ನವದೆಹಲಿ: ಆಧಾರ್ ಕಾರ್ಡು ದುರುಪಯೋಗವನ್ನು ತಡೆಗಟ್ಟುವ ಸಲುವಾಗಿ ಸಾರ್ವಜನಿಕರು ತಮ್ಮ ಆಧಾರ್ ಕಾರ್ಡು ನಕಲಿ ಪ್ರತಿಗಳನ್ನು ಎಲ್ಲೆಂದರಲ್ಲಿ, ಯಾವುದೇ ಸಂಸ್ಥೆಗಳೊಂದಿಗೆ ಹಂಚಿಕೊಳ್ಳುದಿರಿ ಅಥವಾ ವಿತರಿಸದಿರಿ ಎಂದು ಕೇಂದ್ರ ಸರ್ಕಾರ ತಿಳಿಸಿದ್ದು, ಹಂಚಿಕೊಳ್ಳುವ ಅನಿವಾರ್ಯತೆ ಎದುರಾದಲ್ಲಿ ಮಾಸ್ಕ್‌ಡ್ ಆಧಾರ್ ಪ್ರತಿ ಹಂಚಿಕೊಳ್ಳಬಹುದೆಂದು ಸಲಹೆ ನೀಡಿದೆ.
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ(ಯುಐಡಿಐಎಐ)ದಿಂದ ಪರವಾನಗಿ ಪಡೆದ ಸಂಸ್ಥೆಗಳು ಮಾತ್ರವೇ ಜನರ ಗುರುತನ್ನು ತಿಳಿಯಲು ಆಧಾರ್ ಬಳಸಬಹುದು. ಜನರು ತಮ್ಮ ಆಧಾರ್ ಕಾರ್ಡು ಪ್ರತಿಯನ್ನು ಹಂಚಿಕೊಳ್ಳುವ ಮೊದಲು ಆ ಸಂಸ್ಥೆ ಯುಐಡಿಐಎಐ ನಿಂದ ಪರವಾನಗಿ ಪಡೆದಿದೆಯೇ ಎಂಬುದನ್ನು ಪರಿಶೀಲಿಸಲು ಸರ್ಕಾರ ನಾಗರಿಕರಲ್ಲಿ ಕೇಳಿಕೊಂಡಿದೆ.
ಹೋಟೆಲ್‌ಗಳು ಅಥವಾ ಸಿನಿಮಾ ಹಾಲ್‌ಗಳಂತಹ ಪರವಾನಗಿ ಪಡೆಯದ ಖಾಸಗಿ ಸಂಸ್ಥೆಗಳು ಆಧಾರ್ ಪ್ರತಿಗಳನ್ನು ಸಂಗ್ರಹಿಸಲು ಅಥವಾ ಇರಿಸಿಕೊಳ್ಳಲು ಅನುಮತಿ ಇಲ್ಲ ನೀಡಿಲ್ಲ. ಇದು ಆಧಾರ್ ಕಾಯ್ದೆ 2016ರ ಅಡಿಯಲ್ಲಿ ಅಪರಾಧವಾಗಿದೆ ಎಂದು ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹಾಗೂ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಪ್ರಕಟಣೆ ನೀಡಿದೆ.
ನಾಗರಿಕರು ತಮ್ಮ ಇ-ಆಧಾರ್ ಪಡೆದುಕೊಳ್ಳಲು ಸಾರ್ವಜನಿಕ ಕಂಪ್ಯೂಟರ್, ಇಂಟರ್ನೆಟ್ ಕೆಫೆ ಅಥವಾ ಕಿಯೋಸ್ಕ್ಗಳನ್ನು ಬಳಸುವುದನ್ನು ಆದಷ್ಟು ತಪ್ಪಿಸುವಂತೆಯೂ ಸರ್ಕಾರ ಸಲಹೆ ನೀಡಿದೆ. ಒಂದು ಅವುಗಳನ್ನು ಅವಲಂಬಿಸುವುದು ಅನಿವಾರ್ಯವೆನಿಸಿದರೂ ತಮ್ಮ ಕೆಲಸಗಳೆಲ್ಲ ಮುಗಿದ ಕೂಡಲೇ ನೀವು ಬಳಸಿರುವ ಕಂಪ್ಯೂಟರ್ನಿಂದ ಶಾಶ್ವತವಾಗಿ ಅಳಿಸಿ ಹಾಕುವುದನ್ನು ಮರೆಯಬೇಡಿ ಎಂದು ಎಚ್ಚರಿಸಿದೆ.
ಸುರಕ್ಷತೆಯ ದೃಷ್ಟಿಯಿಂದ ಆಧಾರ್ ಸಂಖ್ಯೆಯ ಕೊನೆಯ 4 ಅಂಕಿಗಳನ್ನು ಮಾತ್ರ ಪ್ರದರ್ಶಿಸುವ ಮಾಸ್ಕ್‌ಡ್ ಆಧಾರ್ ಕಾರ್ಡ್ ಅನ್ನು ನಾಗರಿಕರು ಬಳಸುವುದು ಉತ್ತಮ. ಮಾಸ್ಕ್‌ಡ್ ಆಧಾರ್ ಪ್ರತಿಯಲ್ಲಿ ಎಲ್ಲಾ 12 ಅಂಕಿಗಳು ಕಾಣಿಸುವುದಿಲ್ಲ. ಅದರ ಬದಲಿಗೆ ಕೇವಲ 4 ಅಂಕಿಗಳು ಮಾತ್ರವೇ ಕಾಣುತ್ತಿರುತ್ತವೆ. ಇದನ್ನು ಯುಐಡಿಎಐ ಅಧಿಕೃತ ವೆಬ್‌ಸೈಟ್ https://myaadhaar.uidai.gov.in ನಿಂದ ಪಡೆದುಕೊಳ್ಳಬಹುದಾಗಿದೆ.