- ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಬಹುಕೋಟಿ ಲಂಚ ಆರೋಪ
- ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ರೈತ ಸಂಘದ ಮುಖಂಡರ ಆಕ್ರೋಶ
- ಆರೋಪ ಮುಕ್ತ ಆಗುವವರೆಗೂ ಹಸಿರು ಶಾಲು ಧರಿಸುವಂತಿಲ್ಲ ಎಂದು ಎಚ್ಚರಿಕೆ
ಕೋಲಾರ: ರೈತ ಸಂಘದ ನಾಯಕ ಅಂತ ಹೇಳಿಕೊಂಡಿರುವ ಕೋಡಿಹಳ್ಳಿ ಚಂದ್ರಶೇಖರ್ ಮೇಲೆ ಹೊತ್ತಿರುವ ಬಹುಕೋಟಿ ಲಂಚದ ಆರೋಪ ಮುಕ್ತವಾಗುವ ತನಕ ಯಾವುದೇ ಕಾರಣಕ್ಕೂ ಹಸಿರು ಶಾಲು ಹಾಕಬಾರದು ಜೊತೆಗೆ ರೈತ ಸಂಘಕ್ಕೆ ರಾಜೀನಾಮೆ ಕೊಟ್ಟು ಸಾರ್ವಜನಿಕ ಜೀವನದಿಂದ ಹೊರಗಿರಬೇಕು ಇಲ್ಲವಾದರೆ ಅವರು ಭಾಗವಹಿಸುವ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಮುತ್ತಿಗೆ ಹಾಕಲಾಗುತ್ತದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ಬಣಿ ಶಿವಪ್ಪ ಎಚ್ಚರಿಕೆ ನೀಡಿದರು
ನಗರದ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಕಳೆದ ವರ್ಷ ನಡೆದ ಸಾರಿಗೆ ನೌಕರರ ಮುಷ್ಕರವನ್ನು ಹಿಂಪಡೆಯುವ ಸಲುವಾಗಿ 35 ಕೋಟಿ ಲಂಚ ಪಡೆದು ನೌಕರರಿಗೆ ಮತ್ತು ರೈತ ಸಮುದಾಯಕ್ಕೆ ವಂಚನೆ ಮಾಡಿದ್ದಾರೆ ಅದೇ ರೀತಿ ಬೆಂಗಳೂರು ಸಿಟಿ ಮಾರುಕಟ್ಟೆಯ ಸೊಪ್ಪಿನ ಹೋರಾಟದಿಂದ ತಿಂಗಳಿಗೆ 60 ಸಾವಿರ ಪಡೆಯುತ್ತಾ ಇದ್ದು ಇದು ದಾಖಲೆ ಸಮೇತ ರೈತರು ಬಹಿರಂಗ ಪಡಿಸಿದ್ದರು ಇಂತಹವರು ರೈತರ ಹೆಸರು ಹೇಳುವುದಕ್ಕೂ ಯೋಗ್ಯತೆ ಇಲ್ಲ ಎಂದರು.
ಇದನ್ನೂ ಓದಿ : ಕೋಡಿಹಳ್ಳಿ ಚಂದ್ರಶೇಖರ್ 35 ಕೋಟಿ ರೂ ವಸೂಲಿ ಆರೋಪ : ತನಿಖೆಗೆ ಸಾರಿಗೆ ನೌಕರರ ಆಗ್ರಹ
ಬರೀ ಲಂಚಕ್ಕಾಗಿ ಮಾತ್ರ ಹೋರಾಟಗಳನ್ನು ಮಾಡುವ ಕೋಡಿಹಳ್ಳಿ ಚಂದ್ರಶೇಖರ್ ಸಾವಿರಾರು ಸಾರಿಗೆ ನೌಕರರು ಬೀದಿಗೆ ಬೀಳುವಂತೆ ಮಾಡಿದ್ದಲ್ಲದೆ ಓರ್ವ ನೌಕರ ಅಮಾನುಷವಾಗಿ ಬಲಿಪಡೆದುಕೊಂಡಿದ್ದಲ್ಲದೆ ನಾಲ್ಕು ನಿಗಮದಲ್ಲಿ ಸುಮಾರು ಮಂದಿ ಆತ್ಮಹತ್ಯೆ ಮಾಡಿಕೊಳ್ಳಲು ನೇರ ಹೊಣೆಗಾರರಾಗಿದ್ದಾರೆ. ಕೋಡಿಹಳ್ಳಿ ಚಂದ್ರಶೇಖರ್ ರವರು ಆರಂಭದಲ್ಲಿ ರಸ್ತೆ ಸಾರಿಗೆ ನೌಕರರ ಸಂಘದ ಗೌರವಾಧ್ಯಕ್ಷನಾಗಿ ನೇತೃತ್ವ ವಹಿಸಿಕೊಂಡು ಭ್ರಷ್ಟಾಚಾರ ಮಾಡಿದ್ದಾರೆ ಸಾರಿಗೆ ನೌಕರರಿಗೂ ರೈತ ಮುಖಂಡ ಎನಿಸಿಕೊಂಡಿರುವ ಕೋಡಿಹಳ್ಳಿಗೂ ಯಾವುದೇ ಸಂಬಂಧ ಇಲ್ಲ ಆದರೂ ಹಣಕ್ಕಾಗಿ ಹೋರಾಟದ ನೇತೃತ್ವವನ್ನು ವಹಿಸಿದ್ದ ಎಂದು ಆರೋಪಿಸಿದರು.
ಇತ್ತಿಚಿಗೆ ಖಾಸಗಿ ಸುದ್ದಿವಾಹಿನಿಯೊಂದು ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಸತತವಾಗಿ ದೆಹಲಿಯ ನಾಲ್ಕು ಗಡಿಗಳಲ್ಲಿ ಸುಮಾರು 1 ವರ್ಷಕ್ಕೂ ಹೆಚ್ಚು ಕಾಲ ನಡೆದ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ಸು ಪಡೆಯುವಂತಾ ಹೋರಾಟದಲ್ಲಿ ಸುಮಾರು 3000 ಕೋಟಿ ನೀಡಿದರೆ ಅಲ್ಲಿಯ ಹೋರಾಟವನ್ನು ಸ್ಥಗಿಗೊಳಿಸಲು ನಾನು ಸಿದ್ಧನಿದ್ದೇನೆ. ಈಗಾಗಲೇ ನಾನು ಅಲ್ಲಿನ ರೈತ ಹೋರಾಟಗಾರರನ್ನು ಮಾತನಾಡಿದ್ದೇನೆ ಎಂದು ಹೇಳಿರುವುದು ಖಂಡನೀಯ ರೈತ ಸಂಘದ ಮುಂಚೂಣಿ ನಾಯಕನಾಗಿ ರೈತ ಸಮುದಾಯಕ್ಕೆ ಹಸಿರು ಶಾಲುಗಳಿಗೆ ಅವಮಾನ ಮಾಡಿದ್ದಾನೆ ಇವನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆರೋಪಿಸಿದರು.
ಕೋಡಿಹಳ್ಳಿ ಚಂದ್ರಶೇಖರ್ ಮೇಲಿರುವ ಆರೋಪ ಏನು?
ಕಳೆದ 2021ರ ಏಪ್ರಿಲ್ನಲ್ಲಿ ಸಾರಿಗೆ ಇಲಾಖೆಯ ನಾಲ್ಕು ನಿಗಮಗಳ ನೌಕರರು ವಿವಿಧ ಬೇಡಿಕೆ ಈಡೇರಿಕೆಗಾಗಿ ಮುಷ್ಕರ ಹೂಡಿದ್ದರು. ಇದರ ನೇತೃತ್ವವನ್ನು ಕೋಡಿಹಳ್ಳಿ ಚಂದ್ರಶೇಖರ್ ವಹಿಸಿಕೊಂಡಿದ್ದರು. ಆದರೆ, ಈಗ ಮುಷ್ಕರ ನಿಲ್ಲಿಸಲು ಕೋಡಿಹಳ್ಳಿ ಚಂದ್ರಶೇಖರ್ ಅವರಿಗೆ 35 ಕೋಟಿ ರೂ. ಕಿಕ್ ಬ್ಯಾಕ್ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಸಾರಿಗೆ ಇಲಾಖೆಯ ನೌಕರರು ಈ ವಿಚಾರವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ಬೆಡಶೆಟ್ಟಿಹಳ್ಳಿ ರಮೇಶ್ ಮಾತನಾಡಿ ಕೋಡಿಹಳ್ಳಿ ಚಂದ್ರಶೇಖರ್ ಹೋರಾಟ ಪ್ರಾರಂಭ ಮಾಡತ್ತಾರೆ ಹೋರಾಟದಿಂದ ಜಯ ಸಿಗುವ ತನಕ ಮಾಡಲ್ಲ ಬರೀ ಲಂಚದ ಹೋರಾಟಗಳಾಗಿವೆ ನಾವು ಹಸಿರು ಶಾಲು ಸಮಾಜಿಕ ಕಳಕಳಿಯಿಂದ ಹಾಕಿಕೊಂಡು ರೈತರ ಸಮಸ್ಯೆಗಳಿಗೆ ಹೋರಾಟ ಮಾಡಿದರೆ ಇನ್ನೂ ಕೆಲವರು ಸಂಪಾದನೆಗಾಗಿ ಹಸಿರು ಶಾಲುಗಳನ್ನು ಹಾಕಿಕೊಂಡಿದ್ದಾರೆ ಎಂದರು.
ಈ ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಬಿಸನಹಳ್ಳಿ ಬೈಚೇಗೌಡ, ಮಾಲೂರು ತಾಲ್ಲೂಕು ಅಧ್ಯಕ್ಷ ಹರೀಶ್, ಬಂಗಾರಪೇಟೆ ತಾಲ್ಲೂಕು ಅಧ್ಯಕ್ಷ ತಿಮ್ಮಾರೆಡ್ಡಿ, ಮುಖಂಡರಾದ ಕೃಷ್ಣಮೂರ್ತಿ, ಸುಕನ್ಯಾ, ಗುರಪ್ಪ ಮುಂತಾದವರು ಇದ್ದರು.