ಪಂಚಾಯತಿ ಕಚೇರಿಯನ್ನೇ ಮಾರಾಟ ಮಾಡಿದ ಕಾರ್ಯದರ್ಶಿ

ಮುಜಾಫರ್​​​ಪುರ : ಬಿಹಾರದಲ್ಲಿ ಅರಾಜಕತೆ ಮುಂದು ವರೆದಿದೆ. ಎಷ್ಟೆ ಬಲವಾದ ಕಾನೂನುಗಳನ್ನು ತಂದರೂ ಅವು ಜಾರಿಯಾಗದ ಕಾರಣ ಸರಕಾರಿ ಆಸ್ತಿಪಾಸ್ತಿಗಳು ಮಾರಟವಾಗುತ್ತಲೇ ಇವೆ.

ಹೌದು ಈಗ ಮತ್ತೆ ಅಂತಹದ್ದೆ ಘಟನೆ ನಡೆದಿದ್ದು ಪಂಚಾಯತಿ ಕಟ್ಟಡವನ್ನೆ ಮಾರಾಟ ಮಾಡಲಾಗಿದೆ. ಮಾರಾಟ ಮಾಡಿದ್ದು ಅಲ್ಲಿನ‌ ಕಾರ್ಯದರ್ಶಿ! ರಾಜ್ಯದ ಕಂದಾಯ ಸಚಿವ ರಾಮ್‌ಸುರತ್ ರಾಯ್ ಅವರ ವಿಧಾನಸಭಾ ಕ್ಷೇತ್ರದಲ್ಲಿ ಅನ್ನೋದು ಇನ್ನೂ ಬೆಚ್ಚಿ ಬೀಳಿಸುವ ಸಂಗತಿ. ಇಲ್ಲಿ ಪಂಚಾಯತ್ ಭವನವನ್ನು ನೆಲಸಮ ಮಾಡಿ ಮಾರಾಟ ಮಾಡಿದ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ.

ವಾಸ್ತವವಾಗಿ, ಬಿಹಾರದ ಮುಜಾಫರ್‌ಪುರದ ಔರೈ ಬ್ಲಾಕ್‌ನಲ್ಲಿರುವ ಔರೈ ಪಂಚಾಯತಿ ಭವನವನ್ನು ಯಾವುದೇ ಸರ್ಕಾರಿ ಆದೇಶವಿಲ್ಲದೆ ಮಾರಾಟ ಮಾಡಲಾಗಿದೆ. ಮುಖ್ಯಾಧಿಕಾರಿ ಹಾಗೂ ಪಂಚಾಯಿತಿ ಕಾರ್ಯದರ್ಶಿಯ ಕುಮ್ಮಕ್ಕಿನಿಂದ ಮಾರಾಟ ನಡೆದಿದೆ ಎನ್ನಲಾಗಿದೆ. ಕಟ್ಟಡವನ್ನು ಜೆಸಿಬಿಯಿಂದ ಕೆಡವಿ ಅದರಲ್ಲಿದ್ದ ಇಟ್ಟಿಗೆಗಳನ್ನ ಮಾರಾಟ ಮಾಡಿದ್ದಾರೆ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಪಂಚಾಯತ್​ ರಾಜ್​ ಇಲಾಖೆ ಆರೋಪಿತ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಿದೆ.

ಪಂಚಾಯತ್​ ಅಧಿಕಾರಿಗಳ ಈ ಕಳ್ಳಾಟ ಇದೀಗ ಬೆಳಕಿಗೆ ಬಂದಿದ್ದು, ಈ ಇಬ್ಬರ ಮೇಲೂ ಕೇಸ್​ ಜಡಿಯಲಾಗಿದೆ. ಸರ್ಕಾರಿ ಆಸ್ತಿ ನಾಶ, ಹಣಕಾಸು ಅವ್ಯವಹಾರ ಹಾಗೂ ಹಿರಿಯ ಅಧಿಕಾರಿಗಳಿಂದ ಮಾಹಿತಿ ಮುಚ್ಚಿಟ್ಟ ಆರೋಪ ಹೊರಿಸಲಾಗಿದೆ. ಮತ್ತೊಂದೆಡೆ, ಈ ಪ್ರಕರಣದಲ್ಲಿ ಬ್ಲಾಕ್ ಪಂಚಾಯಿತಿ ರಾಜ್ ಅಧಿಕಾರಿ ಗಿರಿಜೇಶ್ ನಂದನ್, ಮುಖ್ಯಾಧಿಕಾರಿ ಹಾಗೂ ಪಂಚಾಯಿತಿ ಕಾರ್ಯದರ್ಶಿಯಿಂದ ಸ್ಪಷ್ಟನೆ ಕೇಳಿದ್ದಾರೆ.

ಔರೈ ಪಂಚಾಯಿತಿ ಭವನವನ್ನು 15 ವರ್ಷಗಳ ಹಿಂದೆ ನಿರ್ಮಿಸಲಾಗಿದೆಯಂತೆ. ಆದರೆ, ಕಟ್ಟಡದ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿರಲಿಲ್ಲ. ಕಟ್ಟಡ ನಿರ್ಮಾಣದಲ್ಲಿ ಅವ್ಯವಹಾರ ನಡೆದಿದ್ದರಿಂದ ಇಲ್ಲಿನ ನೌಕರ ಜೈಲು ಸೇರಿದ್ದ. 15 ವರ್ಷಗಳ ಬಳಿಕ ಅದೇ ಕಟ್ಟಡವನ್ನು ಮುಖ್ಯಾಧಿಕಾರಿ ಹಾಗೂ ಪಂಚಾಯಿತಿ ಕಾರ್ಯದರ್ಶಿ ಜೆಸಿಬಿಯಿಂದ ಕೆಡವಿ ಕಟ್ಟಡದ ಅವಶೇಷಗಳನ್ನು ಮಾರಾಟ ಮಾಡಿದ್ದಾರೆ. ಪಂಚಾಯತ್ ಭವನ ಕೆಡವಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕೂಡಾ ಆಗಿತ್ತು.

ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪಂಚಾಯಿತಿ ಕಟ್ಟಡ ಕೆಡವಿದ ಬಗ್ಗೆ ಕೇತ್ರ ಅಭಿವೃದ್ಧಿ ಅಧಿಕಾರಿ, ಪಂಚಾಯಿತಿ ಕಾರ್ಯದರ್ಶಿ ಅವರಿಂದ ವಿವರಣೆ ಕೇಳಿದ್ದರು. ಸರ್ಕಾರಿ ಕಟ್ಟಡವನ್ನು ಕೆಡವಿ ಹರಾಜು ಮಾಡದೇ ಮಾರಾಟ ಮಾಡಿದ್ದು ಹೇಗೆ ಎಂದು ಕೇಳಲಾಗಿತ್ತು.

ಈ ಕುರಿತು ಏಪ್ರಿಲ್ 29ರಂದು ಬ್ಲಾಕ್ ಪಂಚಾಯಿತಿ ರಾಜ್ ಅಧಿಕಾರಿ ಪತ್ರ ಬರೆದು, ಎರಡು ದಿನಗಳಲ್ಲಿ ಮುಖ್ಯಾಧಿಕಾರಿ ಹಾಗೂ ಪಂಚಾಯಿತಿ ಕಾರ್ಯದರ್ಶಿಯಿಂದ ಸ್ಪಷ್ಟನೆ ನೀಡುವಂತೆ ಕೋರಿದ್ದರು. ಈ ಬಗ್ಗೆ ಈಗಾಗಲೇ ಮೇಲಾಧಿಕಾರಿಗಳಿಗೆ ವರದಿ ಕಳುಹಿಸಲಾಗಿದೆ. ಪ್ರಕರಣದ ತನಿಖೆಯ ನಂತರ ಇಬ್ಬರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಬ್ಲಾಕ್​ ಆಫೀಸರ್​ ಹೇಳಿದ್ದಾರೆ.

ಸರಕಾರ ಕಟ್ಟಡ ಯಾರ ಗಮನಕ್ಕೂ ಇಲ್ಲದೆ ಮಾರಾಟವಾಗುತ್ತದೆ ಎಂದರೆ ಬಿಹಾರ ಸರಕಾರದ ನಿರ್ಲಕ್ಷ್ಯ, ಹಾಗೂ ಅಲ್ಲಿ ಅರಾಜಕತೆ ಎಷ್ಟಿದೆ ಎಂಬುದನ್ನು ಎತ್ತಿ ತೋರಿಸುತ್ತಿದೆ.

Donate Janashakthi Media

Leave a Reply

Your email address will not be published. Required fields are marked *