ಸಾವರ್ಕರ್‌ ಚಿತ್ರ ಅಳವಡಿಸದಿದ್ದರೆ ಸ್ಮಾರಕ ಗ್ಯಾಲರಿಗೆ ಬೆಂಕಿ ಹಾಕುವುದಾಗಿ ಆರ್‌ಎಸ್‌ಎಸ್‌ ನಿಂದ ಬೆದರಿಕೆ

ಗುರುರಾಜ ದೇಸಾಯಿ

ಕರ್ನಾಟಕದ ಜಲಿಯನ್‌ ವಾಲಾ ಬಾಗ್‌ ಎಂದೇ ಖ್ಯಾತಿ ಪಡೆದ ಗೌರಿಬಿದನೂರು ತಾಲ್ಲೂಕಿನ ವಿದುರಾಶ್ವತ್ಥ ಪ್ರದೇಶದಲ್ಲಿ ಆರ್‌ಎಸ್‌ಎಸ್‌ನವರ ಉಪಟಳ ಹೆಚ್ಚಾಗಿದೆ.  ಸಮಗ್ರ ಸ್ವಾತಂತ್ರ್ಯ ಹೋರಾಟವನ್ನು ಬಿಂಬಿಸುವ ಚಿತ್ರಗಳಿರುವ ಫೋಟೋ ಗ್ಯಾಲರಿಯಲ್ಲಿ ಸಾವರ್ಕರ್‌ ಚಿತ್ರಗಳನ್ನು ಅಳವಡಿಸಬೇಕು,  ಕೋಮುವಾದಕ್ಕೆ ಸಂಬಂಧಿಸಿದ ಚಿತ್ರದಿಂದ ಆರ್‌ಎಸ್‌ಎಸ್‌ ಹೆಸರು ತೆಗೆಯಬೇಕು ಎಂದು ಬೆದರಿಕೆಯನ್ನು ಹಾಕಲಾಗುತ್ತಿದೆ.

ವಿದುರಾಶ್ವತ್ಥ ಸ್ವಾತಂತ್ರ್ಯ ಚಳುವಳಿಯ ಕೇಂದ್ರವಾಗಿತ್ತು.  ಹೋರಾಟದ ಯೋಜನೆಯ ಕುರಿತು ಅಲ್ಲಿ ಚರ್ಚೆ ಸಂವಾದಗಳು ನಡೆಯುತ್ತಿದ್ದವು.  1938 ರಲ್ಲಿ ನಡೆದ ಧ್ವಜ ಸತ್ಯಾಗ್ರಹ ಸಂದರ್ಭದಲ್ಲಿ ಗೋಲಿಬಾರ್ ನಡೆಯಿತು. 96 ಸುತ್ತುಗಳ ಗುಂಡಿನ ದಾಳಿಯಲ್ಲಿ 32ಕ್ಕೂ ಹೆಚ್ಚು ಜನರು ಮೃತಪಟ್ಟರು, ಹಲವರು ಗಾಯಗೊಂಡರು. ಬಲಿದಾನ ಮಾಡಿದವರಲ್ಲಿ 10 ದೇಹಗಳು ಮಾತ್ರ ಪತ್ತೆಯಾದವು. ಈ ಹೋರಾಟವನ್ನು ಕರ್ನಾಟಕ ಜಲಿಯನ್ ವಾಲಾಬಾಗ್ ಎಂದು ಕರೆಯಲಾಗುತ್ತದೆ. ದೊರೆತ 10 ಮೃತ ದೇಹಗಳ ಶರೀರಗಳನ್ನು ವಿದುರಾಶ್ವತ್ಥದ ಸಮೀಪದಲ್ಲಿರುವ ಉದ್ಯಾನವನದಲ್ಲೇ ಹೂತು ಸ್ಮಾರಕವನ್ನು ಸ್ಥಾಪಿಸಿಲಾಗಿದೆ.  ಈ ವೀರರ ಇತಿಹಾಸ ಕುರಿತು ಲಾವಣಿ ಪದವನ್ನು ಬರೆಯಲಾಗಿದೆ. ಹೋರಾಟದ ಚಿತ್ರವಣವನ್ನು ತೆರೆದಿಡುವ ಆ ಲಾವಣಿ ಪದ ಈ ರೀತಿಯಾಗಿದೆ.

ಒಂಭೈನೂರ್ ಮೂವತ್ತೆಂಟನೆ ಏಪ್ರಿಲ್

ತಿಂಗಳ ಇಪ್ಪತ್ತೈದರೊಳು ತುಂಬಿರೆ

ಬಹು ಪ್ರಜೆ ಸಂಭ್ರಮದಿಂದಲಿ

ವಿದುರಾಶ್ವತ್ಥ ಜಾತ್ರೆಯೊಳು,

ಸುತ್ತಮುತ್ತಲು ಲಾಠಿ ಹೊಡೆತಗಳ

ಮತ್ತೆ ಗುಂಡಿನ ಏಟುಗಳ್ ಸತ್ತ

ಹೆಣಗಳ

ಲೆಕ್ಕವಿಲ್ಲವು ಹೊತ್ತರೆಷ್ಟೋ

ಗುಪ್ತದೊಳ್”.

ಈ ಹೋರಾಟದಲ್ಲಿ ಮೃತಪಟ್ಟವರ ಸ್ಮರಣಾರ್ಥ 1973ರಲ್ಲಿ ಸ್ಮಾರಕ ಶಿಲೆ, 2004ರಲ್ಲಿ ಸ್ಥೂಪ ಮತ್ತು ವೀರಸೌಧವನ್ನು ನಿರ್ಮಿಸಲಾಗಿದೆ. 2009 ರಲ್ಲಿ ಸಮಗ್ರ ಭಾರತ ಸ್ವಾತಂತ್ರ್ಯ ಹೋರಾಟವನ್ನು ಬಿಂಬಿಸುವ ಒಂದು ಬೃಹತ್ ಫೋಟೋ ಗ್ಯಾಲರಿಯನ್ನು ನಿರ್ಮಾಣ ಮಾಡಲಾಯಿತು. ಈ ಸ್ಮಾರಕದಲ್ಲಿ ಜಾತಿ, ವರ್ಗ, ಧರ್ಮ ಭೇದವಿಲ್ಲದೆ ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಗಳಾದ ಸಮಸ್ತ ಭಾರತೀಯರ ಕೊಡುಗೆಯನ್ನು ವಿಶಾಲ ತಳಹದಿಯ ಮೇಲೆ ಬಿಂಬಿಸುವ ಪ್ರಯತ್ನವನ್ನು ಮಾಡಲಾಗಿದೆ. ಎಡಪಂಥೀಯ ಮತ್ತು ಬಲಪಂಥೀಯ ಸ್ವಾತಂತ್ರ್ಯ ಹೋರಾಟಗಾರರ ಚಿತ್ರಗಳನ್ನು ಇಲ್ಲಿ ಅಳವಡಿಸಲಾಗಿದೆ. ನಿರ್ಮಾಣವಾದಾಗಿನಿಂದ ಇಲ್ಲಿಯವರೆಗೆ ಸಾವಿರಾರು ಮಂದಿ ಈ ಸ್ಮಾರಕಕ್ಕೆ ಭೇಟಿ ನೀಡಿದ್ದಾರೆ.  ಶಾಲಾ – ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು, ಸರ್ವೋಚ್ಚ ಮತ್ತು ಉಚ್ಚ ನ್ಯಾಯಾಲಯದ ನ್ಯಾಯಾಧೀಶರುಗಳು, ಮುಖ್ಯಮಂತ್ರಿಗಳು, ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಚಿವರುಗಳು, ರಾಜ್ಯಪಾಲರು, ಸರ್ಕಾರದ ಉನ್ನತ ಅಧಿಕಾರಿಗಳು, ವಿವಿಗಳ ಉಪಕುಲಪತಿಗಳು, ಸಾರ್ವಜನಿಕರು ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರೆ.

ಆರ್‌ಎಸ್‌ಎಸ್‌ ನಿಂದ ಒತ್ತಡ : ರಾಜ್ಯದಲ್ಲಿ ಇತ್ತೀಚೆಗೆ ಆರಂಭವಾಗಿರುವ ಧರ್ಮ ದಂಗಲ್ ಕರಿ ನೆರಳು ಈ ಸ್ಮಾರಕದ ಮೇಲೂ ಬಿದ್ದಿದೆ. ಹಿಂದೂ ಧರ್ಮವನ್ನು ಅವಹೇಳನ ಮಾಡುವ ಮತ್ತು ತಮ್ಮ ಸಿದ್ದಾಂತಕ್ಕೆ ಒಪ್ಪಿಗೆಯಾಗದ ಚಿತ್ರಗಳನ್ನು ಗ್ಯಾಲರಿಯಿಂದ ತೆಗೆಯಬೇಕು. ಅಲ್ಲಿ ಸಾವರ್ಕರ್‌ ರವರ ಚಿತ್ರವನ್ನು ಅಳವಡಿಸಬೇಕು ಎಂದು ಆರ್‌ಎಸ್‌ಎಸ್‌, ಬಜರಂಗದಳದವರು ಪಟ್ಟು ಹಿಡಿದಿದ್ದಾರೆ. ತಮ್ಮ ಸಲಹೆಯನ್ನು ಜಾರಿ ಮಾಡದ ಇದ್ದರೆ ಗ್ಯಾಲರಿಯನ್ನು ಧ್ವಂಸ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇಲ್ಲಿವಯರೆಗೆ 15 ಜನರಂತೆ ನಾಲ್ಕು ತಂಡಗಳು ಐದಾರು ಬಾರಿ ಭೇಟಿ ನೀಡಿ ಒತ್ತಡವನ್ನು ಹಾಕಿದ್ದಾರೆ. ಬಂದವರೆಲ್ಲ ಅದೇ ವಿಚಾರಗಳನ್ನು ಒತ್ತಿ ಒತ್ತಿ ಹೇಳುವ ಮೂಲಕ ಒತ್ತಡವನ್ನು ಸೃಷ್ಟಿಸುತ್ತಿದ್ದಾರೆ.

ಗ್ಯಾಲರಿಯಲ್ಲಿ ಇರುವುದೇನು? ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಎಲ್ಲಾ ಧರ್ಮದ ನಾಯಕರುಗಳ ಫೋಟೊವನ್ನು ಹಾಕಲಾಗಿದೆ. ಎಡಪಂಥೀಯ, ಬಲಪಂಥೀಯ ಹೋರಾಟಗಾರರ ಚಿತ್ರವನ್ನು ಹಾಕಲಾಗಿದೆ. ಇದರಲ್ಲಿ ಹಿಂದೂ ಮೂಲಭೂತವಾದಿ ಹಾಗೂ ಮುಸ್ಲಿಂ ಮೂಲಭೂತವಾದಿಗಳ ಚಿತ್ರಗಳನ್ನು ಹಾಕಲಾಗಿದೆ.  ಗಾಂಧೀಜಿ ಕುರಿತಾದ ಜೀವನ ವಿವರಣೆ, ಗಾಂಧೀಜಿಯನ್ನು ಕೊಂದ ಗೋಡ್ಸೆಯ ಚಿತ್ರ ಹಾಕಲಾಗಿದೆ. ಅದಕ್ಕೆ ಆರ್‌ಎಸ್‌ಎಸ್‌ ಮತ್ತು ಹಿಂದು ಕೋಮುವಾದಿ ಸಿದ್ದಾಂತದಲ್ಲಿ ಗುರುತಿಸಿಕೊಂಡ ಗೋಡ್ಸೆಯಿಂದ ಗಾಂಧೀ ಹತ್ಯೆ ಎಂದು ಬರೆಯಲಾಗಿದೆ.  ಬಲಗಡೆ ಹಿಂದು ಕೋಮುವಾದಿಗಳು, ಮಧ್ಯದಲ್ಲಿ ಗಾಂಧಿ, ಎಡಗಡೆ ಮುಸ್ಲಿಮ್‌ ಕೋಮುವಾದಿಗಳ ಚಿತ್ರಗಳನ್ನು ಹಾಕಲಾಗಿದೆ. ಆದಿವಾಸಿ ಹೋರಾಟಗಳನ್ನು ಬಿಂಬಿಸಲು ಬುಡಕಟ್ಟು ಸಮುದಾಯದ ನಾಯಕ, ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾರವರ ಭಾವಚಿತ್ರವನ್ನು ಅಳವಡಿಸಲಾಗಿದೆ.  ಒಟ್ಟಾರೆ ಆರೋಗ್ಯ ಪೂರ್ಣವಾದ ಗ್ಯಾಲರಿಯನ್ನು ಇಲ್ಲಿ ನಿರ್ಮಾಣ ಮಾಡಲಾಗಿದೆ.

ಈ ಎಲ್ಲಾ ಚಿತ್ರಗಳನ್ನು ಗಮನಿಸಿರುವ ಆರ್‌ಎಸ್‌ಎಸ್‌ನವರು, ಈ ಗ್ಯಾಲರಿಯಲ್ಲಿ ” ಸ್ವಾತಂತ್ರ್ಯ ಹೋರಾಟಕ್ಕೂ ಮುಸ್ಲಿಮರಿಗೂ ಸಂಬಂಧವಿಲ್ಲ. ಅವರ ಫೋಟೊಗಳನ್ನು ಯಾಕೆ ಇಲ್ಲಿ ಹಾಕಿದ್ದೀರಿ ಅದನ್ನು ತೆಗೆಯಿರಿ, ಗಾಂಧೀ ಫೋಟಗಳಿಗೆ ಯಾಕೆ ಇಷ್ಟೊಂದು ಮಹತ್ವ ನೀಡಿದ್ದೀರಿ, ಹಿಂದು ಕೋಮುವಾದಿಗಳು ಎಂಬ ಪದವನ್ನು ತೆಗಯಬೇಕು. ಸಾವರ್ಕರ್‌ ರವರ ಪೋಟವನ್ನು ಅಳವಡಿಸಬೇಕು ಎಂದು ಬೆದರಿಸಿದ್ದಾರೆ.  ಇಲ್ಲಿ ಪ್ರಶ್ನೆ ಇರುವುದು ಏನೆಂದರೆ ” ಆರೋಗ್ಯ ಪೂರ್ಣ ಗ್ಯಾಲರಿ, ಜ್ಞಾನವನ್ನು ನೀಡುವ ತಾಣಕ್ಕೆ” ಧರ್ಮದ ಲೇಪನವನ್ನು ಹಚ್ಚಲು ಆರ್‌ಎಸ್‌ಎಸ್‌ ಪ್ರಯತ್ನ ನಡೆಸುತ್ತಿರುವುದು ಆತಂಕದ ವಿಚಾರವಾಗಿದೆ.

ವಿದುರಾಶ್ವತ ಫ್ರೀಡಂ ಮೆಮೊರಿಯಲ್ ಮ್ಯೂಜಿಯಂ ಸಂಸ್ಥೆಯ ಸ್ಥಾಪಕರಲ್ಲೊಬ್ಬರಾದ ಪ್ರೊ. ಬಿ. ಗಂಗಾಧರ ಮೂರ್ತಿ ಅವರು ಜನಶಕ್ತಿ ಮೀಡಿಯಾ ಜೊತೆಗೆ ಪ್ರತಿಕ್ರಿಯೆ ನೀಡಿದ್ದು, ಆ ಗ್ಯಾಲರಿಯಲ್ಲಿರುವ ವ್ಯಕ್ತಿಗಳ ಬಗ್ಗೆ ತಕರಾರು ಇದ್ದರೆ ಚರ್ಚೆ, ಸಂವಾದಗಳನ್ನು ನಡೆಸಲಿ.  ಆದರೆ ಅವರು ಈ ರೀತಿಯ ಚರ್ಚೆಗಳಿಗೆ ಒಪ್ಪುವವರಲ್ಲ.  ವಾಸ್ತವ ಇತಿಹಾಸವನ್ನು ಅರಗಿಸಿಕೊಳ್ಳುವ ಶಕ್ತಿ, ಕೇಳುವ ತಾಳ್ಮೆ ಅವರಿಗೆ ಇಲ್ಲ.  ಅವರು ಕೊಟ್ಟ ಸಲಹೆಗಳನ್ನು ಕೇಳದೆ ಹೋದಲ್ಲಿ ಗ್ಯಾಲರಿಗೆ ಬೆಂಕಿ ಹಾಕುವ ಬೆದರಿಕೆ ಹಾಕಿದ್ದಾರೆ. ನಾನಂತೂ ಸಮಾಜಕ್ಕೆ ಉತ್ತಮವಾದ ಗ್ಯಾಲರಿ ಕೊಡುಗೆಯನ್ನು ನೀಡಿದ್ದೇನೆ. ಅದನ್ನು ಉಳಿಸಿ ಕೊಳ್ಳುಲು ಈ ನಾಡಿನ ಶಾಂತಿಪ್ರಿಯರು ಮುಂದಾಗುತ್ತಾರೆ ಎಂಬ ಭರವಸೆ ಇದೆ ಎಂದು ತಿಳಿಸಿದ್ದಾರೆ.

ದಯಾ ಭಿಕ್ಷೆಗೆ ಹಲವಾರು ಪತ್ರಗಳನ್ನು ಬರೆದು ತನ್ನನ್ನು ಜೈಲಿನಿಂದ ಬಿಡುಗಡೆ ಮಾಡಿದರೆ ತಾನೂ ಹಾಗೂ ತನ್ನ ಅನುಯಾಯಿಗಳು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸುವುದಿಲ್ಲ, ಮಾತ್ರವಲ್ಲ ಮುಂದಿನ ದಿನಗಳಲ್ಲಿ ಬ್ರಿಟಿಷರ ಜತೆ ಎಲ್ಲಾ ರೀತಿಯಲ್ಲೂ ಸಹಕರಿಸುವುದಾಗಿ ಹೇಳಿ, ಜೈಲಿನಿಂದ ಬಿಡುಗಡೆ ಪಡೆದ ಸಾವರ್ಕರ್ ಅವರನ್ನು ದೇಶಪ್ರೇಮಿ ಎಂದು ಕರೆಯಲು ಸಾಧ್ಯವೇ? ಬಿಡುಗಡೆಯಾದ ನಂತರವೂ ಸ್ವಾತಂತ್ರ್ಯ ಚಳುವಳಿಗೆ ವಿರುದ್ಧವಾಗಿ ಬ್ರಿಟಿಷ್ ಸಾಮ್ರಾಜ್ಯಶಾಹಿಗಳ ಜತೆ ಸಹಕರಿಸಿರುವ ಸಾವರ್ಕರ್ ಹೆಸರನ್ನು, ವಿದುರಾಶ್ವತ್ಥದ ಸ್ವಾತಂತ್ರ್ಯ ಚಳುವಳಿಗಾರರ ಹೆಸರುಗಳ ಪಟ್ಟಿಯಲ್ಲಿ ಸೇರಿಸಬೇಕೆನ್ನುವ ಸಂಘ ಪರಿವಾರದ ಒತ್ತಾಯವನ್ನು ಎಲ್ಲಾ ದೇಶಪ್ರೇಮಿಗಳೂ ಅತ್ಯುಗ್ರವಾಗಿ ಖಂಡಿಸಬೇಕು ಎಂದು ಸಮುದಾಯ ಸಂಘಟನೆಯ ಟಿ.ಸುರೇಂದ್ರರಾವ್ ಆಗ್ರಹಿಸಿದ್ದಾರೆ.

ಸ್ವಾತಂತ್ರ್ಯ ಹೋರಾಟದ ಪೂರ್ಣ ಚಿತ್ರ ನೀಡುವ ಈ ಗ್ಯಾಲರಿಯನ್ನು ಉಳಿಸಿ ಕೊಳ್ಳಬೇಕಿದೆ. ತಮ್ಮ ವಿಚಾರಗಳನ್ನು ಜಾರಿ ಮಾಡಬೇಕು ಎಂದು ಪಟ್ಟು ಹಿಡಿದಿರುವ, ಜಾರಿ ಮಾಡದೇ ಹೋದಲ್ಲಿ ಗ್ಯಾಲರಿಗೆ ಬೆಂಕಿ ಹಾಕುವ ಬೆದರಿಕೆ ಒಡ್ಡಿರುವ ಆರ್‌ಎಸ್‌ಎಸ್‌, ಬಜರಂಗದಳದ ಕಾರ್ಯಕರ್ತರ ಮೇಲೆ ಅಲ್ಲಿನ ಜಿಲ್ಲಾಡಳಿತ ಸ್ವಯಂ ದೂರು ದಾಖಲಿಸಿಕೊಳ್ಳಬೇಕಿದೆ.  ರಾಜ್ಯ ಸರಕಾರ ಸಂಘಪರಿವಾರದವರ ಉಪಟಳಕ್ಕೆ ಬ್ರೇಕ್ ಹಾಕಬೇಕಿದೆ.

Donate Janashakthi Media

Leave a Reply

Your email address will not be published. Required fields are marked *