ದೇವಸ್ಥಾನಕ್ಕೆ ಮೊದಲು ಮಸೀದಿ ಇತ್ತು
ಮಸೀದಿಗೂ ಮುನ್ನ ದೇವಸ್ಥಾನವಿತ್ತು.
ದೇವಸ್ಥಾನಕ್ಕೂ ಮುನ್ನ ಏನಿತ್ತು…?
ಬಹುಶಃ ಹೊಲ, ಗದ್ದೆ ಇರಬಹುದು
ಅದು ಭತ್ತ,ರಾಗಿ ಅಥವಾ ಗೋಧಿ ಬೆಳೆಯದಾಗಿದ್ದು, ಎಲ್ಲರ ಹಸಿವಿನೊಂದಿಗೆ ಸಂಬಂಧ ಹೊಂದಿತ್ತು.
ಆದರೆ, ಹಸಿವಿಗೆ ಯಾವುದೇ ಧರ್ಮವಿರಲಿಲ್ಲ…
ಆ ಜಮೀನನ್ನು ಯಾವಾಗ ವಶಪಡಿಸಿಕೊಳ್ಳಲಾಯಿತು…?
ಆ ಜಮೀನಿಗಾಗಿ ಯಾರು ಹೋರಾಡುತ್ತಾರೆ…?
ಆ ಜಮೀನು ಮೊದಲು ಏನಾಗಿತ್ತು
ಅಲ್ಲಾಹ ಅಥವಾ ರಾಮನ ಹೆಸರಿಗೆ ಮುನ್ನ
ಕಾಬಾ ಅಥವಾ ಕಾಶಿಯಾಗುವ ಮುಂಚೆ
ರಾಮ್ ರಾಮ್ ಸಲಾಮ್ಗೂ ಮೊದಲು
ಬಹುಶಃ ದಟ್ಟವಾದ ಕಾಡಾಗಿತ್ತು…
ಆ ಕಾಡು ಬಹಳ ಚಂದವಿತ್ತು..
ಆಡಮ್ ಇನ್ನೂ ಮನುಷ್ಯನಾಗಿರಲಿಲ್ಲ
ಆತನಿಗೆ ಬೆಂಕಿ ಹಚ್ಚುವುದು ತಿಳಿದಿರಲಿಲ್ಲ…
ಬೆಂಕಿಗೆ ಯಾವುದೇ ಧರ್ಮವೂ ಇರಲಿಲ್ಲ…
ಆ ಕಾಡು ಸುಟ್ಟು ಬೂದಿಯಾಯಿತು
ಆ ಕಾಡಿಗಾಗಿ ಯಾರು ಹೋರಾಡುತ್ತಾರೆ…?
ಕಾಡಿಗೂ ಮುನ್ನ ಏನಾಗಿತ್ತು
ಒಂದು ಭೂ ಮಂಡಲವಾಗಿತ್ತು
ಎಲ್ಲೆಡೆ ಮಂಜು ಕವಿದಿತ್ತು
ಆಗ ನೀನು ಎಲ್ಲಿದ್ದೆ, ನಾನು ಎಲ್ಲಿದ್ದೆ..?
ಅಲ್ಲಿ ಹಿಂದೂವಾಗಲಿ ಮುಸ್ಲಿಮನಾಗಲಿ ಇರಲಿಲ್ಲ
ಯಾರದೇ ಅವಶೇಷವೂ ಇರಲಿಲ್ಲ
ಅವಶೇಷಗಳಿಗೆ ಯಾವುದೇ ಧರ್ಮವೂ ಇರಲಿಲ್ಲ…
ಈಗ ಈ ಭೂ ಮಂಡಲ ಧರ್ಮಗಳ ತಾಣವಾಗಿದೆ
ಈ ಭೂ ಮಂಡಲಕ್ಕಾಗಿ ಯಾರು ಹೋರಾಡುತ್ತಾರೆ….
~ ಸರಬ್ಜಿತ್ ಸಿಂಗ್ ಬೆಹ್ಲ್
ಕನ್ನಡಕ್ಕೆ: ಮಂಜುಳ ಕಿರುಗಾವಲು