ಮಂಗಳೂರು: ಸಿಪಿಐ(ಎಂ) ಪಕ್ಷದ ವತಿಯಿಂದ ಮೇ 31 ಹಾಗೂ ಜೂನ್ 1ರಂದು ಹಮ್ಮಿಕೊಳ್ಳಲಾಗಿರುವ ರಾಜ್ಯಮಟ್ಟದ ಮುಸ್ಲಿಂ ಸಮಾವೇಶ ಕೇವಲ ಮುಸ್ಲಿಮರನ್ನು ಒಟ್ಟು ಸೇರಿಸಿ ನಡೆಸುವ ಸಮಾವೇಶವಲ್ಲ ಬದಲಾಗಿ, ವಾಸ್ತವ ಬದುಕಿನ ಚಿತ್ರಣ ಬಿಂಬಿಸುವ ಸಮಾವೇಶವಾಗಿದೆ ಎಂದು ಸಿಪಿಐ(ಎಂ) ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನೀಲ್ ಕುಮಾರ್ ಬಜಾಲ್ ಹೇಳಿದ್ದಾರೆ.
ಮುಸ್ಲಿಂ ಸಮುದಾಯವನ್ನು ಗುರಿಯನ್ನಾಗಿಸಿ ಹಸಿಹಸಿ ಸುಳ್ಳುಗಳ ಸರಮಾಲೆಯನ್ನು ಸೃಷ್ಠಿಸಿ ದ್ವೇಷ ರಾಜಕಾರಣ ನಡೆಸುವ ಬಿಜೆಪಿ ಹಾಗೂ ಸಂಘಪರಿವಾರದ ಹುನ್ನಾರಗಳನ್ನು ಬಯಲಿಗೆಳೆಯುವ ಹಿನ್ನೆಲೆಯ ಸಿಪಿಐ(ಎಂ) ಪಕ್ಷದಿಂದ ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.
ದೇಶದಲ್ಲಿ ಕೋಮುವಾದಿ ಶಕ್ತಿಗಳು ಜನತೆಯ ನಿಜ ಸಮಸ್ಯೆಗಳನ್ನು ಬದಿಗೆ ಸರಿಸುವ ನಿಟ್ಟಿನಲ್ಲಿ ದೇಶದ ಹಿಂದೂ-ಮುಸ್ಲಿಂ ಐಕ್ಯತೆ, ಕೋಮು ಸೌಹಾರ್ದತೆಯನ್ನು ಹಾಳು ಮಾಡುವ ಮೂಲಕ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಅದರಲ್ಲೂ, ಕೋಮುವಾದಿಗಳ ಕಪಿಮುಷ್ಠಿಯಲ್ಲಿ ನಲುಗುತ್ತಿರುವ ಮುಸ್ಲಿಂ ಸಮುದಾಯವನ್ನು ಒಂಟಿಯನ್ನಾಗಿಸುವ ಪ್ರಕ್ರಿಯೆ ತೀವ್ರಗೊಳ್ಳುತ್ತಿದೆ ಎಂದರು.
ಸಂಘಪರಿವಾರ ನಿರುದ್ಯೋಗಿಗಳನ್ನು, ಹಿಂದುಳಿದವರನ್ನು, ವಂಚನೆಗೆ ಒಳಗಾದವ ಅಮಾಯಕರನ್ನು ಬಳಸಿಕೊಳ್ಳುವ ಮೂಲಕ ಮುಸ್ಲಿಮರ ಮೇಲೆ ದ್ವೇಷವನ್ನು ಹುಟ್ಟುಹಾಕುತ್ತಿದೆ. ಆ ಮೂಲಕ ನಿರುದ್ಯೋಗ, ಉದ್ಯೋಗ ನಷ್ಟ, ಬೆಲೆ ಏರಿಕೆ, ಖಾಸಗೀಕರಣದಂತಹ ಪ್ರಶ್ನೆಗಳನ್ನು ಪ್ರಶ್ನಿಸದಂತೆ ಮಾಡುವಂತೆ ದಾರಿ ತಪ್ಪಿಸುವ ಕೆಲಸಕ್ಕೆ ಮುಂದಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಅಭದ್ರತೆಯಿಂದ ಕಾಡುತ್ತಿರುವ ಮುಸ್ಲಿಂ ಸಮುದಾಯದ ಬಗೆಗಿನ ಅಪಪ್ರಚಾರಗಳಿಗೆ ಸರಿಯಾದ ಉತ್ತರ ಹೇಳುವ ಮೂಲಕ ಕೋಮುವಾದಿ ಶಕ್ತಿಗಳನ್ನು ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ರಾಜ್ಯಮಟ್ಟದ ಮುಸ್ಲಿಂ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.
ಜಾತ್ಯಾತೀತ ಮನಸುಗಳು, ಮಾನವೀಯ ಹೃದಯಗಳು, ಪ್ರಜಾಪ್ರಭುತ್ವವಾದಿ ಶಕ್ತಿಗಳು ಸೇರಿದಂತೆ ಮುಸ್ಲಿಮೇತರ ಬಂಧುಗಳು ಭಾಗವಹಿಸುವ ಮೂಲಕ ಅರ್ಥಪೂರ್ಣವಾದ ಮುಸ್ಲಿಂ ಸಮಾವೇಶ ನಡೆಸಲಾಗುತ್ತದೆ. ಈ ಮೂಲಕ ಕೋಮುವಾದ ಮುಕ್ತ ಭವ್ಯ ಭಾರತದ ನಿರ್ಮಾಣಕ್ಕೆ ಹೆಚ್ಚೆಯಿಡಲಿದ್ದೇವೆ ಎಂದು ಸುನೀಲ್ ಕುಮಾರ್ ಬಜಾಲ್ ಕರೆ ನೀಡಿದರು.