ಹುಲಿಕಟ್ಟಿ ಚನ್ನಬಸಪ್ಪ
ಸಂಪುಟ – 06, ಸಂಚಿಕೆ 15, ಏಪ್ರೀಲ್ 08, 2012
ಕನ್ನಡ ಧ್ವಜವನ್ನು
ಮುಗಿಲೆತ್ತರಕ್ಕೆ
ಹಾರಿಸುವ ಮುನ್ನ
ಒಮ್ಮೆ ನೆಲದತ್ತ
ಕಣ್ಣು ಹಾಯಿಸೋಣ
ಈ ನೆಲದ ನೋವಿಗೆ
ಒಮ್ಮೆ ಸ್ವಂದಿಸೋಣ
`ಅಗೋ ಅಲ್ಲಿ ನೋಡಿ
ಶಾಂತಿಯ ತೋಟದ
ಹೂ ಬನದಲ್ಲಿ
ಯಾರೋ ಬಿತ್ತಿದ್ದಾರೆ
ವಿಷ ಮುಳ್ಳುಗಳನ್ನು
ಬೀದಿಯಲ್ಲಿ
ಯಾರದೋ ನೆತ್ತರು ಹರಿಯುತ್ತಿದೆ.
ಫಲ ಕೊಡುವ
ಮರಗಳ ಟೊಂಗೆಗಳಲ್ಲಿ
ಮಣ್ಣಿನ ಮಗನ
ಹೆಣಗಳು.
ಜಾತಿ ಗದ್ದಲದ ಭೀತಿಯಲ್ಲಿ
ಕನ್ನಡಮ್ಮ ಹೌಹಾರಿ ನಿಂತಿದ್ದಾಳೆ
ಯಾರೋ ಹಚ್ಚಿದ
ದ್ವೇಷದ ಬೆಂಕಿಯಲ್ಲಿ
ಕನ್ನಡದ ಮನಸ್ಸುಗಳು
ಚಟಪಟ ಸಿಡಿಯುತ್ತಿವೆ.
ಕನ್ನಡಮ್ಮನಿಗೆ
ಪೀತಾಂಬರ ತೊಡಿಸುವ ಮುನ್ನ
ಹರಿದ ಸೀರೆ
ಕೆದರಿದ ತಲೆಯ
ಬಡ ಭುವನೇಶ್ವರಿಯ ಬಗ್ಗೆ
ಒಮ್ಮೆ ಯೋಚಿಸೋಣ
ನೆಲದತ್ತ ಒಮ್ಮೆ
ಕಣ್ಣು ಹಾಯಿಸೋಣ.
0