ಬೆಂಗಳೂರು: ಎರಡು ಪದವೀಧರ ಕ್ಷೇತ್ರಗಳು ಮತ್ತು ಎರಡು ಶಿಕ್ಷಕರ ಕ್ಷೇತ್ರಗಳಿಗೆ ಜೂ 13ರಂದು ಮತದಾನ ನಡೆಯುತ್ತದೆ. ಇದಲ್ಲದೆ, ವಿಧಾನಸಭೆಯ ಸದಸ್ಯರು ಆಯ್ಕೆ ಮಾಡುವ ವಿಧಾನ ಪರಿಷತ್ತಿನ 7 ಸ್ಥಾನ ಸ್ಥಾನಗಳ ಅಭ್ಯರ್ಥಿಗಳ ಆಯ್ಕೆ ಪ್ರಮುಖ ರಾಜಕೀಯ ಪಕ್ಷಗಳಿಗೆ ಕಗ್ಗಂಟಾಗಿ ಪರಿಣಮಿಸಿದೆ. ಇಂದು ಸಂಜೆಯ ಒಳಗೆ ಅಭ್ಯರ್ಥಿಗಳು ಯಾರೆಂದು ಘೋಷಣೆ ಮಾಡಲೇ ಬೇಕಾಗಿದೆ.
ವಿಧಾನಸಭೆಯ ಬಲಾಬಲದ ಪ್ರಕಾರ ಏಳು ಸ್ಥಾನಗಳ ಪೈಕಿ ಬಿಜೆಪಿ 4, ಕಾಂಗ್ರೆಸ್ 2 ಮತ್ತು ಜೆಡಿಎಸ್ ಒಂದು ಸ್ಥಾನದಲ್ಲಿ ಗೆಲುವು ಸಾಧಿಸಲಿವೆ.
ಇದನ್ನು ಓದಿ: ವಿಧಾನ ಪರಿಷತ್ತಿನ 25 ಸ್ಥಾನಕ್ಕೆ ಚುನಾವಣೆ ಘೋಷಣೆ: ಡಿ.10ಕ್ಕೆ ಮತದಾನ
ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳನ್ನು ಇನ್ನೂ ಘೋಷಣೆ ಮಾಡದಿರುವುದು ಮೇಲ್ನೋಟಕ್ಕೆ ಪಕ್ಷದೊಳಗಿನ ಆಂತರಿಕ ಗುಂಪುಗಾರಿಕೆ, ಆಕ್ಷಾಂಕ್ಷಿಗಳ ಪಟ್ಟಿ ದೊಡ್ಡದಿರುವುದು ಕಾರಣವಿರಬಹುದೆಂದು ಎನ್ನಲಾಗುತ್ತಿದೆ. ಅಲ್ಲದೆ, ಬಿಜೆಪಿ ಮತ್ತು ಕಾಂಗ್ರೆಸ್ ತಮ್ಮ ಹೈಕಮಾಂಡ್ ನಾಯಕರ ಅಂತಿಮ ಸೂಚನೆಗಾಗಿ ಕಾಯುತ್ತಿದ್ದರೆ, ಇತ್ತ ಜೆಡಿಎಸ್ ಎರಡು ರಾಷ್ಟ್ರೀಯ ಪಕ್ಷಗಳು ಟಿಕೆಟ್ ಘೋಷಿಸುವವರೆಗೂ ಕಾದು ನೋಡುವ ತಂತ್ರ ಅನುಸರಿಸುತ್ತಿದೆ.
ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ನಾಳೆ (ಮೇ 24) ಕೊನೆಯ ದಿನ. ನಾಮಪತ್ರ ಸಲ್ಲಿಕೆಗೆ ಒಂದೇಒಂದು ದಿನ ಬಾಕಿ ಇರುವಾಗಲೂ ಸಹ ಪ್ರಮುಖ ಪಕ್ಷಗಳೂ ಅಭ್ಯರ್ಥಿಗಳನ್ನು ಅಂತಿಮಗೊಳಸದಿರುವುದು ಹಲವು ಅನುಮಾನಗಳನ್ನು ಸೃಷ್ಠಿಸಿದೆ. ಯಾರಿಗೆ ಟಿಕೆಟ್ ನೀಡಬೇಕು ಎಂಬ ಬಗ್ಗೆ ಇನ್ನೂ ಸ್ಪಷ್ಟ ನಿರ್ಧಾರಕ್ಕೆ ಬರದಿರುವುದಕ್ಕೆ ಕಾರಣಗಳು ತಿಳಿದುಬಂದಿಲ್ಲ. ನಾಮಪತ್ರ ಸಲ್ಲಿಕೆಗೆ ಅಧಿಸೂಚನೆ ಹೊರಡಿಸಿದ ನಂತರ ಈವರೆಗೆ ಒಂದೇ ಒಂದು ನಾಮಪತ್ರ ಸಲ್ಲಿಕೆಯಾಗಿಲ್ಲ.
ಬಿಜೆಪಿಯಲ್ಲೂ ಈವರೆಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿಲ್ಲ. ಈಗಾಗಲೇ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ನೀಡಲಾಗಿದ್ದರೂ, ಹೈಕಮಾಂಡ್ನಿಂದ ಅಂತಿಮ ನಿರ್ಧಾರ ಹೊರಬಿದ್ದಿಲ್ಲ. ಬಿಜೆಪಿಗೆ ಸಿಗಲಿರುವ ನಾಲ್ಕು ಸ್ಥಾನಗಳಿಗೆ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಮಾಜಿ ಸಿಎಂ ಬಿಎಸ್ವೈ ಪುತ್ರ ಬಿ.ವೈ ವಿಜಯೇಂದ್ರ ಅವರ ಹೆಸರು ಪ್ರಭಲವಾಗಿ ಕೇಳಿಬರುತ್ತಿದೆ. ಅವರ ಜೊತೆಗೆ ನಿರ್ಮಲ್ ಕುಮಾರ್ ಸುರಾನ, ಛಲವಾದಿ ನಾರಾಯಣ ಸ್ವಾಮಿ, ಮಹಾಂತೇಶ ಕವಟಗಿಮಠ, ಕೇಶವಪ್ರಸಾದ್ ಹಾಗೂ ಅಶ್ವತ್ಥ ನಾರಾಯಣ ಗೌಡ ಹೆಸರು ಮುಂಚೂಣಿಯಲ್ಲಿದೆ. ಆದರೆ ವಿಜಯೇಂದ್ರ ಅವರ ಆಯ್ಕೆಗೆ ಹೈಕಮಾಂಡ್ ಒಪ್ಪಿಗೆ ಸೂಚಿಸುತ್ತಾ? ಎಂಬ ಪ್ರಶ್ನೆಯೂ ಉದ್ಭವವಾಗಿದೆ.
ಇದನ್ನು ಓದಿ: ಮುಗಿಯದ ಆಯ್ಕೆ ಪ್ರಕ್ರಿಯೆ: ರಾಜ್ಯಸಭೆ-ಪರಿಷತ್ ಟಿಕೆಟ್ಗಾಗಿ ದೆಹಲಿಯಲ್ಲಿ ಬೀಡುಬಿಟ್ಟಿರುವ ರಾಜ್ಯ ಕಾಂಗ್ರೆಸ್ ನಾಯಕರು
ಕಾಂಗ್ರೆಸ್ ಗೆಲ್ಲಲು ಸಾಧ್ಯವಿರುವ ಎರಡು ಸ್ಥಾನಗಳಿಗೆ ಹಲವು ಮಂದಿ ಅಭ್ಯರ್ಥಿಗಳು ಆಕ್ಷಾಂಕ್ಷಿಗಳಾಗಿದ್ದಾರೆ. ಐವನ್ ಡಿಸೋಜಾ, ಎಸ್.ಆರ್.ಪಾಟೀಲ, ನಿವೇದಿತ್ ಆಳ್ವ, ಮನ್ಸೂರ್ ಅಲಿ ಖಾನ್, ಆರ್. ಬಿ. ತಿಮ್ಮಾಪುರ, ವೀಣಾ ಅಚ್ಚಯ್ಯ, ಅಲ್ಲಂ ವೀರಭದ್ರಪ್ಪ ಹೆಸರು ಮುಂಚೂಣಿಯಲ್ಲಿದೆ. ಈ ಪೈಕಿ ಹೈಕಮಾಂಡ್ ಆಯ್ಕೆ ಯಾರದ್ದು ಎಂಬುವುದು ಸದ್ಯಕ್ಕೆ ಕುತೂಹಲವಾಗಿದೆ.
ಕಾಂಗ್ರೆಸ್ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದೆಹಲಿಗೆ ಹೋಗಿದ್ದು, ಹೈಕಮಾಂಡ್ ನಾಯಕ ಭೇಟಿಯಾಗಲಿದ್ದಾರೆ. ಟಿಕೆಟ್ ಹಂಚಿಕೆ ಬಗ್ಗೆ ಚರ್ಚೆ ನಡೆಸಿ ಸಂಜೆ ಹೊತ್ತಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಿದ್ದಾರೆ. ಈ ಸಂಬಂಧ ಮೊನ್ನೆಯಷ್ಟೇ ಡಿಕೆಶಿ ಮತ್ತು ಸಿದ್ದರಾಮಯ್ಯ ಅವರೊಂದಿಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸಭೆ ನಡೆಸಿದ್ದರು.
ಈ ಕುರಿತು ನವದೆಹಲಿಯಲ್ಲಿ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಮತ್ತು ನಾನು ಸೇರಿ ಚರ್ಚೆ ನಡೆಸಿಯೇ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಹೈಕಮಾಂಡ್ಗೆ ನೀಡಿದ್ದೇವೆ. ಇಂದು ಸಂಜೆಯೇ ಪಟ್ಟಿ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ.
ಜೆಡಿಎಸ್ನಿಂದ ಇಬ್ಬರು ಅಭ್ಯರ್ಥಿಗಳು ನಿವೃತ್ತರಾಗುತ್ತಿದ್ದರೂ ತನ್ನ ಅಭ್ಯರ್ಥಿಗಳು ಯಾರು ಎಂದು ಇನ್ನೂ ಘೋಷಿಸಿಲ್ಲ. ಜೆಡಿಎಸ್ನಲ್ಲಿ ಟಿ.ಎ.ಶರವಣ, ಕುಪೇಂದ್ರ ರೆಡ್ಡಿ ಸೇರಿ ಇನ್ನೂ ಕೆಲವರು ಪ್ರಯತ್ನ ನಡೆಸಿದ್ದಾರೆ. ಈ ಮಧ್ಯೆ ರಾಜ್ಯಸಭೆಗೆ ತನ್ನ ಅಭ್ಯರ್ಥಿಯನ್ನು ಗೆಲ್ಲಿಸಬಹುದಾದಷ್ಟು ಶಾಸಕ ಸ್ಥಾನಗಳು ಇಲ್ಲದಿದ್ದರೂ ಸಹ ಯಾವುದೇ ರಾಷ್ಟ್ರೀಯ ಪಕ್ಷಗಳನ್ನು ಬೆಂಬಲಿಸುವುದಿಲ್ಲ, ನಮ್ಮ ಅಭ್ಯರ್ಥಿಯನ್ನು ಹಾಕುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಈ ಮಧ್ಯೆ ಜೂನ್ 10ಕ್ಕೆ ರಾಜ್ಯಸಭೆಯ 4 ಸ್ಥಾನಗಳಿಗೆ ಕರ್ನಾಟಕದಲ್ಲಿ ಚುನಾವಣೆ ನಡೆಯುತ್ತದೆ. ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗೆ 31 ರವರೆಗೆ ಸಮಯಾವಕಾಶವಿದೆ.