ಯುದ್ಧ ಮತ್ತು ಆಹಾರ ಸಾರ್ವಭೌಮತೆ

ಪ್ರೊ. ಪ್ರಭಾತ್ ಪಟ್ನಾಯಕ್
ಅನು: ಕೆ.ಎಂ. ನಾಗರಾಜ

ಸ್ವಾತಂತ್ರ‍್ಯವೆಂದರೆ ಆಹಾರ ಸ್ವಾವಲಂಬನೆಯೇ ಎಂಬ ಸರಳ ಸತ್ಯವನ್ನು ಎಲ್ಲೆಡೆ ಜರುಗಿದ ವಸಾಹತುಶಾಹಿ-ವಿರೋಧಿ ಹೋರಾಟಗಳು ಅರ್ಥಮಾಡಿಕೊಂಡಿದ್ದವು. ಪ್ರತಿಯೊಂದು ದೇಶದೊಳಗೂ ಅಲ್ಲದಿದ್ದರೂ, ಕನಿಷ್ಠ ಪಕ್ಷ ಮೂರನೇ ಜಗತ್ತಿನ ದೇಶಗಳ ಗುಂಪಿನ “ಆಹಾರ ಸಮುದಾಯ”ದ ಕನಿಷ್ಠ ಬಳಕೆಯ ಮಟ್ಟವನ್ನು ತಲುಪುವತ್ತ ಅವು ಶ್ರಮಿಸಿದವು. ಆದರೆ ಈ ಗುರಿಯನ್ನು ತ್ಯಜಿಸುವಂತೆ ಸಾಮ್ರಾಜ್ಯಶಾಹಿಯು ಭಾರತವೂ ಸೇರಿದಂತೆ ಈ ದೇಶಗಳ ಮೇಲೆ ಒತ್ತಡ ಹಾಕುತ್ತಲೇ ಬಂದಿದೆ. ಆಫ್ರಿಕಾದ ದೇಶಗಳು ಈ ಒತ್ತಡಕ್ಕೆ ತಲೆಬಾಗಿ ಈಗ ಅದಕ್ಕೆ ಬೆಲೆ ತೆರುತ್ತಿವೆ. ಭಾರತ ತನ್ನ “ಆಹಾರ ಸಾರ್ವಭೌಮತೆ”ಯನ್ನು ಹಲವು ನ್ಯೂನ್ಯತೆಗಳ ನಡುವೆಯೂ ಕಾಯ್ದುಕೊಂಡು ಬಂದಿತ್ತು. ಆದರೆ ಮೋದಿ ಸರಕಾರ ಇಂತಹ ಸಾರ್ವಭೌಮತೆಯ ಬೆನ್ನೆಲುಬಾದ ಕನಿಷ್ಠ ಬೆಂಬಲ ಬೆಲೆ ಕ್ರಮವನ್ನು ಹಿಂತೆಗೆದುಕೊಳ್ಳುವ ಕೃಷಿ ಶಾಸನಗಳನ್ನು ತಂದು ತಲೆಬಾಗಲು ಮುಂದಾಯಿತು. ಆದರೆ, ಅವನ್ನು ಹಿಂತೆಗೆದುಕೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾದ ಧೀರೋಧಾತ್ತ ಐಕ್ಯ ಕಿಸಾನ್ ಆಂದೋಲನವು ಸದ್ಯಕ್ಕೆ ನಮ್ಮ “ಆಹಾರ ಸಾರ್ವಭೌಮತ್ವ”ವನ್ನು ಸಂರಕ್ಷಿಸಿದೆ.

ರಷ್ಯಾ ಮತ್ತು ಉಕ್ರೇನ್ ಎರಡೂ ದೇಶಗಳೂ ಸೇರಿ ವಿಶ್ವದ ಒಟ್ಟು ಗೋಧಿ ರಫ್ತಿನಲ್ಲಿ ಶೇ. 30ರಷ್ಟು ಪಾಲನ್ನು ಹೊಂದಿವೆ. ಅನೇಕ ಆಫ್ರಿಕನ್ ದೇಶಗಳು ತಮ್ಮ ಆಹಾರ ಧಾನ್ಯಗಳ ಪೂರೈಕೆಗಾಗಿ ಈ ಎರಡೂ ದೇಶಗಳನ್ನೇ ಅವಲಂಬಿಸಿವೆ. ರಷ್ಯಾ-ಉಕ್ರೇನ್ ದೇಶಗಳ ನಡುವಿನ ಯುದ್ಧದಿಂದಾಗಿ ಆಹಾರ ಧಾನ್ಯಗಳ ಸರಬರಾಜು ಅಸ್ತವ್ಯಸ್ತಗೊಂಡಿದೆ. ಅಲ್ಲಿ ಆಹಾರ ಧಾನ್ಯಗಳನ್ನು ಬೆಳೆಯುವ ಪ್ರದೇಶಗಳಲ್ಲಿ ಬಿತ್ತುವ ಚಟುವಟಿಕೆಗಳ ಮೇಲೂ ಯುದ್ಧವು ಪರಿಣಾಮ ಬೀರುತ್ತಿರುವುದರಿಂದ ಧಾನ್ಯಗಳ ಸರಬರಾಜಿನ ಈ ಅಡಚಣೆ ಮುಂದುವರಿಯುತ್ತದೆ. ವಿಶ್ವದ ಮೆಕ್ಕೆಜೋಳ ರಫ್ತಿನಲ್ಲಿ ಉಕ್ರೇನ್ ಒಂದೇ ಶೇ.20 ರಷ್ಟು ಪಾಲು ಹೊಂದಿದೆ ಮತ್ತು ಮೆಕ್ಕೆಜೋಳವನ್ನು ಆಮದು ಮಾಡಿಕೊಳ್ಳುತ್ತಿದ್ದ ಹಲವಾರು ದೇಶಗಳಲ್ಲಿ ಈಗ ಆಹಾರದ ಕೊರತೆ ಎದುರಾಗಿದೆ. ಜೊತೆಗೆ, ಹಲವಾರು ದೇಶಗಳಿಗೆ ರಸಗೊಬ್ಬರ ಪೂರೈಕೆಯ ಮೂಲವಾಗಿದ್ದ ರಷ್ಯಾದಿಂದ ರಸಗೊಬ್ಬರ ಆಮದಿನ ಅಡಚಣೆಯಿಂದಾಗಿ ಜಾಗತಿಕ ಆಹಾರ ಬೆಲೆಗಳು ತೀವ್ರವಾಗಿ ಏರುತ್ತಿವೆ ಮತ್ತು ಲಭ್ಯತೆಯೂ ಸಹ ಇಳಿಕೆಯಾಗಿದೆ.

ರಷ್ಯಾ-ಉಕ್ರೇನ್ ಯುದ್ಧ ಆರಂಭವಾದ ಫೆಬ್ರವರಿ ತಿಂಗಳಲ್ಲಿದ್ದ ಪರಿಸ್ಥಿತಿಗೆ ಹೋಲಿಸಿದರೆ, ಏಪ್ರಿಲ್ 8ರ ಹೊತ್ತಿಗೆ ಆಹಾರ ಧಾನ್ಯಗಳ ಬೆಲೆಗಳು ಶೇ. 17ರಷ್ಟು ಹೆಚ್ಚಾಗಿವೆ. ಇದರಿಂದಾಗಿ ಲಕ್ಷಾಂತರ ಜನರು ಆಹಾರದ ಅಭಾವಕ್ಕೆ ಒಳಗಾಗುತ್ತಾರೆ. ಮುಂಬರುವ ದಿನಗಳಲ್ಲಿ ಆಹಾರದ ಅಭಾವಕ್ಕೆ ಒಳಗಾದವರ ಸಂಖ್ಯೆ ಮತ್ತಷ್ಟು ದೊಡ್ಡದಾಗುತ್ತದೆ. ಯೆಮನ್, ಇಥಿಯೋಪಿಯಾ, ಸೊಮಾಲಿಯಾ, ಸುಡಾನ್, ದಕ್ಷಿಣ ಸುಡಾನ್, ನೈಜೀರಿಯಾ, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ಮತ್ತು ಅಫ್ಘಾನಿಸ್ತಾನದಂತಹ ಅನೇಕ ದೇಶಗಳು ಆಹಾರದ ಅಭಾವಕ್ಕೆ ಒಳಗಾಗುವ ಸಾಧ್ಯತೆಯ ಬಗ್ಗೆ ತಜ್ಞರು ಕೆಲವು ದಿನಗಳ ಹಿಂದೆಯೇ ಎಚ್ಚರಿಕೆ ನೀಡಿದ್ದಾರೆ. ಯುದ್ಧ ನಡೆಯುತ್ತಿರುವ ನಿಜ ರಣಭೂಮಿಯಲ್ಲಿ ಜೀವಹಾನಿಯಾಗುವ ಬಗ್ಗೆ ಹೆಚ್ಚಿನ ಕಾಳಜಿ ಇದೆಯಾದರೂ, ಈ ರಣಭೂಮಿಯಿಂದ ಅತಿ ದೂರವಿರುವ ದೇಶಗಳಲ್ಲಿ ಆಹಾರದ ಅಭಾವದಿಂದಾಗಿ ಉಂಟಾಗುವ ಜೀವಹಾನಿಯ ಅಪಾಯದ ಬಗ್ಗೆ ವಿಶ್ವದ, ಅದರಲ್ಲೂ ವಿಶೇಷವಾಗಿ ಪಶ್ಚಿಮದ ದೇಶಗಳ ಗಮನ ಹರಿದಿರುವುದು ವಿರಳವೇ.

ಈ ಎಲ್ಲ ಚರ್ಚೆಗಳಲ್ಲಿ ಒಂದು ಬಹಳ ಮುಖ್ಯವಾದ ಪ್ರಶ್ನೆಯನ್ನೇ ಕೇಳಲಾಗಿಲ್ಲ: ಆಹಾರ ಧಾನ್ಯಗಳ ಸರಬರಾಜಿನಲ್ಲಿ ಯಾವುದೇ ಅಡಚಣೆ ಉದ್ಭವವಾದರೂ, ತಕ್ಷಣವೇ ಕೆಲವೇ ಕೆಲವು ದೇಶಗಳು ಮಾತ್ರ ಆಹಾರದ ಅಭಾವಕ್ಕೂ ಮತ್ತು ಭಾರಿ ಪ್ರಮಾಣದ ಜೀವಹಾನಿಗೂ ಏಕೆ ಒಳಗಾಗುತ್ತವೆ? ಸಂಕ್ಷಿಪ್ತವಾಗಿ ಹೇಳುವುದಾದರೆ, ‘ಅಭಾವಕ್ಕೆ ಪಕ್ಕಾಗುವ ದೇಶಗಳು’ ಎಂಬುದು ಇರುವುದಾದರೂ ಏಕೆ?

ಈ ಪ್ರಶ್ನೆಗೆ ತಕ್ಷಣವೇ ದೊರಕುವ ಉತ್ತರವೆಂದರೆ, ಈ ದೇಶಗಳು ಸ್ವತಃ ಯುದ್ಧಗಳಿಂದ ಬಾಧಿತವಾಗಿರುವ ದೇಶಗಳು. ಅದು ಆಫ್ಘಾನಿಸ್ತಾನವೇ ಇರಲಿ, ಸುಡಾನ್ ಇರಲಿ ಅಥವಾ ಆಫ್ರಿಕಾದ ಕೊಂಬು ಎಂದು ಕರೆಯುವ ಪ್ರದೇಶದ ದೇಶಗಳೇ ಇರಲಿ, ಅಲ್ಲಿನ ಯುದ್ಧಗಳ ಇತಿಹಾಸವು ವರ್ತಮಾನದ ವರೆಗೂ ವಿಸ್ತರಿಸಿದೆ ಮತ್ತು ಈ ಕಾರಣದಿಂದಾಗಿಯೇ ಈ ದೇಶಗಳು ಧಾನ್ಯಗಳ ಸರಬರಾಜಿನ ಅಡಚಣೆಗೆ, ಆಹಾರದ ಅಭಾವಕ್ಕೆ ಮತ್ತು ಭಾರಿ ಪ್ರಮಾಣದ ಜೀವಹಾನಿಗೆ ಒಳಗಾಗುತ್ತವೆ. ಆದರೆ, ಈ ವಿವರಣೆಯು ಸಮರ್ಪಕವಲ್ಲ: ಇಂದಿನ ಸಂದರ್ಭದಲ್ಲಿ, ಯುದ್ಧವೆಂದರೆ ಅದು ಆಂತರಿಕ ದಂಗೆಯನ್ನೋ ಅಥವಾ ಭಯೋತ್ಪಾದನೆಯನ್ನೋ ಒಳಗೊಂಡಿರಬೇಕಾಗುತ್ತದೆ. ಈ ವಿವರಣೆಯು ಎರಡು ಪ್ರಶ್ನೆಗಳನ್ನು ಎತ್ತುತ್ತದೆ: ಮೊದಲನೆಯದು, ಬಂಡಾಯವನ್ನೇ ಹೊರಗಿನಿಂದ ಪ್ರೇರಿತವಾದ ಒಂದು ವಿದ್ಯಮಾನವೆಂದು ಭಾವಿಸಲಾಗದು. ಇದು ಬಡತನ ಮತ್ತು ಆಹಾರ ಅಲಭ್ಯತೆಯ ವಿದ್ಯಮಾನಗಳೊಂದಿಗೆ ಎಷ್ಟು ಆಳವಾಗಿ ಬೇರೂರಿದೆ ಮತ್ತು ಸಂಬಂಧಿಸಿದೆ ಎಂದರೆ, ಆಹಾರ ಅಲಭ್ಯತೆಯ ವಿದ್ಯಮಾನವನ್ನು ಸ್ವತಂತ್ರವಾಗಿ ವಿವರಿಸುವುದು ಸಾಧ್ಯವಿಲ್ಲ. ಎರಡನೆಯದು, ಬಂಡೇಳುವುನ್ನೂ ಸಹ ಒಳಗೊಂಡ ಸಮಗ್ರ ಅರ್ಥದಲ್ಲಿ ನೋಡುವುದಾದರೆ, ಯುದ್ಧಗಳು ಇಡೀ ಮೂರನೇ ಜಗತ್ತಿನ ದೇಶಗಳ ಒಂದು ವಾಸ್ತವಿಕ ಲಕ್ಷಣವೇ ಆಗಿವೆ. ಹಾಗಿರುವಾಗ, ಕೆಲವು ದೇಶಗಳನ್ನು ಮಾತ್ರ ಅಭಾವಕ್ಕೆ ಪಕ್ಕಾಗುವ ದೇಶಗಳು, ಇತರ ದೇಶಗಳನ್ನು ಅಲ್ಲ, ಎಂದು ಏಕೆ ಪರಿಗಣಿಸಲಾಗುತ್ತದೆ?

ಕೆಲವು ದೇಶಗಳನ್ನು ಮಾತ್ರ, ಇತರ ದೇಶಗಳನ್ನಲ್ಲ, ಅಭಾವಕ್ಕೆ ಪಕ್ಕಾಗುವ ದೇಶಗಳು ಎಂದು ಏಕೆ ಪರಿಗಣಿಸಲಾಗುತ್ತದೆ ಎಂಬ ಪ್ರಶ್ನೆಗೆ ನಿಜ ಉತ್ತರವು, ಈ ದೇಶಗಳು ಸಾಮ್ರಾಜ್ಯಶಾಹಿಯ ಕೋರಿಕೆಯ ಮೇರೆಗೆ ತಮ್ಮ “ಆಹಾರ ಸಾರ್ವಭೌಮತೆ”ಯನ್ನು ತ್ಯಜಿಸಿದವು ಎಂಬ ಅಂಶದಲ್ಲಿದೆ. ವಸಾಹತುಶಾಹಿಗಳು ನಿರ್ಗಮಿಸಿದ ನಂತರ, ಅವರ ಆಳ್ವಿಕೆಯ ಅವಧಿಯಲ್ಲಿ ಆಹಾರ ಧಾನ್ಯಗಳ ತಲಾ ಉತ್ಪಾದನೆಯಲ್ಲಿ ಮತ್ತು ತಲಾ ಲಭ್ಯತೆಯಲ್ಲಿ ತೀವ್ರ ಕುಸಿತವನ್ನು ಕಂಡಿದ್ದ ಮೂರನೇ ಜಗತ್ತಿನ ಬಹುತೇಕ ದೇಶಗಳು, ಆಹಾರ ಧಾನ್ಯಗಳ ಆಂತರಿಕ ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸಿದವು. ಆಹಾರಧಾನ್ಯಗಳ ಈ ಆಂತರಿಕ ಉತ್ಪಾದನೆಯನ್ನು ಮತ್ತು ಲಭ್ಯತೆಯ ಸಾಧನೆಯನ್ನು ನಿರ್ವಸಾಹತೀಕರಣದ ಒಂದು ಅಗತ್ಯ ಪ್ರತಿರೂಪವೆಂದು ಪರಿಗಣಿಸಲಾಯಿತು. ಅದು ಸರಿಯೂ ಹೌದು. ಆದರೂ, ಈ ಕ್ರಮವನ್ನು ಸಾಮ್ರಾಜ್ಯಶಾಹಿಯು ಪ್ರತಿರೋಧಿಸಿತು ಮತ್ತು ನಿಜವಲ್ಲದ “ಒಂದು ತುಲನಾತ್ಮಕ ಪ್ರಯೋಜನ”ದ ಆಧಾರದ ಮೇಲೆ, ಆಹಾರ ಸ್ವಾವಲಂಬನೆಯ ಅನ್ವೇಷಣೆಯನ್ನು ಕೈಬಿಡುವಂತೆ ಮೂರನೇ ಜಗತ್ತಿನ ದೇಶಗಳಿಗೆ “ಸಲಹೆ” ನೀಡಿದ್ದೂ ಅಲ್ಲದೆ, ಈ ಕೋರಿಕೆಯ ಅಂಶವನ್ನು ವಿಶ್ವ ವ್ಯಾಪಾರ ಸಂಘಟನೆಯ ಕಾರ್ಯಸೂಚಿಯಲ್ಲೂ ಸೇರಿಸಿತು. ವಿಶ್ವ ವ್ಯಾಪಾರ ಸಂಘಟನೆಯ ಪ್ರಕಾರವಾಗಿ, ಭೂ-ಬಳಕೆಯನ್ನು ಆಹಾರ ಸ್ವಾವಲಂಬನೆ ಸಾಧಿಸುವ ಗುರಿಗಿಂತ ಹೆಚ್ಚಾಗಿ ಮಾರುಕಟ್ಟೆ-ಸಂಕೇತಗಳ ಮೂಲಕವೇ ನಿರ್ಧರಿಸಬೇಕಾಗುತ್ತದೆ.

ಅಜ್ಜಿನ ಸುಟ್ಟಂಗೂ ಆಯ್ತು; ಛಳಿ ಕಾಯಿಸಿಕೊಂಡಂಗೂ ಆಯ್ತು

ಮುಂದುವರಿದ ಬಂಡವಾಳಶಾಹಿ ದೇಶಗಳು ಕೆಲವು ಧಾನ್ಯಗಳನ್ನು ಮಾತ್ರ ಬೆಳೆಯುತ್ತವೆ. ಮಾತ್ರವಲ್ಲ, ಈ ಧಾನ್ಯಗಳ ಹೆಚ್ಚುವರಿ ದಾಸ್ತಾನುಗಳನ್ನು ಅವು ಸದಾಕಾಲವೂ ಹೊಂದಿರುತ್ತವೆ. ಜೊತೆಗೆ, ಈ ದೇಶಗಳು ತಾಜಾ ತರಕಾರಿಗಳು, ಹಣ್ಣುಗಳು, ಕಬ್ಬು ಬೆಳೆಗಳು, ತೈಲ-ಬೆಳೆಗಳು, ಪಾನೀಯ-ಬೆಳೆಗಳು ಮತ್ತು ಸಾಂಬಾರ ಪದಾರ್ಥಗಳಂತಹ ಉಷ್ಣವಲಯದ ಅಥವಾ ಉಪ-ಉಷ್ಣವಲಯದ ಬೆಳೆಗಳನ್ನು ಬೆಳೆಯುವುದು ಸಾಧ್ಯವಿಲ್ಲ ಅಥವಾ ಸಾಕಷ್ಟು ಪ್ರಮಾಣದಲ್ಲಿ ಅಥವಾ ವರ್ಷವಿಡೀ ಬೆಳೆಯುವುದು ಸಾಧ್ಯವಿಲ್ಲ. ಆದ್ದರಿಂದ, ಪ್ರಪಂಚದ ಉಷ್ಣ ವಲಯದ ಮತ್ತು ಉಪ-ಉಷ್ಣವಲಯದ ಭಾಗಗಳೊಂದಿಗೆ ಸರಿಸುಮಾರು ಗುರುತಿಸಿಕೊಂಡಿರುವ ಮೂರನೇ ಜಗತ್ತಿನ ದೇಶಗಳು ತಮ್ಮ ಭೂ-ಬಳಕೆಯ ಮಾದರಿಯನ್ನು ಬದಲಾಯಿಸಿಕೊಂಡದ್ದರಿಂದ ಮುಂದುವರಿದ ಬಂಡವಾಳಶಾಹಿ ದೇಶಗಳಿಗೆ ದುಪ್ಪಟ್ಟು ಲಾಭವಾಗಿದೆ: ಮೊದಲನೆಯದಾಗಿ, ಆಹಾರ ಧಾನ್ಯಗಳನ್ನು ಆಮದು ಮಾಡಿಕೊಳ್ಳುವಂತೆ ಮೂರನೇ ಜಗತ್ತಿನ ದೇಶಗಳನ್ನು ಪುಸಲಾಯಿಸುವ ಮೂಲಕ ಈ ಬಂಡವಾಳಶಾಹಿ ದೇಶಗಳು ತಮ್ಮ ಹೆಚ್ಚುವರಿ ಆಹಾರ ಧಾನ್ಯಗಳನ್ನು ಮಾರಾಟ ಮಾಡಿ ಹಣ ಮಾಡಿಕೊಳ್ಳುತ್ತವೆ. ಎರಡನೆಯದಾಗಿ, ಈ ಮೊದಲು ಆಹಾರ ಧಾನ್ಯಗಳ ಉತ್ಪಾದನೆಗಾಗಿ ಮೀಸಲಾಗಿದ್ದ ಮೂರನೇ ಜಗತ್ತಿನ ದೇಶಗಳ ಭೂಮಿಯನ್ನು ಈಗ ಬಂಡವಾಳಶಾಹಿ ದೇಶಗಳಿಗೆ ಬೇಕಾದ ಇತರ ಬೆಳೆಗಳನ್ನು (ಜೈವಿಕ ಇಂಧನಗಳ ಉತ್ಪಾದನೆಗಾಗಿ ಬೇಕಾದ ಬೆಳೆಗಳನ್ನು) ಬೆಳೆಯಲು ಅನುವು ಮಾಡಿಕೊಡಲಾಗಿದೆ.

ಭೂ-ಬಳಕೆಯ ಮಾದರಿಯನ್ನು ಬದಲಾಯಿಸಿಕೊಳ್ಳುವಂತೆ ಸಾಮ್ರಾಜ್ಯಶಾಹಿಗಳು ಮಾಡಿದ ಕೋರಿಕೆಯನ್ನು ಆಫ್ರಿಕಾದ ದೇಶಗಳು ಮೂರನೆಯ ಜಗತ್ತಿನ ದೇಶಗಳಿಗಿಂತ ಬಹಳ ಬೇಗನೆ ಒಪ್ಪಿಕೊಂಡವು. ಹಾಗಾಗಿ, “ಅಭಾವಕ್ಕೆ ಪಕ್ಕಾಗುವ ದೇಶಗಳು” ಪಟ್ಟಿಯು ಆಫ್ರಿಕನ್ ಉದಾಹರಣೆಗಳಿಂದ ತುಂಬಿರುವುದು ಆಶ್ಚರ್ಯವಲ್ಲ. ಈ ಪಟ್ಟಿಯಲ್ಲಿ ಸ್ಥಾನ ಪಡೆದ ಎರಡು ದೇಶಗಳ ಉದಾಹರಣೆಗಳನ್ನು ತೆಗೆದುಕೊಳ್ಳೋಣ: 20 ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಆಫ್ರಿಕಾದ ಅತಿ ದೊಡ್ಡ ದೇಶವಾದ ನೈಜೀರಿಯಾ ಮತ್ತು ಬಹಳ ಹಿಂದೆ ಒಇಸಿಡಿಯಿಂದ “ಉದಾರೀಕರಣದ” “ಯಶೋಗಾಥೆ” ಎಂದು ಹೊಗಳಿಸಿಕೊಂಡ ಕೀನ್ಯಾ.

ಆಹಾರ ಮತ್ತು ಕೃಷಿ ಸಂಸ್ಥೆ (ಎಫ್‌ಎಒ)) ಒದಗಿಸಿರುವ ಅಂಕಿಅಂಶಗಳ ಪ್ರಕಾರ, ನೈಜೀರಿಯಾದ ಧಾನ್ಯ ತಲಾ ಉತ್ಪಾದನಾ ಸೂಚ್ಯಂಕವು (2014-16 = 100) 1990 ರಲ್ಲಿ 129.37 ರಷ್ಟಿತ್ತು; 2019 ರಲ್ಲಿ 101.09ಕ್ಕೆ ಇಳಿಯಿತು. ಅಂದರೆ, ಕೇವಲ ಮೂರು ದಶಕಗಳ ಅವಧಿಯಲ್ಲಿ ಧಾನ್ಯ ತಲಾ ಉತ್ಪಾದನೆಯು ಶೇ.20ಕ್ಕಿಂತ ಹೆಚ್ಚು ಕುಸಿಯಿತು. ಕೀನ್ಯಾದಲ್ಲಿ, ಧಾನ್ಯ ತಲಾ ಉತ್ಪಾದನಾ ಸೂಚ್ಯಂಕವು (2014-16 = 100) 1990ರಲ್ಲಿ 132.82ರಿಂದ 2019ರಲ್ಲಿ 107.97ಕ್ಕೆ ಇಳಿಯಿತು. 1980ರ ಧಾನ್ಯ ತಲಾ ಉತ್ಪಾದನಾ ಪರಿಸ್ಥಿತಿಯೊಂದಿಗೆ ಹೋಲಿಸಿದರೆ, ಕೀನ್ಯಾ ವಿಷಯದಲ್ಲಿ, ಧಾನ್ಯ ತಲಾ ಉತ್ಪಾದನಾ ಸೂಚ್ಯಂಕವು 155.96ರಿಂದ 107.97ಕ್ಕೆ, ಅಂದರೆ ಕೇವಲ ನಾಲ್ಕು ದಶಕಗಳ ಅವಧಿಯಲ್ಲಿ ಶೇ. 30ಕ್ಕಿಂತ ಹೆಚ್ಚು ಕುಸಿತವಾಗಿದೆ! ಈ ದೇಶಗಳ ಆಹಾರ ಧಾನ್ಯಗಳ ಆಂತರಿಕ ಉತ್ಪಾದನೆಯಲ್ಲಿನ ಈ ಅಸಾಧಾರಣ ಕುಸಿತದಿಂದಾಗಿ ಅವು ಆಹಾರವನ್ನು ಆಮದು ಮಾಡಿಕೊಳ್ಳುವ ಅನಿವಾರ್ಯತೆಗೆ ಒಳಗಾದವು. ಆಹಾರದ ಆಮದುಗಳು ಈ ದೇಶಗಳನ್ನು ಅಂತಿಮವಾಗಿ ಆಹಾರದ ಅಭಾವಕ್ಕೆ ಒಳಗಾಗುವಂತೆ ಮಾಡಿವೆ.

“ತುಲನಾತ್ಮಕ ಪ್ರಯೋಜನ”ದ ಈ ಮಾತುಗಳು ಮೋಸದಿಂದ ಕೂಡಿವೆ ಎಂಬುದನ್ನು ಆಫ್ರಿಕಾದ ಈ ವಿದ್ಯಮಾನವು ಸ್ಪಷ್ಟವಾಗಿ ತೋರಿಸುತ್ತದೆ. ಈ “ತೌಲನಿಕ ಪ್ರಯೋಜನ”ದ ಪರಿಕಲ್ಪನೆಯೇ ದೋಷಪೂರಿತವಾಗಿದೆ: ದೇಶವೊಂದು ಸರಕೊಂದನ್ನು ಉತ್ಪಾದಿಸಲು ಸಾಧ್ಯವಾಗದಿದ್ದಾಗ (ವಸಾಹತುಶಾಹಿ ಕಾಲದ ವ್ಯಾಪಾರದಂತೆ), ತುಲನಾತ್ಮಕ ಪ್ರಯೋಜನವನ್ನು ವ್ಯಾಖ್ಯಾನಿಸುವುದು ಸಾಧ್ಯವೇ ಇಲ್ಲ. ವಿಭಿನ್ನವಾಗಿ ಹೇಳುವುದಾದರೆ, “ತುಲನಾತ್ಮಕ ಅನುಕೂಲ”ದ ಪ್ರಕಾರ, ವ್ಯಾಪಾರವೆಂದರೆ, ಒಂದು ದೇಶವು ತಾನು ತುಲನಾತ್ಮಕವಾಗಿ ಅಗ್ಗವಾಗಿ ಉತ್ಪಾದಿಸಿದ ವಸ್ತುವನ್ನು ರಫ್ತು ಮಾಡಬೇಕು ಮತ್ತು ಅಗ್ಗವಾಗಿ ಉತ್ಪಾದಿಸಲಾಗದ ವಸ್ತುವನ್ನು ಆಮದು ಮಾಡಿಕೊಳ್ಳಬೇಕು ಎಂಬ ಕಲ್ಪನೆಯ ಪ್ರಕಾರ, ಎಲ್ಲಾ ದೇಶಗಳೂ ವ್ಯಾಪಾರಕ್ಕೆ ಮುಂಚಿತವಾಗಿಯೇ ಎಲ್ಲಾ ಸರಕುಗಳನ್ನೂ ಉತ್ಪಾದಿಸುತ್ತವೆ ಎಂದು ಭಾವಿಸುತ್ತದೆ. ಅದರ ಜೊತೆಗೆ, ಮಾರ್ಪಡಿಸಬಹುದಾದ, ಸಂಬಂಧಿತ “ಲಭ್ಯ ಉತ್ಪಾದನಾ ಸಂಪನ್ಮೂಲಗಳ” ಮೂಲಕ “ತುಲನಾತ್ಮಕ ಪ್ರಯೋಜನ”ವು ಪ್ರವಹಿಸಿದಾಗ, (ಉದಾಹರಣೆಗೆ, ಬಂಡವಾಳ ಶೇಖರಣೆಯ ಮೂಲಕ) “ತುಲನಾತ್ಮಕ ಅನುಕೂಲ” ಪ್ರಕಾರದ ವ್ಯಾಪಾರವು ಅಂತಹ ಮಾರ್ಪಾಟನ್ನು ತಡೆಯುತ್ತದೆ ಮತ್ತು “ಬಂಡವಾಳ-ಬಡ” ಮತ್ತು ಶ್ರಮ-ಹೇರಳದ ದೇಶಕ್ಕೆ ಹಾನಿಕರವಾಗುವಂತೆ ಉತ್ಪಾದನಾ ಮಾದರಿಯನ್ನು ಸ್ಥಗಿತಗೊಳಿಸುತ್ತದೆ. “ತುಲನಾತ್ಮಕ ಪ್ರಯೋಜನ”ಕ್ಕೆ ಸಂಬಂಧಿಸಿದ ಈ ಮೂಲಭೂತ ಆಕ್ಷೇಪಣೆಗಳನ್ನು ಒಂದು ವೇಳೆ ನಿರ್ಲಕ್ಷಿಸಿ, ಈ ಸಿದ್ಧಾಂತದ ಪ್ರತಿಪಾದಕರೇ ಮಾಡಿದ ಊಹೆಗಳ ಮೇಲೆ ನಾವು ಮುಂದುವರಿದರೂ ಸಹ, “ತುಲನಾತ್ಮಕ ಪ್ರಯೋಜನ”ವನ್ನು ಅನುಸರಿಸುವ ಕ್ರಮ ಮತ್ತು ಆಹಾರ ಧಾನ್ಯಗಳಂತಹ ಅತಿ ಮುಖ್ಯವಾದ ಸರಕುಗಳ ಆಮದು-ಅವಲಂಬನೆಯು ಒಂದು ದೇಶಕ್ಕೆ ಆತ್ಮಘಾತುಕವಾಗುತ್ತದೆ. ದೇಶವೊಂದು ನಿಯಂತ್ರಣವನ್ನು ಹೊಂದಿರದ ಹಲವಾರು ಅನಿರೀಕ್ಷಿತ ವಿಶ್ವ ಬೆಳವಣಿಗೆಗಳು/ವಿದ್ಯಮಾನಗಳು ಇಡೀ ಜಗತ್ತಿನ ಜನರನ್ನು ಅಭಾವಗಳಿಗೆ ಒಡ್ಡುತ್ತವೆ.

ಈ ಸರಳ ಸತ್ಯವನ್ನು ಎಲ್ಲೆಡೆ ಜರುಗಿದ ವಸಾಹತುಶಾಹಿ-ವಿರೋಧಿ ಹೋರಾಟಗಳು ಅರ್ಥಮಾಡಿಕೊಂಡಿದ್ದವು. ಸ್ವಾತಂತ್ರ‍್ಯವೆಂದರೆ ಆಹಾರ ಸ್ವಾವಲಂಬನೆಯೇ ಎಂಬುದನ್ನು ಅವರು ಸರಿಯಾಗಿಯೇ ಪರಿಗಣಿಸಿದ್ದರು. ಪ್ರತಿಯೊಂದು ದೇಶದೊಳಗೂ ಅಲ್ಲದಿದ್ದರೂ, ಕನಿಷ್ಠ ಪಕ್ಷ ಮೂರನೇ ಜಗತ್ತಿನ ದೇಶಗಳ ಗುಂಪಿನ “ಆಹಾರ ಸಮುದಾಯ”ದ ಕನಿಷ್ಠ ಬಳಕೆಯ ಮಟ್ಟವನ್ನು ತಲುಪುವತ್ತ ಶ್ರಮಿಸಿದರು. ಈ ಗುರಿಯನ್ನು ತ್ಯಜಿಸುವಂತೆ ಸಾಮ್ರಾಜ್ಯಶಾಹಿಯಿಂದ ಒತ್ತಾಯಕ್ಕೊಳಗಾಗಿ ಆಫ್ರಿಕಾವು ಬಹಳ ದೊಡ್ಡ ಬೆಲೆಯನ್ನೇ ತೆತ್ತಿದೆ. ಇಂದು ಆಫ್ರಿಕಾದ ಮೇಲೆ ಅಭಾವದ ಭೀತಿ ಆವರಿಸಿದೆ.

ವಸಾಹತುಶಾಹಿಯು ನಿರ್ಗಮಿಸಿದ ನಂತರ ಆಹಾರ ಉತ್ಪಾದನೆಯನ್ನು ಹೆಚ್ಚಿಸುವ ಆರಂಭಿಕ ಯೋಜನೆಯ ಹೊರತಾಗಿಯೂ, ಧಾನ್ಯಗಳನ್ನು ಖರೀದಿಸುವ ಅಮೇರಿಕದ ಪಿಎಲ್-480 ಯೋಜನೆಯಡಿಯಲ್ಲಿ ಭಾರತವು ಸಿಕ್ಕಿಹಾಕಿಕೊಂಡಿತು. ಅರವತ್ತರ ದಶಕದ ಮಧ್ಯಭಾಗದಲ್ಲಿ ಎದುರಾದ ತೀವ್ರ ಬರಗಾಲದ ನಂತರವೇ ನಮ್ಮ ಆಳುವ ಸರ್ಕಾರಗಳಿಗೆ “ಆಹಾರ ಸಾರ್ವಭೌಮತೆ” ಸಾಧಿಸುವುದರ ಮಹತ್ವ ಅರ್ಥವಾಯಿತು. ಒಂದು ಹಸಿರು ಕ್ರಾಂತಿಯ ಮೂಲಕ, ಅದರ ನ್ಯೂನತೆಗಳು ಏನೇ ಇರಲಿ, “ಆಹಾರ ಸಾರ್ವಭೌಮತೆ”ಯ ಗುರಿಯನ್ನು ಸಾಧಿಸಲಾಯಿತು. ಅಂದಿನಿಂದಲೂ ಭಾರತದ “ಆಹಾರ ಸಾರ್ವಭೌಮತೆ”ಯನ್ನು ಹಾಳುಗೆಡವಲು ಸಾಮ್ರಾಜ್ಯಶಾಹಿಗಳು ಅವಿರತವಾಗಿ ಪ್ರಯತ್ನಿಸಿವೆ. ಭಾರತದ “ಆಹಾರ ಸಾರ್ವಭೌಮತೆ”ಯ ಹಿಂದಿರುವ ಕನಿಷ್ಠ ಬೆಂಬಲ ಬೆಲೆ ಕ್ರಮವನ್ನು ಹಿಂತೆಗೆದುಕೊಳ್ಳುವ ಕೃಷಿ ಶಾಸನಗಳನ್ನು ಅಂಗೀಕರಿಸಿದ ಮೋದಿ ಸರ್ಕಾರದಲ್ಲಿ ಸಾಮ್ರಾಜ್ಯಶಾಹಿಯು ಒಂದು “ಗುಗ್ಗು”ವನ್ನು ಕಂಡುಕೊಂಡಿತು. ಆದರೆ, ಈ ಕೃಷಿ ಶಾಸನಗಳನ್ನು ಹಿಂತೆಗೆದುಕೊಳ್ಳುವಂತೆ ಮಾಡುವಲ್ಲಿ ದೆಹಲಿಯ ಧೀರೋಧಾತ್ತ ಕಿಸಾನ್ ಆಂದೋಲನವು ಯಶಸ್ವಿಯಾಯಿತು. “ಆಹಾರ ಸಾರ್ವಭೌಮತ್ವ” ಸದ್ಯಕ್ಕೆ ಮುಂದುವರಿದಿದೆ. ಅದನ್ನು ಸಂರಕ್ಷಿಸಬೇಕಾದರೆ ಜನರು ಅವಿರತವಾಗಿ ಜಾಗರೂಕರಾಗಿರಬೇಕಾಗುತ್ತದೆ.

Donate Janashakthi Media

Leave a Reply

Your email address will not be published. Required fields are marked *