಟಗಾರರ ಸಭೆ ಕರೆಯಲಾಗಿತ್ತು. ವ್ಯಕ್ತಿಯೊಬ್ಬ ಮೋದಿ ಹೆಸರು ಕೂಗಿ ಏಕಾಏಕಿ ವೇದಿಕೆಗೆ ನುಗ್ಗಿ ರಾಕೇಶ್ ಟಿಕಾಯತ್ ಅವರಿಂದ ಮೈಕ್ ಕಿತ್ತು ಹೊಡೆದಿದ್ದಾನೆ. ನಂತರ ಸಭೆಯಲ್ಲಿದ್ದ ಮಂದಿ ವ್ಯಕ್ತಿಯನ್ನು ಹಿಡಿದು ಥಳಿಸಿದರು.
ಘಟನೆಯ ವೇಳೆ ಐದು ಕುರ್ಚಿಗಳು ಪುಡಿಪುಡಿಯಾಗಿವೆ. ಒಂದು ಕ್ಷಣ ಗಾಂಧಿಭವನ ರಣರಂಗವಾಗಿ ಕಾಣುತ್ತಿತ್ತು. ಸಭಿಕರು ಮೂವರು ಕಿಡಿಗೇಡಿಗಳನ್ನು ಹಿಡಿದು ಹೈಗ್ರೌಂಡ್ಸ್ ಪೊಲೀಸರಿಗೆ ಒಪ್ಪಿಸಿದ್ದಾರೆ. ವಿಚಾರಣೆ ವೇಳೆ ಭರತ್ ಶೆಟ್ಟಿ, ಪ್ರತಾಪ್, ಶಿವಕುಮಾರ್ ಎಂದು ಗೊತ್ತಾಗಿದ್ದು ಭಾರತ್ ರಕ್ಷಣಾ ವೇದಿಕೆಯ ಸದಸ್ಯರು ಎಂದು ಹೇಳಲಾಗುತ್ತಿದೆ ಮತ್ತು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.
ಗಲಾಟೆಯ ಹಿಂದಿನ ಕಾರಣ
ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದ ನಂತರ ರಾಕೇಶ್ ಟಿಕಾಯತ್ ಮೇಲೆ ಕೋಡಿಹಳ್ಳಿ ಚಂದ್ರಶೇಖರ್ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಇದಕ್ಕೆ ಇಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಅಲ್ಲದೆ, ಸ್ಪಷ್ಟವಾದ ಉತ್ತರವನ್ನು ನೀಡಲು ಸುದ್ದಿಗೋಷ್ಠಿ ಕರೆದಿದ್ದರು. ಸುದ್ದಿಗೋಷ್ಠಿ ನಡೆಯುತ್ತಿದ್ದ ವೇಳೆಯೇ ಅವರ ಮೇಲೆ ಹಲ್ಲೆ ನಡೆದಿದೆ.